ಅ.ಭಾ.ಅಂ.ವಿವಿ ಕ್ರೀಡಾಕೂಟಕ್ಕೆ 50ಲಕ್ಷ ಅನುದಾನ: ಕೆ.ಎಸ್.ಈಶ್ವರಪ್ಪ

ಅ.ಭಾ.ಅಂ.ವಿವಿ ಕ್ರೀಡಾಕೂಟಕ್ಕೆ 50ಲಕ್ಷ ಅನುದಾನ: ಕೆ.ಎಸ್.ಈಶ್ವರಪ್ಪ

DSK   ¦    Nov 08, 2019 07:41:34 PM (IST)
ಅ.ಭಾ.ಅಂ.ವಿವಿ ಕ್ರೀಡಾಕೂಟಕ್ಕೆ 50ಲಕ್ಷ ಅನುದಾನ: ಕೆ.ಎಸ್.ಈಶ್ವರಪ್ಪ

ಮೂಡುಬಿದಿರೆ: ವಿದ್ಯಾರ್ಥಿಗಳು ಕಲಿಕೆಗೆ ಮೊದಲ ಆದ್ಯತೆ ನೀಡುವುದರ ಜತೆಗೆ ಕ್ರೀಡೆಯಲ್ಲೂ ಆಸಕ್ತಿ ತೋರಬೇಕು.ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕ್ರೀಡೆಗೆ ಸಿಗುವ ಪ್ರೋತ್ಸಾಹ ಕಡಿಮೆ. ಈ ನಿಟ್ಟಿನಲ್ಲಿ ಮುಂದಿನ ಜನವರಿಯಲ್ಲಿ ಮೂಡುಬಿದಿರೆಯಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಕ್ರೀಡಾ ಕೂಟಕ್ಕೆ ಸರಕಾರದಿಂದ ರೂ 50 ಲಕ್ಷ ಅನುದಾನ ಹಾಗೂ ಅಗತ್ಯ ಕ್ರೀಡಾ ಸಾಮಾಗ್ರಿಗಳನ್ನು ಒದಗಿಸಲಾಗುವುದು ಎಂದು ಗ್ರಾಮೀಣ ಅಭಿವೃದ್ಧಿ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

 ಅವರು ಶುಕ್ರವಾರ ಆಳ್ವಾಸ್ ಆಡಳಿತ ಕಚೇರಿ ಕಟ್ಟಡದಲ್ಲಿ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಕ್ರೀಡಾ ಕೂಟದ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಉತ್ತಮ ಕ್ರೀಡಾಪಟುಗಳು ದುಶ್ಚಟಗಳಿಂದ ದೂರ ಇರುತ್ತಾರೆ. ಕ್ರೀಡೆಯನ್ನು ತಪಸ್ಸಾಗಿ ಸ್ವೀಕರಿಸಿದಾಗ ಸಾಧಕ ಕ್ರೀಡಾಪಟುವಾಗಿ ಮೂಡಿ ಬರಲು ಸಾಧ್ಯ ಎಂದ ಅವರು ತುಮಕೂರಿನಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಆರಂಭವಾಗಲಿದೆ. ರಾಜ್ಯದಲ್ಲಿ ಕ್ರೀಡಾ ಸಾಧನೆ ಮಾಡಿದ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಕ್ರೀಡಾ ಅಧಿಕಾರಿಗಳ ವಿಶೇಷ ಸಭೆಯನ್ನು ನಡೆಸಿ, ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಅದನ್ನು ಮುಂದಿನ ಬಜೆಟ್‍ನಲ್ಲಿ ಸೇರಿಸಿ ಅವುಗಳಿಗೆ ಅನುದಾನ ಕಾಯ್ದಿರಿಸಲು ಪ್ರಯತ್ನಿಸಲಾಗುವುದು. ಸಾಧಕ ಕ್ರೀಡಾಪಟುಗಳಿಗೆ ಸರಕಾರದ ವಿವಿಧ ಇಲಾಖೆಗಳಲ್ಲಿ ನೇರ ನೇಮಕಾತಿಗೆ ಸರಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡೆಯನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿ ಸರಕಾರ ಪರಿಗಣಿಸಬೇಕು, ಸಾಧಕ ಕ್ರೀಡಾ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಉದ್ಯೋಗದಲ್ಲಿ ಮೀಸಲಾತಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವ ಕ್ರೀಡಾ ಕೂಟಗಳಿಗೆ ಸರಕಾರದ ಪ್ರೋತ್ಸಾಹ ಸೇರಿದಂತೆ ಕೆಲವು ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.

ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಜಿಲ್ಲಾ ಪಂಚಾಯತ್  ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತೇಶ್, ಕ್ರೀಡಾ ಆಯುಕ್ತ ಶ್ರೀನಿವಾಸ ಮತ್ತು ದ.ಕ ಜಿಲ್ಲಾ ಪಂಚಾಯತ್ ಸಿಇಒ ಸೆಲ್ವಮಣಿ ಉಪಸ್ಥಿತರಿದ್ದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.