ಉತ್ತರ ಕನ್ನಡದಲ್ಲಿ ನಾಲ್ಕು ಸ್ಥಾನ ಬಿಜೆಪಿ ಪಾಲು

ಉತ್ತರ ಕನ್ನಡದಲ್ಲಿ ನಾಲ್ಕು ಸ್ಥಾನ ಬಿಜೆಪಿ ಪಾಲು

SB   ¦    May 15, 2018 06:01:59 PM (IST)

ಕಾರವಾರ: ಉತ್ತರ ಕನ್ನಡದ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿದರೆ, ಕಾಂಗ್ರೆಸ್ ಎರಡಕ್ಕೆ ತೃಪ್ತಿ ಪಟ್ಟಿಕೊಂಡಿದೆ. ಜೆಡಿಎಸ್ ಒಂದೂ ಸ್ಥಾನವನ್ನು ಗೆಲ್ಲಲಾಗದೇ ಸೋಲು ಅನುಭವಿಸಿದೆ.

ಜಿಲ್ಲಾ ಕೇಂದ್ರ ಕಾರವಾರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕೊನೆಗೂ ಬಿಜೆಪಿಯ ಮಹಿಳಾ ಅಭ್ಯರ್ಥಿ ರೂಪಾಲಿ ನಾಯ್ಕ ಕೇಸರಿ ಪಾಳಯಕ್ಕೆ ಗೆಲುವಿನ ರೂಪ ಕೊಟ್ಟಿದ್ದಾರೆ. ರೂಪಾಲಿ 59,776 ಮತಗಳನ್ನು ಪಡೆದು, ಅಂತಿಮವಾಗಿ ಜೆಡಿಎಸ್‌ನ ಆನಂದ್ ಅಸ್ನೋಟಿಕರ್ (45,967) ವಿರುದ್ಧ 13,809 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಸತೀಶ್ ಸೈಲ್ ಅವರು 2013ರ ಚುನಾವಣೆಯಲ್ಲಿ 80,727 ಮತಗಳನ್ನು ಪಡೆದು ಬಿಜೆಪಿಯ ಆನಂದ್ ಅಸ್ನೋಟಿಕರ್ (44,847) ವಿರುದ್ಧ ಗೆಲುವು ಸಾಧಿಸಿದ್ದರು.

ಬಿಜೆಪಿಗೆ ಬಂಡಾಯಗಾರರ ಸ್ಪರ್ಧೆ, ಕಾಂಗ್ರೆಸ್‌ನ ಪ್ರಬಲ ನಾಯಕಿಯ ಸ್ಪರ್ಧೆ, ಅದರ ಮಧ್ಯೆದಲ್ಲಿ ಬಿಜೆಪಿಯ ವಲಸಿಗ ಅಭ್ಯರ್ಥಿಗೆ ಜಯ ಸಾಧಿಸಿದೆ. ಕುಮಟಾ ಕ್ಷೇತ್ರದ ಬಿಜೆಪಿಯಲ್ಲಿ ಟಿಕೆಟ್‌ಗೆ ಭಾರೀ ಪೈಪೋಟಿಯ ನಡುವೆ ಬಿಜೆಪಿ ಹೈಕಮಾಂಡ್ ಜೆಡಿಎಸ್‌ನಿಂದ ಬಂದ ದಿನಕರ್ ಶೆಟ್ಟಿಗೆ ಟಿಕೆಟ್ ನೀಡಿತ್ತು. ದಿನಕರ ಶೆಟ್ಟಿ 56,780 ಮತಗಳನ್ನು ಪಡೆದು, ಕಾಂಗ್ರೆಸ್‌ನ ಶಾರದಾ ಶೆಟ್ಟಿ (25,943) ವಿರುದ್ಧ 30,837 ಮತಗಳ ಅಂತರದಲ್ಲಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಾರದಾ ಮೋಹನ್ ಶೆಟ್ಟಿ 36,756 ಮತಗಳನ್ನು ಪಡೆದು ಜೆಡಿಎಸ್‌ನಲ್ಲಿದ್ದ ದಿನಕರ ಶೆಟ್ಟಿ (36,336) ಅವರನ್ನು 420 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದರು.

ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಭಟ್ಕಳದಲ್ಲಿ ಬಿಜೆಪಿಯ ಸುನೀಲ್ ನಾಯ್ಕ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಮಂಕಾಳ್ ವೈದ್ಯ (77,242) 5,930 ಮತಗಳ ಅಂತರದಲ್ಲಿ ಸೋತಿದ್ದಾರೆ. ಸುನೀಲ್ ನಾಯ್ಕ 83,172 ಮತಗಳನ್ನು ಪಡೆದು ಭಟ್ಕಳದಲ್ಲಿ ಬಿಜೆಪಿಯ ಖಾತೆ ತೆರೆದಿದ್ದಾರೆ. 2013ರ ಚುನಾವಣೆಯಲ್ಲಿ ಗೆದ್ದ ಮಂಕಾಳ ಸುಬ್ಬಾ ವೈದ್ಯ (ಪಕ್ಷೇತರ) 37,319 ಮತಗಳನ್ನು ಪಡೆದರೆ, ಜೆಡಿಎಸ್‌ನ ಇನಾಯತ್ ಉಲ್ಲಾ ಶಾಬಂದ್ರಿ 27,455 ಮತ ಪಡೆದಿದ್ದರು.

ಶಿರಸಿಯಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಸತತ ಮೂರನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಕಾಗೇರಿ 59,903 ಮತಗಳನ್ನು ಪಡೆದು ಕಾಂಗ್ರೆಸ್‌ನ ಭೀಮಣ್ಣ ನಾಯ್ಕರನ್ನು (41,558) 18,345 ಮತಗಳ ಅಂತರದಿಂದ ಸೋಲಿಸಿದ್ದಾರೆ. ತೃತೀಯ ಸ್ಥಾನದಲ್ಲಿ ಜೆಡಿಎಸ್‌ನ ಶಶಿಭೂಷಣ ಹೆಗಡೆ (21,459) ಇದ್ದಾರೆ. 2013ರ ಚುನಾವಣೆಯಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 42,854 ಮತಗಳಿಂದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ದೀಪಕ್ ಹೊನ್ನಾವರ 3,059 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಹಳಿಯಾಳದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ವಿರುದ್ಧ 5100 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸುನೀಲ್ ಹೆಗಡೆ 56,224 ಮತಗಳನ್ನು ಪಡೆದುಕೊಂಡಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ ಅವರು 55,005 ಮತಗಳನ್ನು ಪಡೆದಿದ್ದರೆ, ಜೆಡಿಎಸ್‌ನ ಸುನೀಲ್ ಹೆಗಡೆ 49,066 ಮತಗಳನ್ನು ಪಡೆದುಕೊಂಡಿದ್ದರು.

ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಿವರಾಮ ಹೆಬ್ಬಾರ್ ಅತೀ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 66,290 ಮತಗಳನ್ನು ಪಡೆದುಕೊಂಡಿರುವ ಅವರು, ಬಿಜೆಪಿಯ ವಿ.ಎಸ್.ಪಾಟೀಲ್ ಅವರ ವಿರುದ್ಧ 1,483 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಪಾಟೀಲ್, 64,807 ಮತಗಳನ್ನು ಪಡೆದುಕೊಂಡಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಿವರಾಮ್ ಹೆಬ್ಬಾರ್ 58,025 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ವಿ.ಎಸ್.ಪಾಟೀಲ್ 33,533 ಮತಗಳನ್ನು ಪಡೆದಿದ್ದರು. ಒಟ್ಟಾರೆ ಉತ್ತರ ಕನ್ನಡದಲ್ಲಿ ಹಿಂದಿನ ಬಾರಿ ಒಂದೇ ಒಂದು ಸ್ಥಾನದಲ್ಲಿ ಇದ್ದ ಬಿಜೆಪಿ ಈಗ ಮೂರು ಸ್ಥಾನವನ್ನು ಹೆಚ್ಚಿಸಿಕೊಂಡಿದೆ. ಕಾಂಗ್ರೆಸ್ 5 ಸ್ಥಾನದಿಂದ 2 ಸ್ಥಾನಕ್ಕೆ ಕುಸಿದಿದೆ.