ಮಂಪ್ಸ್ ರೋಗಕ್ಕೆ ಭಯಪಡಬೇಕಾದ ಅಗತ್ಯವಿಲ್ಲ..!

ಮಂಪ್ಸ್ ರೋಗಕ್ಕೆ ಭಯಪಡಬೇಕಾದ ಅಗತ್ಯವಿಲ್ಲ..!

LK   ¦    Mar 29, 2019 03:20:36 PM (IST)
ಮಂಪ್ಸ್ ರೋಗಕ್ಕೆ ಭಯಪಡಬೇಕಾದ ಅಗತ್ಯವಿಲ್ಲ..!

ಮನುಷ್ಯರನ್ನು ಕಾಡುವ ಆರೋಗ್ಯದ ಸಮಸ್ಯೆಯಲ್ಲಿ ಮಂಪ್ಸ್ (ಗದ್ದಬಾವು) ಕೂಡ ಒಂದಾಗಿದ್ದು, ಇದರ ದಾಳಿಗೆ ಹಲವರು ತುತ್ತಾಗಿರುತ್ತಾರೆ. ಮಂಪ್ಸ್ ರೋಗದ ಲಕ್ಷಣ ಏನೆಂದರೆ ಮಂಪ್ಸ್ ರೋಗಕ್ಕೆ ತುತ್ತಾದ ವ್ಯಕ್ತಿಯ ಎರಡು ಕೆನ್ನೆಯ ಭಾಗಗಳು ಊದಿಕೊಳ್ಳುತ್ತವೆ. ಇದಕ್ಕೆ ಕಾರಣ ಕೆನ್ನೆಗಳ ಹಿಂಬದಿಯಲ್ಲಿ ಕಿವಿಗಳ ಸ್ವಲ್ಪ ಕೆಳಗಿರುವ ಪೆರೋಟಿಡ್ ಗ್ರಂಥಿಗಳೆಂಬ ಲಾಲಾ ಗ್ರಂಥಿಗಳ ಉರಿಯೂತದಿಂದಲೇ ಮಂಪ್ಸ್ ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಮಂಪ್ಸ್ ಬಂದರೆ ಅಂತಹ ವ್ಯಕ್ತಿಗಳು ಹಲವು ರೀತಿಯ ತೊಂದರೆಗಳನ್ನು ಅನುಭವಿಸುತ್ತಾರೆ. ದವಡೆಗಳನ್ನು ಆಡಿಸುವಾಗ ಅವರಿಗೆ ವಿಪರೀತ ನೋವುಂಟಾಗುತ್ತದೆ. ಜತೆಗೆ ಮಾತನಾಡಲು ಕೂಡ ಕಷ್ಟವಾಗುತ್ತದೆ. ಮಂಪ್ಸ್ ಇವತ್ತು ನಿನ್ನೆಯ ಕಾಯಿಲೆಯಲ್ಲ. ಇದು ಈ ಹಿಂದೆಯೇ ಇತ್ತು. ಹಿಂದಿನ ಕಾಲದಲ್ಲಿ ಈ ಕಾಯಿಲೆ ಕಾಣಿಸಿಕೊಂಡಾಗ ಹಳ್ಳಿಗಳಲ್ಲಿ ತಮ್ಮದೇ ಆದ ಮದ್ದುಗಳನ್ನು ಮಾಡುತ್ತಿದ್ದರು. ಜತೆಗೆ ಇದರ ಬಗ್ಗೆ ಹಲವು ಮೂಢನಂಬಿಕೆಗಳು ಇದ್ದಿದನ್ನು ಕೂಡ ಕಾಣಬಹುದಾಗಿದೆ.

ಆದರೆ ಆಧುನಿಕ ವೈದ್ಯಕೀಯ ವಲಯ ಇದಕ್ಕೆ ಹಲವು ರೀತಿಯ ಕಾರಣಗಳನ್ನು ಕಂಡು ಹಿಡಿದು ಅದನ್ನು ವಾಸಿ ಮಾಡುವ ಔಷಧಿಗಳನ್ನು ಕೂಡ ಕಂಡು ಹಿಡಿದಿದೆ. ಮಂಪ್ಸ್ ಪ್ಯಾರಾಮಿಕ್ಸೋವೈರಸ್‍ಗಳ ಗುಂಪಿಗೆ ಸೇರುವ ಮಿಕ್ಸೋವೈರಸ್ ಪೆರೋಟೈಟಿಡಿಸ್ ಎಂಬ ಚಿಕ್ಕ ವೈರಸ್ ನಿಂದ ಉಂಟಾಗುತ್ತದೆ. ಮಂಪ್ಸ್ ರೋಗದಿಂದ ಬಳಲುವ ವ್ಯಕ್ತಿಯು ಕೆಮ್ಮಿದಾಗ ಮತ್ತು ಸೀನಿದಾಗ ವೈರಸ್ ಆರೋಗ್ಯವಂತನ ದೇಹವನ್ನು ಪ್ರವೇಶಿಸುತ್ತದೆ. ಹೀಗೆ ಪ್ರವೇಶಿಸುವ ವೈರಸ್ ತಕ್ಷಣವೇ ತನ್ನ ಕ್ರಿಯೆ ಆರಂಭಿಸದೆ ಗಂಟಲಿನ ಹಿಂಬದಿಯಲ್ಲಿದ್ದುಕೊಂಡು ನಿಧಾನವಾಗಿ ತನ್ನ ಕೆಲಸ ಆರಂಭಿಸುತ್ತದೆ. ತನ್ನ ವಂಶಾಭಿವೃದ್ಧಿಯನ್ನು ಹೆಚ್ಚಿಸಿಕೊಂಡು ಬಳಿಕ ಪೆರೋಟಿಡ್ ಗ್ರಂಥಿಗಳನ್ನು ಆಕ್ರಮಿಸಿಸುತ್ತದೆ. ಇಲ್ಲಿಂದಲೇ ರೋಗದ ಲಕ್ಷಣಗಳು ಆರಂಭವಾಗುತ್ತವೆ. ಮೊದಲಿಗೆ ಲಘು ರೂಪದ ಜ್ವರ, ಗಂಟಲು ನೋವು, ಮೈನಡುಕ ಶುರುವಾಗುತ್ತದೆ. ಜತೆಯಲ್ಲಿಯೇ ಪೆರೋಟಿಡ್ ಗ್ರಂಥಿಯು ಊದಿಕೊಳ್ಳುತ್ತದೆ. ಇದರಿಂದ ಕಪಾಳ ಊದಿದಂತೆ ಕಾಣುತ್ತದೆ. ಇದರ ಊತ ಹೆಚ್ಚಾದರೂ ಬಳಿಕ ಆರೋಗ್ಯ ಸುಧಾರಿಸಿದಂತೆಲ್ಲ ಊತ ಕಡಿಮೆಯಾಗುತ್ತದೆ. ಜತೆಗೆ ದೇಹದಲ್ಲಿ ಏರಿಕೆಯಾಗಿದ್ದ ಉಷ್ಣಾಂಶವೂ ಇಳಿಮುಖವಾಗುತ್ತದೆ.

ಇನ್ನು ಮಂಪ್ಸ್ ಬಂತೆಂದು ಹೆದರಬೇಕಾದ ಅವಶ್ಯಕತೆಯಿಲ್ಲ. ಒಮ್ಮೆ ಮಂಪ್ಸ್ ಬಂತೆಂದರೆ ಮತ್ತೆ ಜೀವಿತಾವಧಿಯಲ್ಲಿ ಎಂದೂ ಬರೋದಿಲ್ಲವಂತೆ. ಈ ಕಾಯಿಲೆಗೆ ನಿಗದಿತವಾದ ಯಾವುದೇ ಚಿಕಿತ್ಸೆಯಿಲ್ಲ ಎನ್ನಲಾಗಿದ್ದು, ರೋಗದಿಂದ ಬಳಲುವ ರೋಗಿಗಳಿಗೆ ಸರಳವಾದ ನೋವು ನಿವಾರಕ ಔಷಧಿಗಳನ್ನು ನೀಡಲಾಗುತ್ತದೆ. ಇನ್ನು ಹಾಸಿಗೆಯಲ್ಲೇ ವಿಶ್ರಾಂತಿ ಪಡೆಯಬೇಕಾದ ಅವಶ್ಯಕತೆಯೂ ಇರುವುದಿಲ್ಲ. ದವಡೆಗಳು ಊತಗೊಳ್ಳುವುದರಿಂದ ಆಹಾರ ಸೇವಿಸಲು ಕಷ್ಟವಾಗುತ್ತದೆ. ಈ ವೇಳೆ ಮೃದುವಾದ ಆಹಾರ ಮತ್ತು ಪಾನೀಯಗಳನ್ನು ನೀಡಬಹುದು. ಇನ್ನು ಬ್ಯಾಕ್ಟೀರಿಯಾಗಳ ಸೋಂಕನ್ನು ತಡೆಗಟ್ಟುವ ಸಲುವಾಗಿ ತೆಳುವಾದ ಉಪ್ಪಿನ ನೀರಿನಿಂದ ಪದೇ ಪದೇ ಬಾಯನ್ನು ಮುಕ್ಕಳಿಸುವುದು ಒಳ್ಳೆಯದು.

ಒಟ್ಟಾರೆಯಾಗಿ ಹೇಳಬೇಕೆಂದರೆ ಮಂಪ್ಸ್ ಜೀವಹಾನಿಯ ರೋಗವಲ್ಲ. ಇದು ಆರೋಗ್ಯವಂತ ವ್ಯಕ್ತಿಯಲ್ಲಿ ಕಾಣಿಸಿಕೊಂಡ ತಕ್ಷಣ ಭಯಪಡಬೇಕಾಗಿಲ್ಲ. ವೈದ್ಯರಿಗೆ ತೋರಿಸಿ ಔಷಧೋಪಚಾರ ಮಾಡಿದರೆ ಗುಣವಾಗುತ್ತದೆ. ಅಷ್ಟೇ ಮಂಪ್ಸ್ ರೋಗವಿದ್ದ ವೇಳೆ ಊತಗೊಂಡಿದ್ದ ಕೆನ್ನೆ ಭಾಗವೂ ಕೂಡ ಕಾಯಿಲೆ ವಾಸಿಯಾಗುತ್ತಿದ್ದಂತೆ ಊತ ಕಡಿಮೆಯಾಗಿ ಮೊದಲಿಂತಾಗುತ್ತದೆ.