ಬೆಳ್ತಂಗಡಿ ತಾಲೂಕಿನಲ್ಲಿ ಎರಡು ಮಂಗಗಳ ಶವಪತ್ತೆ: ಭಯಭೀತರಾದ ಜನರು

ಬೆಳ್ತಂಗಡಿ ತಾಲೂಕಿನಲ್ಲಿ ಎರಡು ಮಂಗಗಳ ಶವಪತ್ತೆ: ಭಯಭೀತರಾದ ಜನರು

DA   ¦    Jan 11, 2019 08:50:19 PM (IST)
ಬೆಳ್ತಂಗಡಿ ತಾಲೂಕಿನಲ್ಲಿ ಎರಡು ಮಂಗಗಳ ಶವಪತ್ತೆ: ಭಯಭೀತರಾದ ಜನರು

ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ ಸವಣಾಲು ಹಾಗೂ ಉಜಿರೆಯಲ್ಲಿ ಎರಡು ಮಂಗಗಳು ಸಾವನ್ನಪ್ಪಿರುವುದು ಕಂಡು ಬಂದಿದ್ದು ಮಂಗನ ಖಾಯಿಲೆಯ ಬಗ್ಗೆ ಜನರಲ್ಲಿ ಭಯ ಮೂಡಲು ಕಾರಣವಾಗಿದೆ.

ಉಜಿರೆ ಪೇಟೆಯ ಸಮೀಪ ಹಾಗೂ ಬೆಳ್ತಂಗಡಿ ಸಮೀಪ ಕನ್ನಾಜೆ ಬಯಲಿನಲ್ಲಿ ಮಂಗಗಳು ಸತ್ತಿರುವುದು ಪತ್ತೆಯಾಗಿದ್ದು, ಎರಡೂ ಕಡೆ ಮಂಗಗಳು ಸಂಪೂರ್ಣ ಕೊಳೆತ ರೀತಿಯಲ್ಲಿ ಪತ್ತೆಯಾಗಿರುವುದರಿಂದ ಯಾವುದೇ ಹೆಚ್ಚಿನ ಪರಿಶೀಲನೆ ಹಾಗೂ ಪ್ರಯೋಗಾಲಯಗಳಿಗೆ ಕಳುಹಿಸಲು ಸಾಧ್ಯವಾಗಿಲ್ಲ.

ಶುಕ್ರವಾರ ಬೆಳಗ್ಗೆ ಉಜಿರೆ ಪೇಟೆಯ ಸಮೀಪವೇ ಖಾಸಗಿ ಜಮೀನಿನಲ್ಲಿ ಕೊಳೆತ ಸ್ಥಿತಿಯಲ್ಲಿರುವ ಮಂಗನ ಶವ ಪತ್ತೆಯಾಗಿದೆ. ಸಾರ್ವಜನಿಕರು ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಉಜಿರೆ ಪ್ರಾಧಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಅರ್ಚನಾ, ಉಜಿರೆಯ ಪಶು ವೈದ್ಯಾಧಿಕಾರಿ ಡಾ. ಕಾರ್ತಿಕ್ ಹಾಗೂ ಗ್ರಾ.ಪಂ ಅಧಿಕಾರಿಗಳು ಅರಣ್ಯ ಇಲಾಖೆಯ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಂಪೂರ್ಣ ಕೊಳೆತ ರೀತಿಯಲ್ಲಿದ್ದ ಮಂಗನ ಶವವನ್ನು ಅಧಿಕಾರಿಗಳು ಅಲ್ಲಿಯೇ ಸುಟ್ಟು ಹಾಕಿದ್ದಾರೆ. ಇದು ಸಹಜವಾಗಿಯೇ ಸತ್ತಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಇದನ್ನು ನಂಬು ಸ್ಥಿತಿಯಲ್ಲಿ ಜನರಿಲ್ಲ.

ಮತ್ತೊಂದೆಡೆ ಲಾಯಿಲ ಸವಣಾಲು ಗ್ರಾಮಗಳ ಗಡಿ ಭಾಗದಲ್ಲಿ ಕನ್ನಾಜೆ ಬಯಲಿನಲ್ಲಿ ಗುರುವಾರ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮಂಗನ ಶವ ಪತ್ತೆಯಾಗಿದ್ದು ಸಾರ್ವಜನಿಕರು ನೀಡಿದ ಮಾಹಿತಿಯಂತೆ ಪಶುವೈಧ್ಯಾಧಿಕಾರಿಗಳು ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುಟ್ಟು ಹಾಕಿದ್ದಾರೆ.

ಮಲೆನಾಡಿನಲ್ಲಿ ಎಲ್ಲೆಡೆ ಮಂಗಗಳು ಸಾವನ್ನಪ್ಪುತ್ತಿರುವ ಹಿನ್ನಲೆಯಲ್ಲಿ ಇಲ್ಲಿಯೂ ಮಂಗಗಳು ಸಾವನ್ನಪ್ಪಲಾರಂಭಿಸಿರುವುದು ಮಂಗನ ಕಾಯಿಲೆಯಿಂದಲೇ ಆಗಿರಬೇಕು ಎಂಬುದು ಜನರ ಅನುಮಾನವಾದರೆ ಆರೋಗ್ಯ ಇಲಾಖೆಯವರು ಮಾತ್ರ ಇದನ್ನು ಒಪ್ಪುತ್ತಿಲ್ಲ. ಹಾಗೂ ಜನರು ಭಯಪಡುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ.