ಬೇಸಿಗೆಯಲ್ಲಿ ಕುಡಿಯುವ ನೀರು, ಶುಚಿತ್ವದತ್ತ ನಿಗಾವಿರಲಿ!

ಬೇಸಿಗೆಯಲ್ಲಿ ಕುಡಿಯುವ ನೀರು, ಶುಚಿತ್ವದತ್ತ ನಿಗಾವಿರಲಿ!

YK   ¦    Mar 02, 2018 01:29:29 PM (IST)
ಬೇಸಿಗೆಯಲ್ಲಿ ಕುಡಿಯುವ ನೀರು, ಶುಚಿತ್ವದತ್ತ ನಿಗಾವಿರಲಿ!

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಬರುವ ಕಾರಣದಿಂದಾಗಿ ಸಿಕ್ಕಸಿಕ್ಕ ಕಡೆ ಸಿಗುವ ನೀರನ್ನು ಬಳಸುವ ಮುನ್ನ ಒಂದಷ್ಟು ಮುಂಜಾಗ್ರತೆ ವಹಿಸುವುದು ಬಹು ಮುಖ್ಯವಾಗಿದೆ. ಕಾರಣ ಕಲುಷಿತ ನೀರಿನೊಂದಿಗೆ ಕಾಮಾಲೆ ರೋಗ ಬರುವ ಸಾಧ್ಯತೆ ಹೆಚ್ಚಿರುವ ಕಾರಣದಿಂದಾಗಿ ಎಲ್ಲರೂ ಒಂದಷ್ಟು ಎಚ್ಚರಿಕೆಯಿಂದ ಇರುವುದು ಬಹು ಮುಖ್ಯವಾಗಿದೆ.

ಕೆಲವೊಮ್ಮೆ ನೀರಿಗೆ ತೊಂದರೆಯುಂಟಾಗುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೊಳೆ, ಕೆರೆಗಳಿಂದ ನೀರನ್ನು ತಂದು ಬಹುತೇಕ ಮಂದಿ ಸೇವಿಸುವುದರಿಂದ ಅದರಲ್ಲಿರುವ ಬ್ಯಾಕ್ಟಿರಿಯಾಗಳಿಂದ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವುದನ್ನು ತಳ್ಳಿ ಹಾಕುವಂತಿಲ್ಲ. ಕೊಳಚೆ, ತ್ಯಾಜ್ಯ ನೀರನ್ನು ಕೆಲವೆಡೆ ನದಿಗೆ ಬಿಡುತ್ತಿದ್ದು, ಅದನ್ನು ಶುದ್ದೀಕರಿಸದೆ ಕುಡಿಯುತ್ತಿರುವುದರಿಂದಲೂ ರೋಗಗಳು ಬರುವುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೆಚ್ಚಿನ ಕಡೆಗಳಲ್ಲಿ ಶುಚಿತ್ವದ ಕೊರತೆಯಿಂದಾಗಿ ಸಾರ್ವಜನಿಕ ನೀರಿನ ಟ್ಯಾಂಕ್, ಬೋರ್ ವೆಲ್, ಬಾವಿಗಳ ಬಳಿ ಕೊಳಚೆ ನೀರುಗಳು ನಿಲ್ಲುತ್ತಿದ್ದು ಇಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟಿರಿಯಾಗಳು ಕಾಯಿಲೆಗಳನ್ನು ಹರಡುತ್ತಿವೆ. ಕೆರೆ, ಬಾವಿ, ನದಿಗಳಿಂದ ತಂದ ನೀರನ್ನು ಚೆನ್ನಾಗಿ ಕುದಿಸಿ ಉಪಯೋಗಿಸದೆ ಕೆಲವರು ನೇರವಾಗಿ ಕುಡಿಯುತ್ತಿರುವುದರಿಂದಲೂ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಕಲುಷಿತ ನೀರಿನಿಂದಾಗಿ ಅಲ್ಲಲ್ಲಿ ಕಾಲರಾ, ಕರಳುಬೇನೆ(ವಾಂತಿ ಬೇಧಿ), ಟೈಫಾಯ್ಡ್ (ವಿಷಮಶೀತಜ್ವರ), ಹೆಪಟೈಟಿಸ್, ಪೋಲಿಯೋ, ಆಮಶಂಕೆ, ಇಲಿಜ್ವರ, ಜಂತುಹುಳು ಸೋಂಕು, ಪ್ಲೋರೋಸಿಸ್, ನಾರುಹುಣ್ಣು ಮೊದಲಾದ ರೋಗಗಳು ಕಾಣಿಸಿಕೊಳ್ಳುವ ಅಪಾಯವಿದೆ.

ಇದೆಲ್ಲದರ ನಡುವೆ ಕಾಮಾಲೆ ರೋಗವೂ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಜ್ವರ, ಚಳಿ, ತಲೆನೋವು, ಆಯಾಸ, ದೇಹ ಪೂರ್ಣ ನಿಶ್ಯಕ್ತಿ, ಕೀಲು ನೋವು ಇದರ ಜೊತೆಗೆ ವಾಕರಿಕೆ, ವಾಂತಿ, ಹಸಿವು ಇಲ್ಲದಿರುವುದು, ಹಳದಿ ಬಣ್ಣದ ಮೂತ್ರ ಹೋಗುವುದು. ಕಣ್ಣು, ಚರ್ಮ, ಉಗುರುಗಳು ಹಳದಿಯಾಗಿರುವುದು ಕಂಡು ಬಂದರೆ ತಕ್ಷಣ ಚಿಕಿತ್ಸೆ ತೆಗೆದುಕೊಳ್ಳುವುದು ಬಹು ಮುಖ್ಯ ಏಕೆಂದರೆ ಈ ಲಕ್ಷಣಗಳು ಕಾಮಾಲೆ ರೋಗದ ಲಕ್ಷಣವಾಗಿದ್ದು ಅದರತ್ತ ಹೆಚ್ಚಿನ ನಿಗಾವಹಿಸಬೇಕಾಗುತ್ತದೆ.

ವೈದ್ಯರ ಪ್ರಕಾರ ಕಾಮಾಲೆ ರೋಗ ಯಕೃತಿನ (ಲಿವರ್) ಸೋಂಕಿನಿಂದ ಬರುತ್ತದೆಯಂತೆ. ರೋಗದ ಸೋಂಕಿಗೆ ಹಲವಾರು ವೈರಾಣುಗಳು ಕಾರಣವಾಗಿದ್ದು, ಆ ಪೈಕಿ ಸೌಮ್ಯ ಸ್ವರೂಪದ ಎ ವೈರಾಣುವಿನಿಂದ ಹಿಡಿದು ತೀವ್ರ ಸ್ವರೂಪದ ಬಿ ವೈರಾಣು ಹಾಗೂ ಸಿ, ಡಿ, ಇ ಮತ್ತು ಜಿ ವೈರಾಣುವಿನಿಂದ ರೋಗಕ್ಕೆ ತುತ್ತಾಗಬಹುದು.

ವೈದ್ಯರು ಹೇಳುವ ಪ್ರಕಾರ ಕಾಮಾಲೆ ರೋಗ ಹರಡಲು ವಯಸ್ಸಿನ ಮತ್ತು ಲಿಂಗ ತಾರತಮ್ಯವಿಲ್ಲ. ಆದರೆ ಹೆಚ್ಚಾಗಿ ಮಕ್ಕಳು ಹಾಗೂ ವಯಸ್ಕರಲ್ಲಿ ಕಂಡು ಬರುತ್ತದೆ. ಈ ರೋಗದಿಂದ ನರಳುತ್ತಿರುವ ರೋಗಿಗಳು ಕಾಮಾಲೆ ರೋಗ ಲಕ್ಷಣಗಳು ಕಂಡುಬರುವ ಎರಡು ವಾರ ಮೊದಲು, ಕಂಡು ಬಂದ ಒಂದು ವಾರದವರೆಗೂ ರೋಗಾಣುವನ್ನು ಮಲದ ಮೂಲಕ ಹೊರಹಾಕುತ್ತಾರೆ. ಇಂತಹ ರೋಗಿಗಳ ಮಲವು ಕುಡಿಯುವ ನೀರು, ತಿನ್ನುವ ಆಹಾರವನ್ನು ಕಲುಷಿತಗೊಳಿಸಿದರೆ ಇಂತಹ ಆಹಾರವನ್ನು ಸೇವಿಸಿದ ಈ ರೋಗದ ವಿರುದ್ದ ನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗಳಿಗೆ ಸಾಮಾನ್ಯವಾಗಿ 25 ರಿಂದ 35 ದಿನಗಳ ನಂತರ ರೋಗ ಲಕ್ಷಣಗಳು ಕಂಡು ಬರಬಹುದು. ಅಪರೂಪದಲ್ಲಿ ಕೆಲವೊಮ್ಮೆ ರಕ್ತದ ಮೂಲಕವೂ ಈ ಕಾಮಾಲೆ ರೋಗವು ಹರಡಬಲ್ಲದು. ಒಮ್ಮೆ ಈ ರೋಗದಿಂದ ನರಳಿದವರು ಶೇ. 95 ರಷ್ಟು ನಿರೋಧಕ ಶಕ್ತಿಯನ್ನು ಪಡೆಯುತ್ತಾರೆ. ಶೇ. 5 ರಷ್ಟು ಜನರು ಪುನಃ ಈ ರೋಗಕ್ಕೆ ತುತ್ತಾಗಬಹುದಂತೆ.

ಕಾಮಾಲೆ ರೋಗಕ್ಕೆ ತುತ್ತಾದ ರೋಗಿಗಳು ತಜ್ಞ ವೈದ್ಯರಿಂದ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದು ವೈದ್ಯರ ಸಲಹೆ ಸೂಚನೆಯನ್ನು ಪಾಲಿಸುವುದು ಅಗತ್ಯ. ರೋಗಿಗಳನ್ನು ಪ್ರತ್ಯೇಕವಾಗಿಸುವುದು ಹಾಗೂ ಉಪಯೋಗಿಸುವ ಪಾತ್ರೆ ಬಟ್ಟೆ ಬರೆಗಳನ್ನು ಕ್ರಿಮಿ ನಾಶಕದಿಂದ ಶುದ್ದೀಕರಿಸುವುದು, ಮಲ ಮೂತ್ರವನ್ನು ಕ್ರಿಮಿನಾಶಕ ಹಾಕಿ ವಿಲೇವಾರಿ ಮಾಡುವುದು. ಸುರಕ್ಷಿತ ನೀರಿನ ಸರಬರಾಜು, ಆಹಾರ ಮತ್ತು ಪ್ರತಿಯೊಬ್ಬರೂ ಶೌಚಾಲಯ ವ್ಯವಸ್ಥೆ ಬಳಸುವುದು ಅಗತ್ಯವಾಗಿದೆ.

ಕಾಮಾಲೆ ಮಾತ್ರವಲ್ಲದೆ ಹೆಚ್ಚಿನ ಕಾಯಿಲೆಗಳು ಸೋಂಕುಗಳಾಗಿದ್ದು, ಅವು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದಾಗಿ ಪ್ರತಿಯೊಬ್ಬರು ತಮ್ಮ ಮನೆ ಮತ್ತು ಸುತ್ತಮುತ್ತ ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡುವುದು ಅಗತ್ಯವಾಗಿದೆ.

ಸಾಮಾನ್ಯವಾಗಿ ನೀರಿನ ಮೂಲಗಳಾದ ಬಾವಿ, ಕೊಳವೆಬಾವಿ ಮತ್ತು ಟ್ಯಾಂಕರ್ ಸುತ್ತಮುತ್ತ ಬಳಸಿದ ನೀರು ನಿಲ್ಲುವುದರಿಂದ, ಕೆರೆ ಬಳಿ ಮಲ ವಿಸರ್ಜನೆ ಮಾಡುವುದು, ದನಕರುಗಳನ್ನು ತೊಳೆಯುವುದು, ಬಟ್ಟೆ ಪಾತ್ರೆ ತೊಳೆದ ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರ್ಪಡೆಯಾಗುವುದು, ನೀರಿನ ಸಂಗ್ರಹಣೆ, ನೀರಿನ ಟ್ಯಾಂಕ್ ನಿಂದ ಸರಬರಾಜಾಗುವ ಪೈಪ್ ಗಳಲ್ಲಿ ಸೋರಿಕೆ ಮತ್ತು ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸದಿರುವುದರಿಂದ, ನೀರು ಪೂರೈಕೆ ನಲ್ಲಿಗಳು ತಗ್ಗಿನಲ್ಲಿದ್ದಾಗ ಅದರಲ್ಲಿ ನೀರು ನಿಂತು ಕಲುಷಿತಗೊಂಡು ನೀರು ಪೂರೈಕೆ ಪೈಪುಗಳಲ್ಲಿ ಪುನಃ ಸೇರುವುದು. ಮನೆಯಲ್ಲಿ ಸಂಗ್ರಹಿಸಿದ ನೀರು ಕಲುಷಿತಗೊಳ್ಳುವುದರಿಂದಲೂ ವಿವಿಧ ಕಾಯಿಲೆಗಳು ಬರುವ ಸಾಧ್ಯತೆಯಿದೆ.

ಆದುದರಿಂದ ವೈಯಕ್ತಿಕ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡುವುದರೊಂದಿಗೆ ನಮ್ಮ ಮನೆಯ ಸುತ್ತಮುತ್ತ ನೈರ್ಮಲ್ಯ ಕಾಪಾಡಬೇಕು. ಜತೆಗೆ ಕುಡಿಯುವ ನೀರಿನತ್ತ ಹೆಚ್ಚಿನ ನಿಗಾವಹಿಸಬೇಕು.