ಒಳ್ಳೆಯ ಆರೋಗ್ಯವನ್ನೇ ಧ್ಯಾನಿಸೋಣ!

ಒಳ್ಳೆಯ ಆರೋಗ್ಯವನ್ನೇ ಧ್ಯಾನಿಸೋಣ!

Jan 03, 2017 03:17:56 PM (IST)

ಬಹಳಷ್ಟು ಜನ ದೊಡ್ಡ ದೊಡ್ಡ ಕಾಯಿಲೆ ಬಂದರೂ ಅದರಿಂದ ಪಾರಾಗಿ ಬಂದವರಿದ್ದಾರೆ. ಅವರ ಕಾಯಿಲೆ ಗುಣವಾಗಲು ಔಷಧಿ ಎಷ್ಟು ಮಹತ್ವವೋ ಅಷ್ಟೇ ಅವರಲ್ಲಿರುವ ಆತ್ಮವಿಶ್ವಾಸ ಮತ್ತು ಒಳ್ಳೆಯದಾಗುತ್ತೆ ಎಂಬ ಧ್ಯಾನವೂ ಕಾರಣ ಎಂದರೆ ತಪ್ಪಾಗಲಾರದು.

ಸಾಮಾನ್ಯವಾಗಿ ನಾವು ಒಳ್ಳೆಯವರಾಗಬೇಕಾದರೆ ಸದಾ ಒಳ್ಳೆಯದನ್ನೇ ಧ್ಯಾನಿಸಬೇಕು ಎಂಬ ಮಾತಿದೆ. ಅದರಂತೆ ಒಳ್ಳೆಯ ಆರೋಗ್ಯವನ್ನು ಹೊಂದಬೇಕಾದರೆ ಸದಾ ಒಳ್ಳೆಯ ಆಹಾರ, ಒಳ್ಳೆಯ ವಾತಾವರಣದ ಅಗತ್ಯವಿದೆ. ಇದರ ಜತೆಗೆ ಇದೆಲ್ಲವನ್ನು ಸ್ವೀಕರಿಸುವ ಒಳ್ಳೆ ಮನಸ್ಸು ಕೂಡ ಬೇಕಾಗುತ್ತದೆ.

ಏನೇ ಕೆಲಸ ಮಾಡಿದರೂ ಅದರತ್ತ ಮನಸ್ಸನ್ನು ಸಂಪೂರ್ಣ ಕೇಂದ್ರೀಕರಿಸದೆ ಹೋದರೆ ಅದು ಪರಿಪೂರ್ಣವಾಗುವುದಿಲ್ಲ. ಏಕೆಂದರೆ ನಮಗೆ ಗೊತ್ತಿಲ್ಲದ ಹಾಗೆ ನಾವು ಏನಾದರೊಂದು ಎಡವಟ್ಟು ಮಾಡಿರುತ್ತೇವೆ. ತಪ್ಪಿನ ಅರಿವಾದ ನಂತರವೇ ಅಯ್ಯೋ ನಾನು ತಪ್ಪು ಮಾಡಿಬಿಟ್ಟೆ ಮನಸ್ಸಿಟ್ಟು ಮಾಡಬೇಕಿತ್ತು. ಅದರತ್ತ ನಿಗಾ ವಹಿಸಬೇಕಿತ್ತೆಂಬ ಮಾತುಗಳನ್ನಾಡುತ್ತೇವೆ.

ಈಗ ಒಳ್ಳೆಯದನ್ನು ಧ್ಯಾನಿಸೋದಕ್ಕೂ ಸಮಯವಿಲ್ಲದ ಸ್ಥಿತಿಯಲ್ಲಿದ್ದೇವೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದು ರಾತ್ರಿ ಮತ್ತೆ ಅದೇ ಹಾಸಿಗೆಗೆ ಹೋಗುವ ತನಕವೂ ಒಂದಲ್ಲ ಒಂದು ಒತ್ತಡ ನಮ್ಮನ್ನು ಕಾಡುತ್ತಿರುತ್ತದೆ. ನೆಮ್ಮದಿ ತರುವ ಕೆಲಸಕ್ಕಿಂತ ನಾವು ಹಣ ತರುವ ಕೆಲಸವನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಅದರಲ್ಲಿ ಒತ್ತಡ, ಉದ್ವೇಗ ಎಲ್ಲವೂ ಇದೆ. ಹೀಗಿರುವಾಗ ನಾವು ನೆಮ್ಮದಿಯಾಗಿ ಬದುಕಲು ಹೇಗೆ ಸಾಧ್ಯ? ಹಣ ಕೈತುಂಬಾ ಬರುತ್ತಿದೆ. ಅದರಿಂದ ಐಷಾರಾಮಿ ವಸ್ತುಗಳನ್ನೆಲ್ಲ ತಂದು ಗುಡ್ಡೆ ಹಾಕಿಕೊಂಡಿದ್ದೇವೆ. ಈ ವಸ್ತುಗಳು, ಸವಲತ್ತುಗಳು ನಮ್ಮ ದೈಹಿಕ ಶ್ರಮವನ್ನು ಒಂದಷ್ಟು ತಗ್ಗಿಸಬಹುದಾದರೂ ಮಾನಸಿಕ ನೆಮ್ಮದಿಯನ್ನು ಅವು ತಂದುಕೊಡುತ್ತಿಲ್ಲ.

ದೈಹಿಕ ಶ್ರಮಕ್ಕಿಂತ ಮಾನಸಿಕ ಶ್ರಮವೇ ಜಾಸ್ತಿಯಾಗಿರುವುದರಿಂದ ಆರೋಗ್ಯ ಹದಗೆಡುತ್ತಿದೆ. ನಮಗೆ ಅರಿವಿಲ್ಲದೆ ಕಾಯಿಲೆಗಳು ನಮ್ಮನ್ನು ಮುತ್ತಿಕೊಳ್ಳುತ್ತಿವೆ. ಕಷ್ಟಪಟ್ಟು ದುಡಿದರೂ ಇಷ್ಟಪಟ್ಟಿದನ್ನು ತಿನ್ನಲಾಗದೆ ಒದ್ದಾಡುತ್ತಿದ್ದೇವೆ. ಇಂತಹದೊಂದು ಬದುಕು ಬೇಕಾ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಸ್ಥಿತಿಗೆ ಬಂದು ನಿಂತಿದ್ದೇವೆ.

ಏನೇ ಮಾಡಬೇಕಾದರೂ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಆದ್ದರಿಂದ ಮಾನಸಿಕ ಆರೋಗ್ಯ ಬೇಕೆಂದರೆ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕು. ನಮ್ಮ ವೈರುದ್ಧಗಳ ನಡುವೆಯೂ ಅಂಥ ಬದುಕನ್ನು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಅದನ್ನು ಅಭ್ಯಸಿಸುತ್ತಾ ಹೋದರೆ ಸುಲಭವಾಗಿ ಕಾಣುತ್ತದೆ.

ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಕಾಡುವ ಮಾನಸಿಕ ವಿಕಾರತೆ, ತುಮುಲ ಇವುಗಳನ್ನೆಲ್ಲ ಬದಿಗೊತ್ತಿ ಪರಿಶುದ್ಧ ಮನಸ್ಸನ್ನು ನೆಲೆಗೊಳಿಸಬೇಕು. ಇದು ಅಷ್ಟು ಸುಲಭವಲ್ಲ. ಆದರೆ ಕಷ್ಟವೂ ಅಲ್ಲ. ಕೆಲವರು ಸುಮ್ಮನೆ ಕುಳಿತಾಗಲೂ ದೇವರ ನಾಮ ಜಪ ಮಾಡುತ್ತಿರುತ್ತಾರೆ. ಅದು ನಮಗೆ ವಿಚಿತ್ರವಾಗಿ ಕಂಡು ಬಂದರೂ ಅದು ಎಲ್ಲೆಂದರಲ್ಲಿ ಹರಡಿ ಹೋಗುವ ಮನಸ್ಸನ್ನು ಎಳೆದು ತಂದು ಒಂದೆಡೆ ಕಟ್ಟಿಹಾಕುವ ಯತ್ನ ಎಂದರೂ ತಪ್ಪಾಗುವುದಿಲ್ಲ.

ಒಳ್ಳೆಯದನ್ನು ಧ್ಯಾನ ಮಾಡೋದಕ್ಕೆ ಧ್ಯಾನ ಕೇಂದ್ರಕ್ಕೆ ಹೋಗ ಬೇಕಾಗಿಲ್ಲ. ಇದ್ದಲ್ಲೇ ಒಳ್ಳೆಯ ವಿಚಾರಗಳ ಬಗ್ಗೆ ಆಲೋಚಿಸುವುದು ಮತ್ತು ಒಳ್ಳೆಯದನ್ನೇ ಬಯಸಿದರೆ ಸಾಕು.

ಯಾರು ಯಾವುದನ್ನು ಕುರಿತು ಧ್ಯಾನಿಸುತ್ತಾರೆಯೋ ಅವರು ಅದೇ ಆಗುತ್ತಾರೆ. ಹೀಗಾಗಿ ನಾವು ಸದಾ ಒಳ್ಳೆಯದನ್ನೇ ಧ್ಯಾನಿಸೋಣ.