ದೇಹವನ್ನು ತಂಪಾಗಿಡುವ ಸೌತೆಕಾಯಿ!

ದೇಹವನ್ನು ತಂಪಾಗಿಡುವ ಸೌತೆಕಾಯಿ!

LK   ¦    May 16, 2018 01:17:42 PM (IST)
ದೇಹವನ್ನು ತಂಪಾಗಿಡುವ ಸೌತೆಕಾಯಿ!

ಬೇಸಿಗೆಯ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿಯನ್ನು ಸೇವಿಸುವುದನ್ನು ನಾವು ಕಾಣಬಹುದಾಗಿದೆ. ಇದರಲ್ಲಿ ನೀರಿನಾಂಶ ಹೆಚ್ಚಿರುವ ಕಾರಣ ದೇಹದ ದಾಹವನ್ನು ತಣಿಸಲು ಮತ್ತು ದೇಹವನ್ನು ತಂಪಾಗಿಡಲು ಇದು ಸಹಕಾರಿಯಾಗಿದೆ. ಸೌತೆಕಾಯಿಯನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆಯಾದರೂ ಬೇಸಿಗೆಯಲ್ಲಂತು ಇದನ್ನು ಹಸಿಯಾಗಿ ತಿನ್ನಲು ಹೆಚ್ಚಾಗಿ ಬಳಸುವುದು ಕಂಡು ಬರುತ್ತದೆ.

ಮಿಡಿ ಸೌತೆಯನ್ನು ತಿನ್ನಲೆಂದೇ ಬಳಸಲಾಗುತ್ತದೆ. ಉಳಿದಂತೆ ಮಲೆನಾಡುಗಳಲ್ಲಿ ದೊಡ್ಡಗಾತ್ರದ ಸೌತೆಕಾಯಿಯನ್ನು ಬೆಳೆಯಲಾಗುತ್ತದೆ. ಮಿಡಿಯಾಗಿದ್ದಾಗ ತಿನ್ನಲು, ಬೆಳೆದು ಹಣ್ಣಾದ ನಂತರದ ಇದನ್ನು ಮಳೆಗಾಲಕ್ಕೆ ತೆಗೆದಿಟ್ಟು, ಮಳೆಗಾಲದಲ್ಲಿ ಬಳಸುತ್ತಾರೆ. ಹಿಂದಿನ ಕಾಲದಲ್ಲಿ ಇದನ್ನು ಮನೆಗಳಲ್ಲಿ ಸಂಗ್ರಹಿಸಿಡುತ್ತಿದ್ದರಾದರೂ ಇದೀಗ ಅಪರೂಪವಾಗಿದೆ. ಆದರೆ ಈ ಸೌತೆಕಾಯಿ ಹಲವು ರೀತಿಯಲ್ಲಿ ಆರೋಗ್ಯಕಾರಿಯಾಗಿರುವುದರಿಂದ ಇದರ ಬಳಕೆ ಮಾಡಿದಷ್ಟು ನಮಗೆ ಅನುಕೂಲ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬೇಸಿಗೆ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸೌತೆಕಾಯಿ ದೇಹದಲ್ಲಿ ಉಷ್ಣಾಂಶವನ್ನು ತಗ್ಗಿಸುವುದಲ್ಲದೆ, ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಇದರ ರಸವನ್ನು ತೆಗೆದು ಮುಖ ಕೈಕಾಲು, ಚರ್ಮಕ್ಕೆ ಹಚ್ಚಿ ಕೆಲವು ಸಮಯ ಬಿಟ್ಟು ತೊಳೆಯುವುದರಿಂದ ಚರ್ಮದ ಸುಕ್ಕು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.

ಇನ್ನು ಅಜೀರ್ಣ ಸಮಸ್ಯೆಯಿಂದ ಬಳಲುವವರು ಸೌತೆಕಾಯಿಯನ್ನು ಆಹಾರದೊಂದಿಗೆ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಯನ್ನು ದೂರ ಮಾಡಬಹುದು. ಕೆಲವೊಮ್ಮೆ ಅಂಗಾಲುಗಳಲ್ಲಿ ಉರಿಕಾಣಿಸಿಕೊಳ್ಳುತ್ತದೆ. ಈ ವೇಳೆ ಸೌತೆಕಾಯಿಯ ತಿರುಳು ತೆಗೆದು ಅದರಿಂದ ಉಜ್ಜಿದರೆ ಶಮನವಾಗುತ್ತದೆ. ದೇಹದ ಉಷ್ಣದ ಕಾರಣಕ್ಕೆ ಮೂತ್ರ ಸಮರ್ಪಕವಾಗಿ ಹೋಗದೆ ತೊಂದರೆ ಅನುಭವಿಸುವವರು ಒಂದು ಬಟ್ಟಲು ಸೌತೆ ರಸದೊಂದಿಗೆ ಒಂದು ಚಮಚ ಜೇನು ತುಪ್ಪ ಹಾಗೂ ನಿಂಬೆ ರಸವನ್ನು ಹಾಕಿ ದಿನಕ್ಕೆರಡು ಬಾರಿ ಸೇವಿಸುತ್ತಾ ಬಂದರೆ ಮೂತ್ರ ವರ್ಧನೆಯಾಗಿ ಸಮಸ್ಯೆಗೆ ಪರಿಹಾರ ದೊರಕಲಿದೆ.

ಮುಖದಲ್ಲಿ ಕಪ್ಪಗಿನ ಕಲೆಗಳು ಇದ್ದರೆ ಸೌತೆಕಾಯಿ ಸಿಪ್ಪೆಯೊಂದಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನುಣ್ಣಗೆ ಅರೆದು ಅದನ್ನು ಲೇಪಿಸುತ್ತಾ ಬಂದರೆ ಕಲೆ ಮಾಯವಾಗುತ್ತದೆ. ಇದಲ್ಲದೆ ಸೌತೆಕಾಯಿಯ ತಿರುಳನ್ನು ಹಚ್ಚಿ ಅಂಗೈ ಮತ್ತು ಪಾದಗಳಿಗೆ ಮೃದುವಾಗಿ ಮಾಲೀಸ್ ಮಾಡಿದರೆ ದೇಹ ತಂಪಾಗಿ ನಿದ್ದೆ ಬರಲು ಸಾಧ್ಯವಾಗುತ್ತದೆ. ಸೌತೆಕಾಯಿಯನ್ನು ಚಕ್ರದಾಕಾರವಾಗಿ ಕತ್ತರಿಸಿ ಕಣ್ಣಿಗೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಇದರಲ್ಲಿ ಮೂತ್ರದ ಉರಿ ಶಮನಕಾರಿ ಗುಣ, ವೀರ್ಯ ಶುದ್ಧಿಕಾರಿ ಗುಣ ಹೊಂದಿದ್ದು, ಮಧುಮೇಹಿಗಳು ಕೂಡ ಸೇವಿಸಬಹುದಾಗಿದೆ.

ಸೌತೆಕಾಯಿ ಏಕೆ ಆರೋಗ್ಯಕಾರಿ ಎಂಬುದಕ್ಕೆ ಅದರಲ್ಲಿರುವ ಪೋಷಕಾಂಶವೇ ಸಾಕ್ಷಿಯಾಗಿದೆ. ಉದಾಹರಣೆಗೆ ನೂರುಗ್ರಾಂ ಸೌತೆಕಾಯಿನಲ್ಲಿರುವ ಪೋಷಕಾಂಶಗಳನ್ನು ಗಮನಿಸಿದರೆ ಅದರ ಮಹತ್ವ ನಮಗೆ ತಿಳಿಯಲಿದೆ.

ಶರ್ಕರಪಿಷ್ಠ 2.8ಗ್ರಾಂ, ಸಸಾರಜನಕ 0.4, ಕೊಬ್ಬು 0.56ಮಿ.ಗ್ರಾಂಮ ಸುಣ್ಣ 14.00, ರಂಜಕ 28.00, ಕಬ್ಬಿಣ 1.4, ನಯಾಸಿನ್ 0.4, ಸಿ ಜೀವಸತ್ವ 8.0, ಪೊಟ್ಯಾಷಿಯಂ 14.90, ಸೋಡಿಯಂ 7.0, ಬಿ ಜೀವಸತ್ವ 28.00, ಕ್ಲೋರಿನ್ 5.60, ಗಂಧಕ 5.90ಮಿ.ಗ್ರಾಂ ಇರುವುದನ್ನು ನಾವು ಕಾಣಬಹುದಾಗಿದೆ. ಒಟ್ಟಾರೆಯಾಗಿ ಸೌತೆ ಕಾಯಿ ಆರೋಗ್ಯಕ್ಕೆ ಹೇಳಿ ಮಾಡಿಸಿದ ತರಕಾರಿಯಾಗಿದ್ದು, ನಿತ್ಯದ ಆಹಾರ ಸೇವನೆಯಲ್ಲಿ ಇದನ್ನು ಬಳಸುತ್ತಾ ಬಂದಿದ್ದೇ ಆದರೆ ಆರೋಗ್ಯ ಕಾಪಾಡಿಕೊಳ್ಳಲು ನಮಗೆ ಸಾಧ್ಯವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.