ಬೇಸಗೆಯಲ್ಲಿ ಕಾಡುವ ಸನ್ ಸ್ಟ್ರೋಕ್ ಗೆ ಏನು ಮಾಡಬೇಕು?

ಬೇಸಗೆಯಲ್ಲಿ ಕಾಡುವ ಸನ್ ಸ್ಟ್ರೋಕ್ ಗೆ ಏನು ಮಾಡಬೇಕು?

LK   ¦    Apr 04, 2018 11:21:37 AM (IST)
ಬೇಸಗೆಯಲ್ಲಿ ಕಾಡುವ ಸನ್ ಸ್ಟ್ರೋಕ್ ಗೆ ಏನು ಮಾಡಬೇಕು?

ನೆತ್ತಿ ಸುಡುವ ಬಿಸಿಲಿಗೆ ಒಂದಲ್ಲ ಒಂದು ರೀತಿಯ ತೊಂದರೆ ಕಾಣಿಸಿಕೊಳ್ಳುವುದು ಸಹಜ, ಅದರಲ್ಲೂ ಸಾಮಾನ್ಯವಾಗಿ ಬೇಸಿಗೆಯಲ್ಲಿ ನಾವು ಹೆಚ್ಚು ಜಾಗರೂಕರಾಗಿ ಇಲ್ಲದೆ ಹೋದರೆ ಸನ್ ಸ್ಟ್ರೋಕ್ ಕಾಡಿದರೂ ಅಚ್ಚರಿ ಪಡಬೇಕಾಗಿಲ್ಲ.

ಬಾಯಾರಿಕೆ, ತಲೆನೋವು, ತಲೆತಿರುಗುವಿಕೆ, ಮಾಂಸ ಖಂಡಗಳ ಸೆಳೆತ, ಅತಿ ಹೆಚ್ಚಾಗಿ ಬೆವರುವುದು, ವಾಕರಿಕೆ ಅಥವಾ ವಾಂತಿ, ತೀವ್ರಗೊಂಡ ಹೃದಯ ಬಡಿತ, ಪ್ರಜ್ಞೆ ತಪ್ಪುವಿಕೆ ಮತ್ತು ಮೂರ್ಛೆ ರೋಗ ಬರುವುದು ಸನ್ ಸ್ಟ್ರೋಕ್ ನ ಲಕ್ಷಣಗಳಾಗಿವೆ.

ಬಿಸಿಲಿಗೆ ಹೋದಾಗಲೆಲ್ಲ ಮೇಲಿನ ಗುಣ ಲಕ್ಷಣಗಳು ಕಾಣಿಸಿಕೊಂಡರೆ ಅಂಥವರು ತುಂಬಾ ಎಚ್ಚರವಾಗಿರಬೇಕು. ಆದಷ್ಟು ಬಿಸಿಲಿನಿಂದ ದೂರವಿರಬೇಕಾಗುತ್ತದೆ. ಅನಿವಾರ್ಯತೆಯಿದ್ದಾಗ ಒಂದಷ್ಟು ಮುಂಜಾಗ್ರತೆ ವಹಿಸಿಕೊಂಡು ಹೋಗುವುದು ಒಳ್ಳೆಯದು.

ಸನ್ ಸ್ಟ್ರೋಕ್ ಆಗಿರುವುದು ಕಂಡು ಬಂದ ತಕ್ಷಣ ಅಂಥ ವ್ಯಕ್ತಿಯನ್ನು ತಂಪಾದ ನೆರಳಿರುವ ಜಾಗಕ್ಕೆ ಕರೆದೊಯ್ದು, ಅವರ ಬಟ್ಟೆ, ಪಾದರಕ್ಷೆಗಳನ್ನು ಸಡಿಲಿಸಿ, ತೆಗೆಯಬೇಕು. ಗಾಳಿ ಹಾಕಬೇಕು. ಪೂರ್ಣ ಪ್ರಜ್ಞೆ ಸ್ಥಿತಿಯಲಿದ್ದರೆ ಕುಡಿಯಲು ನೀರು, ಓಆರ್ ಸಿಸ್, ನಿಂಬೆಹಣ್ಣಿನ ರಸ ಅಥವಾ ನೀರು ಮಜ್ಜಿಗೆಯನ್ನು ನೀಡಬೇಕು. ಈ ಸಂದರ್ಭ ಇತರೆ ಯಾವುದೇ ಮಾತ್ರೆ ಇನ್ನಿತರೆ ಔಷಧಿಯನ್ನು ನೀಡಬಾರದು. ಒದ್ದೆ ಬಟ್ಟೆಯಿಂದ ದೇಹವನ್ನು ನಿಧಾನವಾಗಿ ಒರೆಸಬೇಕು. ಒಮ್ಮೆಲೆ ಅತಿಯಾದ ತಂಪು ಮಾಡಬಾರದು. ಪ್ರಜ್ಞೆ ಕಳೆದುಕೊಂಡರೆ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.

ಸನ್ ಸ್ಟ್ರೋಕ್ ಗೆ ಒಳಗಾದ ವ್ಯಕ್ತಿಯ ಚರ್ಮ ಕೆಂಪಗಾಗುವುದು, ಬೆವರಿನ ಪ್ರಮಾಣ ಕಡಿಮೆಯಾಗಿ, ದೇಹದ ಉಷ್ಣತೆ ಜಾಸ್ತಿಯಾಗುವುದು, ದೀರ್ಘವಾದ ತೀವ್ರ ಉಸಿರಾಟ ಮೊದಲಾದ ಲಕ್ಷಣಗಳು ಕಂಡು ಬಂದರೆ ಉದಾಸೀನ ಮಾಡದೆ ಕೂಡಲೇ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಕೊಡಿಸಬೇಕಾಗುತ್ತದೆ.

ಬೇಸಿಗೆಯಲ್ಲಿ ಕಂಡು ಬರುವ ಸನ್ ಸ್ಟ್ರೋಕ್ ತಡೆಯಬೇಕಾದರೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿಸುವುದು ಮುಖ್ಯ. ಸಾಧ್ಯವಾದಷ್ಟು ಧಾರಾಳವಾಗಿ ಉಪ್ಪು ನೀರು ಸಕ್ಕರೆ ಮಿಶ್ರಿತ ನೀರನ್ನು ಕುಡಿಯಬೇಕು. ಎಳನೀರು, ನೀರು ಮಜ್ಜಿಗೆ, ನಿಂಬೆ ಹಣ್ಣಿನ ರಸ, ಓಆರ್ ಸಿಸ್ ಹಾಗೂ ಇತರೆ ಹಣ್ಣಿನ ರಸ, ಪಾನಕಗಳನ್ನು ಕುಡಿಯಬೇಕು. ಬರಿ ನೀರಿನ ಬದಲು ದೇಹಕ್ಕೆ ಶಕ್ತಿ ಒದಗಿಸುವ ಪಾನಕಗಳನ್ನು ಆಗಾಗ್ಗೆ ಸೇವಿಸುವುದು ಉತ್ತಮ

ಬೆಳಿಗ್ಗೆ 11 ರಿಂದ 3 ತನಕ ಹೊರಗಡೆ ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸುವುದು, ಅತಿ ವಯಸ್ಸಾದವರು, ಚಿಕ್ಕಮಕ್ಕಳು ಮತ್ತು ರೋಗಿಗಳು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಎಚ್ಚರ ವಹಿಸಿ ಸಾಧ್ಯವಾದಷ್ಟು ನೆರಳಲ್ಲಿರುವುದು ಸೂಕ್ತ.

ಬಿಸಿಲಿನಲ್ಲಿ ಓಡಾಡುವವರು ತಪ್ಪದೆ ಛತ್ರಿ ಅಥವಾ ಟೋಪಿ, ಟವಲ್ ನ್ನು ತಲೆ ಮೇಲೆ ಧರಿಸಬೇಕು. ದೂರದ ಪ್ರಯಾಣ ಮಾಡುವಾಗ ತಪ್ಪದೇ ನೀರಿನ ಬಾಟಲ್ ಜೊತೆಗಿಟ್ಟುಕೊಳ್ಳಬೇಕು. ಮನೆಯಲ್ಲಿದ್ದಾಗ ಗಾಳಿ ಬೆಳಕು ಮನೆಯೊಳಗೆ ಬರುವಂತೆ ಕಿಟಿಕಿ ಬಾಗಿಲುಗಳನ್ನು ತೆಗೆದಿಡಬೇಕು.

ಬಿಗಿಯಾದ ಗಾಢ ಬಣ್ಣದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು, ಬಿಸಿಲಿನಲ್ಲಿ ದೇಹದಂಡನೆಯ ಶ್ರಮದ ಕೆಲಸವನ್ನು ಮಾಡಬಾರದು, ಬಾಯಾರಿಕೆಯಾದಾಗಲೆಲ್ಲ ಕಡ್ಡಾಯವಾಗಿ ನೀರನ್ನು ಹಾಗೂ ಹಣ್ಣಿನ ರಸಗಳನ್ನು ಸೇವಿಸಬೇಕು. ಸೋಡಾ, ಕಾರ್ಬ್ರೋನೇಟೆಡ್ ತಂಪು ಪಾನೀಯಗಳನ್ನು ದೂರವಿಡಬೇಕು.

ಬೆವರನ್ನು ಒರೆಸಲು ಒರಟಾದ ಬಟ್ಟೆಯನ್ನು ಉಪಯೋಗಿಸದೆ, ಮೆದುವಾದ ಹತ್ತಿಬಟ್ಟೆಯನ್ನಿಟ್ಟುಕೊಳ್ಳಬೇಕು. ಕಾಫಿ, ಟೀ ಹಾಗೂ ಆಲ್ಕೋ ಹಾಲ್ ಅಥವಾ ಅತಿ ಸಕ್ಕರೆ ಅಂಶವುಳ್ಳ ಪಾನೀಯಗಳನ್ನು ಹೆಚ್ಚಾಗಿ ಸೇವಿಸಬಾರದು. ಬಿಸಿಯಾದ ಮಸಾಲೆಯುಕ್ತ ಆಹಾರ ಸೇವಿಸಬಾರದು, ಬಿಗಿಯಾದ ಗಾಳಿಯಾಡದ ಪಾದರಕ್ಷೆ ಅಥವಾ ಶೂಗಳನ್ನು ಧರಿಸದೆ ಎಚ್ಚರವಾಗಿರುವುದು ಒಳ್ಳೆಯದು