ವಿಶ್ವ ತುಳು ಸಮ್ಮೇಳನ ದುಬಾಯಿ 2018 - ಆಹ್ವಾನ ಪತ್ರ ಬಿಡುಗಡೆ

ವಿಶ್ವ ತುಳು ಸಮ್ಮೇಳನ ದುಬಾಯಿ 2018 - ಆಹ್ವಾನ ಪತ್ರ ಬಿಡುಗಡೆ

Sep 30, 2018 11:58:04 AM (IST)
ವಿಶ್ವ ತುಳು ಸಮ್ಮೇಳನ ದುಬಾಯಿ 2018 - ಆಹ್ವಾನ ಪತ್ರ ಬಿಡುಗಡೆ

ವಿಶ್ವ ತುಳು ಸಮ್ಮೇಳನ ದುಬಾಯಿ ನವೆಂಬರ್ 23 ಮತ್ತು 24 ರಂದು ದುಬಾಯಿ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿ ಮತ್ತು ಇನ್ನಿತರ ಸಮಿತಿಗಳ ವಿಶೇಷ ಸಭೆಯಲ್ಲಿ ಅಧಿಕೃತ ಆಹ್ವಾನ ಪತ್ರವನ್ನು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗರು ಬಿಡುಗಡೆ ಮಾಡಿದರು.

ದುಬಾಯಿ ದೇರಾದಲ್ಲಿರುವ ಕ್ವಿಕ್ ಬೈಟ್ ರೆಸ್ಟೊರೆಂಟ್ ಸಭಾಂಗಣದಲ್ಲಿ ಈಚೆಗೆ ನಡೆದ ಸಭೆಯ ಅಧ್ಯಕ್ಷತೆಯನ್ನು ಸರ್ವೋತ್ತಮ ಶೆಟ್ಟಿ ವಹಿಸಿದ್ದರು. ನಂತರ ಸಮ್ಮೇಳನದ ಪೂರ್ವ ತಯಾರಿಯ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದರು. ದುಬಾಯಿಯಲ್ಲಿ ನಡೆಯಲಿರುವ ವಿಶ್ವ ತುಳು ಸಮ್ಮೇಳನದ ಪೂರ್ವ ತಯಾರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಪಾಲ ದೇವಾಡಿಗರು ಮೆಚ್ಚುಗೆ ವ್ಯಕ್ತ ಪಡಿಸಿ ಸಮ್ಮೇಳನದ ಯಶಸ್ಸಿಗೆ ಶುಭವನ್ನು ಹಾರೈಸಿದರು. ಸಮ್ಮೇಳನದ ಪೂರ್ಣ ವಿವರಗಳನ್ನು ಇವೆಂಟ್ ಮ್ಯಾನೆಜರ್ ಶೋಧನ್ ಪ್ರಸಾದ್ ವಿವರವಾಗಿ ಸಭೆಯ ಮುಂದಿಟ್ಟರು. ವಿಶ್ವ ತುಳು ಸಮ್ಮೇಳನದ ಸವಿ ನೆನಪಿಗಾಗಿ ಲೋಕಾರ್ಪಣೆ ಗೊಳ್ಳಲಿರುವ "ವಿಶ್ವ ತುಳು ಐಸಿರಿ" ಸ್ಮರಣ ಸಂಚಿಕೆ ಪ್ರಧಾನ ಸಂಪಾದಕರಾದ ಬಿ. ಕೆ. ಗಣೇಶ್ ರೈಯವರು ಸ್ಮರಣ ಸಂಚಿಕೆಯ ಕಾರ್ಯಯೋಜನೆಯ ಬಗ್ಗೆ ವಿವರಿಸಿದರು.

"ವಿಶ್ವ ತುಳು ಸಮ್ಮೇಳನ ದುಬಾಯಿ" - ವಿಶ್ವ ತುಳುವರ ಸಮ್ಮಿಲನ

"ವಿಶ್ವ ತುಳು ಸಮ್ಮೇಳನ ದುಬಾಯಿ" ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ ಅನಿವಾಸಿ ತುಳುವರ ಬೃಹತ್ ಸಮಾವೇಶ. ಸಾಗರೋತ್ತರ ತುಳುವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲಭಾರತ ತುಳು ಒಕ್ಕೂಟ ಇವರುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ.

ವಿಶ್ವ ತುಳು ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮ ವಿಭೂಷಣ ಪುರಸ್ಕೃತ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷರಾಗಿ ಅಬುಧಾಬಿ ಎನ್. ಎಂ. ಸಿ. ಸಮೂಹ ಸಂಸ್ಥೆಯ ಸ್ಥಾಪಕರು ಮತ್ತು ಚೇರ್ಮನ್ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು ಪಾಲ್ಗೊಳ್ಳಲಿದ್ದಾರೆ.

ಗೌರವ ಅತಿಥಿಗಳಾಗಿ ಪರಮ ವಂದನೀಯ ಪೀಟರ್ ಪೌಲ್ ಸಲ್ಡಾನಾ ಧರ್ಮಾಧ್ಯಕ್ಷರು ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ, ವಂದನೀಯ ಪೂಜ್ಯ ಎಬಿನೆಜರ್ ಪ್ರೊಟೆಸ್ಟೆಂಟ್ ಧರ್ಮಗುರುಗಳು - ಸಿ.ಎಸ್.ಐ. ಮಂಗಳೂರು ಪ್ರಾಂತ್ಯ, ಶ್ರೀ ರೋನಾಲ್ಡ್ ಕೊಲಾಸೊ, ಮಾನವತಾ ಹಿತೈಷಿ, ಬೆಂಗಳೂರು, ಶ್ರೀ ಅಬ್ದುಸ್ಸಲಾಂ ಪುತ್ತಿಗೆ ಮುಸ್ಲಿಂ ಪ್ರವಚನಕಾರರು ಹಾಗೂ ಮೂಡಬಿದರೆ, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸ್ಥಾಪಕ ಚೇರ್ಮನ್ ಡಾ. ಮೋಹನ್ ಆಳ್ವ ಭಾಗವಹಿಸಲಿದ್ದಾರೆ.

ಗೌರವ ಅತಿಥಿಗಳಾಗಿ ಎ. ಸಿ ಭಂಡಾರಿ, ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು, ಧರ್ಮಪಾಲ ದೇವಾಡಿಗ, ಅಧ್ಯಕ್ಷರು ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು, ಸರ್ವೋತ್ತಮ ಶೆಟ್ಟಿ, ಮುಖ್ಯ
ಸಂಘಟಕರು ಸಾಗರೋತ್ತರ ತುಳುವರು ಅತಿಥಿಗಳಾಗಿ ಕರ್ನಾಟಕದಿಂದ ಗಣ್ಯಾತಿ ಗಣ್ಯರು ಹಾಗೂ ಸಾಗರದಾಚೆಯ ಗಲ್ಫ್, ಅಮೇರಿಕಾ, ಆಸ್ಟ್ರೇಲಿಯಾ, ಯು. ಕೆ. ತುಳು ಸಂಘಟನೆಗಳ ಅಧ್ಯಕ್ಷರುಗಳು ಆಗಮಿಸಲಿದ್ದಾರೆ. ಹೊರನಾಡ ತುಳು ಸಂಘಟನೆಗಳಾದ ಮುಂಬೈ, ದೆಹಲಿ, ಬರೋಡ, ನಾಸಿಕ್, ಸಾಂಗ್ಲಿ, ಪುಣೆ, ಚೆನೈ, ಹುಬ್ಬಳ್ಳಿ, ಧಾರವಾಡ, ಬೆಳಗಾಂ ಇತ್ಯಾದಿ ಹಲವಾರು ಸಂಘಟನೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

ವಿಶ್ವ ತುಳು ಸಮ್ಮೇಳನದ ಸವಿನೆನಪಿಗಾಗಿ ವಿಶೇಷ ಸ್ಮರಣ ಸಂಚಿಕೆ "ವಿಶ್ವ ತುಳು ಐಸಿರಿ" ಲೋಕಾರ್ಪಣೆ ಗೊಳ್ಳಲಿದೆ. ವಿದ್ವಾಂಸರಿಂದ ತುಳುನಾಡಿನ ಕಲೆ ಸಾಹಿತ್ಯ ಕ್ರೀಡೆ ಜನಪದ, ಸಮಗ್ರ ಮಾಹಿತಿಗಳು. ಸಾಹಿತಿಗಳ ಅರ್ಥಪೂರ್ಣ ಲೇಖನಗಳು ಮತ್ತು ಗಣ್ಯಾತಿ ಗಣ್ಯರ ಶುಭ ಸಂದೇಶಗಳನ್ನು ಒಳಗೊಂಡಿರುತ್ತದೆ.

ತುಳು ಜಾನಪದ ನೃತ್ಯ ಸ್ಪರ್ಧೆ ನಡೆಯಲಿದ್ದು ಗಲ್ಫ್ ರಾಷ್ಟ್ರಗಳಾದ ಮಸ್ಕತ್, ಬಹರೈನ್, ಕತ್ತಾರ್, ಕುವೈತ್, ಸೌದಿ ಅರೇಬಿಯಾ, ಒಮಾನ್ ಮತ್ತು ಯು.ಎ.ಇ.ಯ ಹಲವು ಜಾನಪದ ನೃತ್ಯ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ.
ಸತೀಶ್ ಶೆಟ್ಟಿ ಪಟ್ಲ ತಂಡದವರಿಂದ ಯಕ್ಷ ನಾಟ್ಯ ವೈಭವ, ಗಾನ ವೈಭವ, ಹಾಸ್ಯ ವೈಭವ ಮತ್ತು ಯಕ್ಷಗಾನ ತಾಳ ಮದ್ದಳೆ, ತುಳು ರಸ ಮಂಜರಿ ತುಳು ಸಾಹಿತ್ಯ ಗೋಷ್ಠಿ "ತುಳು ಕೋಡೆ-ಇನಿ-ಎಲ್ಲೆ" ದೈವಾರಾಧನೆ, ನಾಗಾರಾಧನೆ ಮತ್ತು ಭೂತಾರಾಧನೆಯ ಬಗ್ಗೆ ಚರ್ಚೆ ತುಳು ಮಾಧ್ಯಮ ಗೋಷ್ಠಿ, ತುಳು ಹಾಸ್ಯ ಸಂಜೆ, ತುಳು ಕವನ ವಾಚನ, ತುಳು ಚುಟುಕು ಗೋಷ್ಠಿ, ತುಳು ರಂಗ ಭೂಮಿ ಮತ್ತು ಚಲನ ಚಿತ್ರ ಗೋಷ್ಠಿ ಹೊರನಾಡ ತುಳು ಸಂಘಟನೆಗಳ ಅಧ್ಯಕ್ಷರ ಗೋಷ್ಠಿ ನಡೆಯಲಿದೆ.

"ತುಳುನಾಡ ಪರ್ಬೊಲು" - ನೃತ್ಯರೂಪಕ - ಚಕ್ರಪಾಣಿ ನೃತ್ಯ ಕಲಾಕೇಂದ್ರ ಮಂಗಳೂರು, "ಬಲೆ ತೆಲಿಪಾಲೆ" ಪ್ರಶಂಸ ತಂಡ ಕಾಪು, ಮತ್ತು ಮಿಜಾರು ತಂಡ ಮಂಗಳೂರು, ಯಕ್ಷಗಾನ-ಯಕ್ಷಮಿತ್ರರು ಮತ್ತು ಪಿಲಿನಲಿಕೆ ದುಬಾಯಿ ಕಲಾತಂಡದವರಿಂದ, "ಎಳುವೆರ್ ದೆಯ್ಯಾರ್" - ತುಳು ನೃತ್ಯರೂಪಕ- ನಾಟ್ಯನಿಕೇತನ ಉಳ್ಳಾಲ್ ಮೋಹನ್ ಕುಮಾರ್ ತಂಡದವರಿಂದ, "ಸತ್ಯನ ಪುರಾತ ಸಿರಿ" ತುಳು ನೃತ್ಯ ರೂಪಕ ಸನಾತನ ನಾಟ್ಯಾಲಯ ಚಂದ್ರಶೇಖರ ಶೆಟ್ಟಿ ಹಾಗೂ ದುಬಾಯಿಯ ಗಮ್ಮತ್ ಕಲಾವಿದರು ಮತ್ತು ವಿವಿಧ ಕಲಾವಿದರ ತಂಡದಿಂದ ವೈವಿಧ್ಯಮಯ ಕಾರ್ಯಕ್ರಮಗಳು ಹಾಗೂ ತುಳುನಾಡನ್ನು ಪ್ರತಿಬಿಂಭಿಸುವ ವಸ್ತುಪ್ರದರ್ಶನ ಇತ್ಯಾದಿ ಹಲವಾರು ವೈವಿಧ್ಯಮಯ ತುಳು ನಾಡಿನ ಸಾಂಸ್ಕೃತಿಕ ಕಲಾವೈಭವ ಅನಾವರಣಗೊಳ್ಳಲಿದೆ.

More Images