ಮಕ್ಕಳ ಮೇಳದಿಂದ ನೆರೂಲ್ ನಲ್ಲಿ ಮಹಿಷ ಮರ್ಧಿನಿ ಯಕ್ಷಗಾನ ಪ್ರದರ್ಶನ

ಮಕ್ಕಳ ಮೇಳದಿಂದ ನೆರೂಲ್ ನಲ್ಲಿ ಮಹಿಷ ಮರ್ಧಿನಿ ಯಕ್ಷಗಾನ ಪ್ರದರ್ಶನ

Oct 12, 2017 04:49:36 PM (IST)
ಮಕ್ಕಳ ಮೇಳದಿಂದ ನೆರೂಲ್ ನಲ್ಲಿ ಮಹಿಷ ಮರ್ಧಿನಿ ಯಕ್ಷಗಾನ ಪ್ರದರ್ಶನ

ನವಿಮುಂಬಯಿ: ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಸಮಿತಿ ಮತ್ತು ಹರೀಶ್ ಲಂಚ್ ಹೋಮ್ ನ ಮಾಲಕ, ಕುಲಾಲ ಸಂಘ ಮುಂಬಯಿ ಇದರ ಅಧ್ಯಕ್ಷ ಶ್ರೀ ಗಿರೀಶ್ ಬಿ. ಸಾಲ್ಯಾನ್ ರ ಜಂಟಿ ಪ್ರಾಯೋಜಕತ್ವದಲ್ಲಿ ಶ್ರೀ ವಿನಾಯಕ ಯಕ್ಷ ಕಲಾ ತಂಡ ಮಕ್ಕಳ ಮೇಳ(ರಿ) ಕೆರೆಕಾಡು, ಮುಲ್ಕಿ ಇದರ ಕಲಾವಿದರಿಂದ "ಮಹಿಷ ಮರ್ಧಿನಿ" ಯಕ್ಷಗಾನ ಪ್ರದರ್ಶನವು ಇತ್ತೀಚೆಗೆ ನೆರೂಲ್ ನ ಶನೀಶ್ವರ ಮಂದಿರದಲ್ಲಿ ಏರ್ಪಡಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಯೋಜಕರ ಪರವಾಗಿ ತಂಡದ ಭಾಗವತರಾದ ಕುಮಾರಿ ಕಾವ್ಯಶ್ರೀ, ಮೇಳದ ಸಂಚಾಲಕರಾದ ಜಯಂತ್ ಅಮೀನ್ ಮತ್ತು ಮುಂಬಯಿ ವ್ಯವಸ್ಥಾಪಕರಾದ ಪ್ರಭಾಕರ್ ಎಸ್. ಹೆಗ್ಡೆ ಇವರನ್ನು ಸತ್ಕರಿಸಲಾಯಿತು. ಮೇಳದ ಪರವಾಗಿ ಪ್ರಾಯೋಜಕರಾದ ಶ್ರೀ ಗಿರೀಶ್ ಬಿ. ಸಾಲ್ಯಾನ್ ಮತ್ತು ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷರಾದ ಶ್ರೀ ಪಿ. ಶೇಖರ್ ಮೂಲ್ಯ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಿರೀಶ್ ಬಿ. ಸಾಲ್ಯಾನ್ ಅವರು "ಮಕ್ಕಳನ್ನು ಯಕ್ಷಗಾನದಂತಹ ಕಲೆಯಲ್ಲಿ ಹುರಿದುಂಬಿಸುತ್ತಾ, ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯ ಮಾಡುತ್ತಿರುವ ಈ ತಂಡದ ಕಾರ್ಯ ಸ್ಲಾಘನೀಯ. ಈ ಮೇಳದಲ್ಲಿರುವ ಮಕ್ಕಳ ಪ್ರತಿಭೆ ಬೇರೆ ಮಕ್ಕಳಿಗೆ ಮಾದರಿಯಾಗಲಿ. ಕುಮಾರಿ ಕಾವ್ಯಶ್ರೀಯ ಭಾಗವತಿಕೆಯನ್ನು ಸ್ಲಾಘಿಸಲು ಶಬ್ದವೇ ಸಾಲದು. ಕನ್ನಡದೊಂದಿಗೆ ತುಳುವಿನಲ್ಲಿಯೂ ಪ್ರಸಂಗಗಳನ್ನು ಪ್ರದರ್ಶಿಸಿದರೆ ಮುಂಬಯಿಯಲ್ಲಿರುವ ಯುವಪೀಳಿಗೆ ಇನ್ನು ಹೆಚ್ಚು ಯಕ್ಷಗಾನದೊಂದಿಗೆ ಆಕರ್ಷಿತರಾಗಬಹುದು" ಎಂದರು.

ಮುಂಬಯಿ ವ್ಯವಸ್ಥಾಪಕರಾದ ಪ್ರಭಾಕರ್ ಎಸ್. ಹೆಗ್ಡೆಯವರು ಮಾತನಾಡುತ್ತಾ, "ಈ ಮೇಳದಲ್ಲಿ ಪ್ರತಿ ದಿನದ ಪ್ರಸಂಗದಲ್ಲಿ ಬೇರೆ ಬೇರೆ ಪಾತ್ರಗಳನ್ನು ಕಲಾವಿದರಿಗೆ ನೀಡಿ, ಎಲ್ಲಾ ಕಲಾವಿದರೂ ಪ್ರತಿಯೊಂದು ಪಾತ್ರದಲ್ಲಿ ಅಭಿನಯಿಸಲು ಅವಕಾಶ ನೀಡುವುದೇ ಈ ಮೇಳದ ವೈಶಿಷ್ಟ್ಯ. ನಿರಂತರ ಒಂದೇ ಶೀರ್ಷಿಕೆಯ ಪ್ರಸಂಗ ಇದ್ದರೂ ಪ್ರತಿ ಪ್ರಸಂಗದಲ್ಲಿ ಪಾತ್ರಧಾರಿಗಳ ಪಾತ್ರ ಬದಲಾವಣೆ ಮಾಡಲಾಗುತ್ತದೆ. ಕಲಾವಿದರೂ ಕೂಡಾ ಪಾತ್ರವನ್ನು ಸವಾಲಾಗಿ ಸ್ವೀಕರಿಸಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮಕ್ಕಳನ್ನು ಯಕ್ಷಗಾನದೊಂದಿಗೆ ಪ್ರೋತ್ಸಾಹಿಸುತ್ತ ಅವರ ಶಿಕ್ಷಣಕ್ಕೂ ಸಹಾಯ ಮಾಡುತ್ತಿರುವುದು ಈ ತಂಡದ ಮತ್ತೊಂದು ವೈಶಿಷ್ಟ್ಯತೆ. ಇಂತಹ ತಂಡದ ಪ್ರದರ್ಶನದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು" ಎಂದು ಹೇಳಿದರು.

ವೇದಿಕೆಯಲ್ಲಿ ಶನೀಶ್ವರ ಮಂದಿರದ ಅಧ್ಯಕ್ಷರಾದ ಶ್ರೀ ರಮೇಶ್ ಪೂಜಾರಿ, ಶನೀಶ್ವರ ಮಂದಿರದ ಟ್ರಸ್ಟಿ ಕರುಣಾಕರ್ ಆಳ್ವ, ಮೇಳದ ಮುಂಬಯಿ ವ್ಯವಸ್ಥಾಪಕರಾದ ವಿ. ಕೆ. ಸುವರ್ಣ, ಕುಲಾಲ ಸಂಘದ ಉಪಾಧ್ಯಕ್ಷರಾದ ಪಿ. ದೇವದಾಸ್ ಎಲ್. ಕುಲಾಲ್, ಗೌರವ ಕೋಶಾಧಿಕಾರಿ ಜಯ ಎಸ್. ಅಂಚನ್, ರಂಗಭೂಮಿ ಪೈನ್ ಆರ್ಟ್ಸ್ ನ ಅಧ್ಯಕ್ಷರಾದ ತಾರಾನಾಥ್ ಶೆಟ್ಟಿ ಪುತ್ತೂರು ಮತ್ತು ಕೃಷ್ಣ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ನಿರೂಪಿಸಿ ಅಭಾರ ಮನ್ನಿಸಿದರು. ಪ್ರದರ್ಶನದ ಯಶಸ್ಸಿನಲ್ಲಿ ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಸಮಿತಿಯ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಯಕ್ಷಗಾನ ಪ್ರೇಮಿಗಳು ಪಾಲ್ಗೊಂಡು ಯಕ್ಷಗಾನವನ್ನು ಯಶಸ್ವಿಗೊಳಿಸಿದರು.

More Images