ಔಷಧೀಯ ಗುಣಗಳ ಅರಶಿನದ ಮಹತ್ವ ಗೊತ್ತಾ?

ಔಷಧೀಯ ಗುಣಗಳ ಅರಶಿನದ ಮಹತ್ವ ಗೊತ್ತಾ?

Feb 10, 2018 02:20:05 PM (IST)
ಔಷಧೀಯ ಗುಣಗಳ ಅರಶಿನದ ಮಹತ್ವ ಗೊತ್ತಾ?

ಮೊದಲೆಲ್ಲ ನಮ್ಮ ಮನೆಯ ಸುತ್ತಲೂ ಸಿಗುವ ಸೊಪ್ಪು, ತರಕಾರಿಗಳು, ಗಿಡಮೂಲಿಕೆಗಳನ್ನೇ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುತ್ತಿದ್ದೆವು. ಉದಾಹರಣೆಗೆ ನಮ್ಮ ಮನೆಯಲ್ಲಿರುತ್ತಿದ್ದ ಅರಶಿನ ಕೂಡ ಹಲವು ಸಂದರ್ಭಗಳಲ್ಲಿ ಔಷಧಿಯಾಗಿ ಬಳಕೆಯಾಗುತ್ತಿತ್ತು. ಇದರಲ್ಲಿರುವ ರೋಗ ನಿರೋಧಕ ಶಕ್ತಿಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತಿತ್ತು. ಆದ್ದರಿಂದ ಇದನ್ನು ಮನೆ ಮದ್ದಾಗಿ ಉಪಯೋಗಿಸುತ್ತಿದ್ದರು. ಇವತ್ತು ಹೆಚ್ಚಿನವರಿಗೆ ಅರಶಿನದಲ್ಲಿ ಏನೇನು ಗುಣಗಳಿವೆ ಎಂಬುದೇ ಗೊತ್ತಿಲ್ಲ.

ಹಾಗೆ ನೋಡಿದರೆ ಅರಶಿನದಲ್ಲಿ ಬಹಳಷ್ಟು ಔಷಧೀಯ ಗುಣಗಳಿರುವುದನ್ನು ನಾವು ಕಾಣಬಹುದು. ಅರಶಿನದಪುಡಿಯನ್ನು ಸಮಭಾಗ ಸುಣ್ಣದೊಂದಿಗೆ ಕೂಡಿಸಿ ಮಿಶ್ರಣವನ್ನು ಚೆನ್ನಾಗಿ ಅರೆದು ದಪ್ಪವಾಗಿ ಲೇಪಿಸಿ ಉಗುರಿಗೆ ಕಟ್ಟಿದರೆ ಉಗುರು ಸುತ್ತು ಗುಣ ಮುಖವಾಗುತ್ತದೆ.

ಚಳಿಗಾಲದಲ್ಲಿ ತುಟಿ, ಅಂಗೈ, ಅಂಗಾಲು ಸಾಮಾನ್ಯವಾಗಿ ಬಿರುಕು ಬಿಡುತ್ತದೆ. ಈ ಸಂದರ್ಭ ಅರಶಿನ ಗಂಧವನ್ನು ಹಾಲಿನ ಕೆನೆಯಲ್ಲಿ ಚೆನ್ನಾಗಿ ಮಿಶ್ರಮಾಡಿ ಬಿರುಕುಗಳಿಗೆ ಲೇಪಿಸಿದರೆ ಬಿರುಕುಗಳು ಮಾಯವಾಗುತ್ತವೆ. ಅರಶಿನದ ಚೂರ್ಣವನ್ನು ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯಲ್ಲಿ ಮಿಶ್ರಮಾಡಿ ಅಂಗಾಂಗಗಳಿಗೆ ಹಚ್ಚಿ ಚೆನ್ನಾಗಿ ಸ್ನಾನ ಮಾಡಿದ್ದೇ ಆದರೆ ಅಂಗಾಂಗಗಳ ನೋವು ನಿವಾರಣೆಯಾಗಿ ದೇಹಕ್ಕೆ ವಿಶ್ರಾಂತಿ ದೊರಕುವುದರೊಂದಿಗೆ ನಿದ್ದೆಯೂ ಚೆನ್ನಾಗಿ ಬರುತ್ತದೆ.

ಎಲೆಅಡಿಕೆ ತಿನ್ನುವಾಗ ಒಮ್ಮೊಮ್ಮೆ ಸುಣ್ಣ ಜಾಸ್ತಿಯಾಗಿ ನಾಲಿಗೆ ಬೆಂದು ಹೋದರೆ ಹಸಿ ಅರಶಿನದ ಕೊಂಬನ್ನು ನೀರಿನಲ್ಲಿ ತೇದು ನಾಲಿಗೆ ಮೇಲೆ ಬೆಂದ ಭಾಗಕ್ಕೆ ಲೇಪಿಸಬಹುದು. ಕೆಮ್ಮು, ನೆಗಡಿ, ಗಂಟಲು ನೋವು, ಕಾಣಿಸಿಕೊಂಡಾಗ ಬೆಳ್ಳುಳ್ಳಿ ಶುಂಠಿಯೊಂದಿಗೆ ಅರಶಿನದ ಪುಡಿಯನ್ನು ಸೇರಿಸಿ ಕುದಿಸಿದ ಹಾಲಿನೊಂದಿಗೆ ಮಲಗುವ ಮುನ್ನ ಸೇವಿಸಿದರೆ ನಿವಾರಣೆಯಾಗುತ್ತದೆ.

ಸ್ತ್ರೀಯರ ಮೈಯ್ಯಲ್ಲಿ ಅನಾವಶ್ಯಕ ಕೂದಲುಗಳಿದ್ದರೆ ಸ್ನಾನಕ್ಕೆ ಮುನ್ನ ಕೆನ್ನೆ, ಕೈಕಾಲುಗಳಿಗೆ ಅರಶಿನವನ್ನು ಹಚ್ಚಿ ಬಳಿಕ ಸ್ನಾನ ಮಾಡಿದರೆ ಕೂದಲು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ. ಜತೆಗೆ ಮೊಡವೆಗಳು ಕೂಡ ಮಾಯವಾಗುತ್ತವೆ. ಅರಶಿನದ ಬೇರಿನಲ್ಲಿ ಶೇ.5ರಷ್ಟು ವಿಮರ್ರಾಲ್ ಎಣ್ಣೆಯ ಅಂಶಗಳಿದ್ದು ಆಹಾರ ಪದಾರ್ಥಗಳಿಗೆ ರಂಗು ನೀಡುತ್ತದೆ.

ನಾವು ನಮ್ಮ ಸುತ್ತ ಇರುವ ಗಿಡಮೂಲಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಹೈಟೆಕ್ ಬದುಕಿಗೆ ಸಿದ್ಧವಸ್ತುಗಳಿಗೆ ಮಾರು ಹೋಗಿದ್ದೇವೆ ಅದರ ಪರಿಣಾಮ ಕಣ್ಣಿಗೆ ಅಂದ ಕಾಣುವ ಮತ್ತು ಬಾಯಿಗೆ ರುಚಿ ನೀಡುವ ಹಲವು ಆಹಾರಗಳು ನಮ್ಮ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದರ ಜೊತೆಗೆ ನಮ್ಮಲ್ಲಿ ಹಣವಿದ್ದರೆ ಎಲ್ಲವನ್ನು ಪಡೆದುಕೊಳ್ಳಬಹುದು ಎಂಬ ಕೆಟ್ಟ ಆಲೋಚನೆ ಬಂದು ಬಿಟ್ಟಿದೆ. ಹೀಗಾಗಿ ಹಣ ಸಂಪಾದನೆಯತ್ತಲೇ ನಮ್ಮ ಚಿತ್ತ. ಆರೋಗ್ಯವೇ ಭಾಗ್ಯ ಎಂಬ ಹಿಂದಿನವರ ಮಾತಿಗೆ ಕಿಮ್ಮತ್ತು ಇಲ್ಲದಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ನಮ್ಮ ಆಹಾರ ಕ್ರಮದಲ್ಲಾಗುತ್ತಿರುವ ಬದಲಾವಣೆ, ಅಲ್ಲದೆ ನಾವು ಸೇವಿಸುತ್ತಿರುವ ಹಣ್ಣು, ತರಕಾರಿ, ಧಾನ್ಯಗಳೊಂದಿಗೆ ದೇಹವನ್ನು ಸೇರುತ್ತಿರುವ ರಾಸಾಯನಿಕ ಪದಾರ್ಥಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಜತೆಗೆ ದೇಹಕ್ಕೆ ಬೇಕಾಗುವ ಪೋಷಕ ಶಕ್ತಿಗಳು ಸಮರ್ಪಕವಾಗಿ ಸಿಗದ ಕಾರಣ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ನಾವು ಒಂದಷ್ಟು ಗಿಡಮೂಲಿಕೆಗಳನ್ನು ಬಳಸಿಕೊಂಡು ಅದರಲ್ಲಿರುವ ಔಷಧೀಯ ಗುಣಗಳನ್ನು ಬಳಸಿಕೊಳ್ಳದೆ ಹೋದರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಹಿಂದಿನ ಕಾಲದವರು ಪ್ರತಿಯೊಂದು ಆಹಾರ ಪದಾರ್ಥದಲ್ಲಿಯೂ ಇರುವ ಆರೋಗ್ಯಕಾರಿ ಗುಣವನ್ನರಿತು ಅದನ್ನು ತಮ್ಮ ನಿತ್ಯದ ಬಳಕೆಯಲ್ಲಿ ಉಪಯೋಗಿಸುತ್ತಾ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ.