ಮಳೆ ಕೊರತೆ : ಕೊಡಗಿನಲ್ಲಿ ಸಾಂಕ್ರಾಮಿಕ ರೋಗ ಭೀತಿ

ಮಳೆ ಕೊರತೆ : ಕೊಡಗಿನಲ್ಲಿ ಸಾಂಕ್ರಾಮಿಕ ರೋಗ ಭೀತಿ

CI   ¦    Aug 10, 2017 05:50:12 PM (IST)
ಮಳೆ ಕೊರತೆ : ಕೊಡಗಿನಲ್ಲಿ ಸಾಂಕ್ರಾಮಿಕ ರೋಗ ಭೀತಿ

ಮಡಿಕೇರಿ: ರಾಜ್ಯದೆಲ್ಲೆಡೆ ಬರದ ಛಾಯೆ ಮೂಡಿರುವಂತೆ ಕಾವೇರಿ ನಾಡು ಕೊಡಗು ಜಿಲ್ಲೆಯಲ್ಲೂ ಮಳೆ ಕೊರತೆ ಎದುರಾಗಿದ್ದು, ನಿರೀಕ್ಷಿತ ಮುಂಗಾರಿನ ಆಗಮನವಾಗದೆ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಭೀತಿಯೂ ಕಾಡುತ್ತಿದೆ.ಡೆಂಗ್ಯೂ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ವೈರಾಣುವಿನಿಂದ ಬರುವ ಕಾಯಿಲೆಗಳಾಗಿದ್ದು, ಇವುಗಳು ಈಡಿಸ್ ಜಾತಿಯ ಸೊಳ್ಳೆಗಳಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಕೊಡಗಿನಲ್ಲಿ ವಾಡಿಕೆಯಂತೆ ಧಾರಾಕಾರ ಮಳೆಯಾಗಿದ್ದರೆ ಅಶುಚಿತ್ವದ ವಾತಾವರಣಕ್ಕೆ ಅವಕಾಶವಿರುತ್ತಿರಲಿಲ್ಲ. ಅಲ್ಲದೆ ಕೊಳಚೆ ನೀರು ಕೊಚ್ಚಿ ಹೋಗುವುದರಿಂದ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿರಲಿಲ್ಲ.ಆದರೆ, ಕಳೆದ ವರ್ಷದಂತೆ ಈ ಬಾರಿಯೂ ಮಳೆಯ ಕೊರತೆ ಉಂಟಾಗಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಕಸ ವಿಲೇವಾರಿಯ ಸಮಸ್ಯೆಯೂ ಕಾಡುತ್ತಿದ್ದು, ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರ ಪ್ರದೇಶದಲ್ಲಿ ಅಲ್ಲಲ್ಲಿ ಅಶುಚಿತ್ವದ ವಾತಾವರಣ ಕಂಡು ಬಂದಿದೆ.

ಕೊಳೆತು ನಾರುತ್ತಿರುವ ತ್ಯಾಜ್ಯದಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಮಳೆಯ ಪ್ರಮಾಣ ಕಡಿಮೆಯಾಗಿರುವುದು ಮತ್ತು ಬಿಸಿಲಿನ ವಾತಾವರಣ ಸೊಳ್ಳೆಗಳ ವಂಶಾಭಿವೃದ್ಧಿಗೆ ಸಹಕಾರಿಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಕಂಡು ಬರಲು ಕಾರಣವಾಗಿದೆ.ಈ ವರ್ಷ ಜನವರಿ 1 ರಿಂದ ಜುಲೈ 31 ರವರೆಗೆ 619 ಶಂಕಿತ ಡೆಂಗ್ಯೂ ಪ್ರಕರಣಗಳಲ್ಲಿ 155 ಪ್ರಕರಣಗಳು ರಕ್ತದ ಮಾದರಿ ಪರೀಕ್ಷೆಯಿಂದ ದೃಢಪಟ್ಟಿದೆ. ಇವುಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಮೂಲಕ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖಾ ಪ್ರಬಾರ ಅಧಿಕಾರಿ ಡಾ| ಎಂ.ಶಿವಕುಮಾರ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ವರ್ಷದ ಆರಂಭದಿಂದ ಜುಲೈ ಅಂತ್ಯದವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ 124 ಶಂಕಿತ ಚಿಕೂನ್ ಗುನ್ಯ ರೋಗಿಗಳ ರಕ್ತ ಪರೀಕ್ಷೆ ಮಾಡಲಾಗಿದೆ. ಆದರೆ ಯಾವುದೇ ಪ್ರಕರಣಗಳು ದೃಢಪಟ್ಟಿಲ್ಲ.

ಮಡಿಕೇರಿ ತಾಲ್ಲೂಕು ಒಂದರಲ್ಲಿಯೆ ಒಟ್ಟು 18 ಇಲಿ ಜ್ವರ ಮತ್ತು 83 ಹೆಪಟೈಟಿಸ್-ಎ ಪ್ರಕರಣಗಳು ಪತ್ತೆಯಾಗಿದೆ. ಮಲೇರಿಯ ಕೇವಲ ಒಂದು ಪ್ರಕರಣವಷ್ಟೆ ದಾಖಲಾಗಿದ್ದರೂ ಜಿಲ್ಲೆಯ ಅನೇಕ ಭಾಗಗಳಲ್ಲಿ ಸಾಮಾನ್ಯ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚೇ ಇದೆ.ಜಿಲ್ಲೆಯ ಹೆಬ್ಬಾಗಿಲು ಎನಿಸಿಕೊಂಡಿರುವ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದಲ್ಲಿ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗ ಬಾಧೆ ಒಂದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಜನಜಾಗೃತಿ ಕಾರ್ಯಕ್ರಮಗಳೊಂದಿಗೆ ಸೊಳ್ಳೆಗಳ ವಂಶಾಭಿವೃದ್ಧಿಯನ್ನು ತಡೆಗಟ್ಟುವ 'ಫಾಗಿಂಗ್' ಕಾರ್ಯವನ್ನು ವ್ಯಾಪಕವಾಗಿ ನಡೆಸುತ್ತಿರುವುದಾಗಿ ಡಾ| ಶಿವಕುಮಾರ್ ತಿಳಿಸಿದ್ದಾರೆ.'ಪ್ಲೇಟ್ಲೆಟ್'ಗಳು ದೊರಕದ ಆತಂಕ ::: ಡೆಂಗ್ಯೂವಿನಲ್ಲಿ ಡೆಂಗಿ ಜ್ವರ(ಸಾಮಾನ್ಯ), ಡೆಂಗ್ಯೂ ರಕ್ತಸ್ರಾವ ಜ್ವರ(ಡಿಹೆಚ್ಎಸ್) ಮತ್ತು ಡೆಂಗ್ಯೂ ಆಘಾತಕರ ಸ್ವರೂಪ(ಡಿಎಸ್ಎಸ್) ಎನ್ನುವ ಮೂರು ವಿಧಗಳಿವೆ. ಗಂಭೀರ ಸ್ವರೂಪದ ಡೆಂಗ್ಯೂವಿನಲ್ಲಿ ರೋಗಿಯ ರಕ್ತದ 'ಪ್ಲೇಟ್ಲೆಟ್'ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತದೆ. ಈ ಸಂದರ್ಭ ರೋಗಿಗೆ 'ಪ್ಲೇಟ್ ಲೆಟ್'ಗಳನ್ನು ಒದಗಿಸುವುದು ಅನಿವಾರ್ಯ. ಆದರೆ, ಕೊಡಗು ಜಿಲ್ಲಾ ಕೇಂದ್ರದಲ್ಲಿ ರಕ್ತ ನಿಧಿ ಕೇಂದ್ರವಿದೆಯೇ ಹೊರತು. ಪ್ರತ್ಯೇಕವಾಗಿ ಪ್ಲೇಟ್ ಲೆಟ್ಗಳನ್ನು ನೀಡುವುದಕ್ಕೆ ಅನುಕೂಲವಾಗುವ 'ಬ್ಲಡ್ ಕಾಂಪೋನೆಂಟ್ ಕೇಂದ್ರ' ಇಲ್ಲದಿರುವುದು ದೊಡ್ಡ ಕೊರತೆಯಾಗಿ ಕಾಡಿದೆ. ಯಾವುದೇ ರೋಗಿಗೆ ಪ್ಲೇಟ್ ಲೆಟ್ಗಳು ಬೇಕೆಂದಾದಲ್ಲಿ ಅಂದಾಜು 3 ಗಂಟೆ ಪ್ರಯಾಣದ ದೂರವಿರುವ ಮೈಸೂರು ಇಲ್ಲವೆ ನಾಲ್ಕು ಗಂಟೆ ಪ್ರಯಾಣದ ಮಂಗಳೂರಿಗೆ ತೆರಳುವುದು ಅನಿವಾರ್ಯವಾಗಿದೆ.


ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಹೈಟೆಕ್ ವ್ಯವಸ್ಥೆಗಳಿದ್ದರೂ ತಾಂತ್ರಿಕ ಸಿಬ್ಬಂದಿಗಳ ಕೊರತೆ ಇದೆ. ರೋಗಿಗಳು ಯಾವ ರೋಗದಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಸಕಾಲದಲ್ಲಿ ಖಾತ್ರಿಯಾಗದೆ ರೋಗ ಉಲ್ಬಣಗೊಂಡ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗಳಿಗೆ ತೆರಳಬೇಕಾದ ದುಸ್ಥಿತಿ ಇದೆ. ಪ್ರವಾಸಿಗರ ಬಗ್ಗೆಯೂ ಜಾಗೃತಿ ಅಗತ್ಯ ಮಳೆಯ ಕೊರತೆಯಿಂದಾಗಿ ರಾಜ್ಯದ ವಿವಿಧೆಡೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಡೆಂಗ್ಯೂವಿನಿಂದಾಗಿ ಸಾವುಗಳೂ ಸಂಭವಿಸುತ್ತಿದೆ. ಇತ್ತೀಚೆಗೆ ಚೆನ್ನೈಗೆ ತೆರಳಿದ್ದ ಮಡಿಕೇರಿಯ ವರ್ತಕರೊಬ್ಬರು ಮರಳಿದ ನಂತರ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಮೃತ ಪಟ್ಟಿದ್ದಾರೆ. ಪರ ಊರುಗಳಿಗೆ ತೆರಳುವವರಿಗೆ ಅನಾರೋಗ್ಯ ಕಾಡಿದರೆ ನಿರ್ಲಕ್ಷ್ಯ ತೋರದೆ ತಕ್ಷಣ ಚಿಕಿತ್ಸೆ ಪಡೆಯುವುದು ಸೂಕ್ತವೆಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಯನ್ನು ಕಂಡಿರುವ ಕೊಡಗು ಜಿಲ್ಲೆಗೆ ದೇಶ, ವಿದೇಶಗಳಿಂದ ಪ್ರತಿ ದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಸಾಂಕ್ರಾಮಿಕ ರೋಗ ಭೀತಿಯ ಕುರಿತು ಪ್ರವಾಸಿಗರಿಗೂ ಜಾಗೃತಿ ಮೂಡಿಸುವ ಅಗತ್ಯವಿದೆ, ಮಾತ್ರವಲ್ಲ ಸ್ಥಳೀಯರು ಕೂಡ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಹೋಂ ಸ್ಟೇ, ಲಾಡ್ಜ್, ರೆಸಾಟರ್್, ಹೊಟೇಲ್ಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಹೊಟೇಲ್ಗಳ ಸುತ್ತಮುತ್ತ ಹಾಗೂ ರಸ್ತೆ ಬದಿಯಲ್ಲಿ ಆಹಾರ ಮಾರಾಟದ ಸಂದರ್ಭ ಶುಚಿತ್ವಕ್ಕೆ ಆದ್ಯತೆ ನೀಡುವುದು ಅಗತ್ಯ. ಆದಷ್ಟು ಸೊಳ್ಳೆಗಳನ್ನು ನಿಯತ್ರಿಸಬೇಕೆಂದು ಡಾ| ಶಿವಕುಮಾರ್ ತಿಳಿಸಿದರು. ಸಾರ್ವಜನಿಕರು ತಮ್ಮ ವಾಸಸ್ಥಳದ ಸುತ್ತಮುತ್ತಲಿನ ಸ್ಥಳದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ಸ್ವಚ್ಛತೆಯನ್ನು ಕಾಯ್ದುಕೊಂಡಲ್ಲಿ ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಬಹುದು ಎಂದು ಹೇಳಿದರು.