ದುಬೈಯಲ್ಲಿ ಪಟ್ಲ ಸಂಭ್ರಮ 2019: "ಸಾಧನಾ ಸಂಭ್ರಮ-ಯಕ್ಷಾರಾಧನಾ -2019"ರ ಮುಹೂರ್ತ ಪೂಜೆ

ದುಬೈಯಲ್ಲಿ ಪಟ್ಲ ಸಂಭ್ರಮ 2019: "ಸಾಧನಾ ಸಂಭ್ರಮ-ಯಕ್ಷಾರಾಧನಾ -2019"ರ ಮುಹೂರ್ತ ಪೂಜೆ

HSA   ¦    Jul 01, 2019 05:57:51 PM (IST)
ದುಬೈಯಲ್ಲಿ ಪಟ್ಲ ಸಂಭ್ರಮ 2019: "ಸಾಧನಾ ಸಂಭ್ರಮ-ಯಕ್ಷಾರಾಧನಾ -2019"ರ ಮುಹೂರ್ತ ಪೂಜೆ

ದುಬೈ: ಜೂನ್ 28ರಂದು ದುಬೈಯಲ್ಲಿ ಪ್ರಖ್ಯಾತ ಉದ್ಯಮಿಗಳು, ಕಲಾವಿದರ ಸಮ್ಮುಖದಲ್ಲಿ ದುಬಾಯಿ-ಗೀಸೈಸ್ ನ ಫಾರ್ಚ್ಯೂನ್ ಫ್ಲಾಝದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪಟ್ಲ ಸಂಭ್ರಮ 2019ರ ಮುಹೂರ್ತಪೂಜೆ ಸಂಭ್ರಮದಿಂದ ಸಂಪನ್ನಗೊಂಡಿತು.

ಈ ಶುಭ ಸಮಯದಲ್ಲೇ ಮಹೂರ್ತಪೂಜೆಯ ಅಂಗವಾಗಿ, ದುಬೈಯ ಯಕ್ಷಗಾನ ಅಭ್ಯಾಸ ತರಗತಿಯ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿರುವ, "ಮಹಿಷಮರ್ದಿನಿ ಜಗಜ್ಜನನಿ" ಯ ಪ್ರಥಮಾಂಕದ ಪ್ರಸ್ತುತಿಯು ನೆರೆದ ಸಭಾಸದರ ಮೆಚ್ಚುಗೆಗೆ ಪಾತ್ರವಾಯಿತು. ಹಾಗೆಯೇ ಸಾಧನಾ ಸಂಭ್ರಮ ಮತ್ತು ಯಕ್ಷಾರಾಧನ- 2019ರ ಮುಹೂರ್ತ ಪೂಜೆಯ ಅಂಗವಾಗಿ ಎಲ್ಲಾ ಕಲಾವಿದರಿಂದ ಗೆಜ್ಜೆಸೇವೆ ಮತ್ತು ರಂಗಪ್ರವೇಶ ನಡೆದು ಉತ್ತಮ ರಂಗಪ್ರದರ್ಶನದ ಭರವಸೆ ಮೂಡಿಸಿತು.

ಮುಹೂರ್ತ ಪೂಜೆಯ ವೈದಿಕ ವಿಧಿ ವಿಧಾನಗಳು ಶ್ರೀಯುತ ಪುತ್ತಿಗೆ ವಾಸುದೇವ ಭಟ್ ಅವರ ನಿರ್ದೇಶನದಲ್ಲಿ ವೆಂಕಟೇಶ ಶಾಸ್ತ್ರಿ ಪುತ್ತಿಗೆ, ಲಕ್ಷೀಕಾಂತ ಭಟ್, ಭವಾನಿಶಂಕರ ಶರ್ಮರ ಅರ್ಚನೆ-ಪ್ರಾರ್ಥನೆಯೊಂದಿಗೆ ಸಾಕಾರಗೊಂಡಿತು. ರಾಜೇಶ್ ಕುತ್ತಾರು ನೇತೃತ್ವದಲ್ಲಿ ಶ್ರೀರಾಜರಾಜೇಶ್ವರಿ ಭಜನಾ ಮಂಡಳಿ ಮತ್ತು ದುಬೈಯ ಕೀರ್ತನಾ ಭಜಕರಿಂದ ನಡೆದ ಭಜನೆ, ಕಾರ್ಯಕ್ರಮಕ್ಕೆ ದಿವ್ಯತೆ ಒದಗಿತು.

ಪಟ್ಲ ಸಂಭ್ರಮ 2019ರ ಸಮಾಲೋಚನ ಸಭೆ
ಯಕ್ಷಧ್ರುವ ಪಟ್ಲ ಪೌಂಡೇಶನ್ ಯು.ಎ.ಇ. ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನ ಸಭೆಯು ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆಗೊಂಡಿತು.

ಘಟಕದ ಕಾರ್ಯದರ್ಶಿ ವಿಠಲ ಶೆಟ್ಟಿ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ, ಭಾಗವತ ಶಿರೋಮಣಿ, ನೊಂದ ಕಲಾವಿದರ ಬದುಕು ರೂಪಣೆಯ ಆಶಾಕಿರಣ, ಸತೀಶ ಶೆಟ್ಟಿ ಪಟ್ಲರ ನೇತೃತ್ವದ ಯಕ್ಷಧ್ರುವ ಪಟ್ಲ ಪೌಂಡೇಶನ್ ನ ಧ್ಯೇಯ ಧೋರಣೆಗಳು, ಕಲಾವಿದರಿಗೆ ಬದುಕು ಕಟ್ಟಿಕೊಡುವಲ್ಲಿ ಕೈಕೊಂಡ ಅನೇಕ ಕಾರ್ಯಕ್ರಮಗಳಾದ ಸಹಾಯಧನ, ಪ್ರಶಸ್ತಿ, ವೈದ್ಯಕೀಯ ನೆರವು, ವಿಮಾ ಸೌಲಭ್ಯ, ಕ್ರೀಡಾಕೂಟ ಇತ್ಯಾದಿಗಳ ಸಾದ್ಯಂತ ವಿವರಣೆಯ ಜೊತೆ, ಯು.ಎ.ಇ. ಘಟಕದಿಂದ ಈ ಸಕಾರ್ಯಕ್ಕೆ ನಾವಿತ್ತ ನೆರವು, ಸಹಕಾರಗಳನ್ನು ನೆನಪಿಸಿಕೊಟ್ಟರು.

ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಗುರುಗಳು ಹಾಗೂ ನಿರ್ದೇಶಕರಾದ ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿಯವರು ಅಕ್ಟೋಬರ್ 18ರಂದು ದುಬೈಯ ಶೇಖ್ ರಶೀದ್ ಅಡಿಟೋರಿಯಂನಲ್ಲಿ ಸಂಭ್ರಮದ ಉದ್ದೇಶದಿಂದ ಪ್ರದರ್ಶಿಸಲಿರುವ "ಮಹಿಷಮರ್ದಿನಿ ಜಗಜ್ಜನನಿ''ಯ ಕುರಿತಾದ ವಿವರಣೆ, ಭಾಗವಹಿಸಲಿರುವ ಅತಿಥಿ ಕಲಾವಿದರ ವಿವರವನ್ನು ಸಭೆಗೆ ನೀಡಿದರು. ಘಟಕದ ಕೋಶಾಧಿಕಾರಿಕೊಟ್ಟಿಂಜ ದಿನೇಶ ಶೆಟ್ಟರು ಕಾರ್ಯಕ್ರಮದ ಖರ್ಚುವೆಚ್ಚಗಳ ಪಕ್ಷಿನೋಟ ನೀಡಿದರು. ಈ ಅಂದಾಜುವೆಚ್ಚವನ್ನು ಸಭೆ ಅನುಮೋದಿಸಿ ಒಪ್ಪಿಗೆ ಸೂಚಿಸಿತು.

ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ಮಾತನಾಡಿ, ಪಟ್ಲ ಸತೀಶ ಶೆಟ್ಟರು ನಡೆಸುವ ಯಕ್ಷಗಾನ ಕಲಾವಿದರಿಗಾಗಿ ನಡೆಸುವ ಸಮಾಜಮುಖಿ ಕಾರ್ಯಕ್ರಮಗಳ ಒಳ ನೋಟ, ನಾವೆಲ್ಲ ಆ ಸತ್ಕಾರ್ಯದಲ್ಲಿ ಕೈಜೋಡಿಸ ಬೇಕಾದ ಅಗತ್ಯ, ದುಬಾಯಿಯ ಉದಾರ ದಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗುವ ಭರವಸೆಯ ನುಡಿಗಳನ್ನಾಡುವ ಜೊತೆಗೆ 2016ರಲ್ಲಿ ಎಲ್ಲರಿಗಿಂತಲೂ ಹೆಚ್ಚು ಮೊತ್ತವನ್ನು ಒಗ್ಗೂಡಿಸಿದ ಕೀರ್ತಿ ನಮ್ಮ ಘಟಕದ್ದು, ಈ ಕಾರ್ಯಕ್ರಮದ ಮೂಲಕ ಆ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿ, ವಿದೇಶದ ಪ್ರಥಮ ಘಟಕವೆಂಬ ನಮ್ಮ ಕೀರ್ತಿಗೆ ಗರಿಮೂಡುವಂತಾಗಬೇಕೆಂದು ಸಭೆಯ ಮುಂದೆ ನಿವೇದಿಸಿದರು.

ಸಮಾಲೋಚನ ಸಭೆಯಲ್ಲಿ ಉಪಸ್ಥಿತರಿದ್ದ ದುಬೈಯ ಗಣ್ಯರಾದ ಪ್ರವೀಣ ಶೆಟ್ಟಿ ವಕ್ವಾಡಿ ಮಾಲ್ಹಕರು ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್, ಗುಣಶೀಲ ಶೆಟ್ಟಿ ಏಸ್ ಕ್ರೇನ್ಸ್, ರಘುರಾಮ ಶೆಟ್ಟಿ ಇಂಡಿಯಾ ಹೌಸ್ ಅಜಮಾನ್, ಅಬುಧಾಬಿ ಬಿಲ್ಲವ ಸಮುದಾಯದ ಮುಖಂಡರಾದ ಮನೋಹರ ತೋನ್ಸೆ, ದುಬೈ ಬಿಲ್ಲವ ಫ್ಯಾಮಿಲಿಯ ನೂತನ ಅಧ್ಯಕ್ಷರಾದ ಪ್ರಭಾಕರ ಸುವರ್ಣ, ದುಬೈ ಪದ್ಮಶಾಲಿ ಸಮುದಾಯದ ಅಧ್ಯಕ್ಷರಾದ ರವಿ ಶೆಟ್ಟಿಗಾರ್, ಐ.ಎಸ್.ಸಿ, ಅಬುಧಾಬಿಯ ಅಧ್ಯಕ್ಷರಾದ ಜಯರಾಮ ರೈ, ಉದ್ಯಮಿಗಳಾದ ದೇವೇಶ್ ಆಳ್ವ, ಲಕ್ಷ್ಮೀಕಾಂತ ಶೆಟ್ಟಿ, ಬಿರುವೆರ್ ಕುಡ್ಲ ಯು.ಎ.ಇ. ಘಟಕದ ಅಧ್ಯಕ್ಷರಾದ ಸತೀಶ ಉಳ್ಳಾಲ್, ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಹಿರಿಯ ಹಿಮ್ಮೇಳ ಕಲಾವಿದರು-ಮಾರ್ಗದರ್ಶರೂ ಆದ ವೆಂಕಟೇಶ ಶಾಸ್ತ್ರಿ ಪುತ್ತಿಗೆ ಮೊದಲಾದವರು ಸಂದರ್ಭ್ಯೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಇದೇ ಸುಸಂಧರ್ಭದಲ್ಲಿ ಸೆಪ್ಟೆಂಬರ್ 6ರಂದು ಪುತ್ತಿಗೆ ವಾಸುದೇವ ಭಟ್ ಅವರ ಸ್ವಗೃಹದ ವಿನಾಯಕ ಚತುರ್ಥಿ ಅಂಗವಾಗಿ ನಡೆಯಲಿರುವ "ಗದಾಯುದ್ಧ" ಮತ್ತು ಅಕ್ಟೋಬರ್ 11 ರಂದು ಪದ್ಮಶಾಲಿ ಸಮುದಾಯದ 10ನೇ ವರ್ಷ ಪದಾರ್ಪಣೆಯ ಸಲುವಾಗಿ ಹಮ್ಮಿಕೊಂಡ "ನಳ-ದಮಯಂತಿ" ತಾಳಮದ್ದಳೆ ಕಾರ್ಯಕ್ರಮಗಳಿಗೂ ಮುಹೂರ್ತ ಪೂಜೆ ನಡೆಸಲಾಯಿತು. ತಂಡದ ಹವ್ಯಾಸಿ ಭಾಗವತರಾದ ಕೃಷ್ಣಪ್ರಸಾದ ಸುರತ್ಕಲ್ ಹಾಗೂ ತಂಡದ ನಾಟ್ಯಗುರುಗಳೂ ಆದ ಶರತ್ ಕುಡ್ಲರವರು ಪ್ರಸಂಗದ ಹಾಡುಗಳನ್ನು ಹಾಡುವ ಮೂಲಕ ಶ್ರೀಕಾರ ಒದಗಿಸಿದರು. ರಾಜೇಶ್ ಕುತ್ತಾರು ನಿರ್ವಹಿಸಿದ ಈ ಕಾರ್ಯಕ್ರಮಮದ ಕೊನೆಯಲ್ಲಿ ಧನ್ಯವಾದ ಸಮರ್ಪಣಾ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು.

ಹಿನ್ನೆಲೆ: ದುಬೈಯಲ್ಲಿ ಕಳೆದ 4-5 ವರ್ಷಗಳಿಂದಲೇ ಯಕ್ಷಗಾನ ಚಟುವಟಿಕೆಗಳನ್ನು ಆರಂಭಿಸಿರುವ ಯಕ್ಷಗಾನ ಅಭ್ಯಾಸ ತರಗತಿ-ದುಬಾಯಿ ಈಗಾಗಲೇ ಸಾಧನಾ ಸಂಭ್ರಮ-2017, ಅಬುದಾಭಿ, ಶಾರ್ಜಾ, ದುಬೈ ಕನ್ನಡ ಸಂಘಗಳಲ್ಲಿ ಮಕ್ಕಳ ಯಕ್ಷಗಾನ ಮತ್ತು ತಾಳಮದ್ದಳೆ ಪ್ರದರ್ಶನಗಳ ಮೂಲಕ ಮನೆಮಾತಾಗಿದೆ. ಮಂಗಳೂರು ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಪಟ್ಲ ಸಂಭ್ರಮ 2017ರಲ್ಲಿ ಭಾಗವಹಿಸಿ, ದುಬೈಯ ಬಾಲ ಕಲಾವಿದರ ಸಮಾಗಮದ ಮೋಹಿನೀ ಏಕಾದಶಿ ಪ್ರಸಂಗ ಪ್ರದರ್ಶಿಸುವ ಮೂಲಕ ಯಕ್ಷಗಾನ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಸಂಪೂರ್ಣ ವಿದೇಶಿ ತಂಡವೊಂದು ಯಕ್ಷಗಾನದ ತವರೂರಿನಲ್ಲಿ ಪ್ರದರ್ಶನ ಕೊಟ್ಟ ಹೆಗ್ಗಳಿಕೆಗೆ ಪಾತ್ರವಾದ ಸಂಗತಿ ಯಕ್ಷಗಾನ ಅಭಿಮಾನಿಗಳಿಗೆಲ್ಲ ಹೆಮ್ಮೆಯ ಸಂಗತಿ.

ಹೊರನಾಡಿನಲ್ಲಿ, ಯಾವುದೇ ಕಲಾಅಭ್ಯಾಸಿಗಳು ಒಂದೋ-ಎರಡೋ ಕಾರ್ಯಕ್ರಮಗಳ ಉದ್ದೇಶದಿಂದ ಸೀಮಿತ ಅಭ್ಯಾಸ ಮಾಡುವುದು ರೂಢಿ. ಒಂದೊಮ್ಮೆ ಅಭ್ಯಾಸಿಗಳಿಗೆ ಹೆಚ್ಚಿನ ಅಭ್ಯಾಸದ ಇಂಗಿತವಿದ್ದರೂ, ಅದಕ್ಕೆ ಪೂರಕ ಅವಕಾಶಗಳು ಕಡಿಮೆ. ಅದರಲ್ಲೂ ರಾಜಕಲೆಯಾದ ಯಕ್ಷಗಾನದಲ್ಲಿ ಮುಂದುವರಿಯಲು ಸಮೂಲಾಗ್ರ ಅಭ್ಯಾಸ -ವಿಸ್ತ್ರತ ಅಧ್ಯಯನ ಅತೀ ಅಗತ್ಯ. ತಾಯ್ನಾಡಿನ ಮಣ್ಣಿನ ಕಲೆ ಯಕ್ಷಗಾನದ ಕುರಿತಾಗಿ ಮಕ್ಕಳಿಗೆ -ಹೆತ್ತವರಿಗೆ ಇರುವ ತುಡಿತ- ಮಿಡಿತಗಳನ್ನು ಅರ್ಥವಿಸಿಕೊಂಡು ಯಕ್ಷಗಾನ ಅಭ್ಯಾಸ ತರಗತಿಯು ವರ್ಷಪೂರ್ತಿ ನಿರಂತರವಾಗಿ ನಡೆವಂತೆ ಯಕ್ಷಗಾನದ ನಾಟ್ಯ -ಹಿಮ್ಮೇಳಗಳ ಮೂಲ ಅಭ್ಯಾಸ, ಹಾಗೇ ಯಕ್ಷಗಾನ ಕುರಿತಾದ ಮತ್ತು ಪೂರಕ ಪಠ್ಯಗಳ ಅಭ್ಯಾಸ, ಮಾಹಿತಿಗಳ ವಿನಿಮಯ, ಪರಂಪರೆಗಳ ಪರಿಚಯ, ಪರಿಶ್ರಮ, ಪರಿವರ್ತನೆ, ಪ್ರದರ್ಶನಗಳ ಹೆಬ್ಬಯಕೆಯನ್ನು ಹೊಂದಿದೆ. ಇದನ್ನು ಸಾಕಾರಗೊಳಿಸಲು, ನಮ್ಮಲ್ಲಿ ಸಧ್ಯ ಲಭ್ಯವಿರುವ ವಿಶೇಷ ತರಗತಿಗಳು ಈ ರೀತಿ ಇವೆ. ಯಕ್ಷಗಾನ ನಾಟ್ಯ (ಪ್ರಾಥಮಿಕ ಮತ್ತು ಪ್ರೌಢ ವಿಭಾಗಗಳು )-ಅಭಿನಯ ತರಬೇತಿ. ಪೂರ್ವರಂಗ-ಉತ್ತರರಂಗ ವೈವಿಧ್ಯಗಳ ತರಬೇತಿ. ವಿಶೇಷ ರಂಗಕ್ರಮಗಳ ಪ್ರಾತ್ಯಕ್ಷಿಕೆ. ಆಯ್ದ ಪ್ರಸಂಗ -ರಂಗಪಠ್ಯಗಳ ತರಬೇತಿ. ರಾಮಾಯಣ-ಮಹಾಭಾರತ ಇತ್ಯಾದಿ ಪುರಾಣ ಕಾವ್ಯ - ಕಥನ ಅಧ್ಯಯನ. ಭಾಗವತಿಕೆ ಮತ್ತು ಚೆಂಡೆ-ಮದ್ದಳೆ ತರಬೇತಿ. ಪ್ರಸಾಧನ (ಮೇಕಪ್)- ವೇಷಭೂಷಣ ತರಬೇತಿ. ತಾಳಮದ್ದಳೆ ಅಭ್ಯಾಸ ಕೂಟ. ರಜಾಕಾಲದ ವಿಶೇಷ ತರಗತಿ- ಯಕ್ಷಗಾನ ಪೂರಕ ಚಿತ್ರಕಲೆ- ಯೋಗಾಭ್ಯಾಸಗಳ ತರಬೇತಿ. ಕನ್ನಡ ತಿಳಿಯದ ಮಕ್ಕಳಿಗೆ ಕನ್ನಡ ಭಾಷಾ ಅಭ್ಯಾಸ ಇತ್ಯಾದಿಗಳು. ಇದರ ಸದುಪಯೋಗವನ್ನು ಯು.ಎ.ಇ. ಯ ಎಲ್ಲಾ ಕಲಾಸಕ್ತರು ಮಾಡಿಕೊಳ್ಳಬೇಕೆಂದು ಸಂಘಟಕರ ಪರವಾಗಿ ಮನವಿ.

ಗುರುಕುಲ :- ಪ್ರಸಿದ್ಧ ಯಕ್ಷಗಾನ ಕಲಾವಿದ-ನಮ್ಮ ಸಂಸ್ಥೆಯ ಮುಖ್ಯ ಗುರುಗಳು ಮತ್ತು ನಿರ್ದೇಶಕರಾಗಿರುವ ಶೇಖರ್ ಡಿ. ಶೆಟ್ಟಿಗಾರರ ಪರಿಕಲ್ಪನೆಯಲ್ಲಿ ಅರಳಿರುವ ಈ ಸಂಸ್ಥೆಯಲ್ಲಿ ನಾಟ್ಯ ಗುರುಗಳಾಗಿ ಉದಯೋನ್ಮುಖ ಕಲಾವಿದ ಶರತ್ ಕುಡ್ಲ ಅವರು ತಂಡವನ್ನು ರೂಪಿಸುವಲ್ಲಿ ಶ್ರಮವಹಿಸಿದರೆ, ಚೆಂಡೆ-ಮದ್ದಳೆತರಬೇತಿಯ ನೇತೃತ್ವ ವನ್ನು ಭವಾನಿಶಂಕರ ಶರ್ಮ, ಲಕ್ಷೀಶ ಶರ್ಮ ಮತ್ತು ಪುತ್ತಿಗೆ ವೆಂಕಟೇಶ ಶಾಸ್ತ್ರಿ ವಹಿಸುತ್ತಿದ್ದಾರೆ. ಚಿತ್ರಕಲೆ ತರಬೇತಿಯನ್ನು ಮುಂದಿನ ದಿನಗಳಲ್ಲಿ ಗಿರೀಶ್ ನಾರಾಯಣ ಕಾಟಿಪಳ್ಳರವರು ಮುನ್ನಡೆಸಲಿದ್ದಾರೆ. ಕನ್ನಡ ತರಗತಿ ಇತ್ಯಾದಿ ವಿಷಯಗಳಿಗೆ ಇನ್ನು ಕೆಲ ಮಂದಿ ಅಧ್ಯಾಪಕರು ನಮ್ಮ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪ್ರಖ್ಯಾತ ವಿದ್ಯಾಲಯ ಬಿಲ್ವ ಸ್ಕೂಲ್ ನಲ್ಲಿ ಶುಕ್ರವಾರ ಮತ್ತು ರಜಾದಿನಗಳಲ್ಲಿ ನಡೆಯುತ್ತಿದೆ. ಯು.ಎ.ಇ.ಯ ಯಕ್ಷಪ್ರೇಮಿಗಳು ಈ ಉಚಿತ ತರಗತಿಯ ಸದವಕಾಶವನ್ನು ಸದುಪಯೋಗ ಪಡಿಸಿಕೊಂಡು ಯಕ್ಷಗಾನ ಕಲೆಯ ಔನ್ನತ್ಯಕ್ಕೆ ಸಹಕರಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.