ತಾ.ಪಂ.ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು

ತಾ.ಪಂ.ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು

DA   ¦    Nov 13, 2017 06:45:54 PM (IST)
ತಾ.ಪಂ.ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು

ಬೆಳ್ತಂಗಡಿ: ಕಳೆದ ಎರಡು ತಿಂಗಳಿನಿಂದ ಇಲ್ಲಿನ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಇಲ್ಲದೆ ಯಾವುದೇ ಕಡತಗಳು ವಿಲೇವಾರಿ ಆಗುತ್ತಿಲ್ಲ. ಪ್ರಭಾರ ತಹಶೀಲ್ದಾರ್ ಕಡತಗಳಿಗೆ ಸಹಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ತಾಲೂಕು ಕಚೇರಿ ಅರೆ ಜೀವಾವಸ್ಥೆಯಲ್ಲಿದೆ. ಕಚೇರಿಯಲ್ಲಿ ಹಣ ಕೊಟ್ಟವರಿಗೆ ಮಾತ್ರ ಕೆಲಸಗಳು ಆಗುತ್ತಿದೆ ಎಂದು ಸದಸ್ಯರುಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.

ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಾಮಾನ್ಯ ಸಭೆ ಶುರುವಾಗುತ್ತಿದ್ದಂತೆ ಸಭೆಗೆ ಗೈರು ಹಾಜರಾದ ಪ್ರಭಾರ ತಹಶೀಲ್ದಾರ್ ಅವರನ್ನು ಸಭೆಗೆ ಕರೆಸುವಂತೆ ಸದಸ್ಯರುಗಳು ಒತ್ತಾಯಿಸಿದರು. ಮೂಡುಬಿದ್ರೆಯ ತಹಶೀಲ್ದಾರ್ ಇಲ್ಲಿನ ಪ್ರಭಾರವಾಗಿ ಕಾರ್ಯ ನಿರ್ವಹಿಸುತ್ತಿದ್ದಲೂ ಅಲ್ಲಿಯೂ ಸಭೆ ಇರುವ ಕಾರಣ ಬಂದಿಲ್ಲ ಎಂಬ ಉತ್ತರ ಬಂದಾಗ ಕಚೇರಿಯ ಸಿಬಂದಿಗಳನ್ನು ಸಭೆಗೆ ಕಳುಹಿಸಿದ್ದಾರೆ. ಮೇಲಾಧಿಕಾರಿಗಳು ಕೊಡಬೇಕಾದ ಪ್ರಶ್ನೆಗಳಿಗೆ ಸಿಬ್ಬಂದಿಗಳಿಗೆ ಉತ್ತರ ಕೊಡಲು ಆಗುತ್ತಿಲ್ಲ. ಅವರನ್ನು ಬಲಿಪಶು ಮಾಡುತ್ತಾರೆ ಎಂದು ಸದಸ್ಯರುಗಳು ಕಂದಾಯ ಇಲಾಖೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ತಿಂಗಳಿಂದ ತಹಶೀಲ್ದಾರ್ ಇಲ್ಲದೆ ಜನರಿಗೆ ಸಮಸ್ಯೆಗಳಾಗಿದೆ. ಜಾತಿ, ಆದಾಯ ಪ್ರಮಾಣ ಪತ್ರ ಸಿಗುತ್ತಾ ಇಲ್ಲ. ಅಗತ್ಯ ಕಡತಗಳಿಗೆ ಪ್ರಭಾರ ತಹಶೀಲ್ದಾರ್ ಸಹಿ ಹಾಕುತ್ತಿಲ್ಲ. ಆರ್ ಟಿಸಿಗಳಲ್ಲಿ ತಪ್ಪುಗಳನ್ನು ನಮೂದಿಸಿ ಅದನ್ನು ಸರಿ ಪಡಿಸಲು ಸಾಧ್ಯವಾಗುತ್ತಿಲ್ಲ, 94 ಸಿ, 94ಸಿಸಿ ಪ್ರಕ್ರಿಯೆ ಇನ್ನೂ ಆಗಿಲ್ಲ. ಕಂದಾಯ ಇಲಾಖೆಯ ಪ್ರಶ್ವೆಗಳಿಗೆ ತಹಶೀಲ್ದಾರ್ ಇಲ್ಲದೆ ಉತ್ತರ ಕೊಡುವವರು ಯಾರು ಎಂದು ಸದಸ್ಯರಾದ ವಿಜಯ ಗೌಡ ಹಾಗೂ ಶಶಿಧರ್ ಪ್ರಶ್ನಿಸಿದರು.

ವೇಣೂರಿನ ಕಾಲೇಜಿನ ಸ್ಥಳವನ್ನು ಖಾಸಗಿಯವರು ಅಕ್ರಮಣ ಮಾಡುತ್ತಿದ್ದಾರೆ. ಈ ಬಗ್ಗೆ ತಹಶೀಲ್ದಾರ್, ಎಸಿಯವರಿಗೆ ಮನವಿ ಮಾಡಿದ್ದರೂ ಯಾರು ಕ್ರಮ ಕೈಗೊಂಡಿಲ್ಲ ಎಂದಾಗ ಇದಕ್ಕೆ ಧ್ವನಿಗೂಡಿಸಿದ ಸದಸ್ಯರುಗಳಾದ ಲಕ್ಷ್ಮೀನಾರಾಯಣ, ಕೊರಗಪ್ಪ ಗೌಡ, ಜೋಯೆಲ್ ಮೆಂಡೋನ್ಸಾ ಸುಧಾಕರ್, ಸರಕಾರಿ ಸ್ವತ್ತುಗಳನ್ನು ಉಳಿಸಲು ಕಂದಾಯ ಇಲಾಖೆ ಮುಂದಾಗುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಹಣ ಕೊಟ್ಟವರಿಗೆ ಕಡತಗಳು ಸಿಗುತ್ತದೆ. ತಾಲೂಕು ಕಚೇರಿಯ ಸಿಬಂದಿಗಳನ್ನು ಬದಲಾಯಿಸಬೇಕು. ಇದರ ಬಗ್ಗೆ ನಿರ್ಣಯಿಸಬೇಕು ಎಂದು ಒತ್ತಾಯಿಸಿದರು.

ಪಡಿತರ ಚೀಟಿಯ ಬಗ್ಗೆ ಮಾಹಿತಿ ಕೇಳಿದರೆ ಇವರಿಗೆ ಗೊತ್ತಿಲ್ಲ. ಇನ್ನು ಕಂದಾಯ ಇಲಾಖೆಯ ಮಾಹಿತಿ ಸಿಗಬಹುದೇ ಎಂದು ಸದಸ್ಯೆ ಕೇಶವತಿ ಪ್ರಶ್ನಿಸಿದರು. ಬೋವಿ ಸಮುದಾಯದ ಒಂದು ಕುಟುಂಬಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಅದೇ ಮನೆಯ ಒಬ್ಬ ವಿಶೇಷಚೇತನರಿಗೆ ಕೊಡಲಿಕ್ಕೆ ಆಗುವುದಿಲ್ಲ ಎಂದು ಹಿಂಬರಹ ಕೊಟ್ಟಿದ್ದಾರೆ. ಇದು ತಾಲೂಕು ಕಚೇರಿಯ ಅವ್ಯವಸ್ಥೆ ಎಂದು ಸದಸ್ಯ ಸುಧಾಕರ ದೂರಿದರು.

ಸಭೆಯಲ್ಲಿ ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ಕಾರ್ಯನಿರ್ವಾಹಣಾಧಿಕಾರಿ ಬಸವರಾಜ ಅಯ್ಯಣ್ಣನವರ ಹಾಗೂ ಇಲಾಖಾಧಿಕಾರಿಗಳು ಇದ್ದರು.