ಹೆಚ್1ಎನ್1 ಸೋಂಕಿನತ್ತ ನಿಗಾ ವಹಿಸಿ!

ಹೆಚ್1ಎನ್1 ಸೋಂಕಿನತ್ತ ನಿಗಾ ವಹಿಸಿ!

LK   ¦    Jun 01, 2018 12:14:08 PM (IST)
ಹೆಚ್1ಎನ್1 ಸೋಂಕಿನತ್ತ ನಿಗಾ ವಹಿಸಿ!

ಹಲವು ಜ್ವರಗಳ ನಡುವೆ ಹೆಚ್1ಎನ್1 ಕೂಡ ಈಗ ಕಾಣಿಸಿಕೊಳ್ಳತೊಡಗಿರುವುದು ಜನರಲ್ಲಿ ಭಯ ಹುಟ್ಟಿಸಿದೆ. ಹೀಗಾಗಿ ಈ ಕಾಯಿಲೆಯತ್ತ ಜಾಗೃತೆ ವಹಿಸುವುದು ಅಗತ್ಯವಾಗಿದೆ.

ಹಾಗೆ ನೋಡಿದರೆ ಹೆಚ್1ಎನ್1 ರೋಗವು ಇನ್ಫ್ಲೂಯೆಂಜಾ ಎ ಎಂಬ ವೈರಸ್ ನಿಂದ ಹರಡುತ್ತಿದ್ದು, ಶೀತ, ತಲೆನೋವು, ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡು ಚಳಿಯ ಜತೆ ದೇಹ ಬಳಲುತ್ತಾ, ಕೆಲವೊಮ್ಮೆ ವಾಂತಿ ಬೇಧಿ ಆಗುವುದು. ಉಸಿರಾಟದಲ್ಲಿ ತೊಂದರೆ ಕಾಣಿಸುವುದು ಈ ಜ್ವರದ ಲಕ್ಷಣವಾಗಿದೆ.

ಹೆಚ್1ಎನ್1 ಕಾಣಿಸಿಕೊಂಡರೆ ಭಯಗೊಳ್ಳುವ ಅಗತ್ಯವಿಲ್ಲ. ಈ ರೋಗಕ್ಕೆ ಪರಿಣಾಮಕಾರಿಯಾದ ಔಷಧಿ ಲಭ್ಯವಿದ್ದು, ಒಸೆಲ್ಟಮಿವರ್ (ಟ್ಯಾಮಿಫ್ಲೂ) ಔಷಧಿಯನ್ನು ವೈದ್ಯರ ಸಲಹೆ ಮೇರೆಗೆ ಪಡೆಯಬಹುದು. ಹೆಚ್1ಎನ್1 ರೋಗಕ್ಕೆ ಒಳಗಾದವರು ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವ ಟಿಶ್ಯೂ ಪೇಪರ್ ನಿಂದ ಮೂಗನ್ನು ಮುಚ್ಚಿಕೊಳ್ಳಬೇಕು. ಕೈಗಳನ್ನು ಆಗಿಂದಾಗ್ಗೆ ಸಾಬೂನಿನಿಂದ ತೊಳೆಯಬೇಕು. ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಬೇಕು. ಸೋಂಕು ಇದ್ದಲ್ಲಿ ಮಾಸ್ಕ್ ಧರಿಸಿ ಮನೆಯಲ್ಲಿಯೇ ಇರುವುದು ಉತ್ತಮ. ಸೂಕ್ಷ್ಮ ಹಾಗೂ ಚಿಕ್ಕಮಕ್ಕಳಿಂದ ದೂರವಿರಬೇಕು. ವಿಶ್ರಾಂತಿ ಪಡೆಯಬೇಕು. ಪೌಷ್ಠಿಕ ಆಹಾರ ಸೇವಿಸಬೇಕು. ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.

ಹೆಚ್1ಎನ್1 ಸೋಂಕು ಇತರರಿಗೆ ಬಹು ಬೇಗ ಹರಡುವ ಸಾಧ್ಯತೆ ಹೆಚ್ಚಿರುವ ಕಾರಣ ಸೋಂಕಿತರ ಬಳಿ ಅತೀ ಸಮೀಪ ಹೋಗಬಾರದು. ಹಸ್ತಲಾಘವ, ತಬ್ಬಿಕೊಳ್ಳುವುದು, ಚುಂಬಿಸುವುದನ್ನು ಮಾಡಬಾರದಾಗಿದೆ.

ಇನ್ನು ಸೋಂಕಿತರಂತೂ ವೈದ್ಯರ ಸಲಹೆ ಪಡೆಯದೆ ಔಷಧಿ ಸೇವನೆ ಮಾಡಬಾರದು. ಜನನಿಬಿಡ ಪ್ರದೇಶದಲ್ಲಿ ಕರವಸ್ತ್ರದಿಂದ ಮುಚ್ಚಿಕೊಳ್ಳದೆ ಕೆಮ್ಮುವುದು ಹಾಗೂ ಸೀನುವುದು ಮಾಡಬಾರದು. ಕಣ್ಣು, ಮೂಗು, ಬಾಯಿಯನ್ನು ಆಗಿಂದಾಗ್ಗೆ ಮುಟ್ಟಬಾರದು ಹಾಗೂ ಎಲ್ಲೆಂದರಲ್ಲಿ ಉಗುಳಬಾರದು. ಏಕೆಂದರೆ ಇದರಿಂದ ಹೊರ ಬರುವ ವೈರಸ್ ಗಳು ಆರೋಗ್ಯವಂತರ ಮೇಲೆ ದಾಳಿ ಮಾಡಿ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿದೆ.

ಹೆಚ್1ಎನ್1 ಸೋಂಕು ಮಕ್ಕಳಿಗೆ ತಾಗಿದರೆ ತೀವ್ರ ಉಸಿರಾಟ, ಮೈ ನೀಲಿಯಾಗುವುದು, ಸಾಕಷ್ಟು ದ್ರವ ಪದಾರ್ಥ ಸೇವನೆಗೆ ತೊಂದರೆ, ಎಚ್ಚರ ತಪ್ಪುವಿಕೆ, ಅತಿಯಾದ ಕಿರಿಕಿರಿ, ತೀವ್ರತರ ಜ್ವರ ಮತ್ತು ಕೆಮ್ಮು, ಜ್ವರದ ಜತೆ ಮೈಮೇಲೆ ಗಂಧೆಗಳು ಏಳುವುದು ಮೊದಲಾದವುಗಳು ಕಾಣಿಸಿಕೊಳ್ಳುತ್ತವೆ.

ಇನ್ನು ದೊಡ್ಡವರಲ್ಲಿ ಉಸಿರಾಟದ ತೊಂದರೆ, ಎದೆ ಹಾಗೂ ಹೊಟ್ಟೆಯಲ್ಲಿ ನೋವು ಅಥವಾ ಒತ್ತಡ, ಇದ್ದಕ್ಕಿದ್ದಂತೆ ತಲೆ ಸುತ್ತುವಿಕೆ ಹಾಗೂ ತೀವ್ರ ಅಥವಾ ನಿರಂತರ ವಾಂತಿಯಾಗುವುದು ಸೋಂಕಿತರಲ್ಲಿನ ಅಪಾಯದ ಚಿಹ್ನೆಗಳಾಗಿವೆ. ಇಂತಹ ತೊಂದರೆ ಕಂಡು ಬಂದರೆ ಯಾವುದೇ ರೀತಿಯ ಮಾತ್ರೆ ತೆಗೆದುಕೊಂಡು ಶಮನ ಮಾಡುವ ಯತ್ನ ಬಿಟ್ಟು ವೈದ್ಯರನ್ನು ಭೇಟಿಯಾಗುವುದು ಉತ್ತಮ.