ಜ್ವರದ ಬಗ್ಗೆ ಉದಾಸೀನ ಮಾಡಬೇಡಿ!

ಜ್ವರದ ಬಗ್ಗೆ ಉದಾಸೀನ ಮಾಡಬೇಡಿ!

LK   ¦    May 28, 2018 12:19:30 PM (IST)
ಜ್ವರದ ಬಗ್ಗೆ ಉದಾಸೀನ ಮಾಡಬೇಡಿ!

ಹಿಂದಿನ ಕಾಲದಿಂದಲೂ ಮಳೆಗಾಲ ಆರಂಭವಾಯಿತೆಂದರೆ ಜ್ವರ ಕಾಣಿಸಿಕೊಳ್ಳುವುದು ಮಾಮೂಲಿ. ಆಗ ಮಾತ್ರೆನೋ, ಕಸಾಯನೋ ಕುಡಿದರೆ ಜ್ವರ ಕಡಿಮೆಯಾಗಿ ಬಿಡುತ್ತಿತ್ತು.

ಈಗಲೂ ಅದೇ ರೀತಿ ಮಾತ್ರೆ ಸೇವಿಸುವುದು, ಕಸಾಯ ಕುಡಿಯುವುದು ಮಾಡಿದರೆ ಆ ವ್ಯಕ್ತಿಯ ಕಥೆ ಮುಗಿದಂತೆಯೇ. ಈಗ ಜನರಿಗೆ ಬರುತ್ತಿರುವ ಜ್ವರ ಸಾಮಾನ್ಯ ಜ್ವರವಲ್ಲ. ಅದು ಇದೀಗ ಸುದ್ದಿ ಮಾಡುತ್ತಿರುವ ನಿಫಾ ಇರಬಹುದು ಅಥವಾ ಡೆಂಗ್ಯೂ, ಚಿಕೂನ್ ಗುನ್ಯಾವೂ ಆಗಿರಬಹುದು. ಆದ್ದರಿಂದ ಜ್ವರನಾ ಎಂದು ಉದಾಸೀನವಾಗಿ ಕುಳಿತುಕೊಳ್ಳುವ ಮಾತೇ ಇಲ್ಲದಾಗಿದೆ.

ಇವತ್ತು ನಮ್ಮನ್ನು ಕಾಡುವ ಜ್ವರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಯೇ ಹೆಚ್ಚು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಜ್ವರ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿಯಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಯಾವ ಜ್ವರ ಎಂಬುದನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.

ಸಾಮಾನ್ಯವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯಾವುದಾದರೊಂದು ರೋಗಗಳು ಕಾಡುವುದು ಮಾಮೂಲಿಯಾಗಿದೆ. ಮುಂಗಾರು ಮಳೆ ಆರಂಭಕ್ಕೆ ಮೊದಲು ಜ್ವರಗಳು ಜನರನ್ನು ಕಾಡುವುತ್ತವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.

ನಮ್ಮ ಸುತ್ತಮುತ್ತಲ ವಾತಾವರಣ ಶುಚಿಯಾಗಿಲ್ಲದರಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಮಳೆ ಬಂದಾಗ ನೀರು ಹರಿದು ಹೋಗದೆ ಅಲ್ಲಲ್ಲಿ ನಿಂತು. ಆ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆಯಿಟ್ಟು ತಮ್ಮ ಸಂತಾನೋತ್ಪತ್ತಿ ಮಾಡಿ ಎಲ್ಲೆಡೆ ಸೊಳ್ಳೆಗಳು ಹರಡಿ ಅವು ಮನುಷ್ಯರಿಗೆ ಕಚ್ಚಿ ಕಾಯಿಲೆಗಳನ್ನು ಹರಡುತ್ತವೆ. ಡೆಂಗ್ಯೂ, ಚಿಕೂನ್ ಗುನ್ಯಾ ರೋಗಗಳು ಅಲ್ಲಲ್ಲಿ ಕಾಣಿಸಿಕೊಂಡು ಜನರ ಪ್ರಾಣ ತೆಗೆಯುತ್ತಿವೆ.

ಮನೆಯ ಸುತ್ತಮುತ್ತ ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳೇ ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಕ್ಕೆ ಕಾರಣ. ಅವುಗಳ ನಿರ್ಮೂಲನೆಗಾಗಿ ಫಾಗಿಂಗ್ ನಂತಹ ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಸೊಳ್ಳೆಗಳು ನಿರ್ಮೂಲನೆಯಾದರೂ ಅವುಗಳ ಮೊಟ್ಟೆ ಹಾಗೆ ಉಳಿದ ಪರಿಣಾಮ ಕಾಯಿಲೆ ನಿಯಂತ್ರಣ ಅಸಾಧ್ಯವಾಗಿದೆ.

ಇಷ್ಟಕ್ಕೂ ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ಜ್ವರದ ಬಗ್ಗೆ ಹೆಚ್ಚಿನವರಿಗೆ ಅರಿವೇ ಇಲ್ಲದಾಗಿದೆ. ಹೀಗಾಗಿ ಜ್ವರದ ನಿರ್ಲಕ್ಷ್ಯ ವಹಿಸಿ ಉಲ್ಭಣವಾದ ಬಳಿಕ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಸ್ವಚ್ಛತೆಯಿಲ್ಲದೆ ಅಶುಚಿತ್ವವಿರುವ ಸ್ಥಳಗಳಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡುವ ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುವ ಮೂಲಕ ರೋಗವನ್ನು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ.

ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗುಡ್ಡೆ ಹಿಂಭಾಗದಲ್ಲಿ ವಿಪರೀತ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಉಲ್ಭಣದ ತೀವ್ರ ಸ್ಥಿತಿಯಲ್ಲಿ ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆಯೂ ಅಲ್ಲಲ್ಲಿ ರಕ್ತ ಸ್ರಾವ ಡೆಂಗ್ಯೂನ ಲಕ್ಷಣವಾಗಿವೆ.

ಇನ್ನೂ ಚಿಕೂನ್ ಗುನ್ಯಾದಲ್ಲಿ ಸಾಧಾರಣದಿಂದ ತೀವ್ರ ಜ್ವರ, ಕಣ್ಣುಗಳು ಕೆಂಪಾಗುವಿಕೆ, ಸ್ನಾಯು ನೋವು, ಕೀಲುಗಳಲ್ಲಿ ಅಸಾಧ್ಯ ನೋವು, ಕೈಕಾಲು ಆಡಿಸಲು ಕಷ್ಟವಾಗುವುದು, ಜಡತ್ವ, ಕೀಲು ಬಾವು ಕಾಣಿಸಿಕೊಳ್ಳುತ್ತದೆ.

ಡೆಂಗ್ಯೂ ಮತ್ತು ಚಿಕೂನ್ ಗುನ್ಯಾ ರೋಗಕ್ಕೆ ತುತ್ತಾದ ರೋಗಿಗಳಿಗೆ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇಲ್ಲ ರೋಗದ ಲಕ್ಷಣಗಳಿಗನುಗುಣವಾಗಿ ವೈದ್ಯರು ಚಿಕಿತ್ಸೆ ನೀಡುತ್ತಾರೆ.

ಈಡಿಸ್ ಈಜಿಪ್ಟೈ ಸೊಳ್ಳೆಗಳು ರೋಗಗಳನ್ನು ಹರಡುವುದರಿಂದ ಅವುಗಳ ನಿಯಂತ್ರಣಕ್ಕೆ ಮುಂದಾಗಬೇಕು. ಸೊಳ್ಳೆಗಳು ನಿಂತ ನೀರಿನಲ್ಲಿ ತಮ್ಮ ಸಂತಾನೋತ್ಪತ್ತಿ ಮಾಡುವುದರಿಂದ ಮನೆಯ ಒಳಗೆ ಮತ್ತು ಹೊರಗೆ ನೀರನ್ನು ಶೇಖರಿಸುವ ಸಿಮೆಂಟ್ ತೊಟ್ಟಿ, ಮಣ್ಣಿನ ಮಡಿಕೆ, ಉಪಯೋಗಿಸದ ಒರಳುಕಲ್ಲು, ಏರ್ ಕೂಲರ್, ಹೂವಿನ ಕುಂಡಗಳು, ತಟ್ಟೆಗಳು, ಬಳಸದ ಟೈರ್ ಗಳು, ಎಳನೀರು ಚಿಪ್ಪುಗಳು, ಒಡೆದ ಬಾಟಲಿಗಳು, ಘನತ್ಯಾಜ್ಯವಸ್ತುಗಳು ಮುಂತಾದವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಮುಂಜಾಗ್ರತಾ ಕ್ರಮವಾಗಿ ಎಲ್ಲ ನೀರಿನ ತೊಟ್ಟಿಗಳು, ಡ್ರಮ್ ಗಳು, ಬ್ಯಾರೆಲ್ ಗಳು, ಏರ್ ಕೂಲರ್, ತೊಟ್ಟಿ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಚೆನ್ನಾಗಿ ತೊಳೆದು ಮತ್ತೆ ಉಪಯೋಗಿಸಬೇಕು. ಇನ್ನು ನೀರನ್ನು ಖಾಲಿ ಮಾಡಲು ಸಾಧ್ಯವಾಗದ ಡ್ರಮ್ ಗಳನ್ನು ಸೊಳ್ಳೆಗಳು ಒಳಹೋಗದಂತೆ ಭದ್ರವಾಗಿ ಮುಚ್ಚಬೇಕು.

ಬಯಲಿನಲ್ಲಿ ಎಸೆಯುವ ತ್ಯಾಜ್ಯ ವಸ್ತುಗಳಾದ ಎಳನೀರಿನ ಚಿಪ್ಪು, ಟೈರ್, ಮರದ ಪೊಟರೆ, ಹೂವಿನ ಕುಂಡ, ಬಾಟಲಿ ಮೊದಲಾದವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ ಅಂತಹವುಗಳನ್ನು ತೆರವುಗೊಳಿಸಬೇಕು.

ಸೊಳ್ಳೆ ನಿರೋಧಕ, ಸೊಳ್ಳೆಪರದೆ ಬಳಕೆ, ಮೈತುಂಬಾ ಬಟ್ಟೆ ಧರಿಸುವುದು ಹೀಗೆ ಹಲವು ಕ್ರಮಗಳಿಂದ ಸೊಳ್ಳೆಗಳು ಕಚ್ಚುವುದನ್ನು ತಪ್ಪಿಸಿಕೊಳ್ಳುವ ಮೂಲಕ ರೋಗ ಹರಡುವ ಸೊಳ್ಳೆಗಳಿಂದ ದೂರವಿರಲು ಸಾಧ್ಯವಾಗುತ್ತದೆ