ತುಂಬೆ ಮೊಯ್ದೀನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ತುಂಬೆ ಮೊಯ್ದೀನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

Nov 21, 2017 07:21:12 PM (IST)
ತುಂಬೆ ಮೊಯ್ದೀನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ದುಬೈ: ದುಬೈ ಮೂಲಕ ಜಾಗತಿಕ ಸಂಸ್ಥೆ ತುಂಬೆ ಗ್ರೂಪ್ ನ ಸ್ಥಾಪಕ ಅಧ್ಯಕ್ಷರಾಗಿರುವ ತುಂಬೆ ಮೊಯ್ದೀನ್ ಅವರಿಗೆ ದುಬೈಯ ಅಮಿಟಿ ವಿಶ್ವವಿದ್ಯಾನಿಲಯದ ವಾರ್ಷಿಕ ಘಟಿಕೋತ್ಸವ ಸಮಾರಂಭದ ವೇಳೆ ಗೌರವ ಡಾಕ್ಟರೇಟ್ ಪ್ರದಾನಿಸಿ ಗೌರವಿಸಲಾಯಿತು.

ಈ ಘಟಿಕೋತ್ಸವ ಕಾರ್ಯಕ್ರಮದ ಗೌರವ ಅತಿಥಿಯಾಗಿದ್ದ ಮೊಯ್ದೀನ್ ಅವರಿಗೆ ಗಣ್ಯರು, ಶಿಕ್ಷಣತಜ್ಞರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು.
ವೈದ್ಯಕೀಯ ಶಿಕ್ಷಣ, ವ್ಯಾಪಾರ, ಕೈಗಾರಿಕೆ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ನೀಡಿರುವ ಗಣನೀಯ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ಅಮಿಟಿ ವಿಶ್ವವಿದ್ಯಾನಿಲಯದ ಅಧಿಕೃತ ಪ್ರಕಟನೆ ತಿಳಿಸಿದೆ.

ಗೌರವ ಸ್ವೀಕರಿಸಿ ಮಾತನಾಡಿದ ಮೊಯ್ದೀನ್ ಅವರು, ತನಗೆ ಗೌರವ ಡಾಕ್ಟರೇಟ್ ನೀಡಿದ ಅಮಿಟಿ ವಿಶ್ವವಿದ್ಯಾನಿಲಯಕ್ಕೆ ಕೃತಜ್ಞತೆ ಸಲ್ಲಿಸಿದರು. `ನನ್ನ ವೃತ್ತಿಜೀವನದುದ್ದಕ್ಕೂ ಶಿಕ್ಷಣ ಮತ್ತು ಆರೋಗ್ಯದ ಮೂಲಕ ಜೀವನವನ್ನು ಪರಿವರ್ತಿಸಿ, ಸಮುದಾಯವನ್ನು ಬಲಪಡಿಸಿ, ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಿದ್ದೇನೆ. ನನ್ನ ಯಶಸ್ಸನ್ನು ದೇವರು, ಬೆಂಬಲ ನೀಡಿದ ಸರ್ಕಾರ ಮತ್ತು ನನ್ನ ತಂಡಕ್ಕೆ ಸಲ್ಲಿಸುತ್ತೇನೆ. ಈ ಗೌರವವು ನನ್ನನ್ನು ಮತ್ತಷ್ಟು ಧನಾತ್ಮಕ ಬದಲಾವಣೆ ಮಾಡಲು ಪ್ರೇರೇಪಿಸಲಿದೆ' ಎಂದು ಹೇಳಿದರು.

ಮೊಯ್ದೀನ್ ಅವರು ಪದವಿ ಪಡೆದವರಿಗೆ ಪ್ರಮಾಣ ಪತ್ರ ನೀಡಿ, ಉನ್ನತ ಸ್ಥಾನ ಪಡೆದವರನ್ನು ಗೌರವಿಸಿದರು.

ತುಂಬೆ ಮೊಯ್ದೀನ್ ಅವರ ಪರಿಚಯ...
ಅಂತಾರಾಷ್ಟ್ರೀಯ ಮಟ್ಟದ ತುಂಬೆ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾಗಿರುವ ತುಂಬೆ ಮೊಯ್ದೀನ್ ಅವರು 1998ರಲ್ಲಿ ತುಂಬೆ ಗ್ರೂಪ್ ನ್ನು ಆರಂಭಿಸಿದರು. ಇದರ ಮುಖ್ಯ ಕಚೇರಿ ಯುಎಇಯ ದುಬೈಯ ಡಿಐಎಫ್ ಸಿಯಲ್ಲಿದೆ. ಅವರು ಸುಮಾರು 20 ಕ್ಷೇತ್ರಗಳಲ್ಲಿ ತನ್ನ ವ್ಯಾಪಾರನ್ನು ವಿಸ್ತರಿಸಿದ್ದಾರೆ. ಇಂದು ತುಂಬೆ ಗ್ರೂಪ್ ಶಿಕ್ಷಣ, ಆರೋಗ್ಯ, ವೈದ್ಯಕೀಯ ಸಂಶೋಧನೆ, ಡಯಾಗ್ನೋಸ್ಟಿಕ್ಸ್, ಚಿಲ್ಲರೆ ಔಷಧಾಲಯ, ಆರೋಗ್ಯ ಸಂವಹನ, ಚಿಲ್ಲರೆ ಆಪ್ಟಿಕಲ್, ವೆಲ್ನೆಸ್, ನ್ಯೂಟ್ರಿಷನ್ ಸ್ಟೋರ್ಸ್, ಹಾಸ್ಪಿಟಾಲಿಟಿ, ರಿಯಲ್ ಎಸ್ಟೇಟ್, ಪಬ್ಲಿಷಿಂಗ್, ಟೆಕ್ನಾಲಜಿ, ಮೀಡಿಯಾ, ಈವೆಂಟ್ಸ್, ಮೆಡಿಕಲ್ ಟೂರಿಸಮ್, ಟ್ರೇಡಿಂಗ್ ಮತ್ತು ಮಾರ್ಕೆಟಿಂಗ್ & ಡಿಸ್ಟ್ರಿಬ್ಯೂಷನ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ತುಂಬೆ ಗ್ರೂಪ್ ನಲ್ಲಿ ಸುಮಾರು ಐದು ಸಾವಿರ ಮಂದಿ ಉದ್ಯೋಗಿಗಳಿದ್ದಾರೆ. 2022ರ ವೇಳೆಗೆ ಇನ್ನಷ್ಟು ಯೋಜನೆಗಳು ಪೂರ್ಣಗೊಳ್ಳುವಾಗ ಉದ್ಯೋಗಿಗಳ ಸಂಖ್ಯೆ 25 ಸಾವಿರಕ್ಕೇರಲಿದೆ ಎಂದು ಅಂದಾಜಿಸಲಾಗಿದೆ. ತುಂಬೆ ಸಮೂಹದ ಆಸ್ಪತ್ರೆಗಳ ಘಟಕಾ ಭೋದನಾ ಆಸ್ಪತ್ರೆಯಾಗಿರುವ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯು ಯುಎಇಯಲ್ಲಿ ಅತೀ ದೊಡ್ಡ ಆರೋಗ್ಯ ಸೇವೆ ನೀಡುವ ಆಸ್ಪತ್ರೆಯಾಗಿದೆ. ಇಲ್ಲಿ ಸುಮಾರು 175 ದೇಶದ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಾರೆ. ಗಲ್ಫ್ ಮೆಡಿಕಲ್ ಯೂನಿವರ್ಸಿಟಿ(ಜಿಎಂಯು) ಮಧ್ಯಪೂರ್ವ ಭಾಗದ ಅಗ್ರ ಖಾಸಗಿ ವೈದ್ಯಕೀಯ ಯೂನಿವರ್ಸಿಟಿಯಾಗಿದೆ. ಇಲ್ಲಿ ಸುಮಾರು 80 ರಾಷ್ಟ್ರಗಳ ವಿದ್ಯಾರ್ಥಿಗಳು, 25 ದೇಶಗಳ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಕೆಲಸ ಮಾಡುತ್ತಾರೆ.

ತುಂಬೆ ಗ್ರೂಪ್ ತಮ್ಮ ಉದ್ಯಮವನ್ನು ಸುಮಾರು ಹತ್ತು ಪಟ್ಟು ಹೆಚ್ಚು ಮಾಡಲು ಮತ್ತು ಜಗತ್ತಿನೆಲ್ಲೆಡೆ ಇದನ್ನು ವಿಸ್ತರಿಸುವತ್ತ ಗಮನಹರಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಮತ್ತೆ ಮೂರು ಅಂತಾರಾಷ್ಟ್ರೀಯ ಕ್ಯಾಂಪಸ್ ನಿರ್ಮಿಸುವ ಗುರಿ ಹೊಂದಿದೆ. 2022ರ ವೇಳೆಗೆ ವಿಶ್ವದಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿರುವ 15 ಶೈಕ್ಷಣಿಕ ಆಸ್ಪತ್ರೆಗಳಿಗೆ ಇದು ಹೆಚ್ಚುವರಿ ಸೇರ್ಪಡೆಯಾಗಿದೆ. ಯುಎಇಯಲ್ಲಿ ಒಂದು ಸಾವಿರ ಹಾಸಿಯಿರುವ ಆಸ್ಪತ್ರೆ, ಭಾರತದಲ್ಲಿ 1500 ಹಾಸಿಗೆ ಇರುವ ಹಾಸಿಗೆ ಮತ್ತು ಗಲ್ಫ್ ಮತ್ತು ಆಫ್ರಿಕಾದಲ್ಲಿ 750 ಹಾಸಿಗೆಗಳನ್ನು ಒಳಗೊಂಡ ಆಸ್ಪತ್ರೆ ತೆರೆಯುವ ಉದ್ದೇಶವಿರಿಸಿಕೊಂಡಿದೆ. ವಿಶೇಷ ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯಲು ಕಂಪೆನಿ ಯೋಜನೆ ಹಾಕಿಕೊಂಡಿದೆ.