ಮನುಷ್ಯನನ್ನು ಕಾಡುವ ಮಧುಮೇಹದತ್ತ ಎಚ್ಚರವಾಗಿರಿ!

ಮನುಷ್ಯನನ್ನು ಕಾಡುವ ಮಧುಮೇಹದತ್ತ ಎಚ್ಚರವಾಗಿರಿ!

Nov 17, 2017 03:46:42 PM (IST)
ಮನುಷ್ಯನನ್ನು ಕಾಡುವ ಮಧುಮೇಹದತ್ತ ಎಚ್ಚರವಾಗಿರಿ!

ನಮ್ಮ ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗುವುದೇ ಮಧುಮೇಹ ಕಾಯಿಲೆಯಾಗಿದೆ. ಮೇಧೋಜಿರಕ ಗ್ರಂಥಿಯು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣಕ್ಕೆ ತಕ್ಕಷ್ಟು ಇನ್ಸುಲಿನ್ ಎಂಬ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ.

ಈ ಇನ್ಸುಲಿನ್ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಜೀವಕೋಶಗಳ ಒಳಗೆ ಸೇರಿಸಲು ಸಹಕರಿಸಿ ಶರೀರಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.

ಒಂದು ವೇಳೆ ಮೇಧೋಜಿರಕ ಗ್ರಂಥಿಯ ಮಾಮೂಲಿನ ಕಾರ್ಯಕ್ಷಮತೆ ಕಡಿಮೆಯಾಗಿ ಅಥವಾ ಇನ್ಸುಲಿನ್ ಉತ್ಪಾದನೆ ನಿಂತು ಹೋದರೆ ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ಸಕ್ಕರೆ ಪ್ರಮಾಣ ಹೆಚ್ಚಾಗುವುದೇ ಮಧುಮೇಹ ಕಾಯಿಲೆಯಾಗಿದೆ. ಇದನ್ನು ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಎಂದು ಕರೆಯುತ್ತಾರೆ.

ಈ ಕಾಯಿಲೆ ಬಂತೆಂದರೆ ಪ್ರತಿದಿನವೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏನೇ ಆಹಾರ ಸೇವನೆ ಮಾಡಬೇಕಾದರೂ ಯೋಚಿಸಿ ಮಾಡಬೇಕಾಗುತ್ತದೆ. ಕಾಯಿಲೆಗೆ ಒಳಗಾದವರು ರಕ್ತ ಪರೀಕ್ಷೆ ಮಾಡಿಸಿ ವೈದ್ಯರು ಹೇಳುವ ಆಹಾರ ಕ್ರಮ, ಚಿಕಿತ್ಸೆ, ನಿರ್ವಹಣೆಯನ್ನು ಅನುಸರಿಸಬೇಕಾಗುತ್ತದೆ.

ಮಧುಮೇಹ ಕಾಯಿಲೆ ಉಲ್ಬಣಗೊಂಡು ಆಹಾರ, ವ್ಯಾಯಾಮ, ಮಾತ್ರೆಗಳಿಂದಲೂ ನಿಯಂತ್ರಣಕ್ಕೆ ತರುವುದು ಅಸಾಧ್ಯ ಎಂಬ ಮಟ್ಟಿಗೆ ಬಂದಾಗ ಇನ್ಸುಲಿನ್ ತಾತ್ಕಾಲಿಕವಾಗಿ ಬಳಸಬೇಕಾಗುತ್ತದೆ. ಮಧುಮೇಹ ಆರಂಭದ ಸೂಚನೆ ತಿಳಿದಾಗಲೇ ಅದನ್ನು ನಿಯಂತ್ರಿಸಲು ಮುಂದಾಗಬೇಕು.
ಕಣ್ಣಿಗೆ ಮಾರಕ
ಮಧುಮೇಹ ದೇಹದ ಮೇಲೆ, ಆರೋಗ್ಯದ ಮೇಲೆ ಅಷ್ಟೇ ಅಲ್ಲ ಕಣ್ಣಿನ ಮೇಲೆಯೂ ಪರಿಣಾಮ ಬೀರುತ್ತದೆ. ಇದನ್ನು ಅರಿತು ಒಂದಷ್ಟು ಎಚ್ಚರಿಕೆ, ಕಾಳಜಿ ವಹಿಸದೆ ಹಾಗೂ ಎಚ್ಚೆತ್ತುಕೊಂಡು ಸೂಕ್ತ ಚಿಕಿತ್ಸೆ ಪಡೆಯದೆ ಹೋದರೆ ದೃಷ್ಠಿ ಕಳೆದುಕೊಂಡು ಅಂಧರಾಗುವ ಸಾಧ್ಯತೆಯೂ ಇರುತ್ತದೆ.

ಹಾಗಾದರೆ ಮಧುಮೇಹ ಕಣ್ಣಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಕಾರಣಗಳೇನು? ಗುಣಲಕ್ಷಣಗಳೇನು? ನಿಯಂತ್ರಣ ಹಾಗೂ ಚಿಕಿತ್ಸೆ ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಮೂಡಬಹುದು.

ಈ ಬಗ್ಗೆ ವೈದ್ಯರು ಒಂದಷ್ಟು ಮಾಹಿತಿ ನೀಡಿದ್ದು ಆ ವಿವರ ಈ ಕೆಳಗಿನಂತಿದೆ. ಸಾಮಾನ್ಯವಾಗಿ ಮಧುಮೇಹದ ದುಷ್ಪರಿಣಾಮ ಕಣ್ಣಿನ ಅಕ್ಷಿಪಟದಲ್ಲಾಗುತ್ತದೆ. ಈ ತೊಂದರೆಯನ್ನು ಎರಡು ವಿಧದಲ್ಲಿ ಗುರುತಿಸಲಾಗುತ್ತದೆ.

ಮೊದಲನೆಯದು ಪ್ರಾರಂಭದಲ್ಲಿ ಕಂಡು ಬರುವ ನಾನ್ ಪ್ರಾಲಿಫರೇಟಿವ್. ಎರಡನೆಯದು ತಡವಾಗಿ ಗೋಚರಿಸುವ ಪ್ರಾಲಿಫರೇಟಿವ್ ಆಗಿದೆ. ನಾನ್ ಪ್ರಾಲಿಫರೇಟಿವ್ ಬಗ್ಗೆ ಹೇಳುವುದಾದರೆ ಇದು ಮಧುಮೇಹದಿಂದ ಬಳಲುವರನ್ನು ಕಾಡುವ ದೃಷ್ಠಿದೋಷದ ಪ್ರಾರಂಭದ ಹಂತ. ಇದರಲ್ಲಿ ರಕ್ತನಾಳಗಳಿಂದ ರಕ್ತಸ್ರಾವವಾಗಿ ಅಕ್ಷಿಪಟಲ ಮಂದವಾಗುತ್ತದೆ.

ಇನ್ನು ಪ್ರಾಲಿಫರೇಟಿವ್ ಎನ್ನುವುದು ನಾನ್ ಪ್ರಾಲಿಫರೇಟಿವ್ ಹಂತವನ್ನು ಮೀರಿದ್ದು, ಇದರಲ್ಲಿ ಕಣ್ಣಿನ ಅಕ್ಷಿಪಟಲದಲ್ಲಿ ಅಸಾಮಾನ್ಯವಾದ ಹೊಸ ರಕ್ತನಾಳಗಳು ಹುಟ್ಟಿಕೊಂಡು ಪದೇ ಪದೇ ಹೆಚ್ಚಿನ ರಕ್ತಸ್ರಾವವಾಗುವುದಲ್ಲದೆ, ಅಕ್ಷಿಪಟಲ ಕಳಚಿ ಮತ್ತು ಕಣ್ಣಿನ ನರ ದುರ್ಬಲಗೊಂಡು ಅಂಧತ್ವ ಕಾಣಿಸಿಕೊಳ್ಳುತ್ತದೆ.

ವ್ಯಾಯಾಮ ಅಗತ್ಯ ನಮ್ಮನ್ನು ಕಾಡುವ ಕೆಲವು ಕಾಯಿಲೆಗಳಿಗೆ ಔಷಧಿ ನೀಡಿ ಮತ್ತೆ ಬಾರದಂತೆ ವಾಸಿ ಮಾಡಬಹುದು ಆದರೆ ಮಧುಮೇಹ ಹಾಗಲ್ಲ. ಅದು ಒಮ್ಮೆ ಬಂತೆಂದರೆ ಮತ್ತೆ ನಮ್ಮನ್ನು ಬಿಟ್ಟು ದೂರ ಸರಿಯುವುದೇ ಇಲ್ಲ. ಹೀಗಾಗಿ ಅದು ನಮ್ಮ ದೇಹದಲ್ಲಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅದನ್ನು ನಿಯಂತ್ರಿಸಿಕೊಳ್ಳುವುದಷ್ಟೆ ನಮಗೆ ಇರುವ ಒಂದೇ ಒಂದು ಮಾರ್ಗವಾಗಿರುತ್ತದೆ.

ಮಧುಮೇಹ ಇರುವ ವ್ಯಕ್ತಿಗಳು ಔಷಧಿಯೊಂದಿಗೆ ಕೆಲವೊಂದು ಆಹಾರ ಕ್ರಮಗಳನ್ನು ಕೂಡ ಅಳವಡಿಸಿಕೊಳ್ಳಬೇಕಾಗುತ್ತದೆ. ವೈದ್ಯರು ಯಾವುದನ್ನು ತ್ಯಜಿಸ ಬೇಕೆಂದು ಹೇಳುತ್ತಾರೋ ಅದನ್ನು ತ್ಯಜಿಸುವುದು ಅನಿವಾರ್ಯ. ಅದರ ಜೊತೆಗೆ ವ್ಯಾಯಾಮ ಮಾಡುವುದು ಅಷ್ಟೇ ಅಗತ್ಯ. ಮಧುಮೇಹ ಪೀಡಿತರು ವ್ಯಾಯಾಮ ಹೇಗೆ ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.

ಯಾವ ಆಹಾರ ಸೇವಿಸಬೇಕು: ಮಧುಮೇಹದಿಂದ ಬಳಲುವವರು ಯಾವ ಆಹಾರ ಸೇವಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಯಾವ ಆಹಾರ ಸೇವಿಸಬಾರದು ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಕೇಕ್, ಫೇಸ್ಟ್ರಿ, ಸಿಹಿ ಬಿಸ್ಕೆಟ್, ಸಕ್ಕರೆ, ಐಸ್ಕ್ರೀಂ, ಕ್ಯಾಂಡಿ, ಚಾಕೋಲೆಟ್, ಜೇನುತುಪ್ಪ, ಗ್ಲೂಕೋಸ್, ಬೆಲ್ಲ, ಡ್ರೈಫ್ರೂಟ್ಸ್, ತಂಪುಪಾನೀಯ ಮತ್ತು ಸಿಹಿಯುಕ್ತ ಜ್ಯೂಸ್ಗಳು, ಹಾರ್ಲಿಕ್ಸ್, ಬೂಸ್ಟ್, ಮಾಲ್ಟ್ ಮೊದಲಾದವುಗಳು.

ಇನ್ನು ಹಣ್ಣುಗಳಲ್ಲಿ ಪಚ್ಚಬಾಳೆ, ಸಪೋಟಾ, ಹಲಸಿನಹಣ್ಣು, ಮಾವಿನಹಣ್ಣು, ಕಿತ್ತಳೆ, ತರಕಾರಿಗಳಲ್ಲಿ ಆಲೂಗೆಡ್ಡೆ, ಸಿಹಿಗೆಣಸು, ಮರಗೆಣಸು, ಸಿಹಿಕುಂಬಳ, ಬೇಯಿಸಿದ ಕ್ಯಾರೆಟ್, ಬೀಟ್ರೂಟ್, ಕೊಬ್ಬಿನಂಶವಿರುವ ತುಪ್ಪ, ಬೆಣ್ಣೆ, ವನಸ್ಪತಿ, ಡಾಲ್ಡಾ, ಕೊಬ್ಬರಿ ಎಣ್ಣೆ, ಚೀಸ್, ಪನ್ನೀರು, ಗಿಣ್ಣು ಕೋವಾ ಇವುಗಳನ್ನೆಲ್ಲ ತ್ಯಜಿಸುವುದೇ ಒಳ್ಳೆಯದು.
ಸಂಸ್ಕರಿಸಿದ ರಿಫೈನ್ಡ್ ಅಥವಾ ಮೈದಾದಿಂದ ತಯಾರಿಸಿದ ಬಿಸ್ಕೆಟ್, ಬ್ರೆಡ್, ನಾನ್, ರೋಟಿ, ನೂಡಲ್ಸ್ ಮೊದಲಾದವುಗಳನ್ನು ದೂರವಿಡಿ. ಉಪ್ಪಿನ ಸೇವನೆ ಕಡಿಮೆ ಮಾಡಿ, ಧೂಮಪಾನ, ಮದ್ಯಪಾನಕ್ಕೆ ಇತಿಶ್ರೀ ಹಾಡಿಬಿಡಿ.

ಇನ್ನು ಹೆಚ್ಚು ಅಲ್ಲದೆ ಸಾಧಾರಣ ಪ್ರಮಾಣದಲ್ಲಿ ಸೇವಿಸಬಹುದಾದ ಆಹಾರಗಳಿದ್ದು ಅವುಗಳೆಂದರೆ ತೆಂಗಿನಕಾಯಿ, ಕಡಲೆಬೀಜ, ಬಾದಾಮಿ, ಗೋಡಂಬಿ, ಧಾನ್ಯಗಳಲ್ಲಿ ಅಕ್ಕಿ, ರಾಗಿ, ಗೋಧಿ ಇವುಗಳನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಬೇಕು. ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಹಾಲಿನ ಪದಾರ್ಥಗಳನ್ನು ಕೂಡ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು