ಮನುಷ್ಯನನ್ನು ಜೀವಂತವಾಗಿಯೇ ಕೊಲ್ಲುವ ಪಾರ್ಕಿಸನ್!

ಮನುಷ್ಯನನ್ನು ಜೀವಂತವಾಗಿಯೇ ಕೊಲ್ಲುವ ಪಾರ್ಕಿಸನ್!

LK   ¦    Dec 02, 2018 03:21:52 PM (IST)
ಮನುಷ್ಯನನ್ನು ಜೀವಂತವಾಗಿಯೇ ಕೊಲ್ಲುವ ಪಾರ್ಕಿಸನ್!

ಆಕಸ್ಮಿಕ ಸಂದರ್ಭಗಳನ್ನು ಹೊರತುಪಡಿಸಿ ಹೆಚ್ಚಿನ ಸಂದರ್ಭಗಳಲ್ಲಿ ಮನುಷ್ಯ ಕಾಯಿಲೆಯಿಂದಲೇ ಸಾಯುತ್ತಾನೆ. ಮೊದಲೆಲ್ಲ ಸಾವಿಗೆ ಮುಪ್ಪು ಸೂಚನೆಯಾಗಿರುತ್ತಿತ್ತು. ಆದರೆ ಈಗ ಹಾಗಿಲ್ಲ. ಯಾವಾಗ ಯಾವ ಕಾಯಿಲೆ ಅಡರಿಕೊಳ್ಳುತ್ತದೆಯೋ ಎಂದು ಹೇಳಲಾಗುವುದಿಲ್ಲ.

ಕೆಲವೊಮ್ಮೆ ಕಾಯಿಲೆ ನಮಗೆ ಬೇಗನೆ ಗೊತ್ತಾಗಿ ಅದಕ್ಕೆ ಚಿಕಿತ್ಸೆ ಪಡೆದುಕೊಂಡರೆ ಒಂದಷ್ಟು ಹೆಚ್ಚು ದಿನ ಬದುಕಲು ಸಾಧ್ಯವಾಗುತ್ತದೆ ಇಲ್ಲದೆ ಹೋದರೆ ಸಾವು ಬೆನ್ನ ಹಿಂದೆಯೇ ನಿಂತು ಬಿಡುತ್ತದೆ. ಇಷ್ಟಕ್ಕೂ ಕೆಲವು ಕಾಯಿಲೆಗಳು ಜೀವಂತ ಮನುಷ್ಯನನ್ನು ದೈಹಿಕ ಮತ್ತು ಮಾನಸಿಕವಾಗಿ ಕ್ಷಣಕ್ಷಣಕ್ಕೂ ಕೊಲ್ಲುತ್ತಲೇ ಇರುತ್ತದೆ. ಇಂತಹ ಕಾಯಿಲೆಗಳ ಪೈಕಿ ಪಾರ್ಕಿಸನ್ ಕೂಡ ಒಂದಾಗಿದೆ,

ಈ ರೋಗದಿಂದ ಬಳಲುವ ವ್ಯಕ್ತಿಗೆ ಆಹಾರ ನುಂಗಲು ಕಷ್ಟವಾಗುತ್ತದೆ, ಮಾತನಾಡುವ ಧ್ವನಿಯೂ ಕ್ಷೀಣಿಸುತ್ತದೆ. ನಿರಂತರ ನಡುಕ, ಹೆಜ್ಜೆ ಹಾಕಲು ಸಾಧ್ಯವಾಗದೆ ತನ್ನ ಚಲನೆಯನ್ನೇ ಕಳೆದುಕೊಳ್ಳುತ್ತಾನೆ. ಸಾಮಾನ್ಯವಾಗಿ ಇಂತಹ ಲಕ್ಷಣಗಳು ಕಂಡು ಬಂದಾಗ ವ್ಯಕ್ತಿ ಕುಗ್ಗಿ ಹೋಗುತ್ತಾನೆ. ಆಗಲೇ ಗೊತ್ತಾಗಿ ಬಿಡುತ್ತದೆ ಇದು ಪಾರ್ಕಿಸನ್ ರೋಗ ಎಂದು.

ಪಾರ್ಕಿಸನ್ ರೋಗವು ತಗುಲಿದರೆ ಮೊದಲಿಗೆ ಅದು ಮೆದುಳಿನ ನರಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಮೇಲ್ಮೋಟಕ್ಕೆ ವ್ಯಕ್ತಿ ಆರೋಗ್ಯವಂತನಂತೆ ಕಂಡು ಬಂದರೂ ಆತನ ಮುಖ್ಯ ಅಂಗವಾದ ನರಗಳ ಶಕ್ತಿಯನ್ನೇ ಕಳೆದುಕೊಂಡು ಬಿಡುತ್ತಾನೆ. ಇದರಿಂದ ದೇಹದ ಚಟುವಟಿಕೆ ಕುಗ್ಗಿ ಕ್ರಮೇಣ ಸಾವಿಗೆ ಶರಣಾಗುತ್ತಾನೆ.

ಪಾರ್ಕಿಸನ್ ರೋಗ ಆರಂಭದಲ್ಲೇ ಪತ್ತೆಯಾದರೆ ವೈದ್ಯರು ಚಿಕಿತ್ಸೆ ನೀಡುವ ಮೂಲಕ ನಿಯಂತ್ರಿಸಲು ಸಾಧ್ಯವಾಗುತ್ತದೆ. ಉಲ್ಭಣದ ಹಂತಕ್ಕೆ ಬಂದ ಬಳಿಕ ಚಿಕಿತ್ಸೆ ನೀಡಿದರೆ ಒಂದಷ್ಟು ಆಯುಷ್ಯವನ್ನು ಮುಂದಕ್ಕೆ ಹಾಕಬಹುದು ಬಿಟ್ಟರೆ ವ್ಯಕ್ತಿ ಮೊದಲಿನಂತೆ ಆರೋಗ್ಯವಾಗಿ ಬದುಕುವುದು ಕಷ್ಟಸಾಧ್ಯವಾಗುತ್ತದೆ.

ಪಾರ್ಕಿಸನ್ ರೋಗವನ್ನು ನಿಯಂತ್ರಣ ಮಾಡಬೇಕಾದರೆ ಒಂದಷ್ಟು ಆಹಾರ ಪದಾರ್ಥಗಳನ್ನು ತ್ಯಜಿಸುವುದು ಒಳ್ಳೆಯದು. ಈ ರೋಗದಿಂದ ಬಳಲುವ ರೋಗಿಗಳು ಮೊಟ್ಟೆಯನ್ನು ತಿನ್ನಬಾರದು. ಏಕೆಂದರೆ ಇದರಲ್ಲಿ ಪ್ರೊಟೀನ್ ಜಾಸ್ತಿಯಿದ್ದು, ಕಾಯಿಲೆಗೆ ನೀಡುವ ಲೆವೊಡೊಪಾ ಚಿಕಿತ್ಸೆಗೆ ಅಪಾಯಕಾರಿಯಾಗಿದೆಯಂತೆ. ಲೆವೊಡೊಪಾ ಮತ್ತು ಪ್ರೊಟೀನ್‍ಗಳು ಕರಳು ಮತ್ತು ಮೆದುಳಿನಲ್ಲಿ ಹೀರಲು ಸ್ಪರ್ಧಿಸುತ್ತವೆ. ಹೀಗಾಗಿ ಲೆವೊಡೊಪಾ ಚಿಕಿತ್ಸೆ ತೊಡಕಾಗುತ್ತದೆಯಂತೆ.

ಕೆಂಪು ಮಾಂಸದಲ್ಲಿ ಕಬ್ಬಿಣದ ಅಂಶ ಜಾಸ್ತಿಯಿರುತ್ತದೆ. ಈ ಕಬ್ಬಿಣದ ಅಂಶವು ಮೆದುಳಿನಲ್ಲಿ ಹೆಚ್ಚಾದಷ್ಟು ಆಕ್ಸಿಡೇಟಿವ್ ಅಪಾಯಗಳನ್ನುಂಟು ಮಾಡುತ್ತದೆ. ಹೀಗಾಗಿ ಮಾಂಸ ಸೇವನೆ ತ್ಯಜಿಸುವುದು ಒಳ್ಳೆಯದು. ಕೆಂಪು ಮಾಂಸದಂತೆ ಯಕೃತ್ ಕೂಡ ಅಪಾಯಕಾರಿ ಇದರಲ್ಲಿ ಕೊಲೆಸ್ಟ್ರಾಲ್, ಕಬ್ಬಿಣ, ಸತು, ತಾಮ್ರ ಎಲ್ಲವೂ ಇರುವುದರಿಂದ ಸೇವನೆಯನ್ನು ಬಿಟ್ಟು ಬಿಡಬೇಕು.

ಇನ್ನು ಹಾಲು, ಬೆಣ್ಣೆ, ಚೀಸ್ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಇದರ ಜೊತೆಗೆ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‍ಗಳನ್ನು ಕುಕೀಸ್ ಹೊಂದಿರುವುದರಿಂದ ಅದರ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು.

ಪಾರ್ಕಿಸನ್ ರೋಗಕ್ಕೆ ಪೋಷಕವಾಗುವ ಎಲೆಕೋಸು ಮತ್ತು ಹಸಿರೆಲೆ ತರಕಾರಿಗಳನ್ನು ಸೇವಿಸಬಾರದು. ಗೋಧಿ, ಶೆಲ್‍ಫಿಶ್, ಚಪ್ಪರದ ಅವರೆ, ಸಿಹಿತಿನಿಸುಗಳು, ಚಾಕೋಲೆಟ್‍ಗಳು ಕೂಡ ಅಪಾಯಕಾರಿ.

ಇನ್ನು ಕಾಫಿ ಸೇವನೆ ಒಳ್ಳೆಯದು. ಕಿತ್ತಳೆ ಹಣ್ಣು ಮತ್ತು ದಪ್ಪ ಮೆಣಸಿನಕಾಯಿ, ನಾರಿನ ಅಂಶ ಹೊಂದಿರುವ ಆರ್ಟಿಚೋಕ್ ತರಕಾರಿಗಳು ಬ್ಲೂಬೆರಿ, ಸ್ಟ್ರಾಬೆರಿ ಹಣ್ಣುಗಳು, ಒಣಹಣ್ಣುಗಳಾದ ವಾಲ್ನಟ್, ಬಾದಾಮಿ, ಗೋಡಂಬಿ, ಕಡಲೆಕಾಯಿಯನ್ನು ಸೇವಿಸಬಹುದಾಗಿದೆ.

ಈ ರೋಗ ತಗುಲಿದ ಬಳಿಕ ಒಂದಷ್ಟು ಪಥ್ಯದ ಆಹಾರ ಸೇವನೆ ಮತ್ತು ವೈದ್ಯಕೀಯ ಉಪಚಾರಗಳಿಂದ ಒಂದಷ್ಟು ದಿನ ಜೀವಿಸಬಹುದಷ್ಟೆ. ಸಂಪೂರ್ಣವಾಗಿ ಗುಣಪಡಿಸುವುದು ಅಸಾಧ್ಯ ಎನ್ನಲಾಗುತ್ತಿದೆ.