ಜಾಂಡೀಸ್ ಬರಬಹುದು ಎಚ್ಚರವಿರಲಿ!

ಜಾಂಡೀಸ್ ಬರಬಹುದು ಎಚ್ಚರವಿರಲಿ!

LK   ¦    Dec 06, 2017 12:32:31 PM (IST)
ಜಾಂಡೀಸ್ ಬರಬಹುದು ಎಚ್ಚರವಿರಲಿ!

ಶುದ್ಧೀಕರಣಗೊಳ್ಳದ ಮತ್ತು ಕುದಿಸಿ ಆರಿಸದ ನೀರನ್ನು ಕುಡಿಯುವುದರಿಂದ, ರಸ್ತೆ ಬದಿಯಲ್ಲಿ ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸುವುದು, ಅಶುದ್ಧ ನೀರು ಕುಡಿಯುವುದು, ಸ್ಥಳೀಯವಾಗಿ ಮಾರಾಟ ಮಾಡುವ ಗುಣಮಟ್ಟವಿಲ್ಲದ ಐಸ್ ಕ್ಯಾಂಡಿಗಳನ್ನು ತಿನ್ನುವುದರಿಂದ ಜಾಂಡೀಸ್ ರೋಗ ಹರಡುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ಒಂದು ವೇಳೆ ಜಾಂಡೀಸ್ ರೋಗ ನೀರಿನಿಂದ ಹರಡಿದರೆ ಅದನ್ನು ಕುಡಿಯುವ ಎಲ್ಲರಿಗೂ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ನೀರು ಮತ್ತು ಆಹಾರವನ್ನು ಸೇವಿಸುವ ಮುನ್ನ ಮುಂಜಾಗ್ರತೆ ವಹಿಸುವುದು ಮುಖ್ಯವಾಗಿರುತ್ತದೆ. ಅಷ್ಟೇ ಅಲ್ಲದೆ ಶುಚಿತ್ವದ ಬಗ್ಗೆಯೂ ಹೆಚ್ಚಿನ ಗಮನಹರಿಸುವುದು ಕೂಡ ಮುಖ್ಯವಾಗಿರುತ್ತದೆ.
ಜಾಂಡೀಸ್ ಹೇಗೆ ಬರುತ್ತದೆ ಮತ್ತು ಅದು ಉಲ್ಭಣಗೊಳ್ಳಲು ಕಾರಣವೇನು ಎನ್ನುವುದನ್ನು ನೋಡುವುದೇ ಆದರೆ ರೋಗದ ಸುತ್ತಲೂ ಹತ್ತು ಹಲವು ಕಾರಣಗಳು ಇರುವುದನ್ನು ನಾವು ಕಾಣಬಹುದಾಗಿದೆ. ಮನೆಯಲ್ಲಿ ಕೆಲವೊಮ್ಮೆ ಕಲುಷಿತ ನೀರಿನೊಂದಿಗೆ ವೈರಸ್ ನಮ್ಮ ದೇಹದೊಳಕ್ಕೆ ಹೋಗಿ ಕಾಯಿಲೆ ತರಬಹುದು. ಹೀಗಾಗಿ ನೀರನ್ನು ಕುದಿಸಿ ಆರಿಸಿ ಕುಡಿಯುವುದು ಒಳ್ಳೆಯದು.

ಜಾಂಡೀಸ್ ರೋಗವು ಹೆಪಾಟೈಟಿಸ್ `ಎ' ಎಂಬ `ಪಿ' ಪಿಕಾನರ್ ವೈರಸ್ ನಿಂದ ಹರಡುತ್ತದೆ. ಈ ವೈರಸ್ ಲಿವರ್ ಗೆ ತಲುಪಿ ಅಲ್ಲಿ ವೃದ್ಧಿಯಾಗಿ ರೋಗ ಲಕ್ಷಣಗಳು ಹೊರ ಹೊಮ್ಮಲು ಸರಾಸರಿ 30 ದಿವಸಗಳು ಬೇಕಾಗುತ್ತದೆ. ಹೀಗಾಗಿ ತಕ್ಷಣಕ್ಕೆ ಗೊತ್ತಾಗದಿದ್ದರೂ ಈ ರೋಗ ಉಲ್ಭಣಗೊಳ್ಳುತ್ತಿದ್ದಂತೆಯೇ ಅದರ ಲಕ್ಷಣಗಳು ಹೊರಗೆ ಕಾಣಿಸಿಕೊಳ್ಳುತ್ತದೆ. ರೋಗದ ತೀವ್ರತೆ ಮಕ್ಕಳಲ್ಲಿ ಕಡಿಮೆ ಪ್ರಮಾಣದಲ್ಲಿದ್ದು, ದೊಡ್ಡವರಲ್ಲಿ ಹೆಚ್ಚಾಗಿರುತ್ತದೆ. ಹೆಪಾಟೈಟಿಸ್ `ಎ' ಯ ರೋಗ ಲಕ್ಷಣಗಳು 3 ವಾರದವರೆಗೂ ಇದ್ದು, ಸಮಾರು 9 ವಾರಗಳಲ್ಲಿ ಸಂಪೂರ್ಣ ಗುಣವಾಗುತ್ತದೆ. ಕೆಲವರಲ್ಲಿ ವಾಸಿಯಾಗಲು 3 ತಿಂಗಳು ಬೇಕಾಗುತ್ತದೆ.

ರೋಗ ಲಕ್ಷಣಗಳು ಕಂಡುಬರುವ 2 ವಾರಗಳವರೆಗೆ ಈ ರೋಗಾಣು ಮಲದಲ್ಲಿ ವಿಸರ್ಜನೆಯಾಗುತ್ತಿರುತ್ತದೆ. 3 ವಾರಗಳಲ್ಲಿ ಈ ವೈರಸ್ ತಾವಾಗಿಯೇ ಸ್ವಯಂ ನಿರ್ನಾಮಗೊಂಡು, ರೋಗಿ ತಾನಾಗಿಯೇ ಗುಣಮುಖವಾಗುತ್ತಾನೆ ಇದನ್ನು ವೈದ್ಯಕೀಯ ವಲಯದಲ್ಲಿ ``ಸೆಲ್ಫ್ ಲಿಮಿಟಿಂಗ್'' ಎನ್ನುತ್ತಾರೆ.

ಮುಖ್ಯವಾಗಿ ಹೊಟ್ಟೆ ಹಸಿವು ಕಡಿಮೆಯಾಗುವುದು, ಬಲಗಡೆ ಹೊಟ್ಟೆಯ ಮೇಲ್ಬಾಗದಲ್ಲಿ ನೋವು ಬರುವುದು, ಆಗಾಗ ವಾಂತಿಯಾಗುವುದು ಮತ್ತು ವಿಪರೀತ ಸುಸ್ತು ಸಂಕಟವಾಗುವದು ರೋಗದ ಲಕ್ಷಣಗಳಾಗಿವೆ.

ನಾಟಿ ಔಷಧಿ, ಅಲೋಪತಿ ಔಷಧಿ, ಯಾವುದೇ ಚಿಕಿತ್ಸೆ ಮಾಡಿದರೂ ದಿನಕ್ಕೆ 3 ಗ್ಲಾಸ್ ನಿಂಬೆ ಹಣ್ಣು, ಕಿತ್ತಳೆ, ಮೂಸಂಬಿ ಅಥವಾ ಕಬ್ಬಿನ ರಸವನ್ನು ಮತ್ತು 3 ಚಮಚ ಗ್ಲೂಕೋಸ್ ಹಾಕಿ ಕರಗಿಸಿ ಕುಡಿದರೆ ಈ ರೋಗ ಬೇಗ ಗುಣಮುಖವಾಗುತ್ತದೆ.

ಕಾಯಿಲೆ ಬಂದ ಬಳಿಕ ಪರದಾಡುವುದಕ್ಕಿಂತಲೂ ಕಾಯಿಲೆ ಬರದಂತೆ ನೋಡಿಕೊಳ್ಳುವುದು ಅಗತ್ಯ ಹೀಗಾಗಿ ಕೆಲವೊಂದು ಕ್ರಮಗಳನ್ನು ಅಳವಡಿಸುವುದರ ಮೂಲಕ ಕಾಯಿಲೆ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅದೇನೆಂದರೆ ಮಲವಿಸರ್ಜನೆ ಮಾಡಿದ ನಂತರ ಚೆನ್ನಾಗಿ ಸೋಪಿನಿಂದ ಕೈ ತೊಳೆದುಕೊಳ್ಳಬೇಕು. ಕುಡಿಯುವ ನೀರನ್ನು ಕಡೇ ಪಕ್ಷ 5 ನಿಮಿಷಗಳಾದರೂ ಕುದಿಸಿ ಬಳಿಕ ಕುಡಿಯಬೇಕು. ರಸ್ತೆಯ ಬದಿಯಲ್ಲಿ ಮಾಡುವ ತಿಂಡಿ-ತಿನಿಸು, ಹಣ್ಣು-ಹಂಪಲುಗಳನ್ನು ತಿನ್ನಬಾರದು. ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹೀಗೆ ಮಾಡುವುದರಿಂದ ರೋಗ ಬರದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ.

ಹೆಚ್ಚಿನ ರೋಗಗಳು ಅಶುಚಿತ್ವದಿಂದ ಬರುತ್ತದೆ. ಹೀಗಾಗಿ ಶುಚಿತ್ವಕ್ಕೆ ಆದ್ಯತೆ ನೀಡುವುದರಿಂದ ರೋಗಗಳನ್ನು ತಡೆಯಲು ಸಾಧ್ಯವಾಗುತ್ತದೆ. ಜಾಂಡೀಸ್ ರೋಗದ ಬಗ್ಗೆ ಒಂದಷ್ಟು ಲಕ್ಷಣಗಳು ಕಂಡು ಬಂದ ತಕ್ಷಣ ಅದಕ್ಕೆ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಉಲ್ಭಣಗೊಂಡ ಬಳಿಕ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೆ ಸಾವನ್ನಪ್ಪಬಹುದು. ಆದ್ದರಿಂದ ಒಂದಷ್ಟು ಜಾಗ್ರತೆಯಿರಲಿ.