ಪ್ರಕೃತಿ ಮಧ್ಯೆ ಮನಸ್ಸನ್ನು ಹರಿಯಲು ಬಿಡಿ..

ಪ್ರಕೃತಿ ಮಧ್ಯೆ ಮನಸ್ಸನ್ನು ಹರಿಯಲು ಬಿಡಿ..

Jun 14, 2017 09:57:01 AM (IST)

ಏಕೋ ಗೊತ್ತಿಲ್ಲ ಮೂಡ್ ಇಲ್ಲ. ಏನೂ ಕೆಲಸ ಮಾಡಲು ಆಸಕ್ತಿಯಿಲ್ಲ. ಲೈಫ್ ಬೋರ್ ಆಗಿದೆ. ಬದುಕು ಇಷ್ಟೆನಾ ಅನಿಸಿದೆ. ಹೀಗೆ ಹೇಳುವವರು ನಮ್ಮ ನಡುವೆ ಬೇಕಾದಷ್ಟು ಮಂದಿ ಸಿಗುತ್ತಾರೆ. ಬಹಳಷ್ಟು ಸಾರಿ ನಾವುಗಳೇ ಇಂತಹ ಮಾತುಗಳನ್ನು ಹೇಳಿ ಬಿಟ್ಟಿರುತ್ತೇವೆ.

ಮನುಷ್ಯರಾದ ನಾವೆಲ್ಲರೂ ಇವತ್ತು ಇದ್ದಂತೆ ನಾಳೆಯೂ ಇರುತ್ತೇವೆ ಎನ್ನಲಾಗದು. ನಮ್ಮ ಮನಸ್ಥಿತಿಗಳು ಆಗಿಂದಾಗ್ಗೆ ಬದಲಾಗಬಹುದು. ಹೀಗಾಗಿ ನಗುನಗುತ್ತಾ ಮಾತನಾಡುತ್ತಿದ್ದವರು ಮುಖ ಗಂಟಿಕ್ಕಿ ಕುಳಿತು ಬಿಡಬಹುದು. ಅಥವಾ ತಲೆ ಮೇಲೆ ಭಾರ ಹೊತ್ತವರಂತೆ ವರ್ತಿಸಲೂ ಬಹುದು. ಸಣ್ಣಪುಟ್ಟ ವಿಚಾರಕ್ಕೂ ಕೂಗಿ ರಂಪಾಟ ಮಾಡಲೂಬಹುದು.
ಭೂಮಿ ಮೇಲೆ ಹುಟ್ಟಿದ ಮನುಷ್ಯ ಒಂದಲ್ಲ ಒಂದು ಸಮಸ್ಯೆಯಿಂದ ನರಳುತ್ತಲೇ ಇರುತ್ತಾನೆ. ಕೆಲವರು ತಮ್ಮ ಕಷ್ಟಗಳನ್ನು ಬೇರೆಯವರೊಂದಿಗೆ ಹೇಳಿ ಕಷ್ಟದಲ್ಲಿದ್ದೇವೆ ಎನ್ನುವುದನ್ನು ತೋರ್ಪಡಿಸಿಕೊಂಡರೆ, ಮತ್ತೆ ಕೆಲವರು ನಮ್ಮ ಕಷ್ಟವನ್ನು ನಾವೇ ಪರಿಹಾರ ಮಾಡಬೇಕಾಗಿರುವುದರಿಂದ ಬೇರೆಯವರಿಗೇಕೆ ಹೇಳಬೇಕೆಂದು ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಹುಡುಕುತ್ತಿರುತ್ತಾರೆ. ಅಂಥವರು ಕಷ್ಟವನ್ನೆಲ್ಲ ತಮ್ಮೊಳಗೆ ನುಂಗಿಕೊಂಡು ಹೊರಗೆ ನಗುತ್ತಿರುತ್ತಾರೆ. ಹಾಗಾಗಿ ಅವರು ಹೊರಜಗತ್ತಿಗೆ ಸುಖಪುರುಷರಂತೆ ಕಾಣುತ್ತಾರೆ.

ಹಾಗೆ ನೋಡಿದರೆ ಹೆಚ್ಚಿನ ಸಮಸ್ಯೆ ಅಥವಾ ತೊಂದರೆಗಳನ್ನು ಹಲವು ವಿಚಾರಗಳಲ್ಲಿ ನಾವೇ ಎಳೆದು ತಂದುಕೊಂಡು ಅದರಲ್ಲಿ ಸಿಲುಕಿ ಒದ್ದಾಡುತ್ತಿರುತ್ತೇವೆ. ತಾವು ತಂದುಕೊಂಡ ಕೆಲವು ಸಮಸ್ಯೆಗಳು ಬೇರೆಯವರೊಂದಿಗೆ ಹೇಳಿ ಸರಿಪಡಿಸಿಕೊಳ್ಳಲಾರದಂತಿರುತ್ತವೆ. ಅವು ಆರೋಗ್ಯಕ್ಕೆ ಸಂಬಂಧಿಸಿದ್ದಾಗಲೀ, ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ್ದಾಗಲೀ ಆಗದೆ ಮಾನಸಿಕವಾಗಿ ಬಹಳಷ್ಟು ತೊಂದರೆ ನೀಡುತ್ತಿರುತ್ತವೆ. ಇವುಗಳೆಲ್ಲವೂ ನೈತಿಕತೆಯನ್ನು ಮೀರಿದ ಸಮಸ್ಯೆಗಳಾಗಿರುವುದರಿಂದ ಅವುಗಳು ಬದುಕನ್ನೇ ನಾಶ ಮಾಡಿಕೊಳ್ಳುವ ಮಟ್ಟಕ್ಕೆ ತಂದು ನಿಲ್ಲಿಸಿ ಬಿಡಬಹುದು.

ನಮ್ಮ ಸಮಸ್ಯೆಗಳು ನೂರೆಂಟು ವಿಧದಲ್ಲಿರಬಹುದು. ಒಬ್ಬರದು ಒಂದೊಂದು ರೀತಿಯಾಗಿರಬಹುದು. ಆದರೆ ಆ ಸಮಸ್ಯೆಯನ್ನೆಲ್ಲ ಮೀರಿ ಬದುಕೋದು ಕೂಡ ಅಷ್ಟೇ ಅನಿವಾರ್ಯವಾಗಿರುತ್ತದೆ. ಎಂಥ ಸಂದರ್ಭಗಳಲ್ಲಿಯೂ ಎದೆಗುಂದದೆ ಎದುರಿಸಿ ಬದುಕಬೇಕಾದರೆ ನಮಗೆ ಮಾನಸಿಕ ಧೈರ್ಯ ಅಗತ್ಯ. ನಮ್ಮ ಮಾನಸಿಕ ಸ್ಥಿತಿಯೂ ಉತ್ತಮವಾಗಿರಬೇಕು. ಆಗ ಮಾತ್ರ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ.

ನಮ್ಮ ನಿಮ್ಮೆಲ್ಲರ ನಡುವೆ ಇರುವ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅತೃಪ್ತರೇ. ಇವತ್ತಿನ ಕಾಲಮಾನದಲ್ಲಿ ಪ್ರತಿಯೊಬ್ಬರೂ ಐಷಾರಾಮಿ ಬದುಕಿಗೆ ಹಾತೊರೆಯುವ ಕಾರಣದಿಂದಾಗಿ ನೆಮ್ಮದಿಯಾಗಿ ಬದುಕಲು ಸಾಧ್ಯವಾಗದೆ ಮನಸ್ಸನ್ನು ರಾಡಿ ಮಾಡಿಕೊಂಡಿರುತ್ತೇವೆ. ಬೇರೆಯವರ ಏಳ್ಗೆಯನ್ನು ಕಂಡು ಅವರ ಬದುಕಿನೊಂದಿಗೆ ತಮ್ಮ ಬದುಕನ್ನು ತಾಳೆ ಮಾಡಿಕೊಂಡು ಕೀಳರಿಮೆಯಿಂದ. ನನ್ನದೊಂದು ಬದುಕಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಬದುಕುತ್ತಿದ್ದೇವೆ. ಇಂತಹ ಮನಸ್ಥತಿಯವರು ಶಾರೀರಿಕವಾಗಿ ಆರೋಗ್ಯವಾಗಿದ್ದರೂ ಮನೋ ಆರೋಗ್ಯವನ್ನು ಕೆಡಿಸಿ ಕೊಂಡಿರುತ್ತಾರೆ. ಬೇರೆಯವರ ಬದುಕಿನೊಂದಿಗೆ ತಾಳೆ ಮಾಡಿಕೊಂಡು ನಾವು ಅವರಂತೆ ಬದುಕಬೇಕೆಂದುಕೊಳ್ಳುವುದು ಮೂರ್ಖತನವಾಗಿ ಬಿಡುತ್ತದೆ. ನಾವು ನಮ್ಮದೇ ಬದುಕನ್ನು ಕಟ್ಟಿಕೊಳ್ಳಬೇಕು ಮತ್ತು ನಾವು ನಾವಾಗಿಯೇ ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕು.

ಇದಾದ ಬಳಿಕವೂ ನಮ್ಮ ಮನದಲ್ಲಿ ಏಳುವ ಗೊಂದಲವನ್ನೆಲ್ಲ ದೂರ ಮಾಡಿಕೊಂಡು, ಸದಾ ತಮ್ಮೆಲ್ಲ ಜಂಜಾಟಗಳನ್ನು ಮರೆತು ಒಂದಷ್ಟು ಹೊತ್ತು ಸಂತೋಷವಾಗಿರುವ ಪ್ರಯತ್ನ ಮಾಡಬೇಕು ನಮಗೆ ಒಂದಷ್ಟು ನೆಮ್ಮದಿ ಸಿಗುವುದಿದ್ದರೆ ಅದು ದೈವಿಕ ನೆಲೆಗಳು ಅಥವಾ ನಿಸರ್ಗ ರಮಣೀಯ ತಾಣಗಳಿಂದ ಮಾತ್ರ ಎಂದರೆ ತಪ್ಪಾಗಲಾರದು.
ನಮ್ಮೆಲ್ಲ ಮಾನಸಿಕ ವೇದನೆಯನ್ನು ದೂರಗೊಳಿಸುವ ಅದ್ಭುತ ಶಕ್ತಿ ಪ್ರಕೃತಿಗಿದೆ ಎಂಬುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸದಾ ಪೇಟೆ, ಪಟ್ಟಣ, ಕೆಲಸ, ಕಾರ್ಯ, ಇನ್ನೇನೋ ಕಾರಣಗಳಿಂದ ಮನಸ್ಸನ್ನು  ಹಾಳು ಮಾಡಿಕೊಂಡವರು, ಸದಾ ಒತ್ತಡದಲ್ಲೇ ಬದುಕು ಸಾಗಿಸುವವರು ಒಂದಷ್ಟು ಸಮಯವನ್ನು ಯಾವುದಾದರೂ ಸುಂದರ ನಿಸರ್ಗ ರಮಣೀಯ ಸ್ಥಳದಲ್ಲಿ ಕಳೆದು ಬರುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ದೇವರ ಸೃಷ್ಠಿಯೋ? ಪ್ರಕೃತಿಯ ವರದಾನವೋ? ಪ್ರಕೃತಿಯ ರಮಣೀಯ ತಾಣಗಳು ಅಲ್ಲಲ್ಲಿ ಸೃಷ್ಟಿಯಾಗಿದ್ದು,  ಅವುಗಳು ನಮ್ಮ ಮನಸ್ಸನ್ನು ಹಗುರ ಮಾಡಿ ಮಾನಸಿಕ ನೋವನ್ನೆಲ್ಲ ಮರೆಸುವ ಅದ್ಭುತ ಶಕ್ತಿ ಹೊಂದಿವೆ. ಆದ್ದರಿಂದ ಅವುಗಳ ನಡುವೆ ಕಾಲ ಕಳೆಯುವ ಪ್ರಯತ್ನವನ್ನು ನಾವು ಮಾಡಬೇಕು.