ಜಗತ್ತಿಗೆ ನೆರಳು ನೀಡುವ ಶಕ್ತಿ ಭಾರತಕ್ಕಿದೆ: ಪ್ರತಾಪಸಿಂಹ ನಾಯಕ್

ಜಗತ್ತಿಗೆ ನೆರಳು ನೀಡುವ ಶಕ್ತಿ ಭಾರತಕ್ಕಿದೆ: ಪ್ರತಾಪಸಿಂಹ ನಾಯಕ್

DA   ¦    Jan 12, 2018 06:54:14 PM (IST)
ಜಗತ್ತಿಗೆ ನೆರಳು ನೀಡುವ ಶಕ್ತಿ ಭಾರತಕ್ಕಿದೆ: ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ಹಿಂದುಗಳ ಮೇಲೆ ಅನ್ಯಾಯ, ಅನಾಚಾರವಾದಾಗ ನಮ್ಮ ನಂಬಿಕೆಗಳನ್ನು ಕಾಯ್ದುಕೊಳ್ಳುವ ಮೂಲಕ ಪ್ರತಿಭಟನೆಗೆ ಮುಂದಾಗಲೇಬೇಕು ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಪ್ರತಾಪಸಿಂಹ ನಾಯಕ್ ಹೇಳಿದರು.

ಅವರು ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಶುಕ್ರವಾರ ಸುವರ್ಣ ಆರ್ಕೆಡ್ ನಲ್ಲಿ ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಯುವ ಭಾರತ ನವ ಭಾರತ ಘೋಷಣೆಯಡಿ ನಡೆದ ಸ್ವಾಮಿ ವಿವೇಕಾನಂದರ 155ನೇ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಯಾಕಾಗಿ ಬದುಕಬೇಕು ಮತ್ತು ಬದುಕಿದ್ದೇವೆ ಎಂಬ ತತ್ವದಜ್ಞಾನ ಭಂಡಾರವನ್ನು ಭಾರತೀಯ ಪರಂಪರೆಕೊಟ್ಟಿದೆ. ಸ್ವಾರ್ಥದಿಂದ ನಮಗೆ ಮಂಜು ಮುಸುಕಿದಾಗ ಅದನ್ನು ಸರಿಸಲು ಸಾಧು ಸಂತರ ಪರಂಪರೆ ಆಗಾಗ್ಗೆ ಅವತರಿಸಿದೆ. ಅಂತಹ ಪರಂಪರೆಯಲ್ಲಿನ ಆಧುನಿಕ ಸನ್ಯಾಸಿ ಸ್ವಾಮಿ ವಿವೇಕಾನಂದರೂಒಬ್ಬರು. ಜಗತ್ತನ್ನು ಕುಟುಂಬವನ್ನಾಗಿ ನೊಡಿದ ಧೀರ ಸನ್ಯಾಸಿ ಅವರು ಎಂದರು.

ಜಗತ್ತಿಗೆ ನೆರಳು ನೀಡುವ ಶಕ್ತಿ ಭಾರತಕ್ಕಿದೆ. ಸುಃಖ, ಶಾಂತಿ, ಪ್ರೀತಿ, ನೆಮ್ಮದಿ ಅದು ನಮ್ಮ ಒಳಗಡೆಯೇ ಇದೆ ಎನ್ನುವುದು ಭಾರತೀಯ ವಿಚಾರ. ಆದರೆ ಹೊರಗಿನ ಆಕರ್ಷಣೆಗಳು ನಮ್ಮನ್ನಾವರಿಸಿಕೊಂಡಾಗ ನಮ್ಮೊಳಗಿನ ಸಾರ ವಿಸ್ಮೃತಿಯಾಗುತ್ತದೆ. ವಿವಿಧ ಜಾತಿ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧಎಂದು ಮತವಾಗಿ ಗುರುತಿಸಿಕೊಳ್ಳುವುದು ಸಂಕುಚಿತವಾಗುತ್ತದೆ. ನಾನೇ ಶ್ರೇಷ್ಟ, ನನ್ನ ಪುಸ್ತಕವೇ ಶ್ರೇಷ್ಠ ಎನ್ನುವ ಭಾವನೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ ಎಂದ ಅವರು ಸ್ವಾಮಿ ವಿವೇಕಾನಂದರು ಮಂಗಗಳನ್ನು ಎದುರಿಸಿದ ಕಥೆಯನ್ನು ವಿವರಿಸುತ್ತಾ ಹಿಂದೂ ಸಮಾಜಕ್ಕೆಅನ್ಯಾಯ, ಅಪಾಯ ಆದಾಗ ಅದನ್ನುಎದುರಿಸುವ ಶಕ್ತಿಯೂ ನಮ್ಮಲ್ಲಿರಬೇಕು ಎಂದರು.

ಪ್ರಧಾನ ಭಾಷಣ ಮಾಡಿದ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಅವರು, ವಿವೇಕಾನಂದರನ್ನು ತಿಳಿದುಕೊಂಡವನು, ಓದಿಕೊಂಡವನು ಸಮಾಜಮುಖಿಯಾಗುತ್ತಾನೆ, ಭಾರತೀಯನಾಗುತ್ತಾನೆ ಮತ್ತು ದೇಶದ ದೊಡ್ಡ ಆಸ್ತಿಯಾಗುತ್ತಾನೆ. ಕೃಷ್ಣ, ರಾಮ, ಬುದ್ದ, ಬಸವ, ಗಾಂಧಿ ಮೊದಲಾದವರು ಯುವಕರಾಗಿದ್ದು ಸಾಧಿಸಿ ತೋರಿಸಿದ್ದಾರೆ. ಬಸವಣ್ಣ, ಶಂಕರ, ಮಧ್ವ, ಬುದ್ಧ, ವಿವೇಕಾನಂದ, ನಾರಾಯಣ ಗುರುಗಳಂತ ಸಂತರೆಲ್ಲ ಸಮಾಜಕಟ್ಟುವುದಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟರೆ ಹೊರಟು ಶಿಕ್ಷಣ ಸಂಸ್ಥೆಗಳನ್ನಲ್ಲ. ವಿವೇಕಾನಂದರನ್ನು ದೇಶ ಪ್ರೇಮದ ರಾಯಭಾರಿಯನ್ನಾಗಿ ಮಾಡಬೇಕು. ವಿಶ್ವಮಾನವತೆಯ, ವಿಶ್ವಧರ್ಮದ ಪರಿಚಯ ಮಾಡಿದವರು ವಿವೇಕಾನಂದರು ಎಂದರು.

ಸವಣಾಲು ಶ್ರೀರಾಮಕೃಷ್ಣ ಸೇವಾ ಸಮಿತಿಯ ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಣ್ಣುಗಳು ಕಾಣದ, ಅನಾರೋಗ್ಯ ಪೀಡಿತ ಪತ್ನಿ, ವಿಕಲಾಂಗ ಮಕ್ಕಳನ್ನು ಹೊಂದಿರುವ ಶಿರ್ಲಾಲಿನ ವಿಠಲ ಆಚಾರ್ಯ ಅವರ ಅಶಕ್ತ ಕುಟುಂಬಕ್ಕೆ ಹಾಗು ದೀಪಕ್ ರಾವ್ ಕುಟುಂಬಕ್ಕೆ ನೆರವನ್ನು ನೀಡಲಾಯಿತು. ಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡುವ ತಾಲೂಕಿನ 50 ಸಂಸ್ಥೆಗಳನ್ನು ಸಮ್ಮಾನಿಸಲಾಯಿತು. ತಾಲೂಕಿನ 25 ಯುವ ಸಂಘಟನೆಗಳಿಗೆ ಯುವ ಸಾಧನಾ ಭೂಷಣ ಪುರಸ್ಕಾರ ನೀಡಲಾಯಿತು.

ಶುಕ್ರವಾರ ಬಿಜೆಪಿ ವಕ್ತಾರರಾಗಿ ನೇಮಕವಾದ ಹರಿಕೃಷ್ಣ ಬಂಟ್ವಾಳ ಅವರನ್ನು ಮಂಡಲದ ವತಿಯಿಂದ ಸಮ್ಮಾನಿಸಲಾಯಿತು. ಬೆಳ್ತಂಗಡಿ ಮಂಡಲ ಅಧ್ಯಕ್ಷರಂಜನ್ ಜಿ. ಗೌಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಜಿ.ಪಂ. ಉಪಾಧ್ಯಕ್ಷೆ ವೇದಾವತಿ, ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಮೋರ್ಚಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಸುಧಾಕರಗೌಡ, ಕರುಣಾಕರ ಬಡಕೋಡಿ, ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು.

ಯುವ ಮೋರ್ಚಾ ತಾಲೂಕಾಧ್ಯಕ್ಷ ಸಂಪತ್ ಬಿ. ಸುವರ್ಣ ಸ್ವಾಗತಿಸಿದರು. ರಾಜೇಶ್ ಪೆಂಬರ್ಡ ಕಾರ್ಯಕ್ರಮ ನಿರ್ವಹಿಸಿದರು.