ಅಬುಧಾಭಿ ಕರ್ನಾಟಕ ಸಂಘದಲ್ಲಿ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆ

ಅಬುಧಾಭಿ ಕರ್ನಾಟಕ ಸಂಘದಲ್ಲಿ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆ

Nov 04, 2017 11:06:29 AM (IST)
ಅಬುಧಾಭಿ ಕರ್ನಾಟಕ ಸಂಘದಲ್ಲಿ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆ

ಅಬುಧಾಬಿ: ಯುಎಇಯಲ್ಲಿರುವ ಕನ್ನಡ ಸಂಘಗಳಲ್ಲಿ ಪ್ರಮುಖವಾಗಿ ಅಬುಧಾಬಿ ಕರ್ನಾಟಕ ಸಂಘವು ಕರ್ನಾಟಕ ರಾಜ್ಯೋತ್ಸವವನ್ನು ತುಂಬಾ ಸಂಭ್ರಮ ಹಾಗೂ ವಿಜೃಂಭಜನೆಯಿಂದ ಆಚರಿಸಲಾಗಿದ್ದು, ಸಮಾರಂಭದಲ್ಲಿ ಹಲವಾರು ಮಂದಿ ಗಣ್ಯರು ಹಾಗೂ ನೂರಾರು ಮಂದಿ ಕನ್ನಡಿಗರು ಪಾಲ್ಗೊಂಡರು.

ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವದಂದು ಭಾಷೆ ಹಾಗೂ ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡಿದವರಿಗೆ ದ.ರಾ. ಬೇಂದ್ರೆ ಪ್ರಶಸ್ತಿ ನೀಡಲಾಗುತ್ತಿದ್ದು, ಈ ವರ್ಷ ದ.ರಾ.ಬೇಂದ್ರೆ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಮತ್ತು ಅಧ್ಯಾಪಕ ಶೇಖರ ಶೆಟ್ಟಿಗಾರ್ ಅವರಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಬುಧಾಬಿ ಕರ್ನಾಟಕ ಸಂಘದ ಪೋಷಕ ಹಾಗೂ ಬಿಆರ್ ಎಸ್ ಸಂಸ್ಥೆಗಳ ಕಾರ್ಯಾಧ್ಯಕ್ಷ ಡಾ. ಬಿ.ಆರ್. ಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಡಾ. ಬಿ.ಆರ್. ಶೆಟ್ಟಿ ಅವರನ್ನು ಇದೇ ವೇಳೆ ಶೇಖರ್ ಶೆಟ್ಟಿಗಾರ ಅವರನ್ನು ಸನ್ಮಾನಿಸಿದರು. ಸನ್ಮಾನದ ವೇಳೆ ಶೇಖರ್ ಶೆಟ್ಟಿಗಾರ್ ಅವರ ಪತ್ನಿ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಶೇಖರ್ ಶೆಟ್ಟಿಗಾರ್, ದ.ರಾ.ಬೇಂದ್ರೆ ಪ್ರಶಸ್ತಿ ಪಡೆದಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ಇದು ಕೇವಲ ನನಗೆ ಸಂದ ಗೌರವವಲ್ಲ, ಇದು ಯಕ್ಷಗಾನ ಕಲಾವಿದರನ್ನು ಪ್ರೀತಿಸುವ ಮತ್ತು ಯಕ್ಷಗಾನಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಸಲ್ಲುತ್ತದೆ. ಯಕ್ಷಗಾನಕ್ಕೆ ತನ್ನ ಸೇವೆಯನ್ನು ಪರಿಗಣಿಸಿದ ಎಡಿಕೆ ಅಧ್ಯಕ್ಷ ಸರ್ವೋತ್ತಮ್ ಶೆಟ್ಟಿ ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಸಭಾ ಕಾರ್ಯಕ್ರಮದಲ್ಲಿ ಡಾ. ಚಂದ್ರಕುಮಾರಿ ಬಿ.ಆರ್. ಶೆಟ್ಟಿ, ಹೈಸ್ನಾ ಇಂಟರ್ ನ್ಯಾಶನಲ್ ಎಲ್ ಎಲ್ ಸಿಯ ಆಡಳಿತ ನಿರ್ದೇಶಕ ರೊನಾಲ್ಡ್ ಪಿಂಟೋ, ಅರಬ್ ಉಡುಪಿ ಹೋಟೆಲ್ ಗಳ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ, ಅತಿಥಿಯಾಗಿ ಕವಿ ಅಸದುಲ್ಲಾ ಬೇಗ್, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಭಾಕಾರ್ಯಕ್ರಮದ ಬಳಿಕ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳು ನಡೆದವು.

ಮನೋರಂಜನಾ ಕಾರ್ಯಕ್ರಮದಲ್ಲಿ ಆದರ್ಶದಂಪತಿಯು ಪ್ರಮುಖ ಆಕರ್ಷಣೆಯಾಗಿತ್ತು. ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳು ಕನ್ನಡದ ಕಂಪನ್ನು ಮರುಭೂಮಿ ನಾಡಿನಲ್ಲಿ ಪಸರಿಸಿತು. ಜನಪ್ರಿಯ ಕವಿ ಹಾಗೂ ಶಾಯರಿ ಅಸದುಲ್ಲಾ ಬೇಗ್ ಅವರು ಹಲವಾರು ಹಾಸ್ಯ ಕವಿತೆಗಳು ಹಾಗೂ ಶಾಯರಿಗಳನ್ನು ಹೇಳಿ ಪ್ರೇಕ್ಷಕರ ಮನರಂಜಿಸಿದರು.

ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಎಸಿಎಂಇ ಬಿಲ್ಡಿಂಗ್ ಮೆಟೀರಿಯಲ್ಸ್ ಎಲ್ ಎಲ್ ಸಿ ಯ ನಿರ್ದೇಶಕ ಹರೀಶ್ ಶೆಟ್ಟಿಗಾರ್, ವಿವಿಧ ಕನ್ನಡ ಸಂಘಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಯು.ಎ.ಇ. ಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಇನ್ನಿತರ ವಿಭಾಗಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅವರ ಮಾತಾಪಿತರ ಸಮ್ಮುಖದಲ್ಲಿ ಪದಕ ನೀಡಿ ಡಾ| ಬಿ. ಆರ್. ಶೆಟ್ಟಿಯವರು ಗೌರವಿಸಿದರು.
ಅಬ್ದುಲ್ ಸಲಾಮ್ ದೇರಳಕಟ್ಟೆಯವರ ವಿದ್ಯಾರ್ಥಿಗಳು ಮತ್ತು ವ್ಯಕ್ತಿತ್ವ ವಿಕಸನ ಪುಸ್ತಕವನ್ನು ಡಾ. ಬಿ. ಆರ್. ಶೆಟ್ಟಿಯವರು ಬಿಡುಗಡೆ ಮಾಡಿದರು.

ಯಕ್ಷಮಿತ್ರರು ಬಾಲಕಲಾವಿದರ ತಂಡದಿಂದ ಯಕ್ಷಗಾನ "ಸರಸೇತು ಬಂಧನ"
ಯಕ್ಷಮಿತ್ರರು ದುಬೈ ಹಿರಿಯ ಕಲಾವಿದರ ಹಿಮ್ಮೇಳದಲ್ಲಿ ಹಾಗೂ ಬಾಲ ಕಲಾವಿದ ತಂಡದವರಿಂದ ಯಕ್ಷಗಾನ "ಸರಸೇತು ಬಂದನ" ಕನ್ನಡ ಪೌರಾಣಿಕ ಕಥಾಪ್ರಸಂಗವನ್ನು ಪ್ರದರ್ಶಿಸಲಾಯಿತು.ವೀಣಾ ಮಲ್ಯರವರ ನಿರ್ದೇಶನ ಮತ್ತು ವೇಷಧಾರಿಣಿಯಾಗಿ ಮಕ್ಕಳ ಸಹಿತ ಹುಲಿವೇಷ ನೃತ್ಯ ತುಳುನಾಡಿನ ಕಲಾಪರಂಪರೆಯನ್ನು ಪ್ರತಿಬಿಂಭಿಸಿತ್ತು.

ಇತ್ತಿಚೇಗೆ ಯು.ಎ.ಇ. ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಸ್ವಸ್ತಿಕ್ ಆಚಾರ್ಯ ನಿರ್ದೇಶನದಲ್ಲಿ ನಾಟ್ಯಾಸಂ ತಂಡದವರಿಂದ "ವೀರಗಾಸೆ" ಆಕರ್ಷಣಿಯ ಪ್ರದರ್ಶನ ನಡೆಯಿತು. ಸ್ವಸ್ತಿಕ್ ಆಚಾರ್ಯ ನಿರ್ದೇಶನದಲ್ಲಿ ಗಾಂಧಿಜಿಯ ತತ್ವಗಳು ಹಾಸ್ಯ ಪ್ರಹಸನ ಸರ್ವರ ಮನಸೆಳೆಯಿತು.

ಜನಮನ ಗೆದ್ದ ಆದರ್ಶ ದಂಪತಿಗಳು ಸ್ಪರ್ಧೆ
ಈ ವರ್ಷದ ವಿಶೇಷ ಆಕರ್ಷಣೆಯಾಗಿ ಕನ್ನಡಿಗ ದಂಪತಿಗಳಿಗೆ ಆದರ್ಶ ದಂಪತಿ ಸ್ಪರ್ಧೆ ಏರ್ಪಡಿಸಲಾಗಿದ್ದು ಹಲವು ಜೋಡಿಗಳು ಭಾಗವಹಿಸಿ ವೈವಿಧ್ಯಮಯ ಸ್ಪರ್ಧೆಗಳ ಮೂಲಕ ತಮ್ಮ ತಮ್ಮ ಚಮತ್ಕಾರಿಕ ಪ್ರತಿಭೆಯನ್ನು ಪ್ರದರ್ಶಿಸಿ ಜನಮನ ಗೆದ್ದರು.

ಪ್ರಥಮ ಸ್ಥಾನ : ವಿಜಯರಾವ್ ಹೇಮಾ ದಂಪತಿಗಳು
ದ್ವಿತೀಯಾ ಸ್ಥಾನ : ಶ್ರೀಕೃಷ್ಣ ರಕ್ಷಿತಾ ದಂಪತಿಗಳು
ತೃತಿಯಾ ಸ್ಥಾನ: ಉದಯಾ ಗೀತಾ ನಾಯಕ್ ದಂಪತಿಗಳು
ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಿಗೆ ಉಡುಗೊರೆಯನ್ನು ನೀಡಲಾಯಿತು.

ಬೆಳಗಿನಿಂದ ಸಂಜೆಯವರೆಗೆ ಅತ್ಯಂತ ಅಕರ್ಷಕ ಕಾರ್ಯಕ್ರಮ ವಿರೂಪಣೆಯನ್ನು ಊರಿನಿಂದ ಆಗಮಿಸಿದ್ದ ಸಾಯೀಲ್ ರೈ ಮತ್ತು ಶ್ರೀಮತಿ ರಜನಿ ಭಟ್ ನಡೆಸಿಕೊಟ್ಟರು.

ಈ ವರ್ಷದ ಅದ್ಧೂರಿ ಸಮಾರಂಭಕ್ಕೆ ವೇದಿಕೆಯಲ್ಲಿ ಬೃಹತ್ ಎಲ್. ಇ. ಡಿ. ಡಿಜಿಟಲ್ ಡಿಸ್ಪ್ಲೆ ಪರದೆಯನ್ನು ಅಳವಡಿಸಲಾಗಿದ್ದು ದಿನ ಪೂರ್ತಿ ಅಬುಧಾಬಿ ಕರ್ನಾಟಕ ಸಂಘದ ಹೆಜ್ಜೆ ಗುರುತುಗಳು, ಕನ್ನಡ ನಾಣ್ನುಡಿಗಳು, ಕನ್ನಡದ ಕಣ್ಮಣಿಗಳ ಭಾವಚಿತ್ರಗಳು, ನುಡಿಮುತ್ತುಗಳು ಮಿಂಚಿ ಮಾಯವಾಗುತಿದ್ದು ಸರ್ವರ ಗಮನ ಸೆಳೆಯಿತು.

ಕೊನೆಯಲ್ಲಿ ಸಾಂಸ್ಕೃತಿಕ ಪ್ರದರ್ಶನ ನೀಡಿರುವ ತಂಡಗಳ ನಿರ್ದೇಶಕರು ಮತ್ತು ಮಕ್ಕಳು ಹಾಗೂ ರಾಜ್ಯೋತ್ಸವ ಸಮಾರಂಭದ ಅಹ್ವಾನ ಪತ್ರ,ಸನ್ಮಾನ ಪತ್ರ, ಡಿಜಿಟಲ್ ಡಿಸ್ಪ್ಲೆ ವಿನ್ಯಾಸಗಾರರಾದ ಗಣೇಶ್ ರೈಯವರಿಗೆ ಸರ್ವೋತ್ತಮ ಶೆಟ್ಟಿಯವರು ಸ್ಮರಣಿಕೆ ನೀಡಿ ಗೌರವಿಸಿದರು.

ಅಬುಧಾಬಿ ಕರ್ನಾಟಕ ಸಂಘದ ಅದ್ಧೂರಿ ರಾಜ್ಯೋತ್ಸವ ಸಮಾರಂಭವನ್ನು ಸರ್ವರಿಗೂ ವಂದನೆಗಳನ್ನು ಅರ್ಪಿಸುವುದರ ಮೂಲಕ ಮುಕ್ತಾಯಗೊಳಿಸಲಾಯಿತು.