ಹಾಲುಣಿಸುವಲ್ಲಿ ತಪ್ಪು ಕಲ್ಪನೆ ಬೇಡ...

ಹಾಲುಣಿಸುವಲ್ಲಿ ತಪ್ಪು ಕಲ್ಪನೆ ಬೇಡ...

LK   ¦    Aug 05, 2017 04:52:40 PM (IST)
ಹಾಲುಣಿಸುವಲ್ಲಿ ತಪ್ಪು ಕಲ್ಪನೆ ಬೇಡ...

ಆಗಸ್ಟ್ ಮೊದಲ ವಾರವನ್ನು ಸ್ತನ್ಯಪಾನ ಸಪ್ತಾಹವಾಗಿ ಆಚರಿಸಲಾಗುತ್ತಿದೆ. ಆ ಮೂಲಕ ಮಗುವಿಗೆ ತಾಯಿಯ ಏಕೆ ಸರ್ವೋತ್ತಮ ಮತ್ತು ಹಾಲುಣಿಸುವುದರಿಂದ ಮಗು ಮತ್ತು ತಾಯಿಗೆ ಆಗುವ ಲಾಭವೇನು ಎಂಬುದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ಆಧುನಿಕ ಯುಗ ಅದರಲ್ಲೂ ಎಲ್ಲರೂ ಅಕ್ಷರಸ್ತರೇ ಆಗಿರುವ ಈ ಸಂದರ್ಭದಲ್ಲಿಯೂ ಸ್ತನ್ಯಪಾನ ಮಾಡಿ ಎಂದು ಕರಪತ್ರ ಹಂಚಿ, ಮನೆಮನೆಗೆ ತೆರಳಿ ಪ್ರಚಾರ ಮಾಡುವಂತಹ ಪರಿಸ್ಥಿತಿ ಒದಗಿ ಬಂದಿರುವುದು ಮಾತ್ರ ಅಚ್ಚರಿಯ ಸಂಗತಿಯಾಗಿದೆ. ಹಿಂದಿನಿಂದಲೂ ಮಗುವಿಗೆ ತಾಯಿಯ ಹಾಲನ್ನೇ ಏಕೆ ಕೊಡಬೇಕು ಎಂಬುದರ ಬಗ್ಗೆ, ಹಾಲಿನಲ್ಲಿರುವ ಪೋಷಕಾಂಶಗಳು ಮಗುವಿನ ಆರೋಗ್ಯದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಮಾಹಿತಿಯಿದ್ದರೂ ಹಾಲುಣಿಸುವಿಕೆಯ ಸುತ್ತಲೂ ಹತ್ತು ಹಲವು ತಪ್ಪು ಕಲ್ಪನೆಗಳು ಇಲ್ಲದಿಲ್ಲ. ಅವು ಯಾವುದೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಕೆಲವು ಬಾಯಿಯಿಂದ ಬಾಯಿಗೆ ಬಂದವುಗಳಾಗಿವೆ.

ಉದಾಹರಣೆಗೆ ಹಾಲುಣಿಸುವ ಅನೇಕ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗುವುದಿಲ್ಲ ಎಂಬ ಮಾತುಗಳಿವೆ. ಆದರೆ ಆಧುನಿಕ ವೈದ್ಯಲೋಕ ಇದನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಮಹಿಳೆಯರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಹಾಲನ್ನು ಉತ್ಪಾದಿಸುತ್ತಾರೆ. ಬಹುಪಾಲು ಶಿಶುಗಳು ನಿಧಾನವಾಗಿ ತೂಕಗಳಿಸುವ ಅಥವಾ ಕಳೆದುಕೊಳ್ಳುತ್ತವೆ. ಇದಕ್ಕೆ ಸಾಕಷ್ಟು ಹಾಲು ಇಲ್ಲ ಎಂಬುದಲ್ಲ. ಬದಲಿಗೆ ತಾಯಿ ಬಳಿಯಿರುವ ಹಾಲು ಮಗುವಿಗೆ ಸಮರ್ಪಕವಾಗಿ ದೊರಕುತ್ತಿಲ್ಲ ಎನ್ನುವುದೇ ಮುಖ್ಯ ಕಾರಣವಂತೆ. ಇನ್ನು ಸ್ವಲ್ಪ ಮುಂದೆ ಹೋಗಿ ಹೇಳುವುದಾದರೆ ಮಕ್ಕಳು ತೂಕ ಕಳೆದುಕೊಳ್ಳಲು ತಾಯಿಹಾಲಿನ ಉತ್ಪಾದನೆ ಕಡಿಮೆಯಾಗಿರುವುದಲ್ಲ. ಬದಲಿಗೆ ಸರಿಯಾಗಿ ಸ್ತನಪಾನ ಮಾಡಿಸದಿರುವುದು, ವಿಳಂಬವಾಗಿ ಹಾಲುಣಿಸುವುದು, ಆಗಾಗ ಹಾಲುಣಿಸದಿರುವುದಂತೆ.

ಹಾಲುಣಿಸುವ ತಾಯಂದಿರು ಸ್ತನದಲ್ಲಿ ಹಾಲು ತುಂಬಲು ಸಮಯ ನೀಡಬೇಕು ಎಂಬುದು ಸರಿಯಲ್ಲ. ಏಕೆಂದರೆ ಮಗು ಹಾಲುಕುಡಿಯುತ್ತಿದ್ದಂತೆಯೇ ಸ್ತನದಲ್ಲಿ ಹಾಲು ಉತ್ಪತ್ತಿಯಾಗುತ್ತಲೇ ಇರುತ್ತದೆ. ಹಾಗಾಗಿ ನಿರ್ದಿಷ್ಟ ಸಮಯವನ್ನು ಕಾಯುವ ಅಗತ್ಯವಿಲ್ಲ. ಹಾಲುಣಿಸುವ ತಾಯಂದಿರು ಗ್ಯಾಸ್ಟಿಕ್ ಉಂಟಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನಂಬಲಾಗುವುದಿಲ್ಲ. ಎದೆಹಾಲು ರಕ್ತದ ಹರಿವಿನಲ್ಲಿರುವ ಅಂಶಗಳಿಂದ ತಯಾರಾಗುತ್ತದೆ ಹೊರತು ಹೊಟ್ಟೆಯಲ್ಲಿರುವ ಪದಾರ್ಥಗಳಿಂದಲ್ಲ. ಆದ್ದರಿಂದ ಬಹುತೇಕ ಮಕ್ಕಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ತಾಯಿ ಆಹಾರ ಪದ್ಧತಿಯನ್ನು ತ್ಯಜಿಸುವುದಕ್ಕಿಂತ ಸ್ತನಪಾನ ತಂತ್ರವನ್ನು ಬದಲಾಯಿಸಿಕೊಳ್ಳುವುದು ಉತ್ತಮ.ಮಗುವಿಗೆ ಅತಿಸಾರ ಅಥವಾ ವಾಂತಿಯಾಗುತ್ತಿದ್ದರೆ ತಾಯಿ ಸ್ತನಪಾನ ನಿಲ್ಲಿಸುವ ಅಗತ್ಯವಿಲ್ಲ. ಮಗುವಿನ ಕರುಳು ಸೋಂಕಿಗೆ ಎದೆಹಾಲು ಅತ್ಯುತ್ತಮ ಆಹಾರ. ಸ್ವಲ್ಪ ಸಮಯದವರೆಗೂ ಇತರೆ ಗಟ್ಟಿ ಆಹಾರವನ್ನು ನಿಲ್ಲಿಸುವುದು ಒಳ್ಳೆಯದು. ಆದರೆ ಹಾಲುಕುಡಿಸುವುದನ್ನು ಮಾತ್ರ ನಿಲ್ಲಿಸದೆ ಮುಂದುವರೆಸಬೇಕು.

ರಾತ್ರಿವೇಳೆ ಹಾಲುಣಿಸುವುದು ಮುಖ್ಯವಲ್ಲ ಎನ್ನುವವರಿದ್ದಾರೆ. ಆದರೆ ಇದು ತಪ್ಪು ಕಲ್ಪನೆ. ಏಕೆಂದರೆ ಹಾಲು ಉತ್ಪಾದನೆಗೆ ಕಾರಣವಾದ ಹಾರ್ಮೋನ್ಗಳು ರಾತ್ರಿ ವೇಳೆಯಲ್ಲಿ ಗರಿಷ್ಠ ಪ್ರಮಾಣದಲ್ಲಿರುತ್ತವೆ. ಇವುಗಳ ಉತ್ಪಾದನೆಗಾಗಿ ರಾತ್ರಿ ವೇಳೆ ಸ್ತನಪಾನ ಮಾಡಿಸುವುದು ಅಗತ್ಯ. ಹಾಲುಣಿಸುವಾಗ ಸ್ತನಗಳನ್ನು ಬದಲಾಯಿಸಬೇಕು ಎಂಬುದಾಗಿ ಕೆಲವರು ಹೇಳುತ್ತಾರೆ. ಆದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಶಿಶು ಮೊದಲನೆಯ ಸ್ತನವನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು. ಕೆಲವರು ಹೇಳುವ ಮಾತುಗಳಿಗೆ ಕಿವಿಕೊಡದೆ ತಮ್ಮ ಸಂದೇಹ ಮತ್ತು ಸಮಸ್ಯೆಗಳನ್ನು ವೈದ್ಯರ ಬಳಿ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ. ಅದು ಬಿಟ್ಟು ಕೆಲವೊಂದು ತಪ್ಪು ಕಲ್ಪನೆಗಳನ್ನು ಮನದಲ್ಲಿಟ್ಟುಕೊಂಡು ತಮ್ಮ ಮತ್ತು ಮಗುವಿನ ಆರೋಗ್ಯ ಹಾಳು ಮಾಡಿಕೊಳ್ಳುವುದು ಮೂರ್ಖತನವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ