ತುಳು ತುಂಬಾ ಸುಂದರ ಭಾಷೆ: ಪದ್ಮನಾಭ ಪಯ್ಯಡೆ

ತುಳು ತುಂಬಾ ಸುಂದರ ಭಾಷೆ: ಪದ್ಮನಾಭ ಪಯ್ಯಡೆ

HSA   ¦    Jan 11, 2018 04:48:48 PM (IST)
ತುಳು ತುಂಬಾ ಸುಂದರ ಭಾಷೆ: ಪದ್ಮನಾಭ ಪಯ್ಯಡೆ

ನವಿಮುಂಬಯಿ: ತುಳು ತುಂಬಾ ಸುಂದರ ಭಾಷೆ ಹಾಗೂ ಶ್ರೀಮಂತ ಸಂಸ್ಕೃತಿ ಹೊಂದಿದೆ. ಇಲ್ಲಿ ಯಾವುದೇ ಜಾತಿ, ಮತ ಭೇದವಿಲ್ಲ. ಎಲ್ಲರೂ ತುಳುನಾಡಿನವರು ಎಂಬ ಗೌರವವಿದೆ. ತುಳು ಭಾಷೆ ಉಳಿಸಿ ಬೆಳೆಸಲು ಸತತವಾಗಿ ಪ್ರಯತ್ನಿಸಬೇಕು ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅಭಿಪ್ರಾಯಪಟ್ಟರು.

ತುಳುಕೂಟ ಐರೋಲಿ ಇದರ ದಶಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕವಾಗಿ ಸಹಾಯ ಮಾಡುವ ದೃಷ್ಟಿಯಿಂದ ತುಳುಕೂಟ ಐರೋಲಿ ಸ್ಥಾಪಿಸಿರುವ ನಿಧಿ ಕುಂಭ ಕಾರ್ಯಕ್ರಮವು ಅಭಿನಂದನೀಯ ಎಂದು ಅವರು ಶ್ಲಾಘಿಸಿದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರಿ,ದಶಮಾನೋತ್ಸವ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಬೊಳ್ನಾಡುಗುತ್ತು, ಸಮ್ಮಾನ ಸ್ವೀಕರಿಸಿದ ಅಖಿಲ ಭಾರತ ತುಳುಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಸಮಯೋಚಿತವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ತುಳುಕೂಟ ಪುಣೆ ಅಧ್ಯಕ್ಷ ತಾರಾನಾಥ್ ರೈ ಮೇಗಿನ ಗುತ್ತು, ತುಳುಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ದಂಪತಿ, ತುಳುಕೂಟ ಐರೋಲಿ ಮಾಜಿ ಅಧ್ಯಕ್ಷರುಗಳಾದ ಲ್ಯಾನ್ಸಿ ಡಿಕುನ್ಹಾ ದಂಪತಿ, ಜಗದೀಶ್ ಶೆಟ್ಟಿ ನಾಡಜೆಗುತ್ತು ದಂಪತಿ ಮೊದಲಾದವರು ಉಪಸ್ಥಿತರಿದ್ದರು.