ಲೇಖಕಿ ಲತಾ ಸಂತೋಷ್ ಶೆಟ್ಟಿಗೆ ಡಾ. ಸಂಜೀವ ಶೆಟ್ಟಿ ಸಂಸ್ಮರಣ ಪ್ರಶಸ್ತಿ

ಲೇಖಕಿ ಲತಾ ಸಂತೋಷ್ ಶೆಟ್ಟಿಗೆ ಡಾ. ಸಂಜೀವ ಶೆಟ್ಟಿ ಸಂಸ್ಮರಣ ಪ್ರಶಸ್ತಿ

Feb 04, 2019 03:44:03 PM (IST)
ಲೇಖಕಿ ಲತಾ ಸಂತೋಷ್ ಶೆಟ್ಟಿಗೆ ಡಾ. ಸಂಜೀವ ಶೆಟ್ಟಿ ಸಂಸ್ಮರಣ ಪ್ರಶಸ್ತಿ

ಮುಂಬಯಿ: ಡಾ. ಸಂಜೀವ ಶೆಟ್ಟಿ ಸಂಸ್ಮರಣ ಪ್ರಶಸ್ತಿಯನ್ನು ಲೇಖಕಿ ಲತಾ ಸಂತೋಷ್‌ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು.

ಭಾಯಂದರ್‌ ಪೂರ್ವದ ಲಾಲ್‌ಬಹದ್ದೂರ್‌ ಶಾಸ್ತ್ರೀ ಸಭಾಂಗಣದಲ್ಲಿ ನಡೆದ ಶ್ರೀ ಅಯ್ಯಪ್ಪ ಆರಾಧನಾ ವೃಂದ ಆಯೋಜಿಸಿದ್ದ ಪ್ರಸಾದ ವಿತರಣೆ, ಅರಸಿನ ಕುಂಕುಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವ ನೀಡಲಾಯಿತು.

ಅಗಲಿದ ಶಿಕ್ಷಕರಿಗೆ ಗೌರವ ನೀಡಿರುವುದನ್ನು ನೋಡಿ ಹೃದಯ ತುಂಬಿದೆ. ಡಾ| ಶೆಟ್ಟಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಧೀಮಂತ ವ್ಯಕ್ತಿಯಾಗಿದ್ದು, ಅವರ ಕಾಯಕ ಸಿದ್ಧಾಂತ ಎಲ್ಲರಿಗೂ ಮಾದರಿಯಾಗಿದೆ. ಇದಕ್ಕೆ ಇಂದಿನ ಕಿಕ್ಕಿರಿದ ಸಭೆಯೇ ಸಾಕ್ಷಿ. ಈ ಕಾರ್ಯಕ್ರಮದಲ್ಲಿ ಕಳೆದ 6 ವರ್ಷಗಳಿಂದ ಭಾಗವಹಿಸುತ್ತಿದ್ದೇನೆ. ಆರಾಧನಾ ವೃಂದ ಕೇವಲ ಧಾರ್ಮಿಕ ಸೇವೆಯಲ್ಲದೆ ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸೇವೆಯನ್ನು ಮಾಡಿ ಜನಮನ್ನಣೆಯನ್ನು ಪಡೆದಿದೆ. ಅಯ್ಯಪ್ಪ ದೇವರ ಅನುಗ್ರಹ ನಿಮ್ಮ ಮೇಲೆ ಸದಾಯಿರಲಿ ಎಂದು ಫೋರ್ಟ್‌ ವಿದ್ಯಾದಾಯಿನಿ ಸಭಾದ ಅಧ್ಯಕ್ಷ ಜೆ. ಎಂ. ಕೋಟ್ಯಾನ್‌ ಅವರು ನುಡಿದರು.

ಡಾ. ಸಂಜೀವ ಶೆಟ್ಟಿ ಸಂಸ್ಮರಣ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಲೇಖಕಿ ಲತಾ ಸಂತೋಷ್‌ ಶೆಟ್ಟಿ ಅವರು, ಶಿಕ್ಷಣ ತಜ್ಞ ದಿ. ಡಾ. ಸಂಜೀವ ಶೆಟ್ಟಿ ಅವರು ನಡೆದು ಬಂದ ದಾರಿ, ಏರಿದ ಎತ್ತರ ಹಾಗೂ ಅವರ ಸಾಧನೆಯ ಶಿಖರವನ್ನು ನಾವು ಮುಟ್ಟಲಾಗದಿದ್ದರೂ ಅವರ ನೆನಪು ಬರುವಂತೆ ಆರಾಧನಾ ಸಂಸ್ಥೆ ಮಾಡಿದೆ. ಅವರ ನೆನಪಿನ ಪ್ರಶಸ್ತಿ ಪ್ರಧಾನ ಕಾರ್ಯ ಶ್ಲಾಘನೀಯ. ತಾವು ಕೊಟ್ಟ ಕನ್ನಡ ಸಂಜೀವಿನಿ ಬಿರುದು ಹಾಗೂ ಪ್ರಶಸ್ತಿಯನ್ನು ಸಂತಸದಿಂದ ಸ್ವೀಕರಿಸಿದ್ದೇನೆ ಎಂದು ನುಡಿದರು.

ಲತಾ ಸಂತೋಷ್‌ ಶೆಟ್ಟಿ ದಂಪತಿಯನ್ನು ವೇದಿಕೆಯ ಗಣ್ಯರು ಪ್ರಶಸ್ತಿ, ಫಲಪುಷ್ಪ, ಶಾಲು ಹೊದೆಸಿ ಸಮ್ಮಾನಿಸಿದರು.

ಇದೇ ಸಂದರ್ಭದಲ್ಲಿ ಆರಾಧನಾ ಫ್ರೆಂಡ್ಸ್‌ನ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರ ಸ ಮ್ಮುಖದಲ್ಲಿ ಪ್ರತಿಭಾವಂತ ಮಕ್ಕಳಾದ ಶ್ರೀನಿಧಿ ಎಸ್‌. ಶೆಟ್ಟಿ, ಕರಾಟೆಪಟು ರಿಷಬ್‌ ಶೆಟ್ಟಿ, ಮೋಕ್ಷಾ ಎಸ್‌. ಪೂಜಾರಿ ಇವರನ್ನು ಗೌರವಿಸಲಾಯಿತು.