ಸುಳ್ಯ  ಲಾಕ್ ಡೌನ್ ಅವಶ್ಯ ಸೇವೆಗಳ ಅಂಗಡಿಗಳೂ ಬಂದ್

ಸುಳ್ಯ  ಲಾಕ್ ಡೌನ್ ಅವಶ್ಯ ಸೇವೆಗಳ ಅಂಗಡಿಗಳೂ ಬಂದ್

GK   ¦    Mar 24, 2020 07:02:48 PM (IST)
ಸುಳ್ಯ  ಲಾಕ್ ಡೌನ್ ಅವಶ್ಯ ಸೇವೆಗಳ ಅಂಗಡಿಗಳೂ ಬಂದ್

ಸುಳ್ಯ: ಕರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸುಳ್ಯ ಸತತ ಮೂರನೇ ದಿನವೂ ಸಂಪೂರ್ಣ ಬಂದ್ ಆಗಿದೆ. ಹಾಲು ಮಾರಾಟ, ಮೆಡಿಕಲ್ ಮತ್ತು ಪೆಟ್ರೋಲ್ ಪಂಪ್ ಹೊರತು ಪಡಿಸಿದರೆ ಉಳಿದ ಯಾವುದೇ ಅಂಗಡಿಗಳು ತೆರೆದಿಲ್ಲ. ದಿನಸಿ, ತರಕಾರಿ, ಮಾಂಸ ಮಾರಾಟದ ಅಂಗಡಿಗಳನ್ನು ಮಧ್ಯಾಹ್ನ 12 ಗಂಟೆಯವರೆಗೆ ತೆರೆಯಬಹುದು ಎಂಬ ನಿರ್ದೇಶನವಿದ್ದರೂ ಯಾವುದೆ ಅಂಗಡಿಗಳು ಮಂಗಳವಾರ ತೆರೆದಿಲ್ಲ. ನಗರ ಸಂಪೂರ್ಣ ಸ್ತಬ್ಧವಾಗಿತ್ತು.

ಬೆಳಗ್ಗೆ ಪೇಟೆಯಲ್ಲಿ ಅನಗತ್ಯ ತಿರುಗಾಟ ಕಂಡು ಬಂದ ವಾಹನಗಳನ್ನು ಮತ್ತು ಸಾರ್ವಜನಿಕರನ್ನು ಕೂಡಲೇ ತೆರಳುವಂತೆ  ಪೊಲೀಸರು  ಸೂಚನೆ ನೀಡುತ್ತಿದ್ದು ಕಂಡು ಬಂದಿತ್ತು. ವಾಹನಗಳಲ್ಲಿ ಪ್ರಯಾಣಿಸುವವರನ್ನು ವಿಚಾರಿಸಿದ ಬಳಿಕ ಬಿಡುತ್ತಿದ್ದರು. ನಗರ ಸಂಪೂರ್ಣ ಬಂದ್ ಆಗಿದ್ದು ಜನರು ಮತ್ತು ವಾಹನಗಳಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿತ್ತು. ಕೆಎಸ್‍ಆರ್‍ಟಿಸಿ, ಖಾಸಗೀ ಬಸ್‍ಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ವಾಹನಗಳು ಓಡಾಟ ನಡೆಸಿಲ್ಲ. ಕೆಲವು ಖಾಸಗೀ ವಾಹನಗಳು ಮಾತ್ರ ಓಡಾಡಿದ್ದವು. ನಗರ ಮತ್ತು ಗಡಿ ಪ್ರದೇಶದಲ್ಲಿ ವಾಹನಗಳ ತಪಾಸಣೆಯನ್ನೂ ಬಿಗು ಗೊಳಿಸಲಾಗಿದೆ.

ಮಾ.31ರವರೆಗೆ ಬೆಳಿಗ್ಗೆ ಆರರಿಂದ ಮಧ್ಯಾಹ್ನ 12 ರವರೆಗೆ ಅವಶ್ಯಕ ಸೇವೆಗಳಾದ ದಿನಸಿ, ತರಕಾರಿ ಅಂಗಡಿಗಳು ತೆರೆದಿರಬಹುದು ಎಂಬ ಆದೇಶವಿದ್ದರೂ ಸುಳ್ಯ ನಗರದಲ್ಲಿ ಈ ಅಂಗಡಿಗಳು ಕೂಡ ಬಂದ್ ಆಗಿತ್ತು.  ಇದು ಸಾರ್ವಜನಿಕರ ಆತಂಕಕ್ಕೂ ಕಾರಣವಾಗಿದೆ. ಅವಶ್ಯಕ ಸೇವೆಗೆ ಮತ್ತು ವಸ್ತುಗಳಿಗೆ ಯಾವುದೇ ರೀತಿಯಿಂದಲೂ ಕೊರತೆ ಆಗದಂತೆ ತಾಲೂಕು ಆಡಳಿತ ನಿಗಾ ವಹಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ. ವಿವಿಧ ಇಲಾಖೆಗಳು ಒಟ್ಟಾಗಿ ಚರ್ಚಿಸಿ ಅಗತ್ಯ ವಸ್ತುಗಳ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಗರ ಪಂಚಾಯಿತಿ ಸದಸ್ಯ ಎಂ.ವೆಂಕಪ್ಪ ಗೌಡ ಒತ್ತಾಯಿಸಿದ್ದಾರೆ.

More Images