ಏರುಪೇರಾದ ವಾತಾವರಣದಲ್ಲಿ ತ್ವಚೆ ರಕ್ಷಣೆ ಹೇಗೆ?

ಏರುಪೇರಾದ ವಾತಾವರಣದಲ್ಲಿ ತ್ವಚೆ ರಕ್ಷಣೆ ಹೇಗೆ?

LK   ¦    Oct 26, 2018 11:55:22 AM (IST)
ಏರುಪೇರಾದ ವಾತಾವರಣದಲ್ಲಿ ತ್ವಚೆ ರಕ್ಷಣೆ ಹೇಗೆ?

ಮಳೆ ಕಡಿಮೆಯಾಗಿದೆ ಜತೆಗೆ ಮಧ್ಯಾಹ್ನ ರಣ ಬಿಸಿಲು ನೆತ್ತಿ ಸುಟ್ಟರೂ ಮುಂಜಾನೆ ಮತ್ತು ಸಂಜೆ ಚಳಿ ದೇಹವನ್ನು ಕೊರೆಯುತ್ತದೆ. ಸಾಮಾನ್ಯವಾಗಿ ವಾತಾವರಣ ಬದಲಾದಾಗ ಕೆಲವೊಮ್ಮೆ ನಮ್ಮ ದೇಹದಲ್ಲಿ ಅಥವಾ ಆರೋಗ್ಯದಲ್ಲಿ ಏರುಪೇರಾಗುವುದು ಕಂಡು ಬರುತ್ತದೆ.

ಚಳಿಗಾಲದಲ್ಲಿ ಶೀತ ಇನ್ನಿತರ ಕಾಯಿಲೆಗಳ ಜತೆಗೆ ತ್ವಚೆಯ ಮೇಲೆ ಪರಿಣಾಮ ಬೀರುವುದು ಹೆಚ್ಚಾಗಿ ಕಂಡು ಬರುತ್ತದೆ. ಪರಿಣಾಮ ಕಾಲುಗಳ ಹಿಮ್ಮಡಿ, ತುಟಿ ಬಿರುಕು ಬಿಡುವುದು, ಚರ್ಮದಲ್ಲಿ ಒಡಕು ಕಾಣಿಸಿಕೊಳ್ಳುತ್ತದೆ. ಜತೆಗೆ ಚರ್ಮ ಒಣಗಿದಂತೆ ಗೋಚರಿಸುತ್ತದೆ.

ಹೆಚ್ಚಿನವರಿಗೆ ಚಳಿಗಾಲ ಎಂದಾಕ್ಷಣ ಆತಂಕ ಸಾಮಾನ್ಯ ಏಕೆಂದರೆ ಅವರ ಚರ್ಮಕ್ಕೂ ಚಳಿಗೂ ಹಾದು ಬರುವುದಿಲ್ಲ. ಹೀಗಾಗಿ ಚಳಿ ಶುರುವಾದರೆ ದೇಹದಲ್ಲಿ ಒಂದಷ್ಟು ಬದಲಾವಣೆ ಕಾಣಿಸಿಕೊಳ್ಳುತ್ತದೆ. ಚರ್ಮಗಳು ಚಳಿಗೆ ಸ್ಪಂದಿಸದೆ ಅಲ್ಲಲ್ಲಿ ಬಿರುಕು ಬಿಡುವುದು, ತುಟಿಯೊಡೆದು ರಕ್ತ ಸುರಿಯುವುದಲ್ಲದೆ ನೋವನ್ನು ನೀಡುತ್ತದೆ.

ಇದರೊಂದಿಗೆ ಬಿರುಕುಗಳು ಮುಜುಗರಕ್ಕೂ ಕಾರಣವಾಗಿ ಬಿಡುತ್ತವೆ. ಹೀಗಾಗಿ ಕೆಲವರು ಚಳಿಗಾಲ ಬಂತೆಂತರೆ ಆತಂಕಪಡುತ್ತಾರೆ. ಇತ್ತೀಚೆಗಿನ ವರ್ಷಗಳಲ್ಲಿ ಅಂತಹ ಹೇಳಿಕೊಳ್ಳುವಂತಹ ಚಳಿ ಕಾಣಿಸದಿದ್ದರೂ ವಾತಾವರಣದ ಏರುಪೇರುಗಳು ಆರೋಗ್ಯದ ಮೇಲೆ ಸಮಸ್ಯೆಗಳನ್ನು ತಂದೊಡ್ಡುತ್ತಲೇ ಇವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ತ್ವಚೆಯ ಸಮಸ್ಯೆ ಅಥವಾ ಚರ್ಮದ ಬಿರುಕುಗಳು ಹೆಣ್ಣು ಮಕ್ಕಳಿಗೆ ಹೆಚ್ಚಿನ ಮುಜುಗರ ತರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹೊಲಗದ್ದೆ, ದನದ ಕೊಟ್ಟಿಗೆ ಇನ್ನಿತರ ಕೆಲಸಗಳನ್ನು ಮಾಡುವವರು, ಪಟ್ಟಣಗಳಲ್ಲಿ ಪಾತ್ರೆ ತೊಳೆಯುವುದು ಸೇರಿದಂತೆ ಹಲವು ಶ್ರಮದ ಕೆಲಸಗಳನ್ನು ಮಾಡುವವರು ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಅವರು ಪ್ರತಿದಿನವೂ ಅದೇ ಕೆಲಸವನ್ನು ಮಾಡಬೇಕಾಗಿರುವುದರಿಂದ ಜತೆಗೆ ಆಗಾಗ್ಗೆ ಅದೇ ಕೆಲಸವನ್ನು ಮಾಡಲೇ ಬೇಕಾಗಿರುವ ಕಾರಣದಿಂದಾಗಿ ದೇಹದ ಚರ್ಮವನ್ನು ಎಷ್ಟೇ ಸ್ವಚ್ಛವಾಗಿಟ್ಟುಕೊಂಡು ಔಷಧೋಪಚಾರ ಮಾಡಿದರೂ ಕೂಡ ಮತ್ತೆ, ಮತ್ತೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇನ್ನು ಮಾರುಕಟ್ಟೆಗೆ ಚರ್ಮ ಚಳಿಗೆ ಒಡೆಯದಂತೆ ರಕ್ಷಿಸುವ ಸೌಂದರ್ಯ ವರ್ಧಕ ಉತ್ಪನ್ನಗಳು ಬಂದಿದ್ದರೂ ಅವು ಚರ್ಮದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದೆಯೂ ಇರಬಹುದು. ಇದಕ್ಕೆ ಕಾರಣ ನಮ್ಮ ನಿತ್ಯದ ಆಹಾರ ಸೇವನೆಯ ಕ್ರಮವೂ ಇರಬಹುದು. ಹೀಗಾಗಿ ಮೊದಲಿಗೆ ನಾವು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಬಳಿಕ ಚರ್ಮದ ಕಡೆಗೆ ಕಾಳಜಿವಹಿಸಬೇಕು ಎಂದು ಅಭಿಪ್ರಾಯಪಡಲಾಗಿದೆ.

ಚಳಿ ಹೆಚ್ಚಾದಂತೆ ಚರ್ಮ ಸುಕ್ಕುಗಟ್ಟುವುದು ಹೆಚ್ಚಾಗಿ ಕಂಡು ಬರುತ್ತದೆ. ನಾವು ಆಕರ್ಷಕವಾಗಿ ಕಾಣಬೇಕಾದರೆ ನಮ್ಮ ಕಾಂತಿಯೂ ಅಷ್ಟೇ ಅಗತ್ಯ. ಅದನ್ನು ವಾತಾವರಣಕ್ಕೆ ತಕ್ಕಂತೆ ಕಾದಿಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂದು ವೈದ್ಯರು ಹೇಳುತ್ತಾರೆ. ನಾವು ಬಳಸುವ ಸೋಪು ಸೌಂದರ್ಯವರ್ಧಕಗಳಿಂದ ಆರೋಗ್ಯಕರ ತ್ವಚೆ ಕಾಪಾಡಬಹುದಾದರೂ ಕೆಲವೊಂದು ಕ್ರಮಗಳನ್ನು ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಕೂಡ ಅಗತ್ಯ.

ಒಣ ಚರ್ಮ ಹೊಂದಿರುವವರು ಹೆಚ್ಚಾಗಿ ಮುಖ ತೊಳೆಯಬಾರದು. ಮಾರುಕಟ್ಟೆಯಲ್ಲಿ ಸಿಗುವ ಉತ್ತಮ ಗುಣಮಟ್ಟದ ಮಾಯಿಶ್ಚರೈಸಿಂಗ್ ಕ್ರೀಮ್‍ನ್ನು ಬಳಸಬೇಕು ಇದರಿಂದ ತ್ವಚೆಯ ಮೇಲಿರುವ ಕೊಬ್ಬಿನ ಪದರವನ್ನು ರಕ್ಷಿಸಲು ಜತೆಗೆ ತೇವಾಂಶ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮಧ್ಯಾಹ್ನದ ವೇಳೆಯಲ್ಲಿ ಹೊರ ಹೋದಾಗ ಸೂರ್ಯನ ಬಿಸಿಲು ಚರ್ಮದ ಮೇಲೆ ಪರಿಣಾಮ ಬೀರಬಹುದು. ಇದರಿಂದ ರಕ್ಷಣೆ ಪಡೆಯಲು ಸನ್‍ಕ್ರೀನ್ ಬಳಸಬಹುದು. ಚಳಿಗಾಲದಲ್ಲಿ ತುಂಬಾ ಬಿಸಿ ಇರುವ ನೀರು ಹಿತವೆನಿಸಿದರೂ ಅದು ಚರ್ಮಕ್ಕೆ ಒಳ್ಳೆಯದಲ್ಲ. ಆದ್ದರಿಂದ ಹೆಚ್ಚು ಬಿಸಿಯಾದ ನೀರನ್ನು ಬಳಸದೆ ಕಡಿಮೆ ಬಿಸಿ ಇರುವ ನೀರನ್ನು ಬಳಸಬೇಕು.

ಹಿಮ್ಮಡಿ ಒಡೆಯುವುದನ್ನು ತಡೆಯಲು ಹೂ ಬಿಸಿ ನೀರಿಗೆ ಲ್ಯಾವೆಂಡರ್ ತೈಲದ ಎರಡು ಹನಿ ಸೇರಿಸಿ ಪಾದವನ್ನು ಹತ್ತು ನಿಮಿಷ ಮುಳುಗಿಸಿಡುವುದು. ನಂತರ ಚೆನ್ನಾಗಿ ಉಜ್ಜಿ ತೊಳೆದು ನಿರ್ಜೀವ ಚರ್ಮ ತೆಗೆದು ಮೆತ್ತನೆಯ ಬಟ್ಟೆಯಿಂದ ಪಾದ ಒರೆಸಿಕೊಳ್ಳಬೇಕು. ವ್ಯಾಸಲಿನ್ ಹಚ್ಚಿ ಸಾಕ್ಸ್ ಧರಿಸಿ ಓಡಾಡುವುದರಿಂದಲೂ ಹಿಮ್ಮಡಿ ಮತ್ತು ಪಾದದ ಬಿರುಕು ತಡೆಯಬಹುದು.

ಸ್ನಾನದ ಮೊದಲು ಕೊಬ್ಬರಿ ಎಣ್ಣೆ ಲೇಪಿಸಿ ಸ್ನಾನ ಮಾಡಿದರೆ ಮೈ ಒಡೆಯುವುದು ಕಡಿಮೆಯಾಗಲು ಸಾಧ್ಯವಾಗುತ್ತದೆ. ಎಣ್ಣೆಯ ಜೊತೆಗೆ ಬೇವಿನ ಪುಡಿ ಅಥವಾ ಅರಿಶಿನ ಸೇರಿಸಿ ಹಚ್ಚಿದರೆ ಚರ್ಮದ ನವೆಯನ್ನು ತಡೆಗಟ್ಟಬಹುದು. ಸ್ನಾನದ ನಂತರ ಕ್ರೀಮ್ ಇರುವ ಮಾಯಿಶ್ಚರೈಸಿಂಗ್ ಉಪಯೋಗಿಸಬೇಕು. ತ್ವಚೆಗೆ ಬರೀ ಲೋಶನ್ ಹಚ್ಚಿದರೆ ಸಾಕಾಗದು. ಹೆಚ್ಚಿನ ನೀರನ್ನು ಕುಡಿಯಬೇಕು. ಉಗುರು ಬೆಚ್ಚಗಿನ ಬಿಸಿ ನೀರನ್ನು ಕುಡಿಯಬೇಕು. ಪ್ರತಿದಿನ 8 ಲೋಟ ನೀರನ್ನು ಕುಡಿಯಲೇ ಬೇಕು.

ಹಸಿ ತರಕಾರಿ, ವಿಟಮಿನ್ ‘ಸಿ’ ಇರುವ ಹಸಿರು ಎಲೆ ತರಕಾರಿಯನ್ನು ಆಹಾರದಲ್ಲಿ ಉಪಯೋಗಿಸಬೇಕು. ಜಂಕ್ ಆಹಾರ, ಕಾಫಿ ಸೋಡಾ ಸೇವನೆ ಕಡಿಮೆ ಮಾಡಬೇಕು. ಬಿಸಿ ನೀರು ಸ್ನಾನ ಒಳ್ಳೆಯದು. ಆದರೆ ಬಿಸಿ ನೀರಿಗೆ ಕೊಬ್ಬರಿ ಎಣ್ಣೆ ಒಂದು ತೊಟ್ಟು ಹಾಕಿದರೆ ಇನ್ನೂ ಒಳ್ಳೆಯದು.