ವೀರಕೇಸರಿ ಕಲಾವೃಂದದ 37ನೇ ವಾರ್ಷಿಕ ಮಹಾಸಭೆ

ವೀರಕೇಸರಿ ಕಲಾವೃಂದದ 37ನೇ ವಾರ್ಷಿಕ ಮಹಾಸಭೆ

Dec 19, 2016 01:50:20 PM (IST)

ಮುಂಬಯಿ: ನಗರದ ಹಿರಿಯ ಕಲಾ ಸಂಸ್ಥೆ ವೀರಕೇಸರಿ ಕಲಾವೃಂದದ 37ನೆಯ ವಾರ್ಷಿಕ ಮಹಾಸಭೆಯು ಡಿ. 18ರಂದು ಅಪರಾಹ್ನ ಕಾಂದಿವಲಿ ಪಶ್ಚಿಮದ ಸಂದ್ಯಾ ಹೋಟೇಲಿನ ಸಭಾಗೃಹದಲ್ಲಿ ಕಲಾವೃಂದದ ಅಧ್ಯಕ್ಷರಾದ ರಮೇಶ್ ಶೆಟ್ಟಿ ಪಯ್ಯಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರುಗಳನ್ನುದ್ದೇಶಿಸಿ ಮಾತನಾಡಿದ ಪಯ್ಯಾರರು ತಾನು ಕಳೆದ ಏಳು ವರ್ಷಗಳಿಂದ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದು ತನ್ನ ಅಧ್ಯಕ್ಷೀಯ ಅವಧಿಯಲ್ಲಿ ವೀರಕೇಸರಿ ಕಲಾವೃಂದದ ಪ್ರಗತಿಗೆ ದುಡಿದ ಎಲ್ಲರಿಗೂ ಕೃತಜ್ನತೆ ಸಲ್ಲಿಸಿದರು. ವೀರಕೇಸರಿ ಕಲಾವೃಂದವು ಕಲಾ ಸೇವೆಗಾಗಿ ಹುಟ್ಟಿದ್ದು ಅದು ಮುಂದೆಯು ನಿರಂತರವಾಗಿ ನಡೆಯಲಿ. ಈ ಸಂಸ್ಥೆಯು ನಾಟಕಕ್ಕಾಗಿ ಹುಟ್ಟಿದ ಹಿರಿಯ ಸಂಸ್ಥೆಯಾಗಿದ್ದು, ಕಲಾವೃಂದವು ಕೇವಲ ನಾಟಕ ಕಲೆ ಮಾತ್ರವಲ್ಲದೆ ಇತರ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಮಾಜಿಕ ಸೇವೆಯನ್ನು ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎನ್ನುತ್ತಾ ನೂತನ ಸಮಿತಿಯನ್ನು ಅಭಿನಂದಿಸಿದರು.
 
ಕಲಾವೃಂದದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ಯಾಮ್ ರಾಜ್ ಟಿ. ಶೆಟ್ಟಿಯವರು ಉಪಸ್ಥಿತರಿದ್ದ ಸದಸ್ಯರೆಲ್ಲರನ್ನು ಸ್ವಾಗತಿಸಿದರು. ಆ ನಂತರ ಕಲಾವೃಂದದ ಗೌರವ ಪ್ರಧಾನ ಕಾರ್ಯದರ್ಶಿ ರಮೇಶ ಶಿವಪುರ ಅವರು ಗತ ಮಹಾಸಭೆಯ ವರದಿಯನ್ನು ಮಂಡಿಸಿದರು. ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಜೂರು ಮಾಡಲಾಯಿತು.
 
ಶಕುಂತಳಾ ಪ್ರಭು ಅವರು ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಸಭೆಯು ಆರಿಸಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಭು ಅವರು ಸಧಸ್ಯರೆಲ್ಲರ ಸಹಕಾರದಿಂದ ತಾನು ತನ್ನ ಜವಾಬ್ಧಾರಿಯನ್ನು ಮುಂದುವರಿಸುದಾಗಿ ತಿಳಿಸಿದರು. ಉಪಾಧ್ಯಕ್ಷರಾಗಿ ಜನಪ್ರಿಯ ರಂಗನಟ ಕೆ.ವಿ.ಆರ್. ಐತಾಳ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ, ಸುನಿಲ್ ರಾವ್ ಜೊತೆ ಕಾರ್ಯದರ್ಶಿಯಾಗಿ, ಆಶಾ ಶಿವಪುರ ಕೋಶಾಧಿಕಾರಿಯಾಗಿ, ವಾಣಿ ಶೆಟ್ಟಿ ಜೊತೆ ಕೋಶಾಧಿಕಾರಿಯಾಗಿ ಅಯ್ಕೆಯಾದರು. ಅಲ್ಲದೆ ಹನ್ನೊಂದು ಮಂದಿ ಸಧಸ್ಯರನ್ನು ಆಯ್ಕೆಮಾಡಲಾಯಿತು.
 
ಕಲಾವೃಂದದ ಹಿರಿಯ ಕಲಾವಿದರಾದ ಕೆ.ವಿ.ಆರ್. ಐತಾಳ್ ಮತ್ತು ಸುಜಾತ ಆಳ್ವ ಅವರನ್ನು ವೇದಿಕೆಯಲ್ಲಿದ್ದ ಅತಿಥಿಗಳು ಸನ್ಮಾನಿಸಿ ಗೌರವಿಸಿದರು. ವಿವಿಧ ಸಂಘಟನೆಗಳ ಪ್ರಮುಖರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
 
ಸಭಿಕರ ಪರವಾಗಿ ಮಾಜಿ ಅಧ್ಯಕ್ಷ ಪ್ರೇಮನಾಥ ಸುವರ್ಣ, ರವಿ ಅಂಚನ್, ವಿಶ್ವನಾಥ ಶೆಟ್ಟಿ ಪೇತ್ರಿ, ಚಂದ್ರಶೇಖರ ಶೆಟ್ಟಿ, ಆಶಾ ಶಿವಪುರ್, ಜಯಕರ್ ಪೂಜಾತಿ, ರಮೇಶ ಶಿವಪುರ್ ಮತ್ತು ಶರಾವತಿ ಮಾತನಾಡಿ ಸೂಕ್ತ ಸಲಹೆ ಸೂಚನೆಯಿತ್ತರು. ವೇದಿಕೆಯಲ್ಲಿ ಜೊತೆ ಕೋಶಾಧಿಕಾರಿ ಉಷಾ ಪಿ. ಸುವರ್ಣ ಅವರೂ ಉಪಸ್ಥಿತರಿದ್ದರು. ಕೊನೆಯಲ್ಲಿ ನಿರ್ಗಮನ ಪ್ರಧಾನ ಕಾರ್ಯದರ್ಶಿ ರಮೇಶ್ ಶಿವಪುರ್ ವಂದಿಸಿದರು.
ವರದಿ : ಈಶ್ವರ ಎಂ. ಐಲ್