ಮೆದುಳಿನ ಆರೋಗ್ಯಕ್ಕೆ ಬಾದಾಮಿ ಸಹಕಾರಿ

ಮೆದುಳಿನ ಆರೋಗ್ಯಕ್ಕೆ ಬಾದಾಮಿ ಸಹಕಾರಿ

LK   ¦    Apr 10, 2018 12:06:44 PM (IST)
ಮೆದುಳಿನ ಆರೋಗ್ಯಕ್ಕೆ ಬಾದಾಮಿ ಸಹಕಾರಿ

ನಾವು ಆರೋಗ್ಯವಾಗಿ ಬದುಕಿರಬೇಕಾದರೆ ನಮ್ಮ ದೇಹದ ಪ್ರತಿಯೊಂದು ಅಂಗವೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಇವು ಕಾರ್ಯ ನಿರ್ವಹಿಸಬೇಕಾದರೆ ನಾವು ಒಂದಷ್ಟು ಪೋಷಕ ಶಕ್ತಿಗಳನ್ನು ನೀಡುವ ಹಣ್ಣು ತರಕಾರಿ, ಬೀಜಗಳನ್ನು ಸೇವಿಸಬೇಕು.

ಮನುಷ್ಯನಿಗೆ ಮೆದುಳು ಮುಖ್ಯ ಅದು ಸದಾ ಆರೋಗ್ಯಕರವಾಗಿದ್ದರೆ ನಮ್ಮ ದೇಹ ಕ್ರಿಯಾಶೀಲವಾಗಿರಲು ಸಾಧ್ಯ. ಹೀಗಾಗಿ ಮೆದುಳಿಗೆ ಮತ್ತು ದೇಹಕ ಪೋಷಕ ಶಕ್ತಿ ನೀಡುವ ಆಹಾರವಾಗಿ ಬಾದಾಮಿಯನ್ನು ಸೇವಿಸುವುದು ಒಳ್ಳೆಯದು.

ಹಿಂದಿನ ಕಾಲದಲ್ಲಿ ತಮ್ಮ ಸುತ್ತಮುತ್ತ ಸಿಗುವ ಹಲವು ಕಾಡು ಹಣ್ಣುಗಳನ್ನು ಸೇವಿಸುತ್ತಾ ಕಾಲ ಕಳೆಯುತ್ತಿದ್ದರು. ಈ ಹಣ್ಣುಗಳು ಹಲವು ರೀತಿಯಲ್ಲಿ ದೇಹಕ್ಕೆ ಪೋಷಕವಾಗಿದ್ದವು. ಆದರೆ ಬದಲಾದ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿದ್ದ ಹಣ್ಣುಗಳು ಮಾಯವಾಗಿವೆ.

ಆಹಾರ ತಜ್ಞರು ನಮ್ಮ ಸುತ್ತಮುತ್ತ ದೊರೆಯುವ ಹಣ್ಣು, ತರಕಾರಿ ಎಲ್ಲದರ ಬಗ್ಗೆ ಸಂಶೋಧಿಸಿ ಯಾವುದರಲ್ಲಿ ಏನೇನಿದೆ? ಯಾವುದಕ್ಕೆ ಉಪಯೋಗವಾಗುತ್ತದೆ ಎಂಬುದನ್ನು ಕಂಡು ಹಿಡಿದಿದ್ದಾರೆ. ಆರೋಗ್ಯ ಕಾಪಾಡುವ, ರೋಗ ನಿರೋಧಕ ಶಕ್ತಿಯನ್ನು ಬೆಳೆಸುವ ಹೊಂದಿರುವ ಒಣ ಹಣ್ಣುಗಳ ಪೈಕಿ ಬಾದಾಮಿ ಪ್ರಮುಖವಾಗಿದೆ. ಇದು ತುಸು ದುಬಾರಿಯಾದರೂ ಬೆಲೆಗೆ ತಕ್ಕ ಪೌಷ್ಠಿಕಾಂಶಗಳನ್ನು ದೇಹಕ್ಕೆ ಒದಗಿಸಿ ಆರೋಗ್ಯವನ್ನು ಕಾಪಾಡುವಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ.
ಬಾದಾಮಿಯಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹಾಗೂ ಫೈಬರ್ ಹೇರಳವಾಗಿವೆ. ಅಷ್ಟೇ ಅಲ್ಲ ಇ ವಿಟಮಿನ್, ಡಿ ವಿಟಮಿನ್ ಹಾಗೂ ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂನಂತಹ ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇನ್ನು ಇದು ಓಮೆಗಾ 6 ಆಸಿಡ್ ಮಿಶ್ರಿತ ಕೊಬಿನಾಂಶ ಹೊಂದಿರುವುದರಿಂದ ಮೆದುಳಿನ ಸಮರ್ಪಕ ಕಾರ್ಯನಿರ್ವಹಣೆ ಮತ್ತು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಜತೆಗೆ ಬುದ್ದಿಮತ್ತೆ ಹೆಚ್ಚಿಸುತ್ತದೆಯಂತೆ. ಬಾದಾಮಿ ಎಣ್ಣೆಯೂ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮದ ರಕ್ಷಣೆಗೂ ಸಹಕಾರಿಯಾಗಿದೆ.

ಬಾದಾಮಿಯನ್ನು ಸೇವಿಸುವುದರಿಂದ ಹೃದಯ ಮೆದುಳು ಸೇರಿದಂತೆ ದೇಹದ ಕಾರ್ಯಚಟುವಟಿಕೆ ಸುಗಮವಾಗುತ್ತದೆ. ರೈಬೋಪ್ಲೇವಿನ್ ಮತ್ತು ಎಲ್-ಕಾರ್ನಿಟೈನ್ ಎಂಬ ಪೌಷ್ಠಿಕಾಂಶಗಳು ಇದರಲ್ಲಿರುವುದರಿಂದ ಮೆದುಳಿನ ಚಟುವಟಿಕೆಯನ್ನು ಉದ್ದೀಪನಗೊಳಿಸುತ್ತದೆ. ಆಂಟಿ-ಆಕ್ಸಿಡೆಂಟ್ ಇರುವುದರಿಂದ ರಕ್ತದ ಪರಿಚಲನೆ ಸುಗಮಗೊಳಿಸುವ ಶಕ್ತಿಯನ್ನು ಹೊಂದಿದೆ. ಯಕೃತ್ತಿನ ಸಮಸ್ಯೆಯಿಂದ ಉಂಟಾಗುವ ತೊಂದರೆಗಳನ್ನು ಪರಿಹರಿಸಿ ಶಕ್ತಿ ತುಂಬುತ್ತದೆ. ಗ್ಲೂಕೋಸ್ ಅಂಶ ನಿಯಂತ್ರಣಕ್ಕೆ ತಂದು ಮದುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮ ಸುಕ್ಕು ಕಟ್ಟುವುದನ್ನು ತಡೆದು ಕಾಂತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಿಮೋಗ್ಲೋಬಿನ್ ಹೆಚ್ಚಿ ಅನಿಮಿಯಾ (ರಕ್ತಹೀನತೆ)ವನ್ನು ತಡೆಗಟ್ಟುತ್ತದೆ. ರಾತ್ರಿ ವೇಳೆ ಮೂರ್ನಾಲ್ಕು ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನುವುದು ಉತ್ತಮ. ಬಾಯಿಗೆ ರುಚಿಯಾಗಿರುವ ಬಾದಾಮಿಯನ್ನು ಹಾಗೆಯೇ ಅಥವಾ ಗೋಡಂಬಿ, ದ್ರಾಕ್ಷಿಯೊಂದಿಗೆ ಬೆರೆಸಿ ತಿನ್ನಬಹುದು. ಇತರೆ ಖಾದ್ಯಗಳಲ್ಲಿ ಬಳಸಬಹುದು. ಹೆಚ್ಚಿನವರು ಬಾದಾಮಿ ತಿಂದರೆ ಒಳ್ಳೆಯದು ಎಂದು ಮಾತ್ರ ಗೊತ್ತು ಆದರೆ ನಮ್ಮ ದೇಹಕ್ಕೆ ಯಾವ ರೀತಿಯಲ್ಲಿ ಆರೋಗ್ಯ ಎಂಬುವುದು ಗೊತ್ತಿಲ್ಲ.

ಇವತ್ತಿನ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ವಸ್ತುಗಳು ಜಾಸ್ತಿಯಾಗಿರುವುದರಿಂದ ಒಂದಷ್ಟು ಆರೋಗ್ಯಕ್ಕೆ ಪೋಷಕವಾಗಿರುವ ಪದಾರ್ಥಗಳನ್ನು ಸೇವಿಸುವುದು ತುಂಬಾ ಒಳ್ಳೆಯದು. ನಾವು ದಿನನಿತ್ಯ ಹಲವು ರೀತಿಯ ಆಹಾರ ಸೇವಿಸುತ್ತೇವೆ. ಇದರ ನಡುವೆ ದೇಹಕ್ಕೆ ಪೋಷಕಾಂಶ ಒದಗಿಸುವ ಬಾದಾಮಿಯೂ ಇರಲಿ.