ಮೈಸೂರ್ ಪಾಕ್ ತಿಂಡಿಯ ಹಿಂದೆ ಒಂದು ಕಥೆಯಿದೆ

ಮೈಸೂರ್ ಪಾಕ್ ತಿಂಡಿಯ ಹಿಂದೆ ಒಂದು ಕಥೆಯಿದೆ

LK   ¦    Oct 07, 2018 06:47:10 PM (IST)
ಮೈಸೂರ್ ಪಾಕ್ ತಿಂಡಿಯ ಹಿಂದೆ ಒಂದು ಕಥೆಯಿದೆ

ಇವತ್ತು ಬಹಳಷ್ಟು ತಿನಿಸುಗಳು ಅವುಗಳು ಎಲ್ಲಿ ಸೃಷ್ಠಿಯಾದವು ಎಂಬುದನ್ನು ತಿನಿಸಿನ ಹೆಸರಿನೊಂದಿಗೆ ಊರಿನ ಹೆಸರು ಸೇರ್ಪಡೆಯಾಗಿ ಎಲ್ಲರ ಗಮನಸೆಳೆಯುತ್ತಿವೆ. ಇಂತಹ ತಿನಿಸುಗಳಲ್ಲಿ ಮೈಸೂರ್ ಪಾಕ್ ಕೂಡ ಒಂದಾಗಿದೆ.

ಆಕಸ್ಮಿಕವಾಗಿ ತಯಾರಾದ ಪಾಕವೊಂದು ಮೈಸೂರು ಪಾಕವಾಗಿ ದೇಶ ವಿದೇಶಗಳ ಗಮನಸೆಳೆದಿದ್ದು ಇತಿಹಾಸ. ಇವತ್ತು ಮೈಸೂರು ಎಂದ ತಕ್ಷಣ ನೆನಪಾಗುವುದು, ನಮ್ಮ ಕಣ್ಣಮುಂದೆ ಬರುವುದು ಮೈಸೂರು ಪಾಕ್. ಇಂತಹ ಮೈಸೂರು ಪಾಕ್ ಮೈಸೂರು ರಾಜರ ಪಾಕ ಶಾಲೆಯಲ್ಲಿ ಸೃಷ್ಠಿಯಾದ ಕಥೆ ಮಾತ್ರ ರೋಚಕವಾಗಿದೆ.

ಮೈಸೂರ್ ಪಾಕ್ ನಂತಹ ಸಿಹಿ ತಿನಿಸನ್ನು ಅರಮನೆಯ ಪಾಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು ತಯಾರು ಮಾಡಿದವರು. ಇವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಬ್ದಾರಿ ವಹಿಸಿಕೊಂಡಿದ್ದರು.

ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರವನ್ನು ಇವರೇ ತಯಾರಿಸುತ್ತಿದ್ದರು. ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು.

ಮಹಾರಾಜರು ಹೇಳಿದ ಮೇಲೆ ಮುಗಿಯಿತು. ಮರು ಮಾತನಾಡುವ ಹಾಗಿಲ್ಲ. ಹೀಗಾಗಿ ಏನು ಹೊಸ ತಿಂಡಿ ತಯಾರಿಸುವುದು ಎಂದು ಅವರು ಆಲೋಚಿಸ ತೊಡಗಿದರು. ತಮಗೆ ತೋಚಿದ ತಿಂಡಿ ತಯಾರಿಸಲು ಕಾಕಾಸುರ ಮಾದಪ್ಪ ಮುಂದಾದರು. ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿಕೃಷ್ಣರಾಜಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿದರು.

ಆದರೆ ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಏನು ಹೆಸರು ಇಡುವುದೆಂದು ಮಹಾರಾಜರು ಆಲೋಚಿಸಿದರು. ಆಗ ಅವರಿಗೊಂದು ಯೋಚನೆ ಬಂದಿತು. ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ `ಮೈಸೂರು ಪಾಕ’ ಎಂದು ಹೆಸರಿಡೋಣ ಎಂದು ನಿರ್ಧರಿಸಿದರು. ಅವತ್ತಿನಿಂದಲೇ ಆ ತಿಂಡಿಯನ್ನು ಮೈಸೂರು ಪಾಕ ಎಂದು ಕರೆಯಲಾಯಿತು. ಮುಂದೆ ಅದು ಮೈಸೂರ್‍ಪಾಕ್ ಆಗಿ ಎಲ್ಲೆಡೆ ಗಮನಸೆಳೆಯುತ್ತಿದೆ.