ದೇಹಕ್ಕೆ ಪೋಷಕ ಶಕ್ತಿ ನೀಡುವ ಅಂಜೂರ

ದೇಹಕ್ಕೆ ಪೋಷಕ ಶಕ್ತಿ ನೀಡುವ ಅಂಜೂರ

LK   ¦    May 21, 2018 12:12:40 PM (IST)
ದೇಹಕ್ಕೆ ಪೋಷಕ ಶಕ್ತಿ ನೀಡುವ ಅಂಜೂರ

ನಾವು ಸಮಯಕ್ಕೆ ಸರಿಯಾಗಿ ಊಟ ಮಾಡಿದರೂ ಕೂಡ ಆಹಾರದೊಂದಿಗೆ ಹಣ್ಣುಗಳ ಸೇವನೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಹಣ್ಣುಗಳಲ್ಲಿರುವ ಜೀವಸತ್ವಗಳು ನಮ್ಮ ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುವುದರಿಂದ ಹಲವು ರೋಗಗಳು ಬಾರದಂತೆ ತಡೆಯಲು ಸಾಧ್ಯವಾಗುತ್ತದೆ.

ನಮ್ಮ ಸುತ್ತಮುತ್ತ ನೂರಾರು ಬಗೆಯ ಹಣ್ಣುಗಳಿದ್ದರೂ ಒಂದೊಂದು ಹಣ್ಣು ಒಂದೊಂದು ರೀತಿಯ ಜೀವಸತ್ವ ಹೊಂದಿದ್ದು, ಹಲವು ರೋಗಗಳಿಗೆ ರಾಮಬಾಣವಾಗಿದೆ ಎಂದರೆ ತಪ್ಪಾಗಲಾರದು. ಇಂತಹ ಹಣ್ಣುಗಳ ಪೈಕಿ ಅಂಜೂರವೂ ಒಂದಾಗಿದೆ.

ಇದಕ್ಕೆ ಮಾರುಕಟ್ಟೆಯಲ್ಲಿ ಒಂದಷ್ಟು ಬೆಲೆ ಹೆಚ್ಚಾಗಿದ್ದರೂ ಆರೋಗ್ಯದ ದೃಷ್ಠಿಯಿಂದ ಇದರ ಸೇವನೆ ಮಾಡುವುದು ಬಹಳ ಒಳ್ಳೆಯದಾಗಿದೆ. ಹಲವಾರು ರೋಗಗಳನ್ನು ತಡೆಯುವ ಶಕ್ತಿಯನ್ನು ಹೊಂದಿರುವುದಲ್ಲದೆ, ಶರೀರಕ್ಕೆ ಶಕ್ತಿ ವರ್ಧಕವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪಿತ್ತ, ವಾತಗಳಿಗೂ ಇದು ಅತ್ಯಂತ ಉಪಯುಕ್ತ ಔಷಧಿಯಾಗಿರುವುದನ್ನು ಕಾಣಬಹುದಾಗಿದೆ.

ಅಂಜೂರ ಸೇವನೆಯಿಂದ ಪುರುಷರಲ್ಲಿ ವೀರ್ಯದ ಶಕ್ತಿ ಹೆಚ್ಚುವುದಲ್ಲದೆ, ನರ ನಾಡಿಗಳಿಗೂ ಇದು ಬಲವನ್ನು ಕೊಡುತ್ತದೆ. ದೇಹಕ್ಕೆ ಉಲ್ಲಾಸ ನೀಡುವುದಲ್ಲದೆ, ಮನಸ್ಸಿನ ಸ್ಥಿರತೆ ಕಾಪಾಡುತ್ತದೆ. ಇನ್ನು ಹೃದಯಕ್ಕೆ ಪೋಷಕ ಶಕ್ತಿಯನ್ನು ತುಂಬುತ್ತದೆ. ಮೂತ್ರ ವಿಕಾರವನ್ನು ಮಾತ್ರವಲ್ಲದೆ ದೇಹದ ಉಷ್ಣತೆ ಕಡಿಮೆ ಮಾಡಿ ತಂಪಾಗಿಸುತ್ತದೆ.

ಸಣ್ಣಗೆ ಇದ್ದೇನೆ ದಪ್ಪವಾಗುತ್ತಿಲ್ಲ ಎಂದು ಕೊರಗುವವರಿಗೆ ದೇಹದಾಢ್ರ್ಯ ಹೆಚ್ಚಿಸಲು ಅಂಜೂರದಿಂದ ಸಾಧ್ಯವಿದೆ. ಸಣ್ಣಗೆ, ಪೀಚಲು ದೇಹ ಇರುವವರು, ದಪ್ಪವಾಗಬೇಕೆಂದು ಬಯಸುವವರು ಮೊದಲಿಗೆ ಆಗಾಗ್ಗೆ ಕುಡಿಯುವ ಟೀ, ಕಾಫಿಗೆ ವಿದಾಯ ಹೇಳಿ ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಅಂಜೂರವನ್ನು ಹಾಲಿನಲ್ಲಿ ಕುದಿಸಿ ಕುಡಿಯಬೇಕು. ಅಷ್ಟೇ ಅಲ್ಲದೆ ಹಾಲಿನಲ್ಲಿ ಬೆಂದಿರುವ ಹಣ್ಣನ್ನು ಸೇವಿಸಬೇಕು. ವೀರ್ಯ ದೌರ್ಬಲ್ಯತೆಯಿಂದ ಬಳಲುವವರು ಧಾತುಗಳ ವೃದ್ಧಿಗೆ ಇದನ್ನು ಸೇವಿಸಬಹುದಾಗಿದೆ. ಏಕೆಂದರೆ ಇದು ವೀರ್ಯ ವೃದ್ಧಿಸುವ ಗುಣ ಹೆಚ್ಚಿನ ಪ್ರಮಾಣದಲ್ಲಿದೆ.

ಉಷ್ಣರೋಗದಿಂದ ಬಳಲುವವರಿಗೆ ದೇಹವನ್ನು ತಂಪಾಗಿಡಲು ಅಂಜೂರ ಸಹಕಾರಿಯಾಗಿದೆ. ಹಾಲಿಗೆ ಅಂಜೂರ ಹಾಕಿ ಕುಡಿಯುವುದರಿಂದ ನಿದ್ರಾಹೀನತೆ ದೂರವಾಗಿ ಸುಖಮಯ ನಿದ್ದೆ ಸಾಧ್ಯವಾಗಲಿದೆ. ಆಯುರ್ವೇದದ ಪ್ರಕಾರ ಇದು ಸಪ್ತ ಧಾತುಗಳಿಗೂ ಪುಷ್ಠಿ ನೀಡುತ್ತದೆಯಂತೆ. ಹೃದಯದ ಕಾಯಿಲೆಗಳಿಗೂ ಔಷಧಿಯಾಗಿದೆ.

ಕಫ ಕಟ್ಟಿಕೊಂಡು ಕೆಮ್ಮು ದಮ್ಮು ಕಾಯಿಲೆಯಿಂದ ಬಳಲುವವರಿಗೆ ಇದು ಉತ್ತಮ ಮದ್ದಾಗಿದೆ. ಏಕೆಂದರೆ ಇದರಲ್ಲಿ ಕಫ ಕರಗಿಸುವ ಗುಣವಿದ್ದು, ಇದನ್ನು ಸೇವಿಸುವುದರಿಂದ ಕಫ ಕರಗಿಸಿ ನಿರಾಳರನ್ನಾಗಿಸುತ್ತದೆ. ಮೂಲವ್ಯಾಧಿ ರೋಗಿಗಳು ಅಂಜೂರವನ್ನು ಸೇವಿಸುವುದರಿಂದ ಉಪಯೋಗವಾಗುತ್ತದೆ. ಅಧಿಕ ರಕ್ತದೊತ್ತಡ, ಮೂತ್ರ ಮತ್ತು ಯಕೃತ್ನಲ್ಲಿ ಉಂಟಾಗುವ ಕಲ್ಲನ್ನು ಕರಗಿಸುವ ಶಕ್ತಿಯೂ ಇದರಲ್ಲಿದೆ.

ಮೇಲ್ನೋಟಕ್ಕೆ ಅತ್ತಿ ಹಣ್ಣಿನಂತೆ ಕಾಣುವ ಅಂಜೂರವನ್ನು ಒಣಗಿಸಿ ಮಾರುಕಟ್ಟೆಗೆ ಮಾರಾಟಕ್ಕೆ ತರಲಾಗುತ್ತದೆ. ಇದರಲ್ಲಿರುವ ಚಿಕ್ಕ ಅಸಂಖ್ಯ ಬೀಜಗಳು ಆರೋಗ್ಯಕ್ಕೆ ಪೋಷಕವಾಗಿವೆ. ಇದರಲ್ಲಿ ಎ ಮತ್ತು ಸಿ ಅನ್ನಸತ್ವ ಹೇರಳವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ದೇಹಕ್ಕೆ ತುಂಬಿ ಸದಾ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

ಒಟ್ಟಾರೆ ಹಲವು ರೀತಿಯಲ್ಲಿ ದೇಹದ ಆರೋಗ್ಯದ ದೃಷ್ಠಿಯಿಂದ ಉಪಯೋಗಕಾರಿಯಾಗಿರುವ ಅಂಜೂರವನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ