ಹುಟ್ಟು ಸಾವಿನ ನಡುವೆ ಒಳ್ಳೆಯ ಬದುಕು ಹೇಗೆ?

ಹುಟ್ಟು ಸಾವಿನ ನಡುವೆ ಒಳ್ಳೆಯ ಬದುಕು ಹೇಗೆ?

Nov 21, 2018 03:01:47 PM (IST)
ಹುಟ್ಟು ಸಾವಿನ ನಡುವೆ ಒಳ್ಳೆಯ ಬದುಕು ಹೇಗೆ?

ಹುಟ್ಟು ಅನಿರೀಕ್ಷಿತ, ಸಾವು ಖಚಿತ. ಇದು ಎಲ್ಲರಿಗೂ ತಿಳಿದಿದೆ. ಆದರೂ ಈ ಹುಟ್ಟು ಸಾವಿನ ನಡುವೆ ಇದ್ದಷ್ಟು ದಿನ ನಾವು ಆರೋಗ್ಯವಾಗಿರಲೇ ಬೇಕು. ಈ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಇವತ್ತಿನ ಕಲುಷಿತ ಬದುಕಿನಲ್ಲಿ ಹೆಚ್ಚಿನ ಆಹಾರ ಪದಾರ್ಥಗಳು ರಾಸಾಯನಿಕ ಯುಕ್ತವಾಗಿದ್ದರೆ, ಮತ್ತೆ ಕೆಲವು ಕಲಬೆರಕೆಗಳಾಗಿವೆ. ಹೀಗಿರುವಾಗ ತಮಗೆ ಬೇಕಾದ ಆಹಾರಗಳನ್ನು ಸೇವಿಸಿ ಆರೋಗ್ಯವಾಗಿರುವುದೇ ಒಂದು ದೊಡ್ಡ ಸಾಧನೆಯಾಗಿದೆ. ಇದರ ನಡುವೆ ನಾವು ಬೇರೆಯವರಿಗೆ ತೊಂದರೆ ನೀಡುತ್ತಾ ಬದುಕುವವರನ್ನು ಕೂಡ ಕಾಣಬಹುದಾಗಿದೆ.

ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿ ಜೀವಿ ಸಾಯಲೇ ಬೇಕು. ಇದು ಪ್ರಕೃತಿ ನಿಯಮ. ಹಾಗಿರುವಾಗ ಹುಟ್ಟು ಸಾವು ನಡುವಿನ ಅಂತರದಲ್ಲಿ ನಮ್ಮ ಬದುಕು ಹೇಗಿದ್ದರೆ ಚೆನ್ನ? ಎಂಬ ಬಗ್ಗೆ ಆಧ್ಯಾತ್ಮಿಕ ಚಿಂತಕರು ತಮ್ಮದೇ ಆದ ವ್ಯಾಖ್ಯಾನ ನೀಡುತ್ತಾರೆ.

ಇವತ್ತಿನದು ವೈಜ್ಞಾನಿಕ ಯುಗ ಹೀಗಾಗಿ ನಮ್ಮ ಆಲೋಚನೆಗಳೆಲ್ಲವೂ ವೈಜ್ಞಾನಿಕವಾಗಿಯೇ ಇದೆ. ಹಾಗೆಂದು ಸಾವನ್ನು ಗೆಲ್ಲಲು ಸಾಧ್ಯವೆ? ಖಂಡಿತಾ ಸಾಧ್ಯವಿಲ್ಲ. ಪ್ರತಿನಿತ್ಯ ಸಾಯುವವರನ್ನು ನೋಡುತ್ತಿರುತ್ತೇವೆ. ಸತ್ತವರ ಅಂತ್ಯಕ್ರಿಯೆಗಳಲ್ಲಿಯೂ ಪಾಲ್ಗೊಳ್ಳುತ್ತೇವೆ. ಬದುಕೆಂದರೆ ಇಷ್ಟೆ. ಇವತ್ತು ಅವನು ಸತ್ತ. ನಾಳೆ ನಾವು ಸಾಯುತ್ತೇವೆ ಎಂಬುವುದು ಮನಸ್ಸಿಗೆ ನಾಟುವುದೇ ಇಲ್ಲ. ನಮ್ಮ ಇವತ್ತಿನ ಬದುಕಿಗೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡುತ್ತೇವೆ. ಅದರಿಂದ ಮತ್ತೊಬ್ಬನ ಬದುಕಿಗೆ ತೊಂದರೆಯಾದರೂ ಪರ್ವಾಗಿಲ್ಲ. ನಾವು ಚೆನ್ನಾಗಿರಬೇಕೆಂಬ ಸಿದ್ಧಾಂತಕ್ಕೆ ನೇತುಕೊಳ್ಳುತ್ತೇವೆ. ಬಹುಶಃ ಈ ಮನೋಭಾವದ ಮಂದಿ ತಕ್ಷಣಕ್ಕೆ ಸುಖಿಗಳಂತೆ ಕಂಡರೂ ಒಳಗೊಳಗೆ ಯಾತನೆ ಅನುಭವಿಸುತ್ತಾರೆ. ಆಧ್ಯಾತ್ಮಿಕ ಚಿಂತಕರು ಸಾವಿನ ಬಗ್ಗೆ ಕುರಿತು ಹೀಗೆಯೇ ಹೇಳುತ್ತಾರೆ. ಸಾವಿನ ಬಗ್ಗೆ ಕುರಿತು ಚಿಂತನೆ ಮಾಡುವವರು ಪರಮಾತ್ಮನ ಸನಿಹವೇ ಇರುತ್ತಾರಂತೆ. ನಿಜ ಹೇಳಬೇಕೆಂದರೆ ಮನುಷ್ಯನ ಜೀವನ ಎಂಬುವುದು ನೀರ ಮೇಲಿನ ಗುಳ್ಳೆಯಂತೆ ಕ್ಷಣಿಕವಾದುದು. ಅದು ಚೆನ್ನಾಗಿ ಗೊತ್ತಿದ್ದರೂ ಇಂದ್ರಿಯಗಳ ಸುಖಗಳ ಬೆನ್ನೇರಿ ಹೋಗಿ ದುಃಖದಲ್ಲಿ ನರಳಾಡುತ್ತೇವೆ. ಇರುವಷ್ಟು ದಿವಸ ಸುಖವಾಗಿ ಬದುಕಲಾಗದೆ ದುಃಖದ ಮಡುವಿನಲ್ಲಿಯೇ ದಿನ ಕಳೆಯುತ್ತೇವೆ.

ಲೋಕ ಪರಿತ್ಯಾಗಿಯಾಗಿದ್ದ ಬುದ್ಧನ ಬಳಿಗೆ ಜೀವನದಲ್ಲಿ ವೈರಾಗ್ಯಗೊಂಡ ರಾಜ ಮಹಾರಾಜರು ಬರುತ್ತಿದ್ದರಂತೆ. ಈ ಸಂದರ್ಭ ಭಿಕ್ಷುಗಳಾಗಿ ಬಂದಂತಹ ಅವರನ್ನು ಬುದ್ಧನು ಸ್ಮಶಾನಕ್ಕೆ ಕಳುಹಿಸುತ್ತಿದ್ದನಂತೆ. ಅಲ್ಲಿಗೆ ಹೋದ ಭಿಕ್ಷುಗಳು ಹೆಣಸುಡುವವರನ್ನು ನೋಡುತ್ತಿದ್ದಂತೆ. ಹೀಗೆ ಅದನ್ನು ನೋಡುತ್ತಾ ನೋಡುತ್ತಾ ಅವರಲ್ಲಿ ಬದುಕೆಂದರೆ ಇಷ್ಟೆನಾ ಎಂಬ ಅರಿವು ಮೂಡುತ್ತಿತ್ತಂತೆ. ದೇಹದ ಮೂಳೆ, ಮಾಂಸಗಳೆಲ್ಲವೂ ಸುಟ್ಟು ಬೂದಿಯಾಗುತ್ತದೆ. ಹಾಗಿದ್ದ ಮೇಲೆ ಈ ಶರೀರ ಶಾಶ್ವತವಲ್ಲ. ಇದು ನಿಜವಾದ ಆನಂದ ನೀಡದು. ಹಾಗಾದರೆ ನಾವು ಸುಟ್ಟು ಬೂದಿಯಾದ ಮೇಲೂ ಇಲ್ಲಿಯೇ ನೆಲೆಸಬೇಕು. ಅದು ಹೇಗೆಂದರೆ ನಾವು ಇಲ್ಲಿರುವಷ್ಟು ದಿನ ಒಳ್ಳೆಯದನ್ನೇ ಮಾಡಬೇಕು. ಆ ಒಳ್ಳೆತನ ಜಗತ್ತಿನಿಂದ ಕಣ್ಮರೆಯಾದ ನಂತರವೂ ಮತ್ತೊಬ್ಬರಿಗೆ ಸಹಕಾರಿಯಾಗಬೇಕು ಎಂಬುವುದು ಅರಿವಿಗೆ ಬರುತ್ತಿತ್ತು.

ಹುಟ್ಟಿದ್ದೇವೆ ಎಂಬುವುದು ಎಷ್ಟು ಸತ್ಯವೋ ಸಾವು ಕೂಡ ಅಷ್ಟೇ ಸತ್ಯ. ಅದು ಈಗಲೋ.. ಆಗಲೋ ಯಾವ ಕ್ಷಣಕ್ಕೂ ಬರಬಹುದು. ಅದು ನಮ್ಮ ಸುತ್ತಲೂ ಸುತ್ತಾಡುತ್ತಲೇ ಇರುತ್ತದೆ. ಹೀಗಿರುವಾಗ ನಾವು ಮತ್ತೊಬ್ಬರಿಗೆ ಉಪಕಾರಿಯಾಗಿರಬೇಕೇ ವಿನಃ ಉಪದ್ರವಿಯಾಗಬಾರದು. ಹಿರಿಯರು ಹೇಳುತ್ತಾರೆ. ಸಾಧ್ಯವಾದರೆ ನೀನು ಉಪಕಾರ ಮಾಡು. ಇಲ್ಲಾಂದ್ರೆ ತೆಪ್ಪಗಿರು. ಆದರೆ ಉಪದ್ರವಿಯಂತು ಆಗಲೇ ಬೇಡ.

ಹುಟ್ಟು ಸಾವಿನ ನಡುವೆ ಅಲ್ಪ ಜೀವಿತಾವಧಿಯಲ್ಲಿ ಸಾಧ್ಯವಾದಷ್ಟು ಪರಮಾತ್ಮನ ದಯೆ, ಕರುಣೆ, ಸಹಾನುಭೂತಿ, ಪರೋಪಕಾರಗಳಲ್ಲಿ ಮನಸ್ಸನ್ನು, ದೇಹವನ್ನು ತೊಡಗಿಸಿಕೊಳ್ಳುವುದು ಒಳ್ಳೆಯದು. ಪರಮಾರ್ಥ ಸತ್ಯವನ್ನು ಅರಿಯುತ್ತಾ ಆಧ್ಯಾತ್ಮವನ್ನು ಬೆಳೆಸಿಕೊಳ್ಳುವುದು ಮನುಷ್ಯನ ಬುದ್ದಿವಂತಿಕೆ. ಅದು ಬಿಟ್ಟು ಲೌಕಿಕ ಸುಖಕ್ಕೋಸ್ಕರ ಜಂಜಾಟಗಳೊಂದಿಗೆ ಬಡಿದಾಡುತ್ತಾ ಬದುಕುವುದರಲ್ಲಿ ಪುರುಷಾರ್ಥವಿಲ್ಲ. ಯಾವ ಸಾಧನೆಯೂ ಅಲ್ಲ. ಮನುಷ್ಯ ಮನುಷ್ಯನ ಸಂಬಂಧಗಳನ್ನು ಅರಿತು ಮತ್ತೊಬ್ಬರಿಗೆ ತೊಂದರೆ ಮಾಡದೆ ಸಾಧ್ಯವಾದಷ್ಟು ಪರರ ಒಳಿತಿಗಾಗಿ ಸೇವೆ ಮಾಡುತ್ತಾ ಬದುಕುವುದೇ ಮಾನವ ಧರ್ಮ.