ಹಾಲುಣಿಸುವ ತಾಯಿಯಂದಿರೇ ಗಮನಿಸಿ...

ಹಾಲುಣಿಸುವ ತಾಯಿಯಂದಿರೇ ಗಮನಿಸಿ...

Aug 08, 2017 12:47:51 PM (IST)
ಹಾಲುಣಿಸುವ ತಾಯಿಯಂದಿರೇ ಗಮನಿಸಿ...

ಮಗುವನ್ನು ಹೆತ್ತು ಹೊತ್ತು ಸಾಕುವುದೇನು ಸುಲಭದ ಕೆಲಸವಲ್ಲ. ತಾಯಿಯಾದವಳಿಗೆ ಪ್ರತಿಯೊಂದು ಹಂತವೂ ಕಷ್ಟಕರ. ತನ್ನ ಮಗುವಿಗಾಗಿ ಜೀವವನ್ನೇ ತೇಯ್ಯುವ ತಾಯಿಯಂದಿರು ಪ್ರತಿ ಕ್ಷಣವನ್ನೂ ಮಗುವಿಗಾಗಿಯೇ ಮುಡಿಪಾಗಿಡುತ್ತಾರೆ.

ಪ್ರತಿ ತಾಯಂದಿರು ಅದರಲ್ಲೂ ಹಾಲುಣಿಸುವ ತಾಯಂದಿರು ಇಂತಹ ಸಂದರ್ಭದಲ್ಲಿ ಬಹಳಷ್ಟು ಎಚ್ಚರ ಮತ್ತು ತಮ್ಮ ಆರೋಗ್ಯದತ್ತ ಕಾಳಜಿಯನ್ನು ವಹಿಸುವುದು ಅಗತ್ಯವಾಗಿರುತ್ತದೆ. ಏಕೆಂದರೆ ತಾನು ಆರೋಗ್ಯವಾಗಿದ್ದರೆ ಮಾತ್ರ ಮಗುವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಸಾಧ್ಯ. ಹೀಗಿರುವಾಗ ಮಗುವಿನ ಲಾಲನೆ, ಪೋಷಣೆ ನಡುವೆಯೂ ತನ್ನ ಆರೋಗ್ಯದತ್ತ ಹೆಚ್ಚಿನ ಗಮನವನ್ನು ವಹಿಸಬೇಕಾಗುತ್ತದೆ. ಮಗುವಿನ ಆರೋಗ್ಯ ತಾಯಿಯ ಆರೋಗ್ಯವನ್ನೇ ಅವಲಂಭಿಸಿರುವುದರಿಂದ ತಾಯಿ ಆರೋಗ್ಯವಾಗಿದ್ದರೆ ಮಾತ್ರ ಮಗುವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

ಹಾಲುಣಿಸುವ ಸಂದರ್ಭಗಳಲ್ಲಿ ತಾಯಿಗೆ ಅಗತ್ಯವಿರುವ ಪೌಷ್ಠಿಕಾಂಶಗಳಾದ ಪ್ರೊಟೀನ್, ಕೊಬ್ಬು, ಕ್ಯಾಲ್ಸಿಯಂ, ಕಬ್ಬಿಣಾಂಶ, ಅಗತ್ಯ ವಿಟಮಿನ್ ಇರುವ ಪೋಷಕಾಂಶಗಳು ಹೇರಳವಾಗಿರುವ ಆಹಾರಗಳನ್ನು ನೀಡಬೇಕಾಗುತ್ತದೆ. ಅಕ್ಕಿ, ರಾಗಿ. ಗೋಧಿ ಸೇರಿದಂತೆ ವಿವಿಧ ಧಾನ್ಯಗಳು, ಸಕ್ಕರೆಯ ಉತ್ಪನ್ನಗಳು, ಕಾಳುಕಡ್ಡಿಗಳಂತಹ ಹೆಚ್ಚಿನ ಕ್ಯಾಲೋರಿಯನ್ನು ತೆಗೆದುಕೊಳ್ಳಬೇಕು.

ಮಗುಹುಟ್ಟಿದ ಮೊದಲ ಆರು ತಿಂಗಳ ಕಾಲ ಪ್ರತಿದಿನ 29ಗ್ರಾಂನಷ್ಟು ಪ್ರೋಟೀನ್ ಅಂಶವುಳ್ಳ ಆಹಾರ ಸೇವಿಸಬೇಕು. ತದ ನಂತರ ವರ್ಷದವರೆಗೆ 15 ಗ್ರಾಂಗೆ ಪ್ರಮಾಣವನ್ನು ಇಳಿಸಬೇಕು. ಪ್ರೊಟೀನ್ಯುಕ್ತ ಆಹಾರ ಸೇವನೆ ಕಡಿಮೆ ಮಾಡುವುದು ಒಳ್ಳೆಯದಲ್ಲ ಏಕೆಂದರೆ ಹಾಲಿನ ಗುಣಮಟ್ಟಕ್ಕಿಂತ ಉತ್ಪಾದನೆಯ ಪ್ರಮಾಣ ಕಡಿಮೆಯಾಗುತ್ತದೆ.

ಈ ಸಂದರ್ಭದಲ್ಲಿ ಪ್ರೊಟೀನ್ ಅಂಶವುಳ್ಳ ಬೇಳೆಕಾಳುಗಳು, ನಟ್ಸ್, ಹಾಲು, ಮೊಸರು, ಮೀನು, ಮಾಂಸ, ಮೊಟ್ಟೆಯನ್ನು ಹೆಚ್ಚಾಗಿ ಸೇವಿಸುವುದು ಉತ್ತಮ. ಬಾದಾಮಿ, ಹಸಿರು ತರಕಾರಿಗಳನ್ನು ಹಾಲುಣಿಸುವ ತಾಯಂದಿರು ಅಗತ್ಯವಾಗಿ ಸೇವಿಸಬೇಕು. ಜತೆಗೆ ಕೊಬ್ಬಿನ ಅಂಶವೂ ಅಗತ್ಯವಿರುವುದರಿಂದ ಪ್ರತಿ ದಿನ ಕನಿಷ್ಠ 30ಗ್ರಾಂನಷ್ಟು ಕೊಬ್ಬು ಆಹಾರದಲ್ಲಿ ಬೆರೆತಿರುವಂತೆ ನೋಡಿಕೊಳ್ಳಬೇಕು.

ದೇಹಕ್ಕೆ ಕ್ಯಾಲ್ಸಿಯಂ ಅಗತ್ಯ ಇರುವುದರಿಂದ ಹಾಲಿನ ಉತ್ಪನ್ನ, ರಾಗಿ, ಕಡಲೆಕಾಳು, ಸೊಪ್ಪು ತರಕಾರಿ, ಸೋಯಾಬೀನ್ಸ್ ಸೇವನೆ ಮಾಡಬೇಕು. ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದೇಹಕ್ಕೆ ಆರೋಗ್ಯ ಮತ್ತು ಶಕ್ತಿ ನೀಡುತ್ತದೆ. ಕಬ್ಬಿಣಾಂಶವು ಆರೋಗ್ಯಕ್ಕೆ ಅಗತ್ಯ ಇರುವುದರಿಂದ ರಾಗಿ, ಹಸಿರು ತರಕಾರಿ, ಅವಲಕ್ಕಿ, ದ್ವಿದಳ ಧಾನ್ಯ, ಅಲಸಂದೆ ಕಾಳು, ಹುರುಳಿಕಾಳು, ಡ್ರೈಫ್ರೂಟ್ಸ್, ಮಾಂಸ, ಮೀನು ಸೇವನೆ ಒಳ್ಳೆಯದು.

ವಿಟಮಿನ್ ಗಳು ಅಗತ್ಯವಾಗಿ ಬೇಕಾಗುವುದರಿಂದ ಏಕದಳ, ದ್ವಿದಳ ಧಾನ್ಯಗಳು, ಬೆಂಡೆ, ತೊಂಡೆ ಕಾಯಿ, ಬೀನ್ಸ್, ಹಸಿರು ಬಟಾಣಿ, ಮಾಂಸ, ಮೊಟ್ಟೆ, ಹಾಲು, ಹಣ್ಣು, ನೆಲ್ಲಿಕಾಯಿ, ಮೊಳಕೆಕಾಳು ಮೊದಲಾದವುಗಳನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು. ಈ ಆಹಾರಗಳು ದೇಹದ ಆರೋಗ್ಯಕ್ಕೆ ಪೂರಕವಾದ ವಿಟಮಿನ್ ಗಳನ್ನು ಹೊಂದಿರುವುದರಿಂದ ಆರೋಗ್ಯ ವೃದ್ಧಿಸಲು ಸಹಕಾರಿಯಾಗುತ್ತದೆ.

ಇದೆಲ್ಲದರ ನಡುವೆ ದ್ರವ ಆಹಾರದ ಪದಾರ್ಥಗಳಿಗೂ ಒತ್ತು ನೀಡಬೇಕು. ದಿನಕ್ಕೆ ಎರಡರಿಂದ ಮೂರು ಲೀಟರ್ ನಷ್ಟಾದರೂ ನೀರು, ಸೂಪ್, ಜ್ಯೂಸ್, ಮಜ್ಜಿಗೆ ಹಾಲಿನಂತಹ ಪದಾರ್ಥಗಳನ್ನು ಸೇವಿಸಬೇಕು. ಇದರಿಂದ ಮಲಬದ್ಧತೆಯನ್ನು ದೂರವಿಡಲು ಸಾಧ್ಯವಾಗುತ್ತದೆ.

ಹಾಲುಣಿಸುವ ತಾಯಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದರೆ ಮಗು ಆರೋಗ್ಯವಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಆರೋಗ್ಯದ ಬಗ್ಗೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಆಹಾರದ ಬಗ್ಗೆ ಗಮನಹರಿಸಬೇಕು. ತಾವು ಆರೋಗ್ಯವಾಗಿರಬೇಕು ತಮ್ಮಿಂದಲೇ ಮತ್ತೊಂದು ಜೀವವೂ ಉಸಿರಾಡುತ್ತಿದೆ ಎಂಬುದನ್ನು ಮರೆಯಬಾರದು.

ಕಾಲಕಾಲಕ್ಕೆ ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದು ಅದರಂತೆ ಆಹಾರಕ್ರಮಗಳಲ್ಲಿನ ಬದಲಾವಣೆ, ಸೇರಿದಂತೆ ಆರೋಗ್ಯದ ಬಗ್ಗೆ ಮತ್ತು ಮಗುವಿನ ಆರೋಗ್ಯದ ಬಗ್ಗೆ ವಹಿಸಬೇಕಾದ ಕ್ರಮಗಳನ್ನು ಅರಿತುಕೊಂಡು ಅದರಂತೆ ನಡೆದುಕೊಂಡರೆ ಪರಿಪೂರ್ಣ ತಾಯಿಯಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಹಾಲುಣಿಸುವ ತಾಯಂದಿರು ಅವರಿವರು ನೀಡುವ ಸಲಹೆಗಳನ್ನೆಲ್ಲ ಪಾಲಿಸದೆ ಎಚ್ಚರಿಕೆ ವಹಿಸುವುದು ಅಗತ್ಯ. ಯಾವುದೇ ಆರೋಗ್ಯದ ಸಮಸ್ಯೆ ಎದುರಾದಾಗಲೂ ಸ್ವಯಂ ಚಿಕಿತ್ಸೆ ಮಾಡದೆ ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆಗಳನ್ನು ಪಡೆದು ಮುನ್ನಡೆಯುವುದು ಉತ್ತಮ ಎನ್ನುವುದನ್ನು ಮರೆಯಬಾರದು.