ಯುಎಇಯಲ್ಲಿ ಭರ್ಜರಿ ಪ್ರದರ್ಶನ ಕಂಡ 'ಮಾರ್ಚ್ 22' ಸಿನೆಮಾ: ಪ್ರದರ್ಶನಕ್ಕೆ ಅನಂತ್ ನಾಗ್ ಚಾಲನೆ

ಯುಎಇಯಲ್ಲಿ ಭರ್ಜರಿ ಪ್ರದರ್ಶನ ಕಂಡ 'ಮಾರ್ಚ್ 22' ಸಿನೆಮಾ: ಪ್ರದರ್ಶನಕ್ಕೆ ಅನಂತ್ ನಾಗ್ ಚಾಲನೆ

Oct 07, 2017 06:37:54 PM (IST)
ಯುಎಇಯಲ್ಲಿ ಭರ್ಜರಿ ಪ್ರದರ್ಶನ ಕಂಡ 'ಮಾರ್ಚ್ 22' ಸಿನೆಮಾ: ಪ್ರದರ್ಶನಕ್ಕೆ ಅನಂತ್ ನಾಗ್ ಚಾಲನೆ

ದುಬೈ: ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಭಾರೀ ಸುದ್ದಿ ಮಾಡಿರುವ ದುಬೈಯ ಹೆಸರಾಂತ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಾಣದ 'ಮಾರ್ಚ್ 22' ಸಿನೆಮಾ ಶುಕ್ರವಾರ ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇ(ಗಲ್ಫ್) ಯಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಂಡಿದ್ದು, ಸಿನಿಪ್ರಿಯರ ಅಪಾರ ಮೆಚ್ಚುಗೆ ಗಳಿಸಿದೆ.

ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನೆಮಾ ಕರ್ನಾಟಕ ರಾಜ್ಯಾದ್ಯಂತ ಸಿನಿಪ್ರಿಯರ ಹಾಗೂ ಮಾಧ್ಯಮಗಳ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ನಟ ಅನಂತ್ ನಾಗ್ ಚಾಲನೆ

ಸೌಹಾರ್ದ ಬದುಕು ಹಾಗೂ ನೀರಿನ ಹಾಹಾಕಾರಕ್ಕೆ ಸಂಬಂಧಿಸಿದ ವಿಭಿನ್ನ ಕಥೆಯನ್ನಿಟ್ಟುಕೊಂಡು ಮಾಡಿರುವ ಈ ಸಿನೆಮಾದ ಮೊದಲ ಪ್ರದರ್ಶನ ಭರ್ಜರಿ ಯಶಸ್ವಿ ಕಂಡಿದೆ. ದುಬೈಯ ಹಯಾತ್ ರೆಜೆನ್ಸಿಯ ಗೆಲ್ಲೆರಿಯ ಸಿನೆಮಾ ಮಂದಿರದಲ್ಲಿ ಶುಕ್ರವಾರ ಬೆಳಗ್ಗೆ ಮೊದಲ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಪ್ರಥಮ ಪ್ರದರ್ಶನವನ್ನು ಸಿನೆಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಸಮ್ಮುಖದಲ್ಲಿ 'ಮಾರ್ಚ್ 22' ಸಿನೆಮಾದಲ್ಲಿ ತಮ್ಮ ನಟನಾ ಕೌಶಲ್ಯವನ್ನು ಮೆರೆದ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅನಂತ್ ನಾಗ್ ಅವರ ಧರ್ಮ ಪತ್ನಿ, ಹಿರಿಯ ನಟಿ ಗಾಯತ್ರಿ ಅನಂತ್ ನಾಗ್, ಯು-ಟರ್ನ್, ರಂಗತರಂಗಿ ಖ್ಯಾತಿಯ ನಟಿ ರಾಧಿಕಾ ಚೇತನ್, ಸಿನೆಮಾದ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಸುವರ್ಣ ಸತೀಶ್, ದಿನೇಶ್ ಶೇರಿಗಾರ್ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಗಣ್ಯರನ್ನು ಸಿನೆಮಾ ಮಂದಿರದ ಒಳಗೆ ಚೆಂಡೆ, ವಾದ್ಯಗಳ ಮೂಲಕ ಕರೆತರಲಾಯಿತು.

ಅಬುಧಾಬಿಯಲ್ಲಿ ಭರ್ಜರಿ ಪ್ರದರ್ಶನ

ಅಬುಧಾಬಿಯ ಆಸ್ಕರ್ ಸಿನೆಮಾ ಮಂದಿರದಲ್ಲಿ ಸಂಜೆ 'ಮಾರ್ಚ್ 22' ಸಿನೆಮಾದ ಪ್ರದರ್ಶನ ಆಯೋಜಿಸಲಾಗಿತ್ತು. ಈ ಸಿನೆಮಾದ ಹಾಡೊಂದರಲ್ಲಿ ವಿಶೇಷವಾಗಿ ಕಾಣಿಸಿಕೊಂಡಿರುವ ಕರಾವಳಿ ಮೂಲದ ದುಬೈಯ ಖ್ಯಾತ ಉದ್ಯಮಿ, ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ, ಅನಂತ್ ನಾಗ್, ಗಾಯತ್ರಿ, ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್, ಸುಧೀರ್ ಕುಮಾರ ಶೆಟ್ಟಿ, ಸರ್ವೋತ್ತಮ ಶೆಟ್ಟಿ ದೀಪ ಬೆಳಗಿಸಿ ಪ್ರದರ್ಶನವನ್ನು ಉದ್ಘಾಟಿಸಿದರು.

ಹೌಸ್ ಫುಲ್ ಪ್ರದರ್ಶನ

ಯುಎಇಯಲ್ಲಿ ಸದಾ ಕೆಲಸದ ಒತ್ತಡದಲ್ಲಿರುವ ಕನ್ನಡಿಗರು ಈ ಸಿನೆಮಾವನ್ನು ನೋಡುವ ತವಕದಲ್ಲಿ ಮುಂಜಾನೆಯೇ ಸಿನೆಮಾ ಮಂದಿರದ ಮುಂದೆ ಜಮಾಯಿಸಿದ್ದರು. ದುಬೈಯ ಹಯಾತ್ ರೆಜೆನ್ಸಿಯ ಗೆಲ್ಲೆರಿಯ ಸಿನೆಮಾ ಮಂದಿರಕ್ಕೆ ಅನಂತ್ ನಾಗ್, ಗಾಯತ್ರಿ, ರಾಧಿಕಾ ಚೇತನ್ ಬರುತ್ತಿದ್ದಂತೆ ಅವರ ಅಭಿಮಾನಿಗಳೇ ಮುತ್ತಿಗೆ ಹಾಕಿ ಸೆಲ್ಫಿ ತೆಗೆದುಕೊಂಡು ಸಂಭ್ರಮಪಟ್ಟರು.

ಹಿಂದೂ-ಮುಸ್ಲಿಮರ ಐಕ್ಯತೆ-ಸೌಹಾರ್ದತೆಯನ್ನು ತೆರೆದಿಟ್ಟಿರುವ ಹಾಗೂ ನೀರಿಗೆ ಸಂಬಂಧಿಸಿ ಧರ್ಮಕ್ಕಿಂತ ಬದುಕು ಮುಖ್ಯ ಎಂಬ ಭಿನ್ನ ಬಗೆಯ ಕಥಾ ಹಂದರವನ್ನು ಈ ಚಿತ್ರ ನೋಡಲು ಜನ ಜಂಗುಳಿಯೇ ಸೇರಿತ್ತು. ಸೌಹಾರ್ದ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡಬಲ್ಲ ಈ ಸಿನೆಮಾಕ್ಕೆ ಹತ್ತಲವು ಪ್ರಶಸ್ತಿ ಬರಲಿ ಎಂದು ಸಿನೆಮಾ ನೋಡಿದ ಜನ ಹಾರೈಸಿದರು. ದುಬೈ-ಅಬುಧಾಬಿ-ಶಾರ್ಜಾದಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿರುವ ಸಿನೆಮಾ ಬಗ್ಗೆ ಸಾಮಾಜಿಕ ತಾಣಗಳಲ್ಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹರೀಶ್ ಶೇರಿಗಾರ್, ಶರ್ಮಿಳಾ ಶೇರಿಗಾರ್ ದಂಪತಿ ಪ್ರತಿಕ್ರಿಯೆ

ನೀರಿಗೆ ಸಂಬಂಧಿಸಿ ಹಿಂದೂ-ಮುಸ್ಲಿಮರ ಮಧ್ಯೆ ನಡೆಯುವ ವಿಭಿನ್ನ ಕತೆಯನ್ನು ಹೊಂದಿರುವ 'ಮಾರ್ಚ್ 22' ಸಿನೆಮಾ ನೋಡಿದ ಜನ ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಸಿನೆಮಾ ನೋಡಿ ಹೊರಬರುತ್ತಿದ್ದ ಜನ "ಈ ಸಿನೆಮಾ ಜನರಲ್ಲಿ ಹೊಸ ಚಿಂತನೆಯನ್ನು ಸೃಷ್ಟಿಸುವಂತೆ ಮಾಡುತ್ತೆ. ನಮ್ಮ ಮಧ್ಯೆಗಿನ ಶಾಂತಿ-ಸೌಹಾರ್ದತೆಯನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತೆ. ಇಂಥ ಅದ್ಭುತ ಕಥೆಯನ್ನಿಟ್ಟುಕೊಂಡು ಹರೀಶ್ ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಸಿನೆಮಾ ನಿರ್ಮಿಸಿರುವುದು ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅನಂತ್ ನಾಗ್-ಗಾಯತ್ರಿಗೆ ಸನ್ಮಾನ
ದುಬೈಯ ಹಯಾತ್ ರೆಜೆನ್ಸಿಯ ಗೆಲ್ಲೆರಿಯ ಸಿನೆಮಾ ಮಂದಿರದಲ್ಲಿ ಬೆಳಗ್ಗಿನ ಮೊದಲ ಪ್ರದರ್ಶನದ ವೇಳೆ ನಟ ಅನಂತ್ ನಾಗ್ ಹಾಗೂ ಅವರ ಧರ್ಮಪತ್ನಿ ಗಾಯತ್ರಿ ಅವರಿಗೆ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ಅವರು ಶಾಲು ಹೊದ್ದಿಸಿ, ಮೈಸೂರು ಪೇಟ ಇಟ್ಟು ಸನ್ಮಾನಿಸಿದರು. ಸಂಜೆ ಅಬುಧಾಬಿಯಲ್ಲಿ ನಡೆದ ಪ್ರದರ್ಶನದ ವೇಳೆ ಡಾ.ಬಿ.ಆರ್.ಶೆಟ್ಟಿ ಅವರು ಅನಂತ್ ನಾಗ್ ದಂಪತಿಯನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಚಿತ್ರದಲ್ಲಿ ಅನಂತ್ ನಾಗ್, ಗೀತಾ ಜೊತೆಗೆ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್, ಆರ್ಯವರ್ಧನ್ ಮತ್ತು ಕಿರಣ್ ರಾಜ್, ಮೇಘಶ್ರೀ, ದೀಪ್ತಿ ಶೆಟ್ಟಿ, ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ತಮ್ಮ ನಟನೆಗಳಿಗೆ ಜೀವ ತುಂಬಿದ್ದಾರೆ.

ಮಣಿಕಾಂತ್ ಕದ್ರಿ ಹಾಗೂ ರವಿಶೇಖರ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೈಲಾಶ್ ಕೇರ್, ಕಾರ್ತಿಕ್, ಅನುರಾಧ ಭಟ್, ಹರೀಶ್ ಶೇರಿಗಾರ್, ರವಿಶೇಕರ್ ರಾಜಮಗ, ಅಕ್ಷತಾ ರಾವ್ ಅವರು ಹಾಡಿದ್ದು, ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ.