ಬೇಸಿಗೆಯಲ್ಲಿ ಅನಾನಸ್ ಸೇವಿಸಿ ಆರೋಗ್ಯವಾಗಿರಿ

ಬೇಸಿಗೆಯಲ್ಲಿ ಅನಾನಸ್ ಸೇವಿಸಿ ಆರೋಗ್ಯವಾಗಿರಿ

LK   ¦    Apr 29, 2018 11:41:44 AM (IST)
ಬೇಸಿಗೆಯಲ್ಲಿ ಅನಾನಸ್ ಸೇವಿಸಿ ಆರೋಗ್ಯವಾಗಿರಿ

ಹಣ್ಣುಗಳು ಮನುಷ್ಯನ ಆರೋಗ್ಯದ ದೃಷ್ಠಿಯಿಂದ ಉಪಯೋಗಕಾರಿ ಹೀಗಾಗಿ ಬಾಯಿ ರುಚಿಗೆ ಬೇರೆ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುವ ಬದಲಿಗೆ ವಿವಿಧ ಹಣ್ಣುಗಳನ್ನು ಸೇವಿಸಿ ಆರೋಗ್ಯ ವೃದ್ಧಿ ಮಾಡಿಕೊಳ್ಳುವುದು ಉತ್ತಮ.

ಹಣ್ಣುಗಳನ್ನು ಬೇಸಿಗೆಯ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು. ಕಾರಣ ವಾತಾವರಣದ ಉಷ್ಣತೆಗೆ ದೇಹ ತಂಪನ್ನು ಬಯಸುತ್ತದೆ. ಈ ಸಂದರ್ಭ ಹಣ್ಣು ಸೇವನೆಯಿಂದ ದೇಹದ ಒಂದಷ್ಟು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ.

ಹಾಗೆ ನೋಡಿದರೆ ಹಣ್ಣು ಸೇವನೆ ಮಾಡುವ ಸಂದರ್ಭವೂ ಕೆಲವೊಂದು ವಿಷಯಗಳನ್ನು ಅರಿತುಕೊಳ್ಳಬೇಕು. ದೇಹಕ್ಕೆ ಒಗ್ಗುವ ಮತ್ತು ಅದರಲ್ಲಿರುವ ಆರೋಗ್ಯಕಾರಿ ಗುಣಗಳನ್ನು ತಿಳಿದುಕೊಂಡು ಸೇವಿಸಬೇಕಾಗುತ್ತದೆ. ದೇಹಕ್ಕೆ ಉಷ್ಣ ಹೆಚ್ಚಾದಾಗ ಉಷ್ಣ ಗುಣದ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಈ ಸಂದರ್ಭ ತಂಪು ಗುಣದ ಹಣ್ಣನ್ನು ಸೇವಿಸಬೇಕಾಗುತ್ತದೆ.

ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆಯಲ್ಲದೆ, ಇದೇ ಸಮಯದಲ್ಲಿ ಅದಕ್ಕೆ ಹೆಚ್ಚಿನ ಬೇಡಿಕೆಯೂ ಇರುತ್ತದೆ. ಹೆಚ್ಚು ಬೆಲೆಯಿಲ್ಲದ ನಮ್ಮ ಕೈಗೆಟುಕುವ ದರದಲ್ಲಿ ದೊರೆಯುವ ಹಣ್ಣುಗಳನ್ನು ನಾವು ಸೇವಿಸಬಹುದಾಗಿದೆ. ಇಂತಹ ಹಣ್ಣುಗಳ ಪೈಕಿ ಅನಾನಸ್ ಕೂಡ ಒಂದು. ಇದು ಎಲ್ಲ ಕಡೆಯೂ ಸಿಗುತ್ತದೆಯಲ್ಲದೆ, ಬೆಲೆಯೂ ಒಂದಷ್ಟು ಕಡಿಮೆಯಿರುತ್ತದೆ. ಹೀಗಾಗಿ ಇದನ್ನು ಎಲ್ಲ ವರ್ಗದ ಜನರು ಬಳಸಲು ಸಾಧ್ಯವಾಗಲಿದೆ.

ಅನಾನಸ್ ಹೆಚ್ಚು ತೇವಾಂಶ ಹೊಂದಿದ್ದು, ಬೇಸಿಗೆಯಲ್ಲಿ ಸೇವಿಸುವುದರಿಂದ ಒಂದಷ್ಟು ದಾಹವನ್ನು ನಿಗ್ರಹಿಸುವುದಲ್ಲದೆ, ಬಹಳಷ್ಟು ಪೋಷಕಾಂಶಗಳು ಇದರಲ್ಲಿ ಇರುವುದರಿಂದಾಗಿ ದೇಹಕ್ಕೆ ಪೋಷಕ ಶಕ್ತಿಯನ್ನು ಒದಗಿಸುತ್ತದೆ.

ನೂರು ಗ್ರಾಂ ಅನಾನಸ್ ಹಣ್ಣಿನಲ್ಲಿ 87.8 ಗ್ರಾಂ ತೇವಾಂಶವಿದೆಯಂತೆ. ಇನ್ನು ಇತರೆ ಪೋಷಕಾಂಶಗಳನ್ನು ನೋಡುವುದಾದರೆ ಸಸಾರಜನಕ 0.4 ಗ್ರಾಂ, ಮೇದಸ್ಸು 0.1 ಗ್ರಾಂ, ಖನಿಜಾಂಶ 0.4, ಕಾರ್ಬ್ರೋಹೈಡ್ರೇಟ್ 19.8 ಗ್ರಾಂ, ಕ್ಯಾಲ್ಸಿಯಂ 20 ಮಿ.ಗ್ರಾಂ, ಕಬ್ಬಿಣ 1.2 ಮಿ.ಗ್ರಾಂ, ರೋಬೋಪ್ಲಾವಿನ್ 0.12ಮಿ.ಗ್ರಾಂ, ಪಾಸ್ಪರಸ್ 9.0ಮಿ.ಗ್ರಾಂ, ಥಿಯಾಮಿನ್ 0.2ಮಿ.ಗ್ರಾಂ, ನಿಯಾಸಿನ್ 0.1 ಮಿ.ಗ್ರಾಂ ಮತ್ತು ಸಿ ಜೀವಸತ್ವ 39 ಮಿ.ಗ್ರಾಂ ಇದೆ ಎನ್ನಲಾಗಿದೆ.

ಇನ್ನು ಅನಾನಸ್ ಯಾವುದೆಲ್ಲ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂಬುದನ್ನು ನೋಡುವುದಾದರೆ ಉರಿಮೂತ್ರದಿಂದ ಬಳಲುವವರಿಗೆ ಇದು ಪ್ರಯೋಜನಕಾರಿಯಾಗಿದೆ. ಉರಿಮೂತ್ರದ ಸಮಸ್ಯೆ ಮತ್ತು ಸಮರ್ಪಕವಾಗಿ ಮೂತ್ರ ವಿಸರ್ಜನೆಯಾಗದ ಸಮಸ್ಯೆಯಿಂದ ಬಳಲುವವರು ಹಣ್ಣನ್ನು ಸೇವಿಸುತ್ತಾ ಬಂದರೆ ಸಮಸ್ಯೆಗೆ ಪರಿಹಾರ ಸಿಗಲಿದೆ.

ದೇಹಕ್ಕೆ ಸರಿಯಾದ ಜೀವಸತ್ವ ದೊರೆಯದೆ ವಸಡಿನ ರಕ್ತಸ್ರಾವದಿಂದ ಬಳಲುವವರಿಗೂ ಇದು ಪ್ರಯೋಜನಕಾರಿಯಾಗಿದೆ. ಯಕೃತ್ ತೊಂದರೆ, ಅಜೀರ್ಣದ ಸಮಸ್ಯೆಯನ್ನು ಅನುಭವಿಸುವವರು ಅನಾನಸ್ ಹಣ್ಣಿನ ರಸದೊಂದಿಗೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸಬೇಕು.

ಕಾಮಾಲೆ ರೋಗವನ್ನು ದೂರ ಮಾಡಬೇಕಾದರೆ ಅನಾನಸ್ ಹಣ್ಣನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಅದನ್ನು ಜೇನುತುಪ್ಪದಲ್ಲಿ ವಾರಗಳ ಕಾಲ ನೆನೆಸಿಟ್ಟು ದಿನಕ್ಕೆರಡು ಬಾರಿ ಸೇವಿಸಬಹುದಾಗಿದೆ.

ಇನ್ನು ಸಿಗರೇಟ್ ಸೇವಿಸುವುದರಿಂದಾಗುವ ತೊಂದರೆಗಳನ್ನು ಸರಿಪಡಿಸಲು ಅನಾನಸ್ ಹಣ್ಣು ಸಹಕಾರಿಯಾಗಿದೆ. ಅಷ್ಟೇ ಅಲ್ಲ ಗಂಟಲು ರೋಗಗಳಿಗೂ ಉತ್ತಮ ಔಷಧಿಯಾಗಿದೆ. ರಕ್ತ ಹೀನತೆ, ಹೊಟ್ಟೆತೊಳೆಸುವಿಕೆ, ತಲೆಸುತ್ತು ಮುಂತಾದ ಸಮಸ್ಯೆಗಳಿಗೂ ಇದು ರಾಮಬಾಣವಾಗಿದೆ.

ಹಣ್ಣಿನ ರಸವನ್ನು ಲೇಪನ ಮಾಡುವುದರಿಂದ ಕಜ್ಜಿತುರಿಕೆಯಂತಹ ಚರ್ಮರೋಗವು ನಿಯಂತ್ರಕ್ಕೆ ಬರಲಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಅನಾನಸ್ ಆರೋಗ್ಯದ ದೃಷ್ಠಿಯಿಂದ ಉತ್ತಮವಾಗಿದ್ದು, ಪ್ರತಿನಿತ್ಯ ಸೇವಿಸುವುದರಿಂದ ಒಂದಷ್ಟು ಆರೋಗ್ಯವನ್ನು ಹೊಂದಲು ಸಾಧ್ಯವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.