ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೈಟೆಕ್ ಆಂಬ್ಯುಲೆನ್ಸ್

ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೈಟೆಕ್ ಆಂಬ್ಯುಲೆನ್ಸ್

LK   ¦    Aug 12, 2017 11:34:06 AM (IST)
ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೈಟೆಕ್ ಆಂಬ್ಯುಲೆನ್ಸ್

ಮಡಿಕೇರಿ: ಯಾವುದೇ ಘಟನೆ ನಡೆದಾಗಲೂ ಸುದ್ದಿಯಾಗುವುದು ಸಕಾಲಕ್ಕೆ ಸ್ಥಳಕ್ಕೆ ಬಾರದ ಆಂಬ್ಯುಲೆನ್ಸ್.. ಕಾರಣ ಬಹಳಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿರುವುದು ಒಬಿರಾಯನ ಕಾಲದ ಆಂಬ್ಯುಲೆನ್ಸ್ಗಳು.. ಇವುಗಳಲ್ಲಿ ಒಂದು ಸರಿಯಿದ್ದರೆ ಮತ್ತೊಂದು ಕೈಕೊಟ್ಟಿರುತ್ತದೆ. ಹೀಗಾಗಿ ಆಗಾಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಡುತ್ತಿವೆ. ಇಂತಹ ಸಮಸ್ಯೆ ಮಡಿಕೇರಿ ಆಸ್ಪತ್ರೆಯಲ್ಲೂ ಇತ್ತಾದರೂ ಇದೀಗ ಹೈಟೆಕ್ ಆಂಬ್ಯುಲೆನ್ಸ್ ಬರುವ ಮೂಲಕ ತೆರೆಬಿದ್ದಿದೆ.ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ. 29 ಲಕ್ಷ ಅನುದಾನದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ನಿಧಿ ವತಿಯಿಂದ ಜಿಲ್ಲಾಸ್ಪತ್ರೆಗೆ ಹೈಟೆಕ್ ಆಂಬ್ಯುಲೆನ್ಸ್ ನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೀಯನ್ನು ನೀಡುವ ಮೂಲಕ ಹಸ್ತಾಂತರಿಸಿದ್ದಾರೆ.

ಈ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ಸಿಗುವ ಎಲ್ಲ ಸೌಲಭ್ಯವೂ ಇದೆ. ಐಸಿಯು, ಆಕ್ಸಿಜನ್, ಹೃದಯಾಘಾತವಾದ ರೋಗಿಗಳಿಗೆ ಅಗತ್ಯವಾಗಿ ಬೇಕಾದ ಶಾಕ್ ಚಿಕಿತ್ಸೆ, ಅಪಘಾತಗಳು ಸಂಭವಿಸಿ ತಲೆಗೆ ಗಂಭೀರ ಗಾಯವಾದರೆ, ಬೆನ್ನು ಮೂಳೆ ಮುರಿದರೆ ವ್ಯಕ್ತಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಲು ಬೇಕಾದ ವ್ಯವಸ್ಥೆ, ಅಪಘಾತ, ಬೆಂಕಿ ಅನಾಹುತಗಳು ಸಂಭವಿಸಿದರೆ ಗಾಯಾಳುವನ್ನು ಕೈಯಿಂದ ಎತ್ತಲಾಗದ ಪರಿಸ್ಥಿತಿ ನಿರ್ಮಾಣ ಗೊಂಡರೆ ಅಂತಹ ಗಾಯಾಳುವನ್ನು ಸಾಗಿಸಲು ಸ್ಕೂಪ್ ಸ್ಟ್ರಚರ್ ವ್ಯವಸ್ಥೆ ಇದರಲ್ಲಿದೆ. ಇನ್ನು ಸಾರ್ವಜನಿಕವಾಗಿ ತುರ್ತು ಸಂದರ್ಭದ ಅರಿವು ಮೂಡಿಸಿ ಸುರಕ್ಷಿತ ಹಾದಿಯಲ್ಲಿ ಸಾಗಲು ನಾಲ್ಕು ವಿಧದ ಹಾರ್ನ್, ಮೈಕ್ ವ್ಯವಸ್ಥೆವೂ ಇದೆ. ಇದರಲ್ಲಿ ಓರ್ವ ಚಾಲಕ, ಪ್ಯಾರಮೆಡಿಕಲ್ ಸಿಬ್ಬಂದಿ ಸೇವೆಗೆ ಇರುವುದರೊಂದಿಗೆ. ವೈದ್ಯರ ಅಗತ್ಯವಿದ್ದಲ್ಲಿ ಓರ್ವ ವೈದ್ಯರನ್ನು ಕೂಡ ಒದಗಿಸುವ ವ್ಯವಸ್ಥೆಯೂ ಇದೆ.

ಇದನ್ನು ತೀರಾ ತುರ್ತು ಪ್ರಕರಣಗಳಿಗೆ ಮಾತ್ರ ಸೇವೆಗೆ ಕಳುಹಿಸಲಾಗುತ್ತದೆಯಂತೆ. ಸಾಧಾರಣ ಹಾಗೂ ಸಣ್ಣಪುಟ್ಟ ಪ್ರಕರಣಗಳಿಗೆ ಈ ಆಂಬ್ಯುಲೆನ್ಸ್ನ್ನು ನೀಡುವದಿಲ್ಲ. ಯಾವದೇ ಪ್ರಕರಣವಾದರೂ ವೈದ್ಯರು ಪರಿಶೀಲಿಸಿ ಹೈಟೆಕ್ ಆಂಬ್ಯುಲೆನ್ಸ್ನ ಅನಿವಾರ್ಯತೆ ಇದ್ದರೆ ಅದನ್ನು ಖಚಿತಪಡಿಸುತ್ತಾರೆ. ಅಂತಹ ಪ್ರಕರಣಗಳಿಗೆ ಮಾತ್ರ ಬಳಸಲಾಗುತ್ತದೆಯಂತೆ. ಪರಿಶಿಷ್ಟ ಜಾತಿ-ಪಂಗಡಗಳಿಗೆ ಉಚಿತವಾಗಿ ಇದರ ಸೇವೆ ಲಭ್ಯವಾಗಲಿದೆ. ಆದರೆ ಸೂಕ್ತ ದಾಖಲಾತಿ ಒದಗಿಸಬೇಕು. ಉಳಿದಂತೆ ಬಿಪಿಎಲ್ ಕಾರ್ಡ್ ಹಾಗೂ ರಿಯಾಯಿತಿ ದರದಲ್ಲಿ ಸೇವೆ ದೊರಕಲಿದೆ.ಈ ಹೈಟೆಕ್ ಆಂಬ್ಯುಲೆನ್ಸ್ನ ಸೇವೆ ಸಾರ್ವಜನಿಕರಿಗೆ ತುರ್ತು ಸಂದರ್ಭಗಳಲ್ಲಿ ಹೇಗೆ ಲಭ್ಯವಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ.