ಮಂಗನ ಕಾಯಿಲೆಯತ್ತ ಎಚ್ಚರ ಅಗತ್ಯ  

ಮಂಗನ ಕಾಯಿಲೆಯತ್ತ ಎಚ್ಚರ ಅಗತ್ಯ  

LK   ¦    Jan 29, 2019 05:45:59 PM (IST)
ಮಂಗನ ಕಾಯಿಲೆಯತ್ತ ಎಚ್ಚರ ಅಗತ್ಯ   

ಈಗ ಎಲ್ಲೆಡೆ ಮಂಗನಕಾಯಿಲೆಯ ಭಯ ಆವರಿಸಿದೆ ಈಗಾಗಲೇ ಶಿವಮೊಗ್ಗದಲ್ಲಿ ಮಂಗನಕಾಯಿಲೆಗೆ ಬಲಿಯಾಗಿದ್ದಾರೆ. ಹೀಗಾಗಿ ಜ್ವರ ಬಂದರೆ ಮಂಗನಕಾಯಿಲೆಯಾ ಎಂಬ ಭಯ ಎಲ್ಲರನ್ನು ಕಾಡಲಾರಂಭಿಸಿದೆ. 

ಇತ್ತೀಚೆಗೆ ನಿಫಾ ವೈರಸ್ ಭಯವನ್ನು ಹುಟ್ಟು ಹಾಕಿತ್ತು. ಅದು ಸ್ವಲ್ಪ ದೂರವಾಗುತ್ತಿದ್ದಂತೆಯೇ ಜನ ನೆಮ್ಮದಿಯಿಂದ ಇದ್ದರು. ಆದರೆ ಇದೀಗ ಮಂಗನಕಾಯಿಲೆ ಮತ್ತೊಮ್ಮೆ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. 

ಹಾಗೆಂದು ಜ್ವರ ಕಾಣಿಸಿಕೊಂಡ ತಕ್ಷಣವೇ ಅದು ಮಂಗನಕಾಯಿಲೆ ಎಂದು ಭಯಪಡುವ ಅಗತ್ಯವಿಲ್ಲ. ಕೆಲವೊಮ್ಮೆ ಭಯ ಕೂಡ ನಮ್ಮಲ್ಲಿನ ಆತ್ಮಬಲವನ್ನು ಅಲುಗಾಡಿಸಿಬಿಡುತ್ತದೆ. ಹಾಗಾಗಿ ಜ್ವರ ಬಂತು ಎಂದಾಕ್ಷಣ ಹೆದರದೆ ಮೊದಲಿಗೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಮುಖ್ಯವಾಗಿದೆ. ಒಂದು ವೇಳೆ ಜ್ವರ ಬಾಧಿಸುತ್ತಿದ್ದರೂ ಅದು ಮಂಗನಕಾಯಿಲೆ ಎಂದು ಹೇಳಬೇಕಾದರೆ ಅದರ ಒಂದಷ್ಟು ಗುಣಲಕ್ಷಣಗಳು ಜ್ವರ ಬಂದ ವ್ಯಕ್ತಿಯಲ್ಲಿ ಕಾಣಿಸುತ್ತದೆ. ಅದೇನೆಂದರೆ, ಸತತ ಎಂಟು-ಹತ್ತು ದಿನಗಳವರೆಗೆ ಬಿಡದೇ ಜ್ವರ ಬರುವುದು, ಜತೆಗೆ ವಿಪರೀತ ತಲೆನೋವು, ಸೊಂಟ ನೋವು, ಕೈಕಾಲು ನೋವು, ನಿಶಕ್ತಿ ಕಣ್ಣು ಕೆಂಪಾಗುವುದು ಕಂಡು ಬಂದರೆ ಅದು ಮಂಗನ ಕಾಯಿಲೆ ಎಂದು ಹೇಳಬಹುದಾಗಿದೆ. 

ಇದರೊಂದಿಗೆ ಜ್ವರ ಬಂದ 2 ವಾರಗಳ ನಂತರ ರೋಗಿಯ ಮೂಗು, ಬಾಯಿ ಮಲದಲ್ಲಿ ರಕ್ತ ಸ್ರಾವವಾಗುವುದು. ಸಂಧಿವಾತವೂ ಕಾಣಿಸುತ್ತದೆ. ಇನ್ನು ಮೆದುಳಿನ ಹೊದಿಕೆಯ ಜ್ವರ ಲಕ್ಷಣ, ರೋಗದ ತೀವ್ರತೆ, ರೋಗಿಯ ಪ್ರತಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರೂ ತಪ್ಪಾಗಲಾರದು. ಕೆಲವೊಮ್ಮೆ ಅದೇನ್ ಮಾಮೂಲಿ ಜ್ವರ ಯಾವುದಾದರೂ ಮಾತ್ರೆ ಸೇವಿಸಿದರೆ ಹೋಗುತ್ತದೆ ಎಂದು ನಿರ್ಲಕ್ಷ್ಯ ವಹಿಸಿದರೆ ಅಪಾಯ. 

ಕಾಯಿಲೆ ಬಂದ ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಇದ್ದದ್ದೇ. ಒಂದು ವೇಳೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ ವೇಳೆಗೆ ಪ್ರಾಣಕ್ಕೆ ಸಂಚಕಾರ ಬಂದರೂ ಬರಬಹುದು. ಹೀಗಾಗಿ ಕಾಯಿಲೆ ಬರುವ ಮುನ್ನ ಒಂದಷ್ಟು ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ ಅದೇನೆಂದರೆ ನಮ್ಮ ಸುತ್ತಮುತ್ತ, ಗ್ರಾಮ, ಹಾಡಿ ಪ್ರದೇಶಗಳಲ್ಲಿ ಮಂಗ ಸತ್ತಿರುವುದು ಕಂಡು ಬಂದರೆ ಹತ್ತಿರದ ಆರೋಗ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತೆಯರಿಗೆ ತಿಳಿಸುವುದು ಒಳ್ಳೆಯದು. 

ಇನ್ನು ಮಂಗಗಳು ಮೃತಪಟ್ಟಿರುವ ಕಾಡಿನಲ್ಲಿ ಸಂಚರಿಸಿದಾಗ ಮೈತುಂಬ ಬಟ್ಟೆ ಧರಿಸಿ ಆರೋಗ್ಯ ಇಲಾಖೆಯಿಂದ ವಿತರಿಸಲಾಗುವ ಡಿಎಂಪಿ ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಸೋಪು ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ಸೋಪು ಹಚ್ಚಿ ತೊಳೆಯಬೇಕು. 

ಸತ್ತ ಮಂಗಗಳ ಮರಣೋತ್ತರ ಪರೀಕ್ಷೆಗಾಗಿ ಪಶುಸಂಗೋಪಾನಾ ಇಲಾಖೆಗೆ ಮಾಹಿತಿ ನೀಡುವುದು. ಮತ್ತು ಮಂಗದ ಅವಶೇಷಗಳನ್ನು ಪರೀಕ್ಷೆಗಾಗಿ ಪಶುಸಂಗೋಪನಾ ಇಲಾಖೆಯವರು ಸಂಗ್ರಹಿಸಿದ ಮೇಲೆ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಸತ್ತ ಮಂಗದ ಅವಶೇಷಗಳನ್ನು ಸುಡಬೇಕು. 

ಸತ್ತಮಂಗದ ಮೃತದೇಹಗಳ ಅವಶೇಷಗಳನ್ನು ಮತ್ತು ಸುತ್ತ ಮುತ್ತ ಪ್ರದೇಶದ ಉಣ್ಣೆಗಳ ಮಾದರಿಯನ್ನು ಸಂಗ್ರಹಣೆ ಮಾಡಿ ಪರೀಕ್ಷೆಗಾಗಿ ವಿಡಿಎಲ್ ಸಾಗಿಸಬೇಕಾಗುತ್ತದೆ. 

ಈಗಾಗಲೇ ಅರಣ್ಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಯಿಂದ ಮಂಗ ಸತ್ತ ಪ್ರದೇಶದ 50 ಮೀಟರ್ ಸುತ್ತಳತೆ ಪರಿಧಿಯಲ್ಲಿ ಮೆಲಾಥಿಯನ್ ದ್ರಾವಣ ಸಿಂಪಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಒಟ್ಟಾರೆ ಅರಣ್ಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಮಂಗನ ಕಾಯಿಲೆಯತ್ತ ಹೆಚ್ಚಿನ ಗಮನಹರಿಸಿದ್ದು ಸಾರ್ವಜನಿಕರು ಕೂಡ ಎಚ್ಚರ ವಹಿಸುವುದು ಅಗತ್ಯವಾಗಿದೆ.