ಬಿಪಿ ಸಮಸ್ಯೆ ಕಾಡುತ್ತಿದೆಯೇ ಭಯಪಡಬೇಡಿ...

ಬಿಪಿ ಸಮಸ್ಯೆ ಕಾಡುತ್ತಿದೆಯೇ ಭಯಪಡಬೇಡಿ...

LK   ¦    Oct 06, 2018 12:49:40 PM (IST)
ಬಿಪಿ ಸಮಸ್ಯೆ ಕಾಡುತ್ತಿದೆಯೇ ಭಯಪಡಬೇಡಿ...

ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರೂ ಸದಾ ಒತ್ತಡದ ಕೆಲಸದಲ್ಲಿ ತೊಡಗಿಸಿಕೊಂಡಿರುವ ಕಾರಣದಿಂದಾಗಿ ಹೆಚ್ಚಿನವರನ್ನು ಬ್ಲಡ್ ಪ್ರೆಷರ್ ಕಾಡುತ್ತಿದ್ದು ಇದು ಅವರ ಪಾಲಿಗೆ ಸಮಸ್ಯೆಯಾಗಿ ಪರಿಣಮಿಸತೊಡಗಿದೆ. ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೆ ಹೋದರೆ ಅಂತಹವರು ಮನೆಯಲ್ಲೂ, ಕೆಲಸ ಮಾಡುವ ಕಚೇರಿಗಳಲ್ಲಿಯೂ ಹತ್ತು ಹಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಬಿಪಿಯಿಂದ ಬಳಲುವವರು ಮಾನಸಿಕವಾಗಿ ಒಂದು ಕಡೆ ತೊಂದರೆ ಅನುಭವಿಸಿದರೆ ಮತ್ತೊಂದು ಕಡೆ ದೈಹಿಕವಾಗಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರಿಂದ ಸದಾ ಆರೋಗ್ಯದಿಂದ ಇರಲು ಸಾಧ್ಯವಾಗದ ಪರಿಸ್ಥಿತಿ ಹೆಚ್ಚಿನವರದ್ದಾಗಿದೆ. ಇಂತಹವರು ಏನು ಮಾಡಬೇಕು ಎಂಬುದನ್ನು ವೈದ್ಯರು ಹೇಳಿದ್ದಾರೆ.

ಇಷ್ಟಕ್ಕೂ ಕನ್ನಡದಲ್ಲಿ ಅಧಿಕ ರಕ್ತದೊತ್ತಡ ಎಂದು ಕರೆಯುವ ಇದನ್ನು ಹೈಪರ್ ಟೆನ್ಷನ್ ಎಂದು ಹೇಳಲಾಗುತ್ತದೆ. ದೇಹದ ಅಧಿಕ ತೂಕ, ಅತಿಯಾದ ಉಪ್ಪು ಸೇವನೆ, ಅನುವಂಶೀಯತೆ, ಮಾನಸಿಕ ಒತ್ತಡ, ಧೂಮಪಾನ, ಮದ್ಯಪಾನ, ದೈಹಿಕ ವ್ಯಾಯಾಮದ ಕೊರತೆಗಳು ಈ ಕಾಯಿಲೆ ಬರಲು ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರ ಬಗ್ಗೆ ನಾವೇನಾದರೂ ನಿರ್ಲಕ್ಷ್ಯ ವಹಿಸಿದರೆ ಮಾನಸಿಕ ಮತ್ತು ದೈಹಿಕವಾಗಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅತೀ ರಕ್ತದೊತ್ತಡ ಹೃದಯದ ಕಾಯಿಲೆಗೆ ಕಾರಣವಾಗುದಲ್ಲದೆ, ಮೆದುಳು ಮತ್ತು ಮೂತ್ರಪಿಂಡಗಳಿಗೂ ಮಾರಕವಾಗಲಿದೆ.

ಬಿಪಿ ನಿಯಂತ್ರಣ ಮಾಡಲು ನಾವು ನಮ್ಮ ದಿನಚರಿಯಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಮಾಡಬೇಕಾಗುತ್ತದೆ. ಬೆಳಗ್ಗಿನಿಂದ ರಾತ್ರಿವರೆಗೆ ನಮ್ಮ ಕೆಲಸ ಕಾರ್ಯಗಳು ಮತ್ತು ನಾವು ಸೇವಿಸುವ ಆಹಾರಗಳು ಎಲ್ಲದರ ಬಗ್ಗೆಯೂ ನಿಗಾವಹಿಸಬೇಕಾಗುತ್ತದೆ. ಮೊದಲಿಗೆ ಆಹಾರದಲ್ಲಿ ಅತಿಯಾದ ಉಪ್ಪು ಬಳಕೆಯನ್ನು ಕಡಿಮೆ ಮಾಡಬೇಕು, ಆ ನಂತರ ರಕ್ತದೊತ್ತಡಕ್ಕೆ ಮಾರಕವಾಗುವ ಪದಾರ್ಥಗಳನ್ನು ತ್ಯಜಿಸುವ, ವಾಕಿಂಗ್, ವ್ಯಾಯಾಮ ಮಾಡುವ ಮೂಲಕ ನಿಯಂತ್ರಣಕ್ಕೆ ತರುವ ಕೆಲಸವನ್ನು ಮಾಡಬೇಕು. ಇದು ಒಂದು ದಿನ ಮಾಡಿ ಬಿಡುವಂತಹದಲ್ಲ. ನಿತ್ಯವೂ ಮಾಡಲೇ ಬೇಕಾದ ಚಟುವಟಿಕೆಯಾಗಬೇಕು.

ಅತೀ ರಕ್ತದೊತ್ತಡ ಸಮಸ್ಯೆ ಇರುವವರು ದೇಹದ ತೂಕವನ್ನು ನಿಯಂತ್ರಿಸಬೇಕು. ಉಪ್ಪು ಸೇವನೆ ಕಡಿಮೆ ಮಾಡಬೇಕು. ಮದ್ಯಪಾನ, ಧೂಮಪಾನ ನಿಲ್ಲಿಸಬೇಕು. ಕೊಬ್ಬಿನ ಅಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸದೆ ಆದಷ್ಟು ಕಡಿಮೆ ಮಾಡಬೇಕು. ಪ್ರತಿ ದಿನ ಮುಂಜಾನೆ ವಾಕಿಂಗ್ ಸೇರಿದಂತೆ ದೈಹಿಕ ವ್ಯಾಯಾಮ ಮಾಡಬೇಕು, ಮಾನಸಿಕ ಒತ್ತಡಗಳಿಂದ ಮುಕ್ತರಾಗಲು ಪ್ರಶಾಂತ ಸ್ಥಳದಲ್ಲಿ ಒಂದಷ್ಟು ಸಮಯಗಳನ್ನು ಕಳೆಯಬೇಕು.

ಮನೆಯಲ್ಲಿಯೇ ತಯಾರಿಸಿದ ತಾಜಾ ಆಹಾರವನ್ನೇ ಸೇವಿಸಬೇಕು. ಹೊರಗಡೆ ಸಿಕ್ಕಿದ್ದನೆಲ್ಲ ತಿನ್ನುವ ಪ್ರವೃತ್ತಿ ಬಿಡಬೇಕು, ಅಕ್ಕಿ, ರಾಗಿ, ಗೋಧಿ, ಜೋಳದಂತಹ ಧಾನ್ಯಗಳನ್ನು ಮಿತವಾಗಿ ಸೇವಿಸಬೇಕು, ನಾರಿನಾಂಶ, ಜೀವಸತ್ವ, ಖನಿಜಾಂಶವುಳ್ಳ ಹಣ್ಣು ತರಕಾರಿಗಳನ್ನು ದಿನಕ್ಕೆ ಮುನ್ನೂರರಿಂದ ಐನೂರು ಗ್ರಾಂನಷ್ಟು ಮಾತ್ರ ಸೇವಿಸಬೇಕು. ಕ್ಯಾಲ್ಸಿಯಂ ಹೊಂದಿದ ಕಡಿಮೆ ಕೊಬ್ಬಿನಂಶವುಳ್ಳ ಹಾಲು, ಮೊಸರು ಚೀಸ್ ಸೇವಿಸಬಹುದು. ಇನ್ನು ಕೆನೆತೆಗೆದ 200 ರಿಂದ 300ಮಿ.ಲೀ ಹಾಲು ಮತ್ತು ಮೊಸರನ್ನು ಸೇವಿಸಬಹುದಾಗಿದೆ. ಇನ್ನು ಮಾಂಸಹಾರಿಗಳಾಗಿದ್ದರೆ, ಸುಮಾರು 50ರಿಂದ 100 ಗ್ರಾಂನಷ್ಟು ಚರ್ಮ ತೆಗೆದ ಕೋಳಿ ಮಾಂಸ ಮೀನು, ಮೊಟ್ಟೆಯ ಬಿಳಿಭಾಗವನ್ನು ಮಾಂಸಹಾರಿಗಳು ಸೇವಿಸಬಹುದು. ಕೊಬ್ಬಿಲ್ಲದ ಮಾಂಸವನ್ನು ಸೇವಿಸಬಹುದು. ಆದರೆ ಮಾಂಸವನ್ನು ಅಪರೂಪಕ್ಕೆ ಸೇವಿಸಿದರೆ ಇನ್ನೂ ಒಳ್ಳೆಯದು. ಹಣ್ಣು, ತರಕಾರಿ, ಬೇಳೆಯ ಸೂಪ್, ಎಳನೀರನ್ನು ಸೇವಿಸಲು ಅಡ್ಡಿಯಿಲ್ಲ.

ಕೊಬ್ಬಿನ ಅಂಶ ಅಧಿಕ ಪ್ರಮಾಣದಲ್ಲಿರುವ ಎಣ್ಣೆಗಳನ್ನು ವರ್ಜಿಸಬೇಕು. ಕೊಲೆಸ್ಟ್ರಾಲ್ ಕಡಿಮೆಯಿರುವ ಎಣ್ಣೆಯನ್ನು 2ರಿಂದ 3 ಟೀ ಚಮಚೆಯಷ್ಟು ಬಳಸುವುದು ಒಳ್ಳೆಯದು. ಕರಿದ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಬೇಕು. ಸಾಸ್, ಮಸಾಲ, ಚಾಟ್ ಸೇರಿದಂತೆ ಸಿದ್ಧ ಮಸಾಲೆಗಳನ್ನು ಸೇವಿಸಬಾರದು. ಉಪ್ಪಿನಿಂದ ಸಂಸ್ಕರಿಸಿದ ಚಿಪ್ಸ್, ಹಪ್ಪಳ, ಉಪ್ಪಿನಕಾಯಿ ಮೊದಲಾದ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ಅಡುಗೆ ಸೋಡಾ ಸೇರಿದಂತೆ ಸೋಡಾವಾಟರ್, ಪೆಪ್ಸಿ, ಕೋಲಾದಂತಹ ಜ್ಯೂಸ್‍ಗಳನ್ನು ಉಪಯೋಗಿಸದೆ ತಾಜಾ ಹಣ್ಣಿನ ಜ್ಯೂಸ್‍ಗಳಿಗೆ ಆದ್ಯತೆ ನೀಡಬೇಕು.

ಈಗಾಗಲೇ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಏನು ಸೇವಿಸಬೇಕು? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು? ಯಾವುದನ್ನು ಸೇವಿಸಬಾರದು? ಏಕೆ ಸೇವಿಸಬಾರದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಜತೆಗೆ ಅದರ ಬಗ್ಗೆ ಚಿಂತೆ ಮಾಡದೆ ಮಾಡಬೇಕಾದ ದಿನಚರಿಯನ್ನು ಮಾಡುತ್ತಿರಬೇಕು. ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಅಳವಡಿಸಿಕೊಂಡು ಆದಷ್ಟು ಮನಸ್ಸನ್ನು ಪ್ರಶಾಂತವಾಗಿಟ್ಟುಕೊಂಡರೆ ಒಳ್ಳೆಯದು.