ಬಂಟ್ವಾಳ : 'ಅನ್ನಕ್ಕೆ ಕನ್ನ ಇದು ನ್ಯಾಯವೇ ಅಣ್ಣ’ ರಾಜ್ಯ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಕೂಗು

ಬಂಟ್ವಾಳ : 'ಅನ್ನಕ್ಕೆ ಕನ್ನ ಇದು ನ್ಯಾಯವೇ ಅಣ್ಣ’ ರಾಜ್ಯ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಕೂಗು

MP   ¦    Aug 12, 2017 10:04:18 AM (IST)
ಬಂಟ್ವಾಳ : 'ಅನ್ನಕ್ಕೆ ಕನ್ನ ಇದು ನ್ಯಾಯವೇ ಅಣ್ಣ’ ರಾಜ್ಯ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಕೂಗು

ಬಂಟ್ವಾಳ : ಪುಟ್ಟ ಪುಟಾಣಿಗಳ ಕೈಯಲ್ಲಿ ಬಟ್ಟಲಿತ್ತು, ಮನದಲ್ಲಿ ಆಕ್ರೋಶವಿತ್ತು.. ಸ್ವರದಲ್ಲಿ ಧಿಕ್ಕಾರದ ಕೂಗಿತ್ತು.. ಇದು ಶುಕ್ರವಾರ ಬಿ.ಸಿ.ರೋಡಿನಲ್ಲಿ ಕಂಡುಬಂದು ಪ್ರತಿಭಟನೆಯೊಂದರ ದೃಶ್ಯ. ಕೊಲ್ಲೂರು ಮುಕಾಂಬಿಕದೇವಾಲಯದಿಂದ ದತ್ತು ಯೋಜನೆಯಡಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿ ಶಾಲೆಗಳಿಗೆ ಕಳೆದ ಹತ್ತು ವರ್ಷದಿಂದ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಗೊಳಿಸಿದ ಸರಕಾರದ ಕ್ರಮದ ವಿರುದ್ದ ಗರಂ ಆಗಿದ್ದ ಸಾವಿರಾರು ಮಂದಿ ಮಕ್ಕಳು ಪೋಷಕರು ಶುಕ್ರವಾರ ಬೆಳಿಗ್ಗೆ ಬಿ.ಸಿ.ರೋಡಿನಲ್ಲಿ ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ. ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಎರಡು ವಿದ್ಯಾ ಸಂಸ್ಥೆಗಳ ಮಕ್ಕಳು-ಪೋಷಕರು ಸರ್ಕಾರದ ವಿರುದ್ದ ಧಿಕ್ಕಾರದ ಧ್ವನಿ ಮೊಳಗಿಸಿದರು. ರಾಜ್ಯದ ಜನತೆಗೆ ಅನ್ನ ಭಾಗ್ಯ ನೀಡುವುದಾಗಿ ಹೇಳಿದ ರಾಜ್ಯ ಸರಕಾರ, ಕಲ್ಲಡ್ಕ ಮತ್ತು ಪುಣಚ ಶಾಲೆಯ ವಿದ್ಯಾರ್ಥಿಗಳಿಗೆ ಹಸಿವಿನ ಭಾಗ್ಯ ನೀಡಿದ್ದಾರೆ. ಕೊಲ್ಲೂರು ದೇವಸ್ಥಾನದಿಂದ ಬರುವ ಅನ್ನವನ್ನು ನಿಲ್ಲಿಸಿದ್ದು ಯಾಕೆ. ಉಸ್ತುವಾರಿ ಸಚಿವರೇ ನಿಮಗೂ ಮಕ್ಕಳಿಲ್ಲವೇ ಅವರು ನಮ್ಮಂತೆ ಹಸಿದಿದ್ದರೆ ನೀವು ಸುಮ್ಮನೇ ಇರುತ್ತಿದ್ದೀರಾ. ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಬಡವರ ಮಕ್ಕಳೇ ಇಲ್ಲಿ ಕಲಿಯುತ್ತಿದ್ದಾರೆ. ನಿಮಗೆ ತಿಳಿದಿಲ್ಲವೇ. ತಿಳಿದಿಲ್ಲವಾದರೆ ನೀವೆಂತಹ ಸಚಿವರು ಎಂದು ಕೇಳಿದರು.

ಕಳೆದ ಹತ್ತು ವರ್ಷಗಳಿಂದ ಅನ್ನ ಪ್ರಸಾದ ದೇವಸ್ಥಾನದಿಂದ ಸಿಗುತ್ತಿತ್ತು. ಸಿದ್ದರಾಮಯ್ಯ ಸರಕಾರ ಬಂದು ನಾಲ್ಕುವರೆ ವರ್ಷವಾದ ತನಕವು ನಿಮಗೆ ಈ ವಿಚಾರವೇ ತಿಳಿದಿಲ್ಲ ಎನ್ನುವುದಾದರೆ ನಿಮ್ಮದು ಎಂತಹ ಸರಕಾರ ಎಂಬುದು ತಿಳಿಯುವುದಿಲ್ಲವೇ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಯ ನಂತರ ನೀವು ಇಂತಹ ದ್ವೇಷವನ್ನು ಸಾಧಿಸುತ್ತಿದ್ದೀರಲ್ಲವೇ ಎಂಬ ಪ್ರಶ್ನೆಗಳು ಪ್ರತಿಭಟನಾ ಕಾರರಿಂದ ಕೇಳಿಬಂತು.ನಿಮಗೆ ರಾಜಕೀಯ ದ್ವೇಷ ಇದ್ದರೆ ಬಡವರ ಮಕ್ಕಳ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಬೇಕೆ. ನಿಮಗೆ ಬಡ ಮಕ್ಕಳು ಏನು ಅನ್ಯಾಯ ಮಾಡಿದ್ದಾರೆ. ನಾವು ಉಣ್ಣುವುದು ಕೊಲ್ಲೂರು ದೇವರ ಅನ್ನ ಪ್ರಸಾದವನ್ನು , ಇದು ನಿಮ್ಮ ಮನೆಯಿಂದ ನೀಡುವ ಕೊಡುಗೆ ಅಲ್ಲ. ದೇವಸ್ಥಾನಕ್ಕೆ ಬರುವುದು ಹಿಂದೂಗಳ ಹಣ. ಅದನ್ನು ನೀವು ಬಳಸಿಕೊಂಡು. ಮಸೀದಿ ಚರ್ಚ್ಗಗಳಿಗೆ ನೀಡಲು ಇನ್ನಷ್ಟು ಹಣ ಬೇಕಾಗಿದೆಯೇ ಎಂದು ಕೇಳಿದರು.ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡುವ, ಉದ್ದ್ದುದ ಭಾಷಣ ಬಿಗಿಯುವ ಮಂದಿ ಈಗ ಎಲ್ಲಿ ಹೋಗಿದ್ದಾರೆ. ಕನ್ನಡದ ಪರ ಘೋಷಣೆ ಮಾಡುವ, ಅಭಿಮಾನಿಗಳೆಂದು ಹೇಳಿಕೊಳ್ಳುವ ಮಂದಿ ಎಲ್ಲಿ ಹೋಗಿದ್ದಾರೆ. ಅಪ್ಪಟ ಕನ್ನಡದ ಶಾಲೆಗೆ ಅಗಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ- ಉಸ್ತುವಾರಿ ಸಚಿವರ ವಿರುದ್ದ ಆಕ್ರೋಶ: ಪ್ರತಿಭಟನೆಯುದ್ದಕ್ಕೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹಾಗೂ ಮುಖ್ಯಮಂತ್ರಿ ಸಚಿವರ ವಿರುದ್ದ ಆರೋಪಗಳ ಸುರಿಮಳೆಯೇ ಹರಿದು ಬಂತು. ತಿನ್ನುವ ಅನ್ನಕ್ಕಾಗಿ ಹೋರಾಟಕ್ಕೆ ಇಳಿಯುವ ಸ್ಥಿತಿಯನ್ನು ವಿದ್ಯಾರ್ಥಿಗಳಿಗೆ ತಂದಿರುವ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಕ್ಷಸ ಬುದ್ಧಿ ತೋರಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಶಾಲಾ ಮಕ್ಕಳಿಗೆ ದೇವರ ಅನ್ನ ಪ್ರಸಾದ ಸಿಗುತ್ತಿತ್ತು. ರಾಜಕೀಯ ದ್ವೇಷಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಅನ್ನದಾನದ ಅನುದಾನ ತಡೆ ಹಿಡಿಯಲಾಗಿದೆಸಚಿವರೇ, ನಾವು ವಿದ್ಯಾರ್ಥಿಗಳು ನಿಮ್ಮನ್ನು ನಮ್ಮ ಶಾಲೆಗೆ ಕರೆಯುತ್ತೇವೆ. ದಯವಿಟ್ಟು ಶಾಲೆಗೆ ಬಂದು ನಮ್ಮನ್ನು ನೋಡಿ. ಊರಿಗೆ ಅನ್ನಕೊಡುವ ಮನೆತನದಲ್ಲಿ ಹುಟ್ಟಿ ಬೆಳೆದ ಸಚಿವರೇ ನಮ್ಮ ಅನ್ನವನ್ನು ಯಾಕೆ ಕಸಿದಿದ್ದೀರಿ ಎನ್ನುವುದಕ್ಕೆ ಉತ್ತರಿಸಿ. ಉಸ್ತುವಾರಿ ಸಚಿವರೇ ನಿಮಗೆ ಮಕ್ಕಳೇನು ಅನ್ಯಾಯ ಮಾಡಿದ್ದಾರೆ ಎಂದು ಪುಟ್ಟ ಪುಟ್ಟ ಪುಟಾಣಿಗಳು ಮೈಕ್ ಹಿಡಿದು ಮಾತನಾಡಿದರು.

ಹೋರಾಟ ನಿಲ್ಲುವುದಿಲ್ಲ. ಅನುದಾನ ಸಿಗುವ ತನಕ ನಮ್ಮ ಪ್ರಯತ್ನ ಸಾಗುವುದು. ಕೊಲ್ಲೂರು ದೇವಸ್ಥಾನದಿಂದ ರಾಜ್ಯ 52 ಸಂಸ್ಥೆಗಳಿಗೆ ಅನುದಾನ ಸಲ್ಲಿಕೆಯಾಗುತ್ತದೆ. ಕೇವಲ ಕಲ್ಲಡ್ಕ ಮತ್ತು ಪುಣಚ ಸಂಸ್ಥೆಗಳಿ ಮಾತ್ರ ಅನುದಾನ ನಿಲ್ಲಿಸಿದ್ದು ಯಾಕೆ ಎಂಬುದು ಇಲ್ಲಿನ ಪ್ರಮುಖ ಪ್ರಶ್ನೆಯಾಗಿದೆ ಎನ್ನವ ಸಂಶಯವನ್ನು ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿಯೇ ಅನ್ಯಾಯಕ್ಕೆ ತಕ್ಕ ಶಾಸ್ತಿಯನ್ನು ನೀಡಲಿ ಎಂದು ಸಾರ್ವಜನಿಕವಾಗಿ ಶಪಿಸಿದರು.ಸುಮಾರು ಎರಡು ಗಂಟೆಗಳ ತನಕ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು ಮಾತನಾಡಿದರು. ಸಭೆಯ ನಂತರ ಮಾತೃ ಸಮಿತಿ ಸದಸ್ಯರಾದ ಪಣಿಪ ಎಂ., ಶೋಭಾ, ಅಶಾಪ್ರಸಾದ್, ದೇವಿಕಾ ಮೊದಲಾದವರು ರಾಷ್ಟ್ರಪತಿಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಬಂಟ್ವಾಳ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.

ಸ್ವಚ್ಚತೆಗೆ ಆದ್ಯತೆ
ಅತ್ಯಂತ ಶಿಸ್ತುಬದ್ದವಾಗಿ ವಿದ್ಯಾರ್ಥಿಗಳು , ಪೋಷಕರು ಸರತಿ ಸಾಲಿನಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸಂದರ್ಭ ಮಣ್ಣಲ್ಲಿ ಕುಳಿತುಕೊಳ್ಳಲು ಹಾಕಿದ ಕಾಗದವನ್ನು ಬಳಿಕ ಅವರೇ ತೆಗೆದುಕೊಂಡು ಹೋಗುವ ಮೂಲಕ ಸ್ವಚ್ಚತೆಗೆ ಆದ್ಯತೆ ನೀಡಿದರು.ಪ್ರತಿಭಟನೆ ಸಂದರ್ಭ ಅನ್ನದ ಬಟ್ಟಲನ್ನು ಬಡಿದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಸರಕಾರದ ಕ್ರಮಗಳನ್ನು ಖಂಡಿಸಿದರು. ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು, ಹಿಂದು ಸಂಘಟನೆಯ ಸದಸ್ಯರು ನೆರೆದಿದ್ದರು.

ಮಕ್ಕಳ ವಿಷಯದಲ್ಲಿ ರಾಜಕೀಯ ಬೇಡ

ಶಾಲಾ ಮಕ್ಕಳ ವಿಷಯದಲ್ಲಿ ರಾಜಕೀಯ ಮಾಡಬಾರದು. ಅನ್ನವನ್ನು ಕಸಿದುಕೊಳ್ಳುವ ಕೆಲಸ ಮಾಡುವುದು ರಾಕ್ಷಸರು ಮಾತ್ರ. ಹೀಗೆಂದು ಹೇಳಿದವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪೋಷಕ ಅಬ್ದುಲ್ ಹಕೀಂ.ನಮ್ಮ ಮಕ್ಕಳು ಇದೇ ಶ್ರೀರಾಮ ವಿದ್ಯಾಕೇಂದ್ರಕ್ಕೆ ಹೋಗುತ್ತಾರೆ. ಇಲ್ಲಿ ಜಾತಿ ಭೇದವಿಲ್ಲದೆ ಸಹಬಾಳ್ವೆ ಇದೆ. ಉಚಿತ ಶಿಕ್ಷಣ, ಸಮವಸ್ತ್ರ, ಅನ್ನ ಸಿಗುತ್ತದೆ. ಅನ್ನದಾನದ ಅನುದಾನವನ್ನು ನಿಲುಗಡೆ ಮಾಡಿರುವುದು ಯಾಕೆ ಎಂಬುದು ಸ್ಪಷ್ಟವಾಗುವುದಿಲ್ಲ . ರಾಜಕೀಯ ಏನೇ ಇದ್ದರೂ ಮಕ್ಕಳ ಹೊಟ್ಟೆಗೆ ಹೊಡೆಯುವ ಕೆಲಸ ಆಗಬಾರದು. ರಾಜ್ಯಸರಕಾರದ ಆದೇಶವನ್ನು ಪುನರ್ ಪರಿಶೀಲಿಸಿ ಅನ್ನದಾನದ ಅನುದಾನ ನೀಡುವ ಕೆಲಸ ಆಗಲಿ.
ಕೇಳಿಬಂದ ಘೋಷಣೆಗಳು..

ಅನ್ನಕ್ಕೆ ಕನ್ನ ಇದು ನ್ಯಾಯವೇ ಅಣ್ಣ, ಪಾಠವು ಬೇಕು, ಊಟವು ಬೇಕು. ಅಯ್ಯೋಯ್ಯೋ ಅನ್ಯಾಯ ಅನ್ಯಾಯ, ಕನ್ನಡ ಕನ್ನಡ ಎನ್ನುವಿರಿ ಕನ್ನಡ ಶಾಲೆಯ ಕೊಲ್ಲುವಿರಿ, ಅಹಿಂದ ಎನ್ನುವಿರಿ ಹಿಂದುಳಿದವರ ಅನ್ನವನ್ನು ಕಸಿಯುವಿರಿ, ಸರಕಾರಕ್ಕೆ ಜಾಲಿ, ಜಾಲಿ ನಮ್ಮ ಹೊಟ್ಟೆ ಖಾಲಿ, ಖಾಲಿ, ಹಸಿದವರಿಗೆ ಊಟ ನೀಡಿ, ನಿಮ್ಮ ರಾಜಕೀಯದಾಟ ಬಿಡಿ

More Images