ಆಳ್ವಾಸ್ ವಿರಾಸತ್-2015ಕ್ಕೆ ಅದ್ಧೂರಿ ಚಾಲನೆ

ಆಳ್ವಾಸ್ ವಿರಾಸತ್-2015ಕ್ಕೆ ಅದ್ಧೂರಿ ಚಾಲನೆ

Dec 25, 2015 10:40:47 AM (IST)

ಮೂಡುಬಿದಿರೆ: ಕಲೆ ಮತ್ತು ಸಂಸ್ಕೃತಿಯ ನಿತ್ಯೋತ್ಸವಕ್ಕೆ ವೇದಿಕೆಯಾಗುತ್ತಿರುವ ಜ್ಞಾನಕಾಶಿ ಮೂಡುಬಿದಿರೆಯ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ  ನಾಲ್ಕು ದಿನಗಳ ಕಾಲ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುವ 22ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ `ಆಳ್ವಾಸ್ ವಿರಾಸತ್-2015"ಗೆ  ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಗುರುವಾರ ಸಂಜೆ ಚಾಲನೆಯನ್ನು ನೀಡಿದರು.

'Alva's Virasat-2015 Award conferred on Dr S P Balasubrahmanyam-1
ಪ್ರಜ್ಞಾವಂತ ಪ್ರೇಕ್ಷಕ ವರ್ಗವೇ ವಿರಾಸತ್. ವಿರಾಸತ್ ಕಾರ್ಯಕ್ರಮಗಳನ್ನು ಆಸ್ವಾಧಿಸುವುದರ ಮೂಲಕ ಡಾ.ಆಳ್ವರ ಶ್ರಮಕ್ಕೆ ಗೌರವ ಸಲ್ಲಿಸಬಹುದು. ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸುವ ಗುಣಗಳನ್ನು ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕು.ಶಿಕ್ಷಣದ  ಜೊತೆಗೆ ಸಾಹಿತ್ಯ ಸಾಂಸ್ಕೃತಿಕ, ಸಂಗೀತದ ಮೂಲಕ ಬದುಕನ್ನು ಆಸ್ವಾದಿಸುವ ಕಲೆಯನ್ನು ಮಕ್ಕಳಿಗೆ ನೀಡುತ್ತಾ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಬಗ್ಗೆ ವಿಶ್ವದ ವಿಶ್ವ ವಿದ್ಯಾನಿಲಯಗಳು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು. ಸಾತ್ವಿಕವಾದ ಕೆಲಸಗಳಲ್ಲಿ ತಮ್ಮನ್ನು ವಿನಿಯೋಗಿಸಿಕೊಳ್ಳಬೇಕೆಂದು ಡಾ.ಹೆಗ್ಗಡೆ ಅಭಿಪ್ರಾಯಪಟ್ಟರು.

ಧರ್ಮಸ್ಥಳದ ಹೇಮಾವತಿ ವಿ.ಹೆಗ್ಗಡೆ,ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಸಚಿವ ಕೆ.ಅಭಯಚಂದ್ರ ಜೈನ್, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ  ಕೆ.ಎ.ದಯಾನಂದ, ಕೆನರಾ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಕೇಶ್ ಶರ್ಮ, ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನ ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಮ ಭಟ್, ಹೋಟೆಲ್ ಪೆನಿನ್ಸುಲಾ, ಮುಂಬೈ ಮತ್ತು ಯು.ಎ.ಇಯ ಆಡಳಿತ ನಿರ್ದೇಶಕ ಕರುಣಾಕರ ಆರ್ ಶೆಟ್ಟಿ, ಅದಾನಿ ಸಂಸ್ಥೆಯ ಎಂ.ಡಿ. (ವ್ಯವಸ್ಥಾಪಕ ನಿರ್ದೇಶಕ) ರಾಜೇಶ್, ಯುಪಿಸಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮುಂಬೈನ  ಸುರೇಶ್ ಭಂಡಾರಿ, ಹೋಟೆಲ್ ಗೋಲ್ಡ್ ಫಿಂಚ್ನ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಹಾಗೂ ಶ್ರೀ ಧನಲಕ್ಷ್ಮೀ ಕ್ಯಾಶ್ಯೂ ಎಕ್ಸ್ಪೋರ್ಟ್ಸ ನ ಆಡಳಿತ ನಿರ್ದೇಶಕ  ಕೆ. ಶ್ರೀಪತಿ ಭಟ್, ಜಯಶ್ರೀ ಅಮರನಾಥ ಶೆಟ್ಟಿ, ಮೋಹನ ಆಳ್ವರ ಕುಟುಂಬಿಕರಾದ ಮೀನಾಕ್ಷಿ, ಜಯಕರ ಆಳ್ವ, ಬಾಲಕೃಷ್ಣ ಶೆಟ್ಟಿ, ಅಮಿತಾ ಶೆಟ್ಟಿ, ರಾಮಚಂದ್ರ ಶೆಟ್ಟಿ, ಊರ್ಮಿಳಾ ಶೆಟ್ಟಿ ಮತ್ತಿತರರು  ಗೌರವ ಉಪಸ್ಥಿತಿಯಲ್ಲಿ ಭಾಗವಹಿಸಿದ್ದರು. ಆಳ್ವಾಸ್ ವಿರಾಸತ್ನ ರೂವಾರಿ ಡಾ.ಎಂ ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಹೆಸರಾಂತ ಹಿನ್ನಲೆ ಗಾಯಕ ಪದ್ಮಶ್ರೀ ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ 22ನೇ ವರ್ಷದ ವಿರಾಸತ್ನ ಉದ್ಘಾಟನಾ ಸಮಾರಂಭದಲ್ಲಿ  ಪ್ರತಿಷ್ಠಿತ 'ಆಳ್ವಾಸ್ ವಿರಾಸತ್ 2015' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, 1,00,000 ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡಿತ್ತು. ವಿಶೇಷವಾಗಿ ಕರ್ನಾಟಕದ ಹಿರಿಯ ಶಾಸ್ತ್ರೀಯ ಸಂಗೀತದ ವಿದ್ವಾಂಸರಾದ ಆರ್.ಕೆ.ಪದ್ಮನಾಭ ಶಾಸ್ತ್ರೀಯ ಸಂಗೀತದ ಗೌರವವನ್ನು ಸಮರ್ಪಿಸಿದರು. ನಂತರ ಸತ್ಯನಾರಾಯಣ ಪುಣಿಂಚಿತ್ತಾಯ ಮತ್ತು ಬಳಗದವರಿಂದ ಯಕ್ಷ ಸಂಗೀತ, ಆಳ್ವಾಸ್ ವಿದ್ಯಾರ್ಥಿಗಳಿಂದ ಯಕ್ಷ ನಮನ, ಮಣಿಪುರಿ ಮತ್ತು ಶ್ರೀಲಂಕಾದ ಕಲಾ ಗೌರವ ಹಾಗೂ ವ ಸಂಗೀತದ ಮೂಲಕ ಗಾನ ಗಂಧರ್ವರಿಗೆ ಅಭಿವಂದನೆ ಸಲ್ಲಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಸ್ಪಿಬಿ ಅವರು ನಾನು ಇಂತಹ ಸನ್ಮಾನವನ್ನು ನನ್ನ ಈವರೆಗಿನ ಜೀವನದಲ್ಲಿ ನೋಡಿಲ್ಲ ಹಾಗೂ ಇಂತಹ ಸನ್ಮಾನವನ್ನು ಯಾರೂ ಮಾಡಿಲ್ಲ. ಭವಿಷ್ಯದಲ್ಲಿ ಈ ರೀತಿಯ ಸನ್ಮಾನ ಮಾಡುತ್ತಾರೆಂಬ ನಂಬಿಕೆ ಕೂಡಾ ಇಲ್ಲ ಎಂದು ತಮ್ಮ ಮನದಾಳದಿಂದ ನುಡಿದರು. ಇನ್ನೊಂದು ಜನ್ಮವಿದ್ದರೆ ಕರ್ನಾಟಕದಲ್ಲಿಯೇ ಹುಟ್ಟಲು ಬಯಸುತ್ತೇನೆ. ಈ ಪ್ರಶಸ್ತಿಯನ್ನು ನನ್ನ ತಾಯಿಗೆ ಹಾಗೂ ನನ್ನನ್ನು ಬೆಳೆಸಿದ, ಆಶೀರ್ವದಿಸಿದ ಎಲ್ಲಾ ಹಿರಿಯರಿಗೂ ಸಮರ್ಪಿಸುತ್ತೇನೆ.

ಆಳ್ವಾಸ್ ವಿರಾಸತ್ ಉದ್ಘಾಟನಾ ಸಮಾರಂಭದ ಮೊದಲು ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಶಂಖ, ಕೊಂಬು, ಚೆಂಡೆ, ಮಣಿಪುರಿ ಕಲಾವಿದರು, ಕುಂದಾಪುರದ ಡೋಲು, ದಫ್, ಲಂಗ ದಾವಣಿ, ಹೊನ್ನಾವರದ ಬ್ಯಾಂಡ್, ತುಳುನಾಡ ವಾದ್ಯ, ಕಲಶ ಹಾಗೂ ಸ್ಯಾಕ್ಸೋಫೋನ್ ತಂಡಗಳ ಜೊತೆ ವಿರಾಸತ್ನ ಉದ್ಘಾಟಕರು, ಪ್ರಶಸ್ತಿ ಪುರಸ್ಕೃತರು ಹಾಗೂ ಅತಿಥಿಗಳು ಸಾಗಿ ಬಂದರು.