ಪುತ್ತೂರು ಜಿಲ್ಲೆ ರಚನೆಗೆ ಹಕ್ಕೋತ್ತಾಯ: ನ.11ಕ್ಕೆ ಸಮಿತಿ ರಚನೆ ಸಭೆ

ಪುತ್ತೂರು ಜಿಲ್ಲೆ ರಚನೆಗೆ ಹಕ್ಕೋತ್ತಾಯ: ನ.11ಕ್ಕೆ ಸಮಿತಿ ರಚನೆ ಸಭೆ

LG   ¦    Nov 07, 2018 02:04:29 PM (IST)
ಪುತ್ತೂರು ಜಿಲ್ಲೆ ರಚನೆಗೆ ಹಕ್ಕೋತ್ತಾಯ: ನ.11ಕ್ಕೆ ಸಮಿತಿ ರಚನೆ ಸಭೆ

ಪುತ್ತೂರು: ಉತ್ತಮ ಆಡಳಿತ ವ್ಯವಸ್ಥೆಯನ್ನು ಒದಗಿಸುವಲ್ಲಿ ಹಾಗೂ ಆ ಮೂಲಕ ನಾಗರಿಕೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸುಲಭವಾಗಿ ತಲುಪುವಲ್ಲಿ ಸಹಾಯಕವಾಗಲು ಪುತ್ತೂರು ಜಿಲ್ಲೆಯ ರಚೆನೆಯಾಗಬೇಕಾಗಿರುವುದು ಅನಿವಾರ್ಯ.ಈ ನಿಟ್ಟಿನಲ್ಲಿ ಸಿಟಿಜನ್ ಪೋರಂ ಅಡಿಯಲ್ಲಿ ಹಂತಹಂತವಾಗಿ ಹೋರಾಟ ನಡೆಯುತ್ತಾ ಬಂದಿದ್ದು, ಇದೀಗ ನ.11ಕ್ಕೆ ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿರುವ ಪರಾಶರ ಸಭಾಭವನದಲ್ಲಿ ಪುತ್ತೂರು ಜಿಲ್ಲೆ ರಚನೆಗೆ ಹಕ್ಕೋತ್ತಾಯ ಸಮಿತಿ ರಚಿಸಲು ಸಭೆ ಕರೆಯಲಾಗಿದೆ ಎಂದು ನ್ಯಾಯವಾದಿ ರಾಮಮೋಹನ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಜಿಲ್ಲೆ ರಚನೆಯಾಗಬೇಕೆಂಬ ಕುರಿತು ಜನಬೆಂಬಲವಿದ್ದರೂ ಈ ಕುರಿತು ಇಷ್ಟು ದಿನ ಯಾವುದೇ ರೀತಿಯ ಹೋರಾಟ ನಡೆಸದಿರುವ ಕಾರಣ ಬೇಸರಗೊಂಡಿರುವ ಹಲವು ಮಂದಿ ಸಭೆಯಲ್ಲಿ ಸೇರಿ ಪ್ರಸ್ತಾವಿತ ಜಲ್ಲೆಯ ಜನರ ಎಲ್ಲಾ ರೀತಿಯ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದ್ದು ಸರಕಾರ ಶೀಘ್ರದಲ್ಲಿ ಇದಕ್ಕೆ ಸ್ಪಂಧಿಸಬೇಕಾಗಿದೆ. ಸಮಿತಿ ರಚನೆಯಾದ ಬಳಿಕ ಹೋರಾಟ ತೀವ್ರತೆಯನ್ನು ಕಂಡು ಕೊಳ್ಳಲಿದೆ ಎಂದು ಅವರು ಹೇಳಿದರು.

ರಾಮನಗರ, ಯಾದಗಿರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಂತೆ ಪುತ್ತೂರು ಕೂಡಾ ಜನಸಂಖ್ಯೆ, ವಿಸ್ತೀರ್ಣ ಮತ್ತು ಇನ್ನೂ ಹಲವಾರು ವಿಚಾರಗಳಲ್ಲಿ ಒಂದು ಪರಿಪೂರ್ಣ ಜಿಲ್ಲೆಯಾಗಿ ಮಾರ್ಪಡಲು ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಸುತ್ತಲಿನ ಗ್ರಾಮಾಂತರ ಭಾಗದ ಜನರಿಗೆ ಕೇಂದ್ರ ಸ್ಥಾನವಾಗಿರುವ ಪುತ್ತೂರು ಭವಿಷ್ಯದಲ್ಲಿ ಉತ್ತಮ ಅಭಿವೃದ್ಧಿ ಕಾಣಲು ಅನುಕೂಲವಾಗಬೇಕೆಂದರೆ ಜಿಲ್ಲೆಯಾಗಿ ಪರಿವರ್ತನೆಗೊಳ್ಳಲೇಬೇಕಿದೆ. ಪುತ್ತೂರು ಜಿಲ್ಲಾ ಕೇಂದ್ರವಾದರೆ ಇಲ್ಲಿಲ ಜಿ.ಪಂ, ಜಿಲ್ಲಾಧಿಕಾರಿ, ಎಸ್.ಪಿ ಕಚೇರಿ, ಜಿಲ್ಲಾಸ್ಪತ್ರೆ, ಜಿಲ್ಲಾ ನ್ಯಾಯಾಲಯದಂತಹ ಸರಕಾರ ಮತ್ತು ನಾಗರಿಕರಿಗೆ ಕೊಂಡಿಯಾಗಿರುವ ಹಲವಾರು ಸೇವೆಗಳು ಆರಂಭಗೊಂಡು ಇವು ಸ್ಥಳೀಯರಲ್ಲದೆ ಸುಳ್ಯದ ಸಂಪಾಜೆಯಿಂದ ತೊಡಗಿ ಬೆಳ್ತಂಗಡಿಯ ಕಕ್ಕಿಂಜೆ, ಕಡಬದ ಸಿರಿಬಾಗಿಲು ಮತ್ತು ಗುಂಡ್ಯದಂತಹ ಗಡಿಭಾಗದ ಜನರಿಗೂ ಸುಲಭವಾಗಿ ಕೈಗೆಟಕುತ್ತದೆ ಎಂದ ಅವರು ಪುತ್ತೂರು ಜಿಲ್ಲೆಯಾಗುವ ಎಲ್ಲಾ ಅರ್ಹತೆ ಪಡೆದಿದ್ದರೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಹೊಸ ಜಿಲ್ಲೆಯಾಗಿ ತನ್ನ ಸ್ಥಾನ ಗಳಿಸುವಲ್ಲಿ ವಿಫಲವಾಗಿರುವುದು ಹಲವರಲ್ಲಿ ಅಸಮಾಧಾನ ತಂದಿದೆ ಎಂದರು.

ತಾಲೂಕು ಮಟ್ಟದಲ್ಲಿ ಉಪಸಮಿತಿ ರಚನೆ: ಉದ್ಯಮಿ ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಮಾತನಾಡಿ, ನ.11ರಂದು ಪುತ್ತೂರಿನಲ್ಲಿ ನಡೆಯುವ ಸಭೆಯ ಬಳಿಕ ಪ್ರಧಾನ ಸಮಿತಿ ರಚನೆಯಾಗಲಿದ್ದು, ಬಳಿಕ ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬದಲ್ಲಿ ಉಪಸಮಿತಿ ರಚನೆ ಮಾಡಲಾಗುವುದು.

ನಮ್ಮ ಹೋರಾಟ 6 ತಿಂಗಳಲ್ಲಿ ಜಿಲ್ಲೆಯಾಗುತ್ತದೆ ಎಂಬ ದೃಷ್ಟಿಯಿಂದಲ್ಲ. ಹಂತಹಂತವಾಗಿ ಎಲ್ಲಾ ಸಂಘಟನೆಗಳು, ಜಾತಿ, ಧರ್ಮ, ರಾಜಕೀಯ, ಗ್ರಾ.ಪಂ, ತಾ.ಪಂ ಸೇರಿದಂತೆ ಎಲ್ಲಾ ಸಂಸ್ಥೆಗಳಿಂದಲೂ ಮನವಿಯನ್ನು ಪಡೆದು ಕೊಂಡು ಅದನ್ನು ಸರಕಾರಕ್ಕೆ ಒಪ್ಪಿಸುವ ಕೆಲಸ ಮಾಡಲಿದ್ದೇವೆ ಎಂದ ಅವರು ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಸೇರಿ ಒಟ್ಟು 8,78,907 ಜನಸಂಖ್ಯೆ ಮತ್ತು ಒಟ್ಟು 4,028 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು ಜಿಲ್ಲೆಯ ಎಲ್ಲಾ ಅರ್ಹತೆ ಪಡೆದಿದೆ. ಉನ್ನತ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳಿವೆ. ಆದರೂ ಸರಕಾರವನ್ನು ಎಚ್ಚರಗೊಳಿಸಲು ಸಂಘಟಿತ ಹೋರಾಟ ಅಗತ್ಯವಿದೆ. ಕಂಬಳಕ್ಕೆ ತೊಂದರೆ ಆದ ಸಂದರ್ಭದಲ್ಲಿ ಜನರ ಬೇಡಿಕೆಗೆ ತಕ್ಕಂತೆ ಜನಪ್ರತಿನಿಧಗಿಳ ಬೆಂಬಲವು ಸಿಕ್ಕಂತೆ. ಇಲ್ಲೂ ಕೂಡಾ ಜಿಲ್ಲೆಯ ಹೋರಾಟಕ್ಕೆ ಎಲ್ಲಾ ಜನಪ್ರತಿನಿಧಿಗಳು ಸೇರಿಕೊಳ್ಳುವ ವ್ಯವಸ್ಥೆ ಸಂಘಟಿತ ಹೋರಾಟದಿಂದ ಆಗಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಕಲಾ ಪ್ರತಿಷ್ಠಾನ ಬೆಂಗಳೂರು ಇದರ ಗೌರವಾಧ್ಯಕ್ಷ ಸತೀಶ್ ರೈ ನೀರ್ಪಾಡಿ, ಬಡೆಕ್ಕಿಲ ಪ್ರದೀಪ್ ಉಪಸ್ಥಿತರಿದ್ದರು.