ಕಥುವಾ ಸಂತ್ರಸ್ಥ ಬಾಲಕಿ ಹೆಸರನ್ನು ನನ್ನ ಮಗಳ ಹೆಸರಲ್ಲಿ ಸೇರಿಸುವೆ: ಪ್ರತಿಭಾ ಕುಳಾಯಿ

ಕಥುವಾ ಸಂತ್ರಸ್ಥ ಬಾಲಕಿ ಹೆಸರನ್ನು ನನ್ನ ಮಗಳ ಹೆಸರಲ್ಲಿ ಸೇರಿಸುವೆ: ಪ್ರತಿಭಾ ಕುಳಾಯಿ

SRJ   ¦    Apr 16, 2018 02:39:34 PM (IST)
ಕಥುವಾ ಸಂತ್ರಸ್ಥ ಬಾಲಕಿ ಹೆಸರನ್ನು ನನ್ನ ಮಗಳ ಹೆಸರಲ್ಲಿ ಸೇರಿಸುವೆ: ಪ್ರತಿಭಾ ಕುಳಾಯಿ

ಮಂಗಳೂರು: ಜಮ್ಮು-ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ ಮಹಿಳಾ ನಾಯಕಿ ಪ್ರತಿಭಾ ಕುಳಾಯಿ ಅವರು, ಸಂತ್ರಸ್ಥ ಬಾಲಕಿಯ ಹೆಸರನ್ನು ತಮ್ಮ ಮಗಳ ಹೆಸರಿನ ಜೊತೆ ಜೋಡಣೆ ಮಾಡಿ ಕರೆಯುತ್ತೇನೆ ಎಂದಿದ್ದಾರೆ.

ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮಹಿಳಾ ಸಂಘಟನೆ ಸದಸ್ಯರು ಮತ್ತು ತಮ್ಮ ಪುತ್ರಿ ಪೃಥ್ವಿ ಜೊತೆ ಪತ್ರೀಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ನಾನು ಹಿಂದೂವಾಗಿದ್ದರೂ, ಬಿಜೆಪಿಯ ಹಿಂದೂಗಳೆದುರು ನಾನೂ ಹಿಂದು ಎಂದು ಹೇಳಿಕೊಳ್ಳಲು ನಾಚಿಕೆಪಡುವ ಪರಿಸ್ಥಿತಿ ಎದುರಾಗಿದೆ ಎಂದರು.

ನಾವು ಹಿಂದೂಗಳ ರಕ್ಷಕರು ಎಂದು ಕರೆಸಿಕೊಂಡು ಭಾರತ್ ಮಾತಾ ಕೀ ಜೈ ಎನ್ನುವವರು ಎಷ್ಟು ಮಹಿಳೆಯರಿಗೆ ರಕ್ಷಣೆ ನೀಡುತ್ತಾರೆ ಎಂಬುದನ್ನು ನಾನೇ ಖುದ್ದಾಗಿ ಅನುಭವಿಸಿದ್ದೇನೆ.

ಕಳೆದ ಬಾರಿ ಲೋಕಸಭಾ ಚುನಾವಣಾ ಸಂದರ್ಭ ಕೋಡಿಕೆರೆ ಎಂಬಲ್ಲಿ ಪ್ರಚಾರಕ್ಕೆ ಹೋದ ಸಂದರ್ಭ ಅಲ್ಲಿ ನನಗೆ ಪ್ರಚಾರ ಮಾಡಲು ತಡೆಯೊಡ್ಡಿದ್ದಲ್ಲದೇ, ಬಳಿಕ ಮನೆಗೆ ಬಂದು ಬೆದರಿಕೆ ಕೂಡ ಹಾಕಿದ ಈ ಹಿಂದೂಗಳೆಂದು ಕರೆಸಿಕೊಳ್ಳುವ ನನ್ನ ಸಹೋದರರ ಕುತಂತ್ರಗಳ ವಿಡಿಯೋ ನನ್ನ ಬಳಿ ಇದೆ ಎಂದು ಪ್ರತಿಭಾ ಕುಳಾಯಿ ಅವರು ಕೆಲವು ವಿಡಿಯೋ ತುಣುಕುಗಳನ್ನು ಸುದ್ದಿಗೋಷ್ಟಿಯಲ್ಲಿ ಪ್ರದರ್ಶಿಸಿದರು.

ಬಿಜೆಪಿಯ ಹಿಂದೂಗಳು ನನ್ನ ಮನೆಗೆ ಗುಂಪಲ್ಲಿ ಬಂದು ಅನಾಗರಿಕರ ರೀತಿಯಲ್ಲಿ ವರ್ತಿಸಿದ್ದಾರೆ. ಇದೀಗ ಈ ವಿಚಾರಗಳನ್ನು ಹೇಳಲು ಇದು ಪ್ರಸಕ್ತ ಸಮಯ ಎಂಬ ನೆಲೆಯಲ್ಲಿ ಹಿಂದಿನ ಘಟನೆಗಳನ್ನು ನೆನಪಿಸುತ್ತಿದ್ದೇನೆ.

ಮತ್ತೆ ಈ ಬಾರಿ ಚುನಾವಣಾ ಪ್ರಚಾರಕ್ಕೆ ಆ ಸ್ಥಳಗಳಿಗೆ ಹೋಗಲಿಕ್ಕಿದೆ, ಆ ಸಮಯದಲ್ಲಿ ಪುನಃ ಇಂತಹ ಪರಿಸ್ಥಿತಿ ಒದಗಿ ಬಾರದಿರಲಿ ಎನ್ನುವ ದೃಷ್ಟಿಯಿಂದ ವಿಡಿಯೋಗಳನ್ನು ತೋರಿಸಿ, ಈ ಮಾತನ್ನು ಹೇಳುತ್ತಿದ್ದೇನೆ ಜೊತೆಗೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ಕೂಡ ನೀಡಿದ್ದೇನೆ ಎಂದರು.

ಮತ ಹಾಕುವುದು ಅವರವರ ಇಚ್ಛೆ, ಯಾರಿಗೆ ಬೇಕಾದರೂ ಮತ ಹಾಕಿ, ಆದರೆ ಆಲೋಚನೆ ಮಾಡಿ ಮತ ಹಾಕಿ ಎಂದಷ್ಟೇ ನಾನು ಸಾರ್ವಜನಿಕರಲ್ಲಿ ವಿನಂತಿ ಮಾಡುತ್ತಿದ್ದೇನೆ ಎಂದು ಪ್ರತಿಭಾ ಕುಳಾಯಿ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.