ನೇರಳೆ ಹಣ್ಣಿನಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗವಿದೆ ಗೊತ್ತಾ?

ನೇರಳೆ ಹಣ್ಣಿನಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗವಿದೆ ಗೊತ್ತಾ?

LK   ¦    May 03, 2018 02:24:04 PM (IST)
ನೇರಳೆ ಹಣ್ಣಿನಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗವಿದೆ ಗೊತ್ತಾ?

ಬೇಸಿಗೆಯಲ್ಲಿ ನೇರಳೆ ಹಣ್ಣು ಬಿಡುವುದರಿಂದ ಮಾರುಕಟ್ಟೆಗೆ ಮಾರಾಟಕ್ಕೆ ಬರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುವ ಹಣ್ಣುಗಳು ಹೈಬ್ರಿಡ್ ತಳಿಗಳಾಗಿದ್ದು ಹಣ್ಣುಗಳು ಗಾತ್ರದಲ್ಲಿ ದೊಡ್ಡದಿರುತ್ತವೆ. ಇವು ತಿನ್ನಲು ಅಷ್ಟೊಂದು ರುಚಿಯಾಗಿರುವುದಿಲ್ಲ. ಆದರೆ ಮಲೆನಾಡಿನ ಕಾಡುಗಳಲ್ಲಿ ದೊರೆಯುವ ನೇರಳೆ ಹಣ್ಣುಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ರುಚಿಯಾಗಿರುತ್ತವೆ. ಬೇಸಿಗೆ ಕಾಲದ ಕೊನೆಯಲ್ಲಿ ಇವು ಹಣ್ಣಾಗುತ್ತವೆ. ಚಿಕ್ಕ ಮರಗಳಿಂದ ಹಿಡಿದು ಹೆಮ್ಮರವಾಗಿ ಬೆಳೆಯುವ ಮರಗಳಲ್ಲಿಯೂ ಹೇರಳವಾಗಿ ಹಣ್ಣು ದೊರೆಯುತ್ತವೆ. ಈ ಹಣ್ಣುಗಳನ್ನು ಗ್ರಾಮೀಣ ಪ್ರದೇಶದಲ್ಲಿ ಜನರಿಗಿಂತ ಪ್ರಾಣಿಪಕ್ಷಿಗಳೇ ಜಾಸ್ತಿ ತಿನ್ನುವುದನ್ನು ಕಾಣಬಹುದು.

ಮನೆ ಬಳಿ ನೇರಳೆ ಮರವಿದ್ದರೆ ಅದರಲ್ಲಿ ಹಣ್ಣುಗಳಿದ್ದರೆ ಅವುಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ ಸೇವಿಸಿ. ಏಕೆಂದರೆ ಈ ನೇರಳೆ ಹಣ್ಣುಗಳು ಸಾಮಾನ್ಯವಲ್ಲ. ಇವುಗಳಲ್ಲಿಯೂ ಆರೋಗ್ಯದಾಯಕ ಪೋಷಕಾಂಶಗಳು ಬಹಳಷ್ಟು ಇವೆ. ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಮಾಡುತ್ತಿದ್ದವರು ತಮ್ಮ ಸುತ್ತ ಸಿಗುತ್ತಿದ್ದ ಕಾಡುಹಣ್ಣುಗಳನ್ನೇ ತಿನ್ನುತ್ತಿದ್ದರು. ಅದರಲ್ಲಿರುವ ಪೋಷಕಾಂಶಗಳು ಅವರ ಆರೋಗ್ಯವನ್ನು ಕಾಪಾಡುತ್ತಿತ್ತು.

ಇವತ್ತು ನೇರಳೆ ಹಣ್ಣಿನ ಸುಧಾರಿತ ತಳಿಗಳು ಬಂದಿದ್ದು ರೈತರು ತಮ್ಮ ಜಮೀನುಗಳಲ್ಲಿ ಬೆಳೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿಗೆ ಹೆಚ್ಚಿನ ಬೆಲೆಯಿರುವುದನ್ನು ನಾವು ಕಾಣಬಹುದಾಗಿದೆ. ಈ ನೇರಳೆಹಣ್ಣಿನಿಂದ ಹತ್ತು ಹಲವು ಉಪಯೋಗವಿರುವ ಕಾರಣದಿಂದಾಗಿ ಜನ ಇದಕ್ಕೆ ಮುಗಿ ಬೀಳುತ್ತಿದ್ದಾರೆ.

ಇಷ್ಟಕ್ಕೂ ನೇರಳೆ ಹಣ್ಣಿನಲ್ಲಿರುವ ಪೋಷಕಾಂಶಗಳು ಯಾವುವು ಎಂಬುದನ್ನು ನೋಡುವುದಾದರೆ ನೂರು ಗ್ರಾಂ ಹಣ್ಣಿನಲ್ಲಿ ತೇವಾಂಶ 83.7ಗ್ರಾಂ, ಸಸಾರಜನಕ 0.7, ಮೇದಸ್ಸು 0.3, ಖನಿಜಾಂಶ 0.3, ಕಾರ್ಬೋಹೈಡ್ರೇಟ್ 14, ಕ್ಯಾಲ್ಸಿಯಂ 15 ಮಿ.ಗ್ರಾಂ, ಫಾಸ್ಫರಸ್ 1.5, ಕಬ್ಬಿಣ 1.2, ಥಿಯಾಮಿನಾ 2.23, ರೈಬೋಫ್ಲಾವಿನ್ 0.01, ನಯಾಸಿನ್ 0.1, ಸಿ ಜೀವಸತ್ವ 18 ಮಿಲಿಗ್ರಾಂ ಇದೆ ಹೀಗಾಗಿ ಇದನ್ನು ಸೇವಿಸುವುದರಿಂದ ಒಂದಷ್ಟು ಉಪಯೋಗವನ್ನು ಕಾಣಬಹುದಾಗಿದೆ.

ಬೇಸಿಗೆಯ ದಿನಗಳಲ್ಲಿ ನೇರಳೆಯು ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಇದರಲ್ಲಿ ಬಾಯಾರಿಕೆಯನ್ನು ಉಪಶಮನಗೊಳಿಸುವ ಶಕ್ತಿಯಿದ್ದು ಇದನ್ನು ಜ್ಯೂಸ್ ಮಾಡಿ ಕುಡಿದರೆ ದಾಹವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ನಿದ್ದೆಕೊರತೆ, ಅತಿಯಾದ ಟೀ ಸೇವನೆಯಿಂದ ಉಂಟಾಗುವ ಪಿತ್ತದ ತೊಂದರೆಯನ್ನು ನೇರಳೆ ಹಣ್ಣನ್ನು ಸೇವಿಸುವುದರಿಂದ ಶಮನ ಮಾಡಬಹುದಾಗಿದೆ.

ಜೀರ್ಣವಾಗದೆ ತೊಂದರೆ ಪಡುವವರು ನೇರಳೆಹಣ್ಣನ್ನು ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ. ಅಜೀರ್ಣದಿಂದಾಗುವ ಬೇಧಿಗೂ ನೇರಳೆ ಶರಬತ್ತು ಉತ್ತಮ ಔಷಧಿಯಾಗಿದೆ. ಇನ್ನು ಅರ್ಧ ಲೋಟದಷ್ಟು ನೇರಳೆ ಹಣ್ಣಿನ ಶರಬತ್ತಿಗೆ ಒಂದು ಚಮಚದಷ್ಟು ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಅಂಗಾಲು, ಅಂಗೈ ಉರಿ ಕಡಿಮೆಯಾಗುವುದಲ್ಲದೆ ಒಳ್ಳೆಯ ನಿದ್ದೆಯೂ ಬರುತ್ತದೆ.

ನೇರಳೆಹಣ್ಣು ಮಾತ್ರವಲ್ಲದೆ ಎಲೆಗಳು ಕೂಡ ಉಪಯೋಗಕಾರಿಯಾಗಿದ್ದು, ಎಳೆಯ ಎಲೆಗಳನ್ನು ಹಲ್ಲುಗಳಿಂದ ಚೆನ್ನಾಗಿ ಅಗೆಯುವುದರಿಂದ ವಸಡು ಮತ್ತು ಹಲ್ಲುಗಳು ಗಟ್ಟಿಯಾಗುತ್ತವೆಯಂತೆ. ಅಷ್ಟೇ ಅಲ್ಲ ವಸಡಿನ ರಕ್ತಸ್ರಾವವೂ ನಿಯಂತ್ರಣಕ್ಕೆ ಬರುತ್ತದೆ. ಅತಿಸಾರ, ಆಮಶಂಕೆ, ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದರೆ ಎಳೆಯ ನೇರಳೆ ಎಲೆಗಳಿಂದ ಕಷಾಯ ತಯಾರಿಸಿ ಮೂರು ಹೊತ್ತು ಒಂದು ಚಮಚದಷ್ಟು ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಒಟ್ಟಾರೆ ಹೇಳಬೇಕೆಂದರೆ ನೇರಳೆ ಹಣ್ಣು, ಎಲೆ, ತೊಗಟೆ ಎಲ್ಲವೂ ಉಪಯುಕ್ತವಾಗಿದ್ದು, ಅವುಗಳ ಉಪಯೋಗವನ್ನು ಅರಿತು ಉಪಯೋಗಿಸಿದರೆ ಆರೋಗ್ಯವಾಗಿರಲು ಸಾಧ್ಯವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ