ಕಾಂತಮಂಗಲ ಸೇತುವೆಯಲ್ಲಿ ಬಾಯ್ದೆರೆದಿದೆ ಮೃತ್ಯು ಕೂಪ

ಕಾಂತಮಂಗಲ ಸೇತುವೆಯಲ್ಲಿ ಬಾಯ್ದೆರೆದಿದೆ ಮೃತ್ಯು ಕೂಪ

GK   ¦    Jun 13, 2018 02:24:55 PM (IST)
ಕಾಂತಮಂಗಲ ಸೇತುವೆಯಲ್ಲಿ ಬಾಯ್ದೆರೆದಿದೆ ಮೃತ್ಯು ಕೂಪ

ಸುಳ್ಯ: ಸುಳ್ಯ-ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಸುಳ್ಯ ನಗರ ಸಮೀಪದಲ್ಲಿಯೇ ಇರುವ ಕಾಂಮಂಗಲ ಸೇತುವೆಯ ಮೇಲೆ ಈಗ ಹೊಂಡಗಳೇ ರಾರಾಜಿಸುತ್ತಿವೆ. ಸೇತುವೆಯ ಮಧ್ಯದಲ್ಲಿಯೇ ಬಾಯ್ದೆರೆದಿರುವ ಹೊಂಡಗಳು ಮೃತ್ಯುಕೂಪದಂತೆ ಭಾಸವಾಗುತ್ತಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ.

ದಿನಾಲು ಹಗಲು ರಾತ್ರಿ ಎನ್ನದೆ ನಿರಂತರ ನೂರಾರು ವಾಹನಗಳು ಸಂಚರಿಸುವ ಈ ಸೇತುವೆ ಬಲು ಉಪಯೋಗಿ ಸೇತುವೆ. ಆದರೆ ಕೆಲವು ವರ್ಷಗಳಿಂದ ಈ ಸೇತುವೆಯು ಸಮಸ್ಯೆ ಸೃಷ್ಠಿಸುತ್ತಿದೆ. ಮಳೆಗಾಲ ಆರಂಭವಾದಾಗ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ. ಸೇತುವೆಗೆ ಪ್ರವೇಶಿವಾಗಲೇ ಆಳೆತ್ತರದ ಹೊಂಡ ಎದುರಾಗುತ್ತದೆ. ಹೊಂಡಕ್ಕೆ ಬಿದ್ದ ವಾಹನಗಳ ಚಕ್ರ ಮೇಲೇಳಬೇಕಾದರೆ ಬಲು ಪ್ರಯಾಸಪಡಬೇಕಾಗಿದೆ. ಇನ್ನು ಸೇತುವೆಯಲ್ಲಂತೂ ಅಲ್ಲಲ್ಲಿ ಹೊಂಡಗಳೇ ತುಂಬಿದೆ. ಮಧ್ಯದಲ್ಲಿ ಉದ್ದಕ್ಕೆ ಬಿರುಕು ಬಿಟ್ಟಿರುವ ಹೊಂಡವು ಅಪಾಯದ ಕರೆಗಂಟೆಯನ್ನು ಬಾರಿಸುತ್ತಿದೆ. ರಿಕ್ಷಾ, ಬೈಕ್, ಕಾರುಗಳ ಚಕ್ರಗಳು ಹೂತು ಹೋಗುತ್ತಿದೆ. ಪಾದಚಾರಿಗಳ ಕಾಲುಗಳು ಈ ಬಿರುಕಿನಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. 1980ರಲ್ಲಿ ನಿರ್ಮಾಣಗೊಂಡ ಸೇತುವೆಯು ಬಲು ಕಿರಿದಾಗಿದೆ. ಒಮ್ಮೆಗೆ ಒಂದೇ ವಾಹನಕ್ಕೆ ಪ್ರಯಾಣಿಸಲು ಸಾಧ್ಯ. ಇಲ್ಲಿ ಎರಡು ವಾಹನಗಳು ಒಟ್ಟಿಗೆ ಸಂಚರಿಸಲು ಸಾಧ್ಯವಿಲ್ಲ. ಒಂದು ಬದಿಯ ವಾಹನಗಳು ಸೇತುವೆ ದಾಟಿದ ಬಳಿಕವಷ್ಟೇ ಮತ್ತೊಂದು ಬದಿಯ ವಾಹನಗಳು ಸೇತುವೆಯನ್ನು ಪ್ರವೇಶಿಸಬೇಕು.

1980ರ ದಶಕದ ಹಿಂದೆ ಪಯಸ್ವಿನಿ ತುಂಬಿ ಹರಿದಾಗ ಅಜ್ಜಾವರ, ಮಂಡೆಕೋಲು ಭಾಗದ ಸಾರ್ವಜನಿಕರು ದೋಣಿಯಲ್ಲಿ ನದಿ ದಾಟಿ ಸುಳ್ಯಕ್ಕೆ ಬರಬೇಕಾಗಿತ್ತು. ಪಯಸ್ವಿನಿ ನದೀ ತೀರದ ಜನರು ಮಳೆಗಾಲದಲ್ಲಿ ದ್ವೀಪದಲ್ಲಿ ಸಿಲುಕಿದಂತಾಗುತ್ತಿತ್ತು. ಆ ಸಂದರ್ಭದಲ್ಲಿ ಹಿರಿಯರ ಪ್ರಯತ್ನದಿಂದ ಕಾಂತಮಂಗಲಕ್ಕೆ ಸರ್ಕಾರ ಸೇತುವೆ ನಿರ್ಮಿಸಿತು. ಕಾಲಾಂತರದಲ್ಲಿ ಊರು ಬೆಳೆದಾಗ ರಸ್ತೆ ಬೆಳೆದು ಅಂತಾರಾಜ್ಯ ಸಂಪರ್ಕ ಕೊಂಡಿಯಾಗಿ ಮಾರ್ಪಾಡಾಯಿತು. ಆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾದಾಗ ಸೇತುವೆ ಕ್ಷಯಿಸುತ್ತಾ ಬಂತು. ಘನ ವಾಹನಗಳು ಸೇರಿದಂತೆ ದಿನಾಲು ನೂರಾರು ವಾಹನಗಳು ಸಂಚರಿಸುತ್ತದೆ. ಸೇತುವೆ ಶಿಥಿಲವಾಗಿದೆ ಎಂದು ಘನ ವಾಹನ ಸಂಚಾರ ಮಾಡುವುದನ್ನು ಗ್ರಾಮ ಪಂಚಾಯಿತಿ ನಿಷೇಧಿಸಿದೆ. ಘನ ವಾಹನ ಸಂಚಾರಕ್ಕೆ ನಿಷೇಧ ಹೇರಿರುವುದಾಗಿ ಅಜ್ಜಾವರ ಗ್ರಾಮ ಪಂಚಾಯಿತಿ ಸೇತುವೆ ಬಳಿಯಲ್ಲಿ ಫಲಕವನ್ನೂ ಅಳವಡಿಸಿದೆ. ಮಳೆಗಾಲ ಆರಂಭವಾದ ಮೇಲಂತೂ ಸೇತುವೆಯ ಮೇಲಿನ ಪ್ರಯಾಣ ಬಲು ತ್ರಾಸದಾಯಕವಾಗಿದೆ. ಹೊಂಡಕ್ಕೆ ಬಿದ್ದು ಎದ್ದು ಚಲಿಸುವ ವಾಹನಗಳ ಪ್ರಯಾಣವಂತೂ ನೂಲ ಮೇಲಿನ ಪ್ರಯಾಣದಂತಾಗಿದೆ. ಸೇತುವೆಯನ್ನು ಕೂಡಲೇ ದುರಸ್ಥಿಪಡಿಸಬೇಕು ಮತ್ತು ಮುಂದೆ ಇದಕ್ಕೆ ಬದಲಿ ಹೊಸ ಸೇತುವೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆ.

ಸುಳ್ಯ-ಅಜ್ಜಾವರ ರಸ್ತೆಯ ಪ್ರಯಾಣ ದೇವರಿಗೇ ಪ್ರೀತಿ
ಕಾಂತಮಂಗಲ ಸೇತುವೆ ದಾಟಿ ಅಜ್ಜಾವರ-ಮಂಡೆಕೋಲು-ಅಡೂರು ಅಂತಾರಾಜ್ಯ ರಸ್ತೆಯಲ್ಲಿ ಮುಂದೆ ಅಜ್ಜಾವರ ಕಡೆಗೆ ಪ್ರಯಾಣ ಮಾಡಿದರೆ ಎದುರುಗೊಳ್ಳುವುದು ಪಾತಾಳ ಸದೃಶ್ಯ ಹೊಂಡಗಳು. ಡಾಮರು ಕಂಡು ವರ್ಷಗಳೇ ಕಳೆದು ಹೋಗಿರುವ ರಸ್ತೆಯಲ್ಲಿನ ಪ್ರಯಾಣ ದೇವರಿಗೇ ಪ್ರೀತಿ ಎಂಬ ಸ್ಥಿತಿ. ಒಂದು ಮೀಟರ್ ಕೂಡ ಹೊಂಡಗಳಿಲ್ಲದ ರಸ್ತೆ ಸಂಪೂರ್ಣ ಢಮಾರ್ ಆಗಿದೆ. ರಸ್ತೆಯ ಹೊಂಡಗಳಲ್ಲಿ ಇಳಿಸಿ ಹತ್ತಿಸಿ, ಹೊಂಡ ತಪ್ಪಿಸಿ ವಾಹನ ಚಲಾಯಿಸಲು ವಾಹನ ಚಾಲಕರು ಅಕ್ಷರಶಃ ಸರ್ಕಸ್ ನಡೆಸಬೇಕಾದ ಸ್ಥಿತಿ. ಮಳೆ ಆರಂಭವಾದ ಮೇಲೆ ರಸ್ತೆಯಲ್ಲಿನ ಪರದಾಟ ದ್ವಿಗುಣವಾಗಿದೆ. ಎಲ್ಲಾ ಹೊಂಡಗಳಲ್ಲಿಯೂ ಕೆಸರು, ಮಳೆ ನೀರು ತುಂಬಿ ಕೊಂಡಿದೆ. ಮಳೆ ಬಂದರೆ ಚರಂಡಿಯಿಲ್ಲದ ರಸ್ತೆ ಹೊಳೆಯಂತಾಗುತ್ತದೆ. ಕೆಸರು ನೀರು ತುಂಬಿದ ಕಾರಣ ರಸ್ತೆ ಯಾವುದು, ಹೊಂಡ ಯಾವುದು, ಚರಂಡಿ ಎಲ್ಲಿ ಎಂದು ತಿಳಿಯದೆ ಎಲ್ಲೆಲ್ಲೋ ಸಾಗುವ ವಾಹನಗಳು. ರಸ್ತೆಯಲ್ಲಿ ಅಪಘಾತಗಳೂ ನಿತ್ಯ ನಿರಂತರವಾಗಿದೆ.
`ಕಾಂತಮಂಗಲ ಸೇತುವೆಯ ಮೇಲಿನ ಹೊಂಡಗಳು ಅಪಾಯವನ್ನು ಎದುರಿಸುತ್ತಿದೆ. ಇದನ್ನು ಕೂಡಲೇ ದುರಸ್ಥಿಪಡಿಸಿ ಸಂಚಾರಕ್ಕೆ ಯೋಗ್ಯ ಮಾಡಬೇಕು. ಅಲ್ಲದೆ ಈ ಸೇತುವೆಗೆ ಬದಲಾಗಿ ಸುಸಜ್ಜಿತವಾದ ಹೊಸ ಸೇತುವೆಯನ್ನು ನಿರ್ಮಾಣ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆ ಎನ್ನುತ್ತಾರೆ ಸ್ಥಳೀಯರಾದ ಆನಂದ ರಾವ್ ಕಾಂತಮಂಗಲ.

ಕಾಂತಮಂಗಲದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ಸೇತುವೆಯ ಮೇಲಿನ ಹೊಂಡಕ್ಕೆ ಅಗತ್ಯ ದುರಸ್ಥಿ ಮಾಡಲು ಸೂಚನೆ ನೀಡಲಾಗುವುದು ಎಂದು ಶಾಸಕ ಎಸ್. ಅಂಗಾರ ತಿಳಿಸಿದ್ದಾರೆ.

More Images