ಬಾಯಿ ರುಚಿಗೆ ಮರುಳಾಗಿ ಆರೋಗ್ಯ ಕಳೆದುಕೊಳ್ಳಬೇಡಿ!

ಬಾಯಿ ರುಚಿಗೆ ಮರುಳಾಗಿ ಆರೋಗ್ಯ ಕಳೆದುಕೊಳ್ಳಬೇಡಿ!

LK   ¦    Jun 30, 2018 03:20:58 PM (IST)
ಬಾಯಿ ರುಚಿಗೆ ಮರುಳಾಗಿ ಆರೋಗ್ಯ ಕಳೆದುಕೊಳ್ಳಬೇಡಿ!

ದಿನದಿಂದ ದಿನಕ್ಕೆ ವಿವಿಧ ಬಗೆಯ ಆಹಾರ ಪದಾರ್ಥಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಬಾಯಿ ರುಚಿಗೆ ಮಾರು ಹೋಗಿ ಅವುಗಳನ್ನೆಲ್ಲ ಸೇವಿಸುವುದರಿಂದಾಗಿ ಅನಾರೋಗ್ಯ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ.

ದಪ್ಪ ಆಗಿದ್ದೇನೆ ಹೊಟ್ಟೆ ಮುಂದೆ ಬಂದಿದೆ. ಅಯ್ಯೋ ಅದು ತಿನ್ನಲ್ಲ ಇದು ತಿನ್ನಲ್ಲ ಹೀಗೆ ಪರದಾಡುವವರು ನಮ್ಮ ಮುಂದಿದ್ದಾರೆ. ಇನ್ನು ಕೆಲವರು ಅಯ್ಯೋ ಏನು ತಿಂದರೂ ದಪ್ಪ ಆಗುತ್ತಿಲ್ಲ ಎಂದು ಕೊರಗುವವರು ಮತ್ತೊಂದೆಡೆ. ಕೇವಲ ಊಟ ಮಾಡಿಬಿಟ್ಟರೆ ದಪ್ಪವಾಗುವುದಿಲ್ಲ. ಜತೆಗೆ ಊಟ ಬಿಟ್ಟ ತಕ್ಷಣಕ್ಕೆ ಸಣ್ಣವೂ ಆಗುವುದಿಲ್ಲ. ನಮ್ಮ ದೇಹ ಮೊದಲಿಗೆ ದಪ್ಪ ಸಣ್ಣಕ್ಕಿಂತ ಹೆಚ್ಚಾಗಿ ಆರೋಗ್ಯವಾಗಿ ಇದೆಯಾ ಎಂಬುದನ್ನು ನೋಡಿಕೊಳ್ಳಬೇಕಾಗಿದೆ.

ಇಷ್ಟಕ್ಕೂ ನಾವು ಆರೋಗ್ಯವಂತರಾಗಿರಬೇಕಾದರೆ ವಯಸ್ಸಿಗೆ ತಕ್ಕಂತೆ ನಮ್ಮ ಆಹಾರ ಸೇವನೆಯಲ್ಲಿ ಒಂದಷ್ಟು ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಅಗತ್ಯ. ಕೆಲವೊಂದು ಆಹಾರ ನಮಗೆ ಇಷ್ಟವಾದರೂ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕೇವಲ ಬಾಯಿ ಚಪಲಕ್ಕೆ ಅದನ್ನು ತಿನ್ನದೆ, ಆರೋಗ್ಯಕ್ಕೆ ಒಳಿತಾಗುವ ಆಹಾರವನ್ನು ಸೇವಿಸುವುದು ಅತಿ ಮುಖ್ಯ.

ವಯಸ್ಸಾದವರು ತಮ್ಮ ವಯಸ್ಸಿಗೆ ತಕ್ಕಂತೆ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಹಸಿವು ಮತ್ತು ಜೀರ್ಣಶಕ್ತಿ ಕಡಿಮೆಯಾಗುವುದರಿಂದ ಪ್ರೊಟೀನ್, ಕೊಬ್ಬು, ಖನಿಜಾಂಶ ಹಾಗೂ ಜೀವಸತ್ವಗಳುಳ್ಳ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಜತೆಗೆ ಸೇವಿಸುವ ಆಹಾರದ ಪ್ರಮಾಣವು ದಿನಕ್ಕೆ 300 ರಿಂದ 330 ಗ್ರಾಂ ಇರುವಂತೆ ನೋಡಿಕೊಳ್ಳುವುದು ಅತ್ಯಗತ್ಯ.

ವಯಸ್ಸಾದವರು ತಮ್ಮ ಜೀವಿತದ ಕೊನೆಯ ಕಾಲವನ್ನು ಆರೋಗ್ಯವಾಗಿ ಕಳೆಯಬೇಕಾದರೆ ನಿತ್ಯದ ಆಹಾರ ಕ್ರಮದಲ್ಲಿ ಏನೇನು ಅಳವಡಿಸಿಕೊಳ್ಳಬೇಕು ಮತ್ತು ಎಂತಹ ಆಹಾರವನ್ನು ಸೇವಿಸಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡುತ್ತಾರೆ. ಅದರಂತೆ ನಡೆದುಕೊಂಡದ್ದೇ ಆದರೆ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುವುದರಲ್ಲಿ ಎರಡು ಮಾತಿಲ್ಲ.

ಸಾಮಾನ್ಯವಾಗಿ ದಿನಕ್ಕೆ ಮೂರು ಬಾರಿ ಊಟ ಮಾಡುತ್ತೇವೆ. ಆದರೆ ವಯಸ್ಸಾದವರು ಕಡಿಮೆ ಪ್ರಮಾಣದಲ್ಲಿ ಹಲವು ಬಾರಿ ಊಟ ಮಾಡುವುದು ಒಳ್ಳೆಯದು. ಆಹಾರದಲ್ಲಿ ಅಕ್ಕಿ, ರಾಗಿ, ಗೋಧಿ, ಜೋಳ ಮೊದಲಾದ ಧಾನ್ಯಗಳ ಬಳಕೆ ಒಳ್ಳೆಯದು.

ನಿತ್ಯ ಉಪಯೋಗಿಸುವ ಆಹಾರದಲ್ಲಿ ಪ್ರೊಟೀನ್ ಯುಕ್ತ ಬೇಳೆಕಾಳುಗಳು ಇರುವಂತೆ ನೋಡಿಕೊಳ್ಳಬೇಕು. ಇವುಗಳನ್ನು ಕನಿಷ್ಟ 60ಗ್ರಾಂನಷ್ಟಾದರೂ ಸೇವಿಸಬೇಕು. ಇದರೊಂದಿಗೆ ದಿನಕ್ಕೆ ಕನಿಷ್ಟ 2 ರಿಂದ 3 ಲೋಟದಷ್ಟು ಹಾಲು ಅಥವಾ ಮೊಸರು ಸೇವಿಸಬೇಕು. ಮೊಳಕೆ ಕಾಳುಗಳು, ಮೊಟ್ಟೆಯ ಬಿಳಿಭಾಗ, ಮೀನು, ಜತೆಗೆ ಸೊಪ್ಪು ಸೇರಿದಂತೆ ಗೆಡ್ಡೆಗೆಣಸು ತರಕಾರಿ ಸೇವಿಸುವುದು ಅಗತ್ಯ.

ಮಲವಿಸರ್ಜನೆ ಸಲೀಸಾಗಿ ನಡೆಯಲು ಅನುಕೂಲವಾಗುವಂತೆ ನಾರಿನ ಅಂಶವಿರುವ ಹಣ್ಣು, ತರಕಾರಿ, ಉಂಡೆಕಾಳುಗಳನ್ನು ಆಹಾರದಲ್ಲಿ ಸೇರಿಸಬೇಕು. ನಾರಿನ ಅಂಶವು ರಕ್ತದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಜತೆಗೆ ದೊಡ್ಡ ಕರುಳಿನ ಕ್ಯಾನ್ಸರನ್ನು ತಡೆಗಟ್ಟುವ ಗುಣವನ್ನು ಹೊಂದಿದೆ.ಇನ್ನು ಹಲ್ಲುಗಳು ಇಲ್ಲದಿದ್ದಲ್ಲಿ ಮೆದುವಾದ ಮತ್ತು ಚೆನ್ನಾಗಿ ಬೆಂದಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು.

ವಯಸ್ಸಿಗಿಂತ ಹೆಚ್ಚಿನ ತೂಕ ಹೊಂದಿರುವವರು ದೈಹಿಕ ಶ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಬೆಳಿಗ್ಗೆ ವಾಕಿಂಗ್ ವ್ಯಾಯಾಮ ಮಾಡಬೇಕು. ಕೊಬ್ಬು, ಎಣ್ಣೆ ಮತ್ತು ಸಕ್ಕರೆ ಸೇವನೆ ಕಡಿಮೆ ಮಾಡಬೇಕು. ನಾರಿನ ಅಂಶವಿಲ್ಲದ ಸಂಸ್ಕರಿಸಿದ ಆಹಾರ ಪದಾರ್ಥ, ಮೈದಾದಿಂದ ತಯಾರಿಸಿದ ಬ್ರೆಡ್, ಬನ್, ನೂಡಲ್ಸ್, ನಾನ್ ಮುಂತಾದ ಆಹಾರಗಳನ್ನು ಸೇವಿಸಬಾರದು, ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಿ, ಮದ್ಯಪಾನ, ಧೂಮಪಾನವನ್ನು ತ್ಯಜಿಸಿ, ಕೊಲೆಸ್ಟ್ರಾಲ್ ಹೆಚ್ಚಿಸುವ ಬೆಣ್ಣೆ, ತುಪ್ಪ, ವನಸ್ಪತಿ, ಬಜ್ಜಿ, ಬೋಂಡ, ಪೂರಿ, ಹಪ್ಪಳ ಮೊದಲಾದ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ. ಅತಿಯಾದ ಕಾಫಿ, ಟೀ ಸೇವನೆಗೂ ಕಡಿವಾಣ ಹಾಕಬೇಕು.

ದಪ್ಪ ಆಗಿದ್ದೇವೆ ಎಂಬ ಕಾರಣಕ್ಕೆ ಅನಗತ್ಯ ಉಪವಾಸ ಮಾಡಿದರೆ ಅದರ ಪರಿಣಾಮ ಆರೋಗ್ಯದ ಮೇಲೆ ಬೀರುತ್ತದೆ. ಆದುದರಿಂದ ವೈದ್ಯರ ಸಲಹೆಯಂತೆ ನಿಗದಿತ ಆಹಾರ ಸೇವಿಸಬೇಕು. ಅದು ಬಿಟ್ಟು ಪಥ್ಯ, ಉಪವಾಸ ಹೀಗೆ ಇಲ್ಲ ಸಲ್ಲದ ಕ್ರಮಗಳನ್ನು ಅಳವಡಿಸಿಕೊಂಡು ಸಣ್ಣಗಾಗಲು ಪ್ರಯತ್ನಿಸಿದರೆ ದೇಹದ ತೂಕ ಕಡಿಮೆಯಾಗುವುದರೊಂದಿಗೆ ಆರೋಗ್ಯದ ಮೇಲೆಯೂ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ.