ಆಗಾಗ ಕಾಡುವ ತಲೆನೋವಿಗೆ ಸುಲಭ ಮನೆಮದ್ದು

ಆಗಾಗ ಕಾಡುವ ತಲೆನೋವಿಗೆ ಸುಲಭ ಮನೆಮದ್ದು

SRJ   ¦    Apr 11, 2018 05:42:16 PM (IST)
ಆಗಾಗ ಕಾಡುವ ತಲೆನೋವಿಗೆ ಸುಲಭ ಮನೆಮದ್ದು

ತಲೆನೋವಿನ ಸಮಸ್ಯೆ ಯಾರಿಗೆ ಬರೋದಿಲ್ಲ ಹೇಳಿ, ಮಕ್ಕಳಿಂದ ಹಿಡಿದು ವಯೋ-ವೃದ್ಧರಿಗೂ ಈ ತಲೆ ನೋವು ಕಾಟ ಕೊಡುತ್ತದೆ. ಈ ತಲೆನೋವಿಗೆ ಮಾತ್ರೆ ತೆಗೆದುಕೊಂಡರೆ ಅದರಿಂದ ಮತ್ತೊಂದು ಸಮಸ್ಯೆ ಎದುರಾಗುತ್ತದೆ.

ತೀವ್ರ ತಲೆನೋವಿಗೆ ಒಳಗಾಗಿದ್ದರೆ ಆ ಸಂದರ್ಭದಲ್ಲಿ ಮೊಬೈಲ್, ಟಿವಿ, ಕಂಪ್ಯೂಟರ್ ಮುಂತಾದವುಗಳಿಂದ ದೂರವಿದ್ದರೆ ತುಂಬಾ ಒಳ್ಳೆಯದು. ಜೊತೆಗೆ ತಲೆ ನೋವು ಇರುವ ಸಂದರ್ಭದಲ್ಲಿ ಸರಿಯಾದ ಸಮಯದಲ್ಲಿ ಆಹಾರ ಸೇವನೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು.

ಇನ್ನು ಮನೆಯಲ್ಲಿ ಕೈಗೆ ಸುಲಭವಾಗಿ ಸಿಗುವ ಶುಂಠಿ, ತುಳಸಿ, ಪುದೀನಾ, ಲವಂಗ, ಕೊಬ್ಬರಿ ಎಣ್ಣೆ, ಬೆಳ್ಳುಳ್ಳಿ, ವೀಳ್ಯದೆಲೆ ಮುಂತಾದವುಗಳು ತಲೆನೋವು ಶಮನಕಾರಿಯಾಗಿ ಸಹಾಯ ಮಾಡುತ್ತದೆ.

ಶುಂಠಿ: ಶುಂಠಿ ರಸವನ್ನು ಬಿಸಿ ನೀರಿಗೆ ಹಾಕಿಕೊಂಡು ಸೋಸಿ ಕುಡಿಯುವುದರಿಂದ ತಲೆನೋವು ತಟ್ಟನೆ ಮಾಯವಾಗುತ್ತದೆ. ಶುಂಠಿ ರಸದಲ್ಲಿ ಜಿಂಜರೋಲ್ ಎಂಬ ಔಷಧೀಯ ಗುಣವಿರುವುದರಿಂದ ಇದು ಉರಿಯೂತ ಶಮನಕಾರಿಯಾಗಿ ಸಹಾಯ ಮಾಡುತ್ತದೆ.

ಪುದೀನಾ: ಮೂರು ಹನಿ ಪುದೀನಾ ಎಣ್ಣೆ, ಒಂದು ಚಮಚ ಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಂಡು ಅದನ್ನು ಹಣೆ ಮತ್ತು ಕುತ್ತಿಗೆಗೆ ಭಾಗಕ್ಕೆ ಸರಿಯಾಗಿ ಮಸಾಜ್ ಮಾಡಿ. ಜಜ್ಜಿಕೊಂಡು ಪುದೀನಾ ಎಲೆಗಳನ್ನು ಹಣೆಗೆ ಹಚ್ಚಿಕೊಳ್ಳಬಹುದು.

ಲವಂಗ: ಎರಡು ಹನಿ ಲವಂಗದ ಎಣ್ಣೆಗೆ ಒಂದು ಚಮಚ ತೆಂಗಿನೆಣ್ಣೆ ಮತ್ತು ಕಲ್ಲುಪ್ಪು ಹಾಕಿಕೊಳ್ಳಿ. ಇದರಿಂದ ತಲೆ ಹಾಗೂ ಹಣೆಗೆ ಮಸಾಜ್ ಮಾಡಿಕೊಳ್ಳಿ.

ತುಳಸಿ ಎಲೆ: ಸ್ವಲ್ಪ ತುಳಸಿ ಎಲೆಗಳನ್ನು ಕುದಿಯುವ ನೀರಿಗೆ ಹಾಕಿಕೊಳ್ಳಿ. ಇದರ ಬಳಿಕ ನೀರನ್ನು ಸೋಸಿಕೊಳ್ಳಿ. ಸ್ವಲ್ಪ ಜೇನುತುಪ್ಪ ಬೆರೆಸಿಕೊಂಡು ಕುಡಿಯಿರಿ. ಇದರಿಂದ ಒತ್ತಡದಿಂದ ಉಂಟಾಗಿರುವ ತಲೆನೋವು ಮಾಯವಾಗುವುದು.

ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ ಅದರ ರಸ ತೆಗೆದು ಅದನ್ನು ಸ್ವಲ್ಪ ಕುಡಿದು, ಸ್ವಲ್ಪ ತಲೆಗೂ ಹಚ್ಚಿಕೊಳ್ಳಬೇಕು.