ತುಳು ಚಿತ್ರರಂಗದ `ಪೆಟ್ಟಾಯಿ ಪಿಲಿ' ಇನ್ನಿಲ್ಲ

ತುಳು ಚಿತ್ರರಂಗದ `ಪೆಟ್ಟಾಯಿ ಪಿಲಿ' ಇನ್ನಿಲ್ಲ

HSA   ¦    Jul 09, 2018 03:22:41 PM (IST)
ತುಳು ಚಿತ್ರರಂಗದ `ಪೆಟ್ಟಾಯಿ ಪಿಲಿ' ಇನ್ನಿಲ್ಲ

ಮುಂಬಯಿ: ತುಳು ಚಿತ್ರರಂಗದಲ್ಲಿ ತನ್ನದೇ ಆದ ಶೈಲಿಯಿಂದ ಪಾತ್ರಗಳನ್ನು ನಿರ್ವಹಿಸಿದ್ದ ಜನಪ್ರಿಯ ನಟ ಸದಾಶಿವ ಸಾಲ್ಯಾನ್(68) ಅವರು ಭಾನುವಾರ ಮುಂಬಯಿಯಲ್ಲಿ ನಿಧನರಾದರು.

ತುಳು ಸಿನಿಮಾ ರಂಗದಲ್ಲಿ ಹೆಚ್ಚು ಚಿರಪರಿಚಿತರಾಗಿದ್ದ ಸದಾಶಿವ ಸಾಲ್ಯಾನ್ ಅವರು ಕೆ.ಎನ್. ಟೈಲರ್ ಅವರ `ಭಾಗ್ಯವಂತೆದಿ', `ಬದ್ಕೆರೆ ಬುಡ್ಲೆ' ಚಿತ್ರಗಳಲ್ಲಿ ನಟಿಸಿದ್ದರು. ರವಿ ಎನ್ ಕಾಂಚನ್ ಅವರು ನಿರ್ದೇಶಿಸಿದ್ದ `ದಾರೆದ ಸೀರೆ' ಮತ್ತು `ಸತ್ಯ ಓಲುಂಡು' ಚಿತ್ರಗಳಲ್ಲಿ ನಟಿಸಿದ್ದರು. ಸ್ವತಃ ನಿರ್ದೇಶನ ಮಾಡಿದ್ದ `ಪೆಟ್ಟಾಯಿ ಪಿಲಿ' ಮತ್ತು `ಒಂತೆ ಎಡ್ಜಸ್ಟ್ ಮಲ್ಪುಲೆ' ಚಿತ್ರವು ಜನಪ್ರಿಯವಾಗಿತ್ತು. ಆದರೆ ಅನಾರೋಗ್ಯದಿಂದಾಗಿ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದರು.

ಹವ್ಯಾಸಿ ರಂಗ ಕಲಾವಿದರಾಗಿದ್ದ ಸದಾಶಿವ ಸಾಲ್ಯಾನ್ ಅವರು ಕನ್ನಡದ ಸಮರ ಸಿಂಹ, ಅನಾಥ ರಕ್ಷಕ, ಸಿಡಿದೆದ್ದ ಪಾಂಡವರು, ಕಾಲೇಜು ರಂಗ ಸೇರಿದಂತೆ ಸುಮಾರು 50 ಚಿತ್ರಗಳಲ್ಲಿ ನಟಿಸಿದ್ದರು. ತುಳು, ಹಿಂದಿ ಹಾಗೂ ಮರಾಠಿಯಲ್ಲಿ ಸುಮಾರು 500ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು. 

ಉಡುಪಿ ತೆಂಕ ಎರ್ಮಾಳ್ ನಲ್ಲಿ ಜನಿಸಿದ್ದ ಸದಾಶಿವ ಸಾಲ್ಯಾನ್ ಅವರು ಸಣ್ಣ ಪ್ರಾಯದಲ್ಲೇ ಮುಂಬಯಿಗೆ ತೆರಳಿದ್ದರು. ಅಂಧೇರಿಯಲ್ಲಿ ಚಿನ್ಮಯ ಕಾಲೇಜಿನಲ್ಲಿ ತನ್ನ ಪದವಿ ಪೂರೈಸಿದ್ದ ಅವರು ಮುಂಬಯಿಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಿದ್ದರು. ಇವರು ಪತ್ನಿ ಸುಶೀಲ ಮತ್ತು ಇಬ್ಬರು ಮಕ್ಕಳು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.