ಹೃದಯದ ಆರೋಗ್ಯಕ್ಕೆ ಪಂಚಸೂತ್ರಗಳು!

ಹೃದಯದ ಆರೋಗ್ಯಕ್ಕೆ ಪಂಚಸೂತ್ರಗಳು!

LK   ¦    Jan 04, 2018 04:39:45 PM (IST)
ಹೃದಯದ ಆರೋಗ್ಯಕ್ಕೆ ಪಂಚಸೂತ್ರಗಳು!

ಹೃದಯದ ಆರೋಗ್ಯ ಮುಖ್ಯವಾಗಿದ್ದು ಅದನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗಿದ್ದು, ಕೆಲವರು ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯದೆ ಹೃದಯಾಘಾತದಿಂದ ಸಾವಿಗೆ ಶರಣಾಗುತ್ತಿದ್ದಾರೆ.

ನಾವು ಆರೋಗ್ಯವಾಗಿರ ಬೇಕಾದರೆ ನಮ್ಮ ದೇಹದಲ್ಲಿರುವ ಪ್ರತಿಯೊಂದು ಅಂಗವೂ ಕಾರ್ಯನಿರ್ವಹಿಸಲೇಬೇಕು ಅದು ಸಮರ್ಪಕವಾಗಿದ್ದಾಗ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಹೃದಯವನ್ನು ಕಾಪಾಡಬೇಕಾದರೆ ಪಂಚಸೂತ್ರವನ್ನು ಅಳವಡಿಸಿಕೊಳ್ಳಿ ಎನ್ನುತ್ತಾರೆ ವೈದ್ಯರು. ಹಾಗಾದರೆ ಅದ್ಯಾವುದು ಪಂಚಸೂತ್ರ ಎಂಬ ಪ್ರಶ್ನೆಯೂ ನಿಮ್ಮಲ್ಲಿ ಮೂಡಬಹುದು ಅದು ಯಾವುದೆಂದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ, ಶರೀರದ ತೂಕ ಮತ್ತು ಸೊಂಟದ ಸುತ್ತಳತೆ, ಅತಿಯಾಸೆ ಈ ಐದು ಅಂಶಗಳನ್ನು ಕಡಿಮೆ ಮಾಡಿಕೊಳ್ಳುವುದೇ ಪಂಚಸೂತ್ರವಾಗಿದೆ. ಇದರೊಂದಿಗೆ ವ್ಯಾಯಾಮವೂ ಮುಖ್ಯ ಎನ್ನುತ್ತಾರೆ ಹೃದ್ರೋಗ ತಜ್ಞರು.

ಹಾಗೆನೋಡಿದರೆ ಬದಲಾದ ಜೀವನ ಶೈಲಿ, ಒತ್ತಡ, ವ್ಯಾಯಾಮ ಕೊರತೆ, ವಾಯು ಮಾಲಿನ್ಯ ಇತರೆ ಕಾರಣಗಳಿಂದ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣ ಕೆಲ ವಿಧಾನಗಳನ್ನು ಅನುಸರಿಸಿದರೆ ಹೃದಯ ಸಂಬಂಧಿ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಹೃದಯಾಘಾತ ಪ್ರಮಾಣ ಶೇ.6ರಷ್ಟು ನಗರ ಪ್ರದೇಶದಲ್ಲಿ ಶೇ.8ರಿಂದ ಶೇ.10ರಷ್ಟು ಹೆಚ್ಚಳವಾಗುತ್ತಿದೆ. ಹಿಂದೆಲ್ಲಾ ಹೆಂಗಸರಲ್ಲಿ 50 ವರ್ಷದೊಳಗೆ ಹೃದಯಾಘಾತ ಇತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಸಂಸಾರದ ಒತ್ತಡ, ವೃತ್ತಿಯ ಒತ್ತಡ, ಮಕ್ಕಳನ್ನು ನೋಡಿಕೊಳ್ಳುವ ಒತ್ತಡ, ಹಾರ್ಮೋನ್ ಅಸಮತೋಲನದಿಂದ ಒತ್ತಡ ಹೆಚ್ಚುತ್ತಿದೆ. 40ವರ್ಷ ಮೀರಿದ ಬಳಿಕ ಗಂಡಸರು 45ವರ್ಷ ಮೀರಿದ ಬಳಿಕ ಮಹಿಳೆಯರು ನಿಯಮಿತವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ ಪರೀಕ್ಷೆ, ಥ್ರೆಡ್ಮಿಲ್ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ, ಪ್ರತಿ ಬಾರಿ ಸಾಮಾನ್ಯ ಸ್ಥಿತಿಯಲ್ಲಿದ್ದರೆ 2ವರ್ಷಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬಹುದು.

ಹೃದಯಘಾತವಾದಾಗ ಸಾಮಾನ್ಯವಾಗಿ ಎದೆಯ ಎಡಭಾಗ, ಮಧ್ಯಭಾಗದಲ್ಲಿ ನೋವು, ಉರಿ ಕಾಣಿಸಿಕೊಳುತ್ತದೆ. ಶೇ.30ರಿಂದ 40ರಷ್ಟು ಮಂದಿಗೆ ಹೃದಯಘಾತವಾದಾಗ ಎದೆಭಾಗದಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಗಂಟಲು, ದವಡೆ ನೋವು ಕಾಣಿಸಿಕೊಳ್ಳಬಹುದು, ಬೆನ್ನಿನ ಮೇಲ್ಭಾಗ, ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡು ವಾಂತಿಯಾಗಬಹುದು, ಅತಿಯಾಗಿ ಬೆವರು ಬರಬಹುದು, ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ನಿರ್ಲಕ್ಷಿಸಿದರೆ ಸಾವಿನ ಅಪಾಯವಿರುತ್ತದೆ. ಹೃದಯಘಾತವಾದ ತಕ್ಷಣ ರೋಗಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಇದಕ್ಕೆ ಎರಡು ರೀತಿಯ ಚಿಕಿತ್ಸೆ ಇದೆ. ರಕ್ತನಾಳದಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ಮೆಡಿಸಿನ್ ನೀಡಬೇಕು. ನಂತರ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಬೇಕಾಗುತ್ತದೆ.

ಈ ಹಿಂದೆ ಸಾಂಕ್ರಾಮಿಕ ರೋಗಗಳ ಪ್ರಮಾಣ ಹೆಚ್ಚಿತ್ತು. ಬದಲಾದ ಕಾಲಘಟ್ಟದಲ್ಲಿ ಸಾಂಕ್ರಾಮಿಕ ಮತ್ತು ಸಾಂಕ್ರಮಿಕವಲ್ಲದ ರೋಗಗಳು ಸಮ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ದೇಶದಲ್ಲಿ ಸಂಭವಿಸುವ ಸಾವಿನಲ್ಲಿ ಶೇ.50ರಷ್ಟು ಮಂದಿ ಸಾಂಕ್ರಮಿಕವಲ್ಲದ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಪ್ರಮುಖವಾಗಿ ಸಾಂಕ್ರಾಮಿಕವಲ್ಲದ ಹೃದಯಘಾತ ಮತ್ತು ಹೃದಯ ಸಂಬಂಧಿ ಸಮಸ್ಯೆ, ಮಧುಮೇಹ, ಪಾಶ್ರ್ವವಾಯು, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ರೋಗಕ್ಕೆ ಶೇ.50ರಷ್ಟು ಮಂದಿ ಬಲಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಪ್ರಮಾಣ ಹೆಚ್ಚಾಗುತ್ತಿದ್ದು, ಇವೆರಡು ಒಂದು ನಾಣ್ಯದ ಎರಡು ಮುಖ ಎಂಬಾಂತಾಗಿದೆ.

ಮಧುಮೇಹದಿಂದ ಬಳಲುತ್ತಿರುವವರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಶೇ.5ರಷ್ಟು ಹೆಚ್ಚು ಇರುತ್ತದೆ. ಹಿಂದೆಲ್ಲಾ ಮಕ್ಕಳು ತಂದೆ- ತಾಯಿಯನ್ನು ಚಿಕಿತ್ಸೆಗೆ ಕರೆ ತರುತ್ತಿದ್ದರು. ಆದರೆ ಇಂದು ತಂದೆ-ತಾಯಿಗಳು ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದು, ಶೇ.25ರಷ್ಟು ಸಾವುಗಳು ಹೃದಯ ಸಂಬಂಧಿ ಸಮಸ್ಯೆಗಳಿಂದ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ ಸುಮಾರು 30-40ರ ವಯೋಮಾನದವರಲ್ಲಿ ಕಂಡು ಬರುತ್ತಿರುವುದು ಆತಂಕಕಾರಿಯಾಗಿದೆ