ದೇಹದ ಎತ್ತರಕ್ಕೆ ತಕ್ಕಂತೆ ತೂಕ ಕಾಪಾಡೋದು ಹೇಗೆ!

ದೇಹದ ಎತ್ತರಕ್ಕೆ ತಕ್ಕಂತೆ ತೂಕ ಕಾಪಾಡೋದು ಹೇಗೆ!

LK   ¦    Dec 10, 2018 04:09:43 PM (IST)
ದೇಹದ ಎತ್ತರಕ್ಕೆ ತಕ್ಕಂತೆ ತೂಕ ಕಾಪಾಡೋದು ಹೇಗೆ!

ಬಹುಶಃ ಇಂತದೊಂದು ಪ್ರಶ್ನೆಗಳು ಇತ್ತೀಚೆಗೆ ಎಲ್ಲರನ್ನು ಕಾಡುತ್ತಿರುತ್ತದೆ. ಪ್ರತಿಯೊಬ್ಬರೂ ತಮ್ಮ ದೇಹ ಆಕರ್ಷಕವಾಗಿರಬೇಕೆಂದು ಬಯಸುತ್ತಾರೆ. ತೂಕ ಹೆಚ್ಚಾದರೆ ಗಾಬರಿಪಡುತ್ತಾರೆ. ಸದಾ ತೆಳ್ಳಗೆ ಕಾಣಬೇಕೆಂದು ಬಯಸುತ್ತಾರೆ. ಮತ್ತು ಅದಕ್ಕೆ ಬೇಕಾದ ಕಸರತ್ತುಗಳನ್ನು ಸದಾ ಮಾಡುತ್ತಿರುತ್ತಾರೆ.

ಕೆಲವರು ದೇಹವನ್ನು ದಂಡಿಸಿ ತೂಕವನ್ನು ಕಾಪಾಡಿಕೊಂಡರೆ ಇನ್ನು ಕೆಲವರು ಪಥ್ಯಗಳಿಂದ ದೇಹದಲ್ಲಿ ಬೊಜ್ಜು ಬೆಳೆಯದಂತೆ ನೋಡಿಕೊಳ್ಳುತ್ತಾರೆ. ಪಥ್ಯ ಮಾಡಿ ದೇಹದ ತೂಕವನ್ನು ಕಳೆದುಕೊಳ್ಳಬಹುದಾದರೂ ಅಂತಹವರು ಕಠಿಣವಾದ ಕೆಲಸ ಮಾಡುವುದು ಕಷ್ಟವಾಗುತ್ತದೆ. ಇನ್ನು ಕಠಿಣ ದೈಹಿಕ ಶ್ರಮದ ಕೆಲಸ ಮಾಡುವವರು ಮತ್ತು ವ್ಯಾಯಾಮ, ಯೋಗ ಮಾಡುವವರು ತಮ್ಮ ಅಂಗಸಾಧನೆಯಿಂದಲೇ ದೇಹದ ತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳುತ್ತಾರೆ.

ಏನೂ ಕೆಲಸ ಮಾಡದೆ ಮನೆಯಲ್ಲೇ ಇರುವವರು ಹೆಚ್ಚಿನ ಬೊಜ್ಜು ಸಮಸ್ಯೆಯಿಂದ ಬಳಲುತ್ತಾರೆ. ತಾವು ಸೇವಿಸಿದ ಆಹಾರ ಜೀರ್ಣವಾಗಲು ಯಾವುದಾದರೊಂದು ದೈಹಿಕ ಶ್ರಮದ ಕೆಲಸ ಮಾಡಬೇಕು ಏನಿಲ್ಲವೆಂದರೂ ಒಂದಷ್ಟು ದೂರವಾದರೂ ನಡೆಯ ಬೇಕು. ಇದೇನು ಮಾಡದೆ ತಾವು ಸಣ್ಣಗೆ, ತೆಳ್ಳಗೆ ಕಾಣಿಸಬೇಕೆಂದು ಬಯಸುವುದು ಮೂರ್ಖತನವಾಗುತ್ತದೆ.

ಬಹಳಷ್ಟು ಮಂದಿಯಲ್ಲಿ ಉಪವಾಸ ಮಾಡಿದರೆ ಸಣ್ಣಗೆ ಆಗಬಹುದು ಎಂಬ ತಪ್ಪು ತಿಳುವಳಿಕೆಯಿದೆ. ಇದನ್ನು ದೂರಮಾಡಿ ಕೆಲವೊಂದು ವಿಧಾನಗಳನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಲ್ಲದೆ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಮುಂದಾಗಬೇಕು.

ನಮ್ಮ ದೇಹದ ಎತ್ತರಕ್ಕೆ ತಕ್ಕಂತೆ ತೂಕವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೂ ಕಷ್ಟಪಟ್ಟು ಒಂದಷ್ಟು ವೈದ್ಯರ ಸಲಹೆಯಂತೆ ವ್ಯಾಯಾಮ ಮತ್ತು ಆಹಾರ ಸೇವನೆಯಲ್ಲಿ ಒಂದಷ್ಟು ಹಿತಮಿತ, ಪಥ್ಯಾಕ್ರಮಗಳನ್ನು ಅಳವಡಿಸಿಕೊಂಡರೆ ದೇಹವನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇಷ್ಟಕ್ಕೂ ನಮ್ಮೆಲ್ಲರ ದೇಹದ ಸೌಂದರ್ಯ ಮತ್ತು ತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಅಡ್ಡ ಬರುವುದೇ ಬೊಜ್ಜು ಎಂದರೆ ತಪ್ಪಾಗಲಾರದು. ಏಕೆಂದರೆ ನಮ್ಮ ಶರೀರದಲ್ಲಿ ಕೊಬ್ಬಿನ ಅಂಶ ಹೆಚ್ಚಾದಾಗ ಶರೀರದ ಗಾತ್ರಹಿಗ್ಗುತ್ತದೆ. ಕಾಯಿಲೆಗಳು ಒಂದರ ಮೇಲೆ ಒಂದರಂತೆ ಅಡರಿಕೊಳ್ಳುತ್ತದೆ. ಒಂದು ವೇಳೆ ಬೊಜ್ಜನ್ನು ಕರಗಿಸದೆ ಹೋದರೆ ರಕ್ತದೊತ್ತಡ, ಹೃದಯದ ಕಾಯಿಲೆ, ಪಿತ್ತಕೋಶದ ಕಾಯಿಲೆ, ಮೂಳೆ ಸವೆತ, ಕೀಲುಗಳ ಕಾಯಿಲೆ, ಉಸಿರಾಟದ ತೊಂದರೆ, ಸುಸ್ತು, ಆಯಾಸದಂತಹ ಸಮಸ್ಯೆಗಳು ಕಾಣಿಸಿಕೊಂಡರೆ ಅಚ್ಚರಿಪಡಬೇಕಾಗಿಲ್ಲ.

ಬೊಜ್ಜು ಬೆಳೆಯಲು ಜಂಕ್ ಫುಡ್ ಸೇವನೆ, ಆಹಾರ ಸೇವನೆಯಲ್ಲಿ ಶಿಸ್ತು ಅಳವಡಿಸಿಕೊಳ್ಳದೆ, ಸಿಕ್ಕಿದನ್ನೆಲ್ಲ ಸೇವಿಸೋದು, ಕುಳಿತಲ್ಲೇ ಹೆಚ್ಚು ಹೊತ್ತು ಇರುವುದು, ವಾಕಿಂಗ್, ವ್ಯಾಯಾಮ, ದೈಹಿಕ ಶ್ರಮದ ಕೆಲಸ ಮಾಡದಿರುವುದು ಕಾರಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬೊಜ್ಜು ಅನುವಂಶೀಯವಾಗಿಯೂ ಬರಬಹುದು. ಇಲ್ಲವೆ ದೇಹದ ಶ್ರಮ ಕಡಿಮೆಯಾಗಿ ಆಹಾರ ಸೇವನೆ ಜಾಸ್ತಿಯಾದರೂ ಬರಬಹುದು. ನಡವಳಿಕೆಯಲ್ಲಿನ ವಿಭಿನ್ನತೆ, ತಿನ್ನುವುದನ್ನು ಪ್ರೇರೇಪಿಸುವುದು, ಕಂಡಿದೆಲ್ಲವನ್ನೂ ತಿನ್ನಬೇಕೆಂಬ ಬಯಕೆ, ಆಗಾಗ್ಗೆ ಆಹಾರ ಸೇವಿಸುವುದು. ಕೊಬ್ಬಿನ ಅಂಶವಿರುವ ಪದಾರ್ಥಗಳನ್ನು ತಿನ್ನುವುದು. ದೈಹಿಕ ಶ್ರಮಕ್ಕೆ ಒತ್ತು ನೀಡದಿರುವುದು ನಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ನಿಯಮಿತ ಆಹಾರ ಸೇವನೆ, ದೈಹಿಕ ಚಟುವಟಿಕೆಗಳಿಗೆ ಒತ್ತು ನೀಡುವುದು ಅಗತ್ಯ.

ಇನ್ನು ತೂಕ ಹೆಚ್ಚಾಯಿತೆಂದು ಯಾರೋ ಹೇಳಿದರೆಂಬ ಕಾರಣಕ್ಕೆ ಒಮ್ಮೆಗೆ ಹೆಚ್ಚು ತೂಕ ಇಳಿಸಿಕೊಳ್ಳುವ ಕಾರ್ಯಕ್ಕೆ ಕೈ ಹಾಕಬೇಡಿ, ಕಠಿಣ ವ್ಯಾಯಾಮ, ಯೋಗಗಳ ಮೂಲಕ ವಾರಕ್ಕೆ ಅರ್ಧ ಕೆಜಿಯಿಂದ ಒಂದು ಕೆಜಿಯಷ್ಟು ಇಳಿಸುವ ಪ್ರಯತ್ನ ಮಾಡಬೇಕು. ಇದನ್ನು ಹೊರತುಪಡಿಸಿ ತೂಕ ಇಳಿಕೆಗಾಗಿ ಔಷಧಿ, ಮಾತ್ರೆ ಇನ್ನಿತರ ಚಿಕಿತ್ಸೆಗೆ ಮೊರೆ ಹೋಗುವುದು ಅಪಾಯಕಾರಿ. ಈ ವಿಷಯದಲ್ಲಿ ವೈದ್ಯರ ಸಲಹೆ ಇಲ್ಲದೆ ಸ್ವಯಂ ಚಿಕಿತ್ಸೆ ಆರೋಗ್ಯಕ್ಕೆ ಮಾರಕ ಎಂಬುದನ್ನು ಮರೆಯಬಾರದು.

ನಿಯಮಿತ ಆಹಾರದೊಂದಿಗೆ ವ್ಯಾಯಾಮ ಮಾಡುವುದು, ಮುಂಜಾನೆ ಸುಮಾರು ಮುಕ್ಕಾಲು ಅಥವಾ ಒಂದು ಗಂಟೆಕಾಲ ವೇಗದ ನಡಿಗೆಯೂ ಕೊಬ್ಬಿನ ಅಂಶವನ್ನು ಕರಗಿಸಿ ಬೊಜ್ಜು ತಡೆಯುತ್ತದೆ. ಮಧ್ಯೆ, ಮಧ್ಯೆ ಊಟ ಬಿಟ್ಟರೆ ಸಣ್ಣಗಾಗಬಹುದು ಎಂಬ ಭ್ರಮೆ ಕೆಲವರಲ್ಲಿದೆ. ಅದರಿಂದ ಪ್ರಯೋಜನವಿಲ್ಲ. ಕಾರಣ ಮತ್ತೊಂದು ಹೊತ್ತು ಹೆಚ್ಚು ಊಟ ಸೇವಿಸುವಂತಾಗುತ್ತದೆ. ಹಾಗಾಗಿ ಊಟವನ್ನು ತಪ್ಪಿಸದೆ ಪ್ರಮಾಣವನ್ನು ಕಡಿಮೆಗೊಳಿಸಬೇಕು. ಕುರುಕು ತಿಂಡಿಗಳನ್ನು ತಿನ್ನುವ ಅಭ್ಯಾಸ ಕಡಿಮೆ ಮಾಡಬೇಕು. ಬಿಟ್ಟು ಬಿಟ್ಟರೆ ಇನ್ನೂ ಒಳ್ಳೆಯದು.

ಬೆಳಗ್ಗಿನ ಉಪಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ಅದನ್ನು ತಪ್ಪಿಸಬಾರದು. ರಾತ್ರಿ ವೇಳೆ ಊಟವಾದ ತಕ್ಷಣವೇ ಮಲಗುವುದು ಒಳ್ಳೆಯ ಅಭ್ಯಾಸವಲ್ಲ. ಒಂದಷ್ಟು ಹೊತ್ತು ಅಡ್ಡಾಡಿ ಬಳಿಕ ಮಲಗುವುದು ಒಳ್ಳೆಯದು. ಟಿವಿ ನೋಡುತ್ತಾ, ಪುಸ್ತಕ ಓದುತ್ತಾ ಊಟ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದರೆ ಅದನ್ನು ಬಿಟ್ಟುಬಿಡಿ. ಗಬಗಬನೆ ತಿಂದು ಎದ್ದು ಹೋಗುವ ಅಭ್ಯಾಸ ಬಿಟ್ಟು ಚೆನ್ನಾಗಿ ಅಗಿದು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಸಕ್ಕರೆ ಪ್ರಮಾಣ ಕಡಿಮೆಯಿದ್ದಷ್ಟು ಒಳಿತು. ಕೃತಕ, ಸಂಸ್ಕರಿಸಿದ, ಬೇಕರಿಯ ಪದಾರ್ಥಗಳು, ಐಸ್ಕ್ರೀಂ , ಫಿಜ್ಹಾ, ಬರ್ಗರ್ ನಂತಹ ತಿನಿಸುಗಳಿಂದ ಆದಷ್ಟು ದೂರವಿರಬೇಕು. ಕೊಬ್ಬರಿ, ಎಳ್ಳು, ಕಡ್ಲೆಕಾಯಿ, ಗೋಡಂಬಿ, ಬಾದಾಮಿ ಮೊದಲಾದ ಡ್ರೈಫ್ರೂಟ್ಸ್ ಸೇವನೆ ಕಡಿಮೆ ಮಾಡಬೇಕು. ತುಪ್ಪ, ಚೀಸ್, ಪನ್ನೀರ್ ಸೇವಿಸದೆ ಕೆನೆ ತೆಗೆದಹಾಲು, ಕಡಿದ ಮಜ್ಜಿಗೆ ಸೇವಿಸಬೇಕು. ಕೊಬ್ಬಿನ ಅಂಶವಿರುವ ಮಾಂಸ ಸೇವನೆ ಕಡಿಮೆ ಮಾಡಿದಷ್ಟು ಉತ್ತಮ. ಉಪ್ಪಿನ ಅಂಶ ಹೆಚ್ಚಿರುವ ಉಪ್ಪಿನ ಕಾಯಿ, ಸಂಡಿಗೆ, ಹಪ್ಪಳ ಮೊದಲಾದವುಗಳನ್ನು ದೂರವಿಡಿ. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ವರ್ಜಿಸಿ ಹಬೆಯಲ್ಲಿ ಬೇಯಿಸಿದ ಪದಾರ್ಥಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಿ. ಹಣ್ಣಿನ ಜ್ಯೂಸ್ ಬದಲು ಹಣ್ಣನ್ನೇ ಸೇವಿಸಬೇಕು. ದಿನಕ್ಕೆ ಎಂಟರಿಂದ ಹತ್ತು ಲೋಟ ನೀರು ಸೇವಿಸಲೇ ಬೇಕು. ಸೇವಿಸುವ ಆಹಾರದ ಪ್ರಮಾಣ ಕಡಿಮೆ ಮಾಡಬೇಕಾದರೆ ಊಟಕ್ಕೆ ಮುಂಚಿತವಾಗಿ ಒಂದು ಲೋಟ ನೀರು ಕುಡಿದು ಮತ್ತೆ ಊಟ ಮಾಡುವುದು ಒಳ್ಳೆಯದು.

ಕೊಬ್ಬಿನ ಅಂಶ ಕಡಿಮೆ ಇರುವ, ನಾರಿನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದು, ಮೊಳಕೆ ಕಟ್ಟಿದ ಕಾಳುಗಳು, ಸೊಪ್ಪು ತರಕಾರಿಗಳು, ಹಣ್ಣುಗಳ ಸೇವನೆಗೆ ಅದ್ಯತೆ ನೀಡಬೇಕು.